FACT CHECK | ನಕಲಿ ಲೋಕೋ-ಪೈಲಟ್‌ಗಳೊಂದಿಗೆ ಸಭೆ ನಡೆಸಿದ್ರಾ ರಾಹುಲ್ ಗಾಂಧಿ?

ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದು, ರಾಹುಲ್ ಗಾಂಧಿಯವರು ಪ್ರಚಾರ ಪಡೆಯಲು ನಕಲಿ ಲೋಕೋ ಪೈಲೆಟ್‌ಗಳನ್ನು ಭೇಟಿಯಾಗಿ ಸಂವಾದ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

“ಲೋಕೋ ಪೈಲಟ್‌ಗಳ ಜೀವನ ತೀವ್ರ ಸಂಕಷ್ಟದಲ್ಲಿದೆ ಎಂದು ರಾಹುಲ್ ತಮ್ಮ X ನಲ್ಲಿ ಹಂಚಿಕೊಂಡ ಫೋಟೋವನ್ನು ಪರಿಶೀಲಿಸಿದಾಗ ಚಿತ್ರದಲ್ಲಿ ಇರುವವರು ಯಾರೂ ರೈಲ್ವೇ ನೌಕರರು ಅಥವಾ ಲೊಕೊ ಪೈಲಟ್‌ಗಳಲ್ಲ ಎಂದು ರೈಲ್ವೆ ದೃಢಪಡಿಸಿದೆ”.

ಲಾಲು ಪ್ರಸಾದ್ ಯಾದವ್ ಅವರಂತಹ ಭ್ರಷ್ಟಚಾರಿಯ ಸಲಹೆ ಪಡೆದು ರೈಲ್ವೇ ಮುಷ್ಕರವನ್ನು ಗುರಿಯಾಗಿಸಿಕೊಂಡು ಇಂತಹ ನಾಟಕ ನಡೆಸಿರುವುದು ಸ್ಪಷ್ಟವಾಗಿದೆ.ರೈಲ್ವೆ ನೌಕರರ ಮಾರುವೇಷದಲ್ಲಿ ಬಂದು ರಾಹುಲ್ ಜತೆ ಮಾತುಕತೆ ನಡೆಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ರೈಲ್ವೇ ಮುಷ್ಕರ ನಡೆದರೆ ಇಡೀ ದೇಶ ಸಂಪೂರ್ಣ ಸ್ತಬ್ಧವಾಗಬಹುದೆಂಬ ನಿರೀಕ್ಷೆ ಅವರಲ್ಲಿತ್ತು. ಆದರೆ ಯಾವುದೇ ರೈಲ್ವೆ ನೌಕರರ ಬೆಂಬಲ ಸಿಗದಿದ್ದಾಗ ಮಾರುವೇಷದಲ್ಲಿರುವ ವ್ಯಕ್ತಿಗಳನ್ನು ರೈಲ್ವೆ ನೌಕರರೆಂದು ಬಿಂಬಿಸಿ ನಡೆಸಿದ ನಾಟಕ ರೈಲು ಮುಷ್ಕರಕ್ಕೆ ನಡೆದ ಷಡ್ಯಂತ್ರ ಎಂದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಪ್ರತಿಪಾದಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಪಶ್ಚಿಮ ಬಂಗಾಳದಲ್ಲಿ ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲು ಅಪಘಾತವು ಕನಿಷ್ಠ 10 ಜನರನ್ನು ಬಲಿ ತೆಗೆದುಕೊಂಡ ವಾರಗಳ ನಂತರ ರಾಹುಲ್ ಗಾಂಧಿಯವರು ಜುಲೈ 7 ರಂದು  ಲೋಕೋ-ಪೈಲಟ್‌ಗಳೊಂದಿಗೆ ಸಂವಾದ ನಡೆಸಿದರು. ಆದರೆ ಈಗ ರಾಹುಲ್ ಗಾಂಧಿಯವರು ಪ್ರಚಾರ ಪಡೆಯಲು ನಕಲಿ ಲೋಕೋ ಪೈಲೆಟ್‌ಗಳನ್ನು ಭೇಟಿಯಾಗಿ ಸಂವಾದ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ರಾಹುಲ್ ಗಾಂಧಿಯವರು ಚರ್ಚೆಯಲ್ಲಿ ಭಾಗವಹಿಸಿವರು ರೈಲ್ವೆ ನೌಕರರು ಮತ್ತು ಲೋಕೋ-ಪೈಲೆಟ್‌ಗಳೆಂದು ತಿಳಿದು ಬಂದಿದೆ. ಆದರೆ ಅವರು ಕೇವಲ ದೆಹಲಿ ಡಿವಿಷನ್ ನ ಲೋಕೋ-ಪೈಲೆಟ್‌ಗಳಾಗಿರದೆ ವಿವಿಧ ಭಾಗದ ಲೋಕೋ-ಪೈಲೆಟ್‌ ಮತ್ತು ರೈಲ್ವೆ ನೌಕರರಾಗಿದ್ದಾರೆ. ಇನ್ನೂ ಈ ವಿವಾದದ ಕುರಿತು ಪೋಲೀಸರು FIR ದಾಖಲಿಸಿರುವ ಕುರಿತು ಸಹ ಯಾವುದೇ ಮಾಧ್ಯಮಗಳು ವರದಿ ಮಾಡಿಲ್ಲ.

ರಾಹುಲ್ ಗಾಂಧಿಯವರು ಲೋಕೋ ಪೈಲೆಟ್‌ಗಳನ್ನು ಭೇಟಿ ಆಗಿ ಅವರ ಸಭೆಯ ನಂತರಉತ್ತರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (CPRO) ದೀಪಕ್ ಕುಮಾರ್ ಅವರು ಕಾಂಗ್ರೆಸ್ ಸಂಸದರೊಂದಿಗೆ ಸಂವಹನ ನಡೆಸಿದ ಸದಸ್ಯರು “ಹೊರಗಿನವರು” ಮತ್ತು ದೆಹಲಿ ವಿಭಾಗದವರಲ್ಲ ಎಂದು ಹೇಳಿದ್ದಾರೆ. ಮತ್ತು ಕಾಂಗ್ರೆಸ್ ಪೋಸ್ಟ್ ಮಾಡಿದ ವೀಡಿಯೊದಲ್ಲಿ ತೋರಿಸಿರುವ ಲೋಕೋ ಪೈಲಟ್‌ಗಳು ಮತ್ತು ಸಿಬ್ಬಂದಿ ಸದಸ್ಯರು ಬೇರೆ ವಿಭಾಗಗಳಿಂದ ಬಂದವರು ಅಥವಾ ಕರೆತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದು ಈಗ ವಿವಾದಕ್ಕೆ ಕಾರಣವಾಗಿದ್ದು, ಆದಾಗ್ಯೂ, ಸಿಪಿಆರ್‌ಒ ಹೇಳಿಕೆಯನ್ನು ವಿವಿಧ ಲೋಕೋ ಪೈಲಟ್‌ಗಳ ಸಂಘಗಳು ವಿರೋಧಿಸಿವೆ, ಫೋಟೋದಲ್ಲಿರುವ ಜನರು ನಿಜವಾಗಿಯೂ ವಿವಿಧ ರೈಲು ವಿಭಾಗಗಳ ಲೋಕೋ ಪೈಲಟ್‌ಗಳು ಎಂದು ಪ್ರತಿಪಾದಿಸಿದ್ದಾರೆ. ಮತ್ತು ಅವರ ಸದಸ್ಯರು ರಾಹುಲ್ ಗಾಂಧಿ ಅವರೊಂದಿಗಿನ ಸಭೆಯಲ್ಲಿ ಹಾಜರಿದ್ದರು” ಎಂದಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ರಾಹುಲ್ ಗಾಂಧಿಯವರು ಲೋಕೋ ಪೈಲೆಟ್‌ಗಳ ಜೊತೆಗೆ ನಡೆಸಿದ ಸಂವಾದವನ್ನು ಎಕ್ಸ್‌ ನಲ್ಲಿ ಹಂಚಿಕೊಂಡಿದ್ದು ಈ ಕೆಳಗೆ ನೋಡಬಹುದಾಗಿದೆ.

ಈ ಪ್ರಕರಣವು ಗೊಂದಲಕ್ಕೆ ಕಾರಣವಾಗುತ್ತಿದ್ದಂತೆ ವಿವಾದಕ್ಕೆ ಕಾರಣವಾಗಿದೆ. ಆದರೆ ತಮ್ಮ ಸಮಸ್ಯೆಗಳನ್ನು ಎತ್ತಿ ಹಿಡಿದು ರಾಹುಲ್ ಸೇರಿದಂತೆ ರಾಜಕೀಯ ಪಕ್ಷಗಳ ಮುಖಂಡರಿಗೆ ಪತ್ರ ಬರೆದಿದ್ದೇವೆ ಎಂದು ಕುಮರೇಶನ್  (ಸ್ಟಾಫ್ ಅಸೋಸಿಯೇಶನ್‌ನ ದಕ್ಷಿಣ ವಲಯದ ಅಧ್ಯಕ್ಷ) ಹೇಳಿದ್ದಾರೆ. ಅವರು ಲೋಕೋ ಪೈಲಟ್‌ಗಳನ್ನು ಭೇಟಿಯಾಗಲಿದ್ದಾರೆ ಎಂದು ಶುಕ್ರವಾರ ಅವರಿಗೆ ತಿಳಿಸಲಾಯಿತು. “ನಾವು ಇಲ್ಲಿ ಸಭೆ ನಡೆಸಿದ್ದೇವೆ ಮತ್ತು ಆದ್ದರಿಂದ ವಿವಿಧ ವಿಭಾಗಗಳ ಜನರು ಇದ್ದರು. ನಾವು ರೈಲ್ವೆ ಸಚಿವರು ಮತ್ತು ರೈಲ್ವೆ ಮಂಡಳಿಯ ಅಧ್ಯಕ್ಷರಿಗೆ ಪತ್ರ ಬರೆದಿದ್ದೇವೆ. ನಮ್ಮ ದೂರುಗಳನ್ನು ಪರಿಹರಿಸಲಾಗುವುದು ಎಂದು ನಾವು ಆಂದೋಲನವನ್ನು ಹಿಂಪಡೆದಿದ್ದೇವೆ. ಆದರೆ ಇಲ್ಲಿಯವರೆಗೆ ಯಾವುದೇ ಪ್ರಗತಿಯಾಗಿಲ್ಲ,” ಎಂದು ಅವರು ತಿಳಿಸಿದ್ದಾರೆ.

ಲೊಕೊ ಪೈಲಟ್‌ಗಳು, ವಿಶೇಷವಾಗಿ ಗೂಡ್ಸ್ ರೈಲುಗಳನ್ನು ಓಡಿಸುವವರು ದಿನಕ್ಕೆ 14-16 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ ಮತ್ತು ಮೂರ್ನಾಲ್ಕು ದಿನಗಳ ನಂತರ ಮನೆಗೆ ಹೋಗುತ್ತಾರೆ ಎಂದು ರಾಹುಲ್‌ಗೆ ನೀಡಿರುವ ಜ್ಞಾಪಕ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಚಾಲಕರು ಸತತ ನಾಲ್ಕಕ್ಕಿಂತ ಹೆಚ್ಚು ರಾತ್ರಿ ಕೆಲಸ ಮಾಡುತ್ತಾರೆ ಮತ್ತು ವಾರದ ವಿಶ್ರಾಂತಿ ಪಡೆಯುವ ಬದಲು ಅವರಿಗೆ 10 ದಿನಕ್ಕೊಮ್ಮೆ ವಿಶ್ರಾಂತಿ ನೀಡಲಾಗುತ್ತದೆ ಎಂದು ಲೋಕೋ ಪೈಲೆಟ್‌ಗಳು ತಮ್ಮ ಕಷ್ಟ ತೋಡಿಕೊಂಡಿದ್ದಾರೆ.

ಇನ್ನೂ ಪೋಲಿಸರು ಈ ಪ್ರಕರಣದ ಕುರಿತು FIR ದಾಖಲಿಸಿದ್ದಾರೆ ಎಂಬುದು ಸುಳ್ಳು :

ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಂದರ್ಭದಲ್ಲಿ ಹಿಂಸಾಚಾರ ಮತ್ತು ಪ್ರಚೋದನೆಗಾಗಿ ಅಸ್ಸಾಂನಲ್ಲಿ ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರ ವಿರುದ್ಧ FIR ದಾಖಲಾಗಿವೆ. ಈ ಎಫ್‌ಐಆರ್‌ಗಳು ಗುವಾಹಟಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪೊಲೀಸ್ ಸಿಬ್ಬಂದಿಯ ನಡುವಿನ ಘರ್ಷಣೆಗೆ ಸಂಬಂಧಿಸಿವೆಯೇ ಹೊರತು ಲೋಕೋ ಪೈಲಟ್ ಚರ್ಚೆಯ ಕಾರಣಕ್ಕಲ್ಲ.

ರೈಲ್ವೆ ಇಲಾಖೆಯಲ್ಲಿರುವ ಸಮಸ್ಯೆಗಳನ್ನು ಮುಚ್ಚಿಹಾಕಲು ರಾಹುಲ್ ಗಾಂಧಿಯವರು ನಕಲಿ ಲೋಕೋ-ಪೈಲೆಟ್‌ಗಳ ಜೊತೆಗೆ ಚರ್ಚೆ ನಡೆಸಿದ್ದಾರೆ ಎಂದು ವಿವಾದ ಸೃಷ್ಟಿಸಲಾಗಿದೆ. ಆದರೆ ನಮ್ಮ ಸಮಸ್ಯೆಗೆ ಮಾತ್ರ ರೈಲ್ವೆ ಮಂತ್ರಿಗಳು ಮತ್ತು ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಲೋಕೋ-ಪೈಲೆಟ್‌ಗಳು ಆರೋಪಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಪಶ್ಚಿಮ ಬಂಗಾಳದಲ್ಲಿ ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲು ಅಪಘಾತದ ನಂತರ ರಾಹುಲ್ ಗಾಂಧಿಯವರು ಲೋಕೋ-ಪೈಲೆಟ್‌ಗಳ ಜೊತೆಗೆ ನಡೆಸಿದ ಸಂವಾದದಲ್ಲಿ ಭಾಗವಹಿಸಿದವರು ರೈಲ್ವೆ ನೌಕರರು ಮತ್ತು ಲೋಕೋ ಪೈಲೆಟ್‌ಗಳಲ್ಲ ಎಂದು ಸಾಬೀತು ಪಡಿಸಲು ಯಾವುದೇ ಪುರಾವೆಗಳಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಸಾವಿರಾರು ಬಾಂಗ್ಲಾ ಮುಸ್ಲಿಮರು ಭಾರತಕ್ಕೆ ಬಂದಿದ್ದಾರೆ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights