ಫ್ಯಾಕ್ಟ್‌ಚೆಕ್ : ಸ್ವಿಸ್ ಬ್ಯಾಂಕ್‌ನಲ್ಲಿ ಕಪ್ಪು ಹಣ ಹೊಂದಿರುವವರ ಪಟ್ಟಿಯನ್ನು ವಿಕಿಲೀಕ್ಸ್ ಪ್ರಕಟಿಸಿಲ್ಲ! ಹಾಗಿದ್ದರೆ ಈ ವೈರಲ್‌ ಆಗುತ್ತಿರುವ ಪಟ್ಟಿ ಯಾವುದು?

ಸ್ವಿಸ್ ಬ್ಯಾಂಕ್‌ನಲ್ಲಿ ಕಪ್ಪುಹಣ ಹೊಂದಿರುವ ಭಾರತದ 30 ರಾಜಕಾರಣಿ ಮತ್ತು ಉದ್ಯಮಿಗಳ ಹೆಸರನ್ನು ವಿಕಿಲೀಕ್ಸ್ ಪ್ರಕಟಿಸಿದೆ ಎಂಬ ಸಂದೇಶವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

“ಜೀರ್ಣಿಸಿಕೊಳ್ಳಲಾಗದ ಸುದ್ದಿಯೊಂದು ಹೊರಬಿದ್ದಿದೆ. ಸ್ವಿಸ್ ಬ್ಯಾಂಕ್‌ನಲ್ಲಿರುವ ಭಾರತೀಯರ ಕಪ್ಪು ಹಣ ರೂ. 358,679,863,300,000 (1.3 ಟ್ರಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ) ತೆರಿಗೆಯಿಂದ ತಪ್ಪಿಸಿಕೊಳ್ಳಲು ಈ ಹಣವನ್ನು ಅಲ್ಲಿ ಇರಿಸಲಾಗಿದೆ.ಇದು 2000 ಭಾರತೀಯರಿಗೆ ಸೇರಿದೆ, ಈ ಹಣ ನಮ್ಮ ಭಾರತಕ್ಕೆ ಬಂದರೆ, ನಮ್ಮ ದೇಶ 10 ಅಮೇರಿಕಾ ಆಗಲು ಮತ್ತು ಮುಂದಿನ 100 ವರ್ಷಗಳ ಕಾಲ ವಿಶ್ವದ ಅತ್ಯಂತ ಶಕ್ತಿಶಾಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಒಂದಾಗಲು ಸಾಧ್ಯವಾಗುತ್ತದೆ. ನೀವು ಉಚಿತ ಸಂದೇಶಗಳನ್ನು ಹೊಂದಿದ್ದರೆ ಇದನ್ನು ಎಲ್ಲರಿಗೂ ಫಾರ್ವರ್ಡ್ ಮಾಡುವ ಮೂಲಕ ಈ ಅಭಿಯಾನಕ್ಕೆ ಕೈ ಜೋಡಿಸಿ. ಭಾರತೀಯನಾಗಿ ನಾನು ಫಾರ್ವರ್ಡ್ ಮಾಡುತ್ತಿದ್ದೇನೆ ”ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಕರ್ನಾಟಕದ ಕಾಂಗ್ರೆಸ್ ಸಚಿವ ಕೆಜೆ ಜಾರ್ಜ್ ಅವರು 5.82 ಲಕ್ಷ ಕೋಟಿ ರೂ.ಗಳ ಆಸ್ತಿಯೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ, ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ (ರೂ. 5.687 ಲಕ್ಷ ಕೋಟಿ), ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ (ರೂ. 3 ಲಕ್ಷ ಕೋಟಿ) ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (ರೂ. ರೂ 2.57 ಲಕ್ಷ ಕೋಟಿಗಳು). ಪಟ್ಟಿಯಲ್ಲಿ ಕಂಡುಬರುವ ಇತರ ಪ್ರಮುಖ ಹೆಸರುಗಳೆಂದರೆ (ಇದು ಕಾಲಾನುಕ್ರಮದಲ್ಲಿಲ್ಲ) ಸೋನಿಯಾ ಗಾಂಧಿ, ಪ್ರಣಬ್ ಮುಖರ್ಜಿ, ಚಿದಂಬರಂ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಅಹ್ಮದ್ ಪಟೇಲ್, ಮನಮೋಹನ್ ಸಿಂಗ್, ಮಾಯಾವತಿ ಮತ್ತು ರಾಹುಲ್ ಗಾಂಧಿ ಸೇರಿದಂತೆ ಪಟ್ಟಿಯಲ್ಲಿ 30 ಹೆಸರುಗಳಿವೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ : 
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಸ್ವಿಸ್ ಬ್ಯಾಂಕ್‌ನಲ್ಲಿ ಕಪ್ಪು ಹಣ ಹೊಂದಿದವರ ಪಟ್ಟಿ 2011ರಿಂದಲೇ ವೈರಲ್ ಆಗಿದ್ದು, ಇದು ಬೇರೆ ಬೇರೆ ಹೆಸರುಗಳೊಂದಿಗೆ ಕಾಣಿಸಿಕೊಳ್ಳುತ್ತಲೇ ಇದೆ ಎಂದು ಆಲ್ಟ್‌ನ್ಯೂಸ್ ಮಾಡಿದ ಫ್ಯಾಕ್ಟ್‌ಚೆಕ್ ವರದಿಯೊಂದು ಲಭ್ಯವಾಗಿದೆ.

2014ರಲ್ಲಿ ಹರಿದಾಡಿದ ಸಂದೇಶದಲ್ಲಿ 24 ಮಂದಿಯ ಹೆಸರಿತ್ತು. ಈ ಪಟ್ಟಿಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯ ಹೆಸರು ಸೇರಿಸಲಾಗಿತ್ತು. 2016 ಮತ್ತು 2017ರಲ್ಲಿ ವೈರಲ್ ಆದ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಇದೆ.

ವಿಕಿಲೀಕ್ಸ್ ಕಪ್ಪು ಹಣ ಹೊಂದಿದವರ ಪಟ್ಟಿ ಬಿಡುಗಡೆ ಮಾಡಿದೆ ಎಂದು ಹೇಳುವ ಈ ಸಂದೇಶದ ಬಗ್ಗೆ ಆಲ್ಟ್‌ನ್ಯೂಸ್ ಫ್ಯಾಕ್ಟ್‌ಚೆಕ್ ವರದಿ ಮಾಡಿದೆ. ವಿಕಿಲೀಕ್ಸ್ ಈ ರೀತಿ ಪಟ್ಟಿ ಬಿಡುಗಡೆ ಮಾಡಿರುವ ಬಗ್ಗೆ ಎಲ್ಲಿಯೂ ವರದಿ ಆಗಿಲ್ಲ.ವಿಕಿಲೀಕ್ಸ್‌ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಆಗಲೀ ವೆಬ್‌ಸೈಟ್‌ನಲ್ಲಾಗಲೀ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ.

2011 ರಲ್ಲಿ, ವಿಕಿಲೀಕ್ಸ್ ಭಾರತೀಯ ಕಪ್ಪುಹಣದ ನಕಲಿ ಪಟ್ಟಿಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಬಗ್ಗೆ ಸ್ಪಷ್ಟೀಕರಣವನ್ನು ಟ್ವೀಟ್ ಮೂಲಕ ಮಾಡಿತ್ತು.

 ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ, ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ಸುಳ್ಳು. ಇಂತಹ ನಕಲಿ ಪೋಸ್ಟ್‌ಗಳನ್ನು ಜನರು ನಂಬುಂತೆ ಮಾಡಲು ವಿಕಿಲೀಕ್ಸ್‌ನ ಹೆಸರನ್ನು ಬಳಸಿಕೊಳ್ಳಲಾಗಿದೆ. ಆ ಮೂಲಕ ಇದು ನೈಜ ಸುದ್ದಿ ಎಂಬಂತೆ ಬಿಂಬಿಸಲು ಯತ್ನಿಸಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights