ಫ್ಯಾಕ್ಟ್‌ಚೆಕ್ : ಮಣಿಪುರದಲ್ಲಿ ಉಗ್ರರು ಮಹಿಳೆಯನ್ನು ಹತ್ಯೆ ಮಾಡಿದ್ದಾರೆ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ

ಮಣಿಪುರದಲ್ಲಿ ಉಗ್ರರು ಮಹಿಳೆಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ಗುಂಡು ಹಾರಿಸುತ್ತಿರುವ ಇತ್ತೀಚಿನ ದೃಶ್ಯಗಳು ಎಂದು ಹೇಳುವ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಮಣಿಪುರದ ಹಿಂಸಾಚಾರದ ಬಗ್ಗೆ ನರೇಂದ್ರ ಮೋದಿ ಸರ್ಕಾರ ಮತ್ತು ದೇಶದ ಮಾಧ್ಯಮಗಳೆರಡೂ ಕಣ್ಣುಮುಚ್ಚಿ ಕುಳಿತಿವೆ ಎಂದು ಪ್ರತಿಪಾದಿಸಿ ಪೋಸ್ಟ್‌ ಮಾಡಲಾಗಿದೆ.

ಮಣಿಪುರದಲ್ಲಿ ಕುಕಿ ಸಮುದಾಯಕ್ಕೆ ಸೇರಿದ ಕ್ರೈಸ್ತ ಹುಡುಗಿಯೊಬ್ಬಳನ್ನು ಮೈತೇಯ್ ಪಂಥದ ಹಿಂದೂತ್ವವಾದಿಗಳು ಸೇನೆಯೊಂದಿಗೆ ಸೇರಿ ಬರ್ಭರವಾಗಿ ಹತ್ಯೆ ಮಾಡಿದ್ದಾರೆ. ಮಣಿಪುರದಲ್ಲಿ ನಡೆದ ಕ್ರೈಸ್ತರ ಸಾಮೂಹಿಕ ಹತ್ಯೆಯ ಬಹಿರಂಗವಾದ ಕೆಲವು ವಿಡಿಯೋಗಳಲ್ಲಿ ಇದು ಒಂದು.3 ಸಾವಿರಕ್ಕೂ ಹೆಚ್ಚು ಕ್ರೈಸ್ತರ ಮನೆಗಳು, ನೂರಾರು ಚರ್ಚುಗಳು ದ್ವಂಸ ಮಾಡಲ್ಪಟ್ಟಿವೆ. ಎಂದು ಮತ್ತೊಂದು ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ಗಲಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ವಿಡಿಯೋವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಇದೇ ರೀತಿಯ ದೃಶ್ಯಗಳನ್ನು ತೋರಿಸುವ ವೀಡಿಯೊದ ವಿಸ್ತೃತ ಆವೃತ್ತಿಯು ಡಿಸೆಂಬರ್ 2022 ರಲ್ಲಿ ವೆಬ್‌ಸೈಟ್‌ನಿಂದ ಪ್ರಕಟಿಸಲ್ಪಟ್ಟಿದೆ. ಈ ಸೈಟ್ ಮ್ಯಾನ್ಮಾರ್‌ನಲ್ಲಿ ಮಹಿಳೆಯ ಮೇಲೆ ನಡೆದ ಕ್ರೂರ ಹಲ್ಲೆಯ ದೃಶ್ಯಗಳು ಎಂಬ ಹೇಳಿಕೆಯೊಂದಿಗೆ ಪ್ರಕಟಿಸಲಾಗಿದೆ.

ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ವಿಡಿಯೊದ ವಿವರಗಳನ್ನು ಹುಡುಕಿದಾಗ, 08 ಡಿಸೆಂಬರ್ 2022 ರಂದು ‘DVB’ ಸುದ್ದಿ ಸೈಟ್ ಪ್ರಕಟಿಸಿದ ಲೇಖನದಲ್ಲಿ ವಿಡಿಯೊದ ಸ್ಕ್ರೀನ್‌ಗ್ರಾಬ್ ಕಂಡುಬಂದಿದೆ. ಮ್ಯಾನ್ಮಾರ್‌ನ ತಮು ಪಟ್ಟಣದಲ್ಲಿ ಯುವತಿಯನ್ನು ಕ್ರೂರವಾಗಿ ಹತ್ಯೆಗೈಯುವ ವಿಡಿಯೊದ ದೃಶ್ಯಗಳು ಎಂದು ಈ ಸೈಟ್ ವರದಿ ಮಾಡಿದೆ.

ವರದಿಗಳ ಪ್ರಕಾರ, ಜೂನ್ 2022 ರಲ್ಲಿ, 24 ವರ್ಷದ ಮಹಿಳೆ ಮೇಲೆ ಹಲ್ಲೆ ನಡೆಸಿ ಗುಂಡಿಕ್ಕಿ ಕೊಲ್ಲಲಾಯಿತು. ಸಶಸ್ತ್ರ ಮಿಲಿಟರಿ ಪಡೆಗೆ ಮಾಹಿತಿ ನೀಡುತ್ತಿದ್ದಾಳೆ ಎಂದು ತಪ್ಪೊಪ್ಪಿಕೊಳ್ಳುವಂತೆ ಒತ್ತಾಯಿಸಲಾಯಿತು ಮತ್ತು ನಂತರ ಟಮುದಲ್ಲಿ ಪೀಪಲ್ ಡಿಫೆನ್ಸ್ ಫೋರ್ಸ್‌ನ 4 ನೇ ಬೆಟಾಲಿಯನ್ (ಪಿಡಿಎಫ್) ಗುಂಡಿಕ್ಕಿ ಕೊಂದಿತು. ಎಂದು ವರದಿಯಾಗಿದೆ.

2022 ರ ಡಿಸೆಂಬರ್‌ನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ವೈರಲ್ ಆದಾಗ, ಮ್ಯಾನ್ಮಾರ್‌ನ ರಾಷ್ಟ್ರೀಯ ಏಕತೆ ಸರ್ಕಾರ (ಎನ್‌ಯುಜಿ) ತಮುದಲ್ಲಿ ಯುವತಿಯನ್ನು ಕೊಂದ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿತು. ನಂತರ, ಯುವತಿಯ ಹತ್ಯೆಯಲ್ಲಿ ಭಾಗಿಯಾಗಿದ್ದ 2 ಪುರುಷ ಮತ್ತು 1 ಮಹಿಳಾ ಸೈನಿಕನನ್ನು ಬಂಧಿಸಿರುವುದಾಗಿ ಎನ್‌ಯುಜಿ ಘೋಷಿಸಿತು. ಈ ಎಲ್ಲಾ ಪುರಾವೆಗಳಿಂದ, ಪೋಸ್ಟ್‌ನಲ್ಲಿ ಹಂಚಿಕೊಂಡ ವಿಡಿಯೊ ಹಳೆಯದು ಮತ್ತು ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೂ, ಈ ದೃಶ್ಯಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವಿಡಿಯೋ ದೃಶ್ಯಗಳು ಮ್ಯಾನ್ಮಾರ್‌ನ ತಮು ಪಟ್ಟಣದಲ್ಲಿ ನಡೆದ ಹಳೆಯ ಘಟನೆಯನ್ನು ತೋರಿಸುತ್ತದೆ. ಜೂನ್ 2022 ರಲ್ಲಿ, ಯುವತಿಯೊಬ್ಬಳು ಸೇನೆಗೆ ಮಾಹಿತಿದಾರಳಾಗಿ ಕೆಲಸ ಮಾಡುತ್ತಿದ್ದಾಳೆ ಎಂದು ಆರೋಪಿಸಿ, ತಮುವಿನಲ್ಲಿ ಪೀಪಲ್ ಡಿಫೆನ್ಸ್ ಫೋರ್ಸ್ (ಪಿಡಿಎಫ್) ಉಗ್ರಗಾಮಿ ಗುಂಪಿನ ಬೆಟಾಲಿಯನ್ ಆಕೆಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಗುಂಡಿಕ್ಕೆ ಹತ್ಯೆ ಮಾಡಿತ್ತು.

ಮ್ಯಾನ್ಮಾರ್‌ನ ತಮುವಿನಲ್ಲಿ ಪೀಪಲ್ ಡಿಫೆನ್ಸ್ ಫೋರ್ಸ್ (ಪಿಡಿಎಫ್) ಉಗ್ರಗಾಮಿ ಗುಂಪು, ಯುವತಿಯೊಬ್ಬಳ ಮೇಲೆ ನಡೆಸಿದ ಹಲ್ಲೆಯನ್ನು, ಮಣಿಪುರದ ದೃಶ್ಯಗಳು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಈ ದೃಶ್ಯಾವಳಿಗಳಿಗೂ ಮಣಿಪುರ  ಘರ್ಷಣೆಗೂ ಸಂಬಂಧವಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಹಿಂದೂ ದೇವಾಲಯದ ವಿಗ್ರಹಗಳನ್ನು ವಿರೂಪಗೊಳಿಸಿದ್ದು ಮುಸ್ಲಿಮರಲ್ಲ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights