FACT CHECK | ಬಾಂಗ್ಲಾದೇಶದಲ್ಲಿ ಹಿಂದೂ ವ್ಯಕ್ತಿಯನ್ನು ಕತ್ತು ಸೀಳಿ ಹತ್ಯೆ ಮಾಡಲಾಗಿದೆಯೇ?

ರಕ್ತದ ಮಡುವಿನಲ್ಲಿ ಬಿದ್ದ ಮೃತದೇಹದ ಮುಂದೆ ಅಳುತ್ತಿರುವ ಮಹಿಳೆಯ ಸುತ್ತ ನೂರಾರು ಜನ ನಿಂತು ನೋಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗತ್ತಿದೆ. ಬಾಂಗ್ಲಾದೇಶದ ನರಸಿಂಗಡಿ ಜಿಲ್ಲೆಯಲ್ಲಿ ಈದ್ಗಾ ಗೇಟ್, ಕೌರಿಯಾ ಪಾರಾ ಮುಂಭಾಗದಲ್ಲಿ ಹಿಂದೂ ವ್ಯಕ್ತಿಯ ಕೊಲೆಯಾಗಿದೆ ಎಂಬ ಹೇಳಿಕೆಯೊಂದಿಗೆ ಹಲವರು ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಅಕ್ಟೋಬರ್ 11, 2024 ರಂದು ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು, ‘‘ಬಾಂಗ್ಲಾದೇಶದಲ್ಲಿ ಇನ್ನೂ ನಿಂತಿಲ್ಲ ಹಿಂದೂಗಳ ಮೇಲಿನ ದಾಳಿ. ಬಾಂಗ್ಲಾದ ನಾರ್ಸಿಂಗಡಿ ಜಿಲ್ಲೆಯ ಕೌರಿಯಾ ಪಾರಾದ ಈದ್ಗಾ ಗೇಟ್‌ನಲ್ಲಿ ಎಲ್ಲರ ಸಮ್ಮುಖದಲ್ಲೇ ಮುಸ್ಲಿಮರು ಹಿಂದೂವನ್ನು ಕತ್ತು ಸೀಳಿ ಕೊಂದಿದ್ದಾರೆ. ಇದು ನಾಳೆ ಇನ್ನಷ್ಟು ಹೆಚ್ಚಾಗಲಿದೆ. ನಾವಲ್ಲದಿದ್ದರೆ ಬಾಂಗ್ಲಾದೇಶಿ ಹಿಂದೂಗಳ ಪರ ಧ್ವನಿ ಎತ್ತುವವರು ಯಾರು?’’ ಎಂಬ ಹೇಳಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಂಚಿಕೊಂಡ ವಿಡಿಯೋವನ್ನು ಇಲ್ಲಿಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್‌ ಮಾಡಿದಾಗ, ಅಕ್ಟೋಬರ್ 1, 2024 ರಂದು ಬಾಂಗ್ಲಾದೇಶದ ಸುದ್ದಿ ಚಾನೆಲ್ ಸೊರೆಜೊಮಿನ್ ಬಾರ್ಟಾ ತನ್ನ ಯೂಟ್ಯೂಬ್ ಚಾನೆಲ್​ನಲ್ಲಿ ‘ನರಸಿಂಗಡಿ ಪೇಟೆಯಲ್ಲಿ ಹಳೆಯ ದ್ವೇಷದಿಂದ ಹನೀಫ್ ಎಂಬ ಯುವಕನ ಹತ್ಯೆಯಾಗಿದೆ’ ಎಂಬ ಶೀರ್ಷಿಕೆಯೊಂದಿಗೆ ಅಪ್‌ಲೋಡ್ ಮಾಡಿದ ವಿಡಿಯೋ ಲಭ್ಯವಾಗಿದೆ.

ವಿಡಿಯೋ ವರದಿಯ ಪ್ರಕಾರ, ಪೊಲೀಸರು ಮತ್ತು ಸಂಬಂಧಿಕರ ಹೇಳಿಕೆಗಳನ್ನು ಉಲ್ಲೇಖಿಸಿದ್ದು, ಕೊಲೆಯ ಹಿಂದಿನ ಉದ್ದೇಶವು ಕೌಟುಂಬಿಕ ಕಲಹದಿಂದ ಉಂಟಾದ ವೈಯಕ್ತಿಕ ದ್ವೇಷವಾಗಿದೆ. ಹನೀಫ್ ಮಿಯಾ ತನ್ನ ಚಿಕ್ಕಪ್ಪ ಹಬು ಮಿಯಾನನ್ನು ಮೂರು ತಿಂಗಳ ಹಿಂದೆ ಕೊಂದಿದ್ದಾನೆ. ಇದೇ ಕಾರಣಕ್ಕೆ ಹಬು ಮಿಯಾನ ಸಂಬಂಧಿಕರು ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.

bd-bulletin ಸುದ್ದಿತಾಣ ಈ ಕುರಿತು ವರದಿ ಮಾಡಿದ್ದು, ‘‘ಬಾಂಗ್ಲಾದೇಶದ ನರಸಿಂಗಡಿ ಪ್ರದೇಶದಲ್ಲಿ, ಅಕ್ಟೋಬರ್ 1 ರಂದು ಹಾಡು ಹಗಲೇ ಕೌರಿಯಾ ಪಾರಾ ಅವರ ಈದ್ಗಾ ಗೇಟ್‌ ಬಳಿ ವೈಯಕ್ತಿಕ ದ್ವೇಷದ ಕಾರಣ ಹನೀಫ್ ಮಿಯಾ ಅವರನ್ನು ಕೊಂದಿದ್ದಾರೆ. ಹನೀಫ್ ಬಾಂಗ್ಲಾದೇಶದ ಕಾನೂನಿನಡಿಯಲ್ಲಿ ಕೊಲೆ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಮೃತ ವ್ಯಕ್ತಿಯ ಸಂಬಂಧಿಕರು ಹನೀಫ್ ಅವರನ್ನು ಕೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸಂಬಂಧಿಕರ ನಡುವಿನ ವೈಯಕ್ತಿಕ ದ್ವೇಷದ ಕಾರಣದಿಂದ ಕೊಲೆ ನಡೆದಿದೆ. ಹನೀಫ್ ಮಿಯಾ ಅವರ ಸೋದರಸಂಬಂಧಿ ನಯೀಮ್ ಮತ್ತು ನದೀಮ್ ಆರೋಪಿಗಳಾಗಿದ್ದಾರೆ ಎಂದು ನರಸಿಂಗಡಿ ಡಿಟೆಕ್ಟಿವ್ ಡಿಪಾರ್ಟ್‌ಮೆಂಟ್ ಪ್ರಭಾರಿ ಪೊಲೀಸ್ ಅಧಿಕಾರಿ ಎಸ್‌ಎಂ ಕಬ್ರುಜಮಾನ್ ಸುದ್ದಿವಾಹಿನಿಗೆ ತಿಳಿಸಿದ್ದಾರೆ.’’ ಎಂದು ವರದಿಯಲ್ಲಿದೆ.

ಈ ಘಟನೆಗೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಮಾಧ್ಯಮಗಳಾದ BDnews24 ಮತ್ತು Sangbad Porikrama ಸುದ್ದಿ ತಾಣಗಳಲ್ಲಿ ವರದಿಯನ್ನು ಪ್ರಕಟಿಸಿವೆ. ಹಾಗಾಗಿ ಹಿಂದೂ ವ್ಯಕ್ತಿಯ ಕತ್ತು ಸೀಳಿ ಹತ್ಯೆ ಮಾಡಲಾಗಿದೆ ಎಂಬುದು ಸುಳ್ಳು.

ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದ ನರಸಿಂಗಡಿ ಜಿಲ್ಲೆಯಲ್ಲಿ ಕೌಟುಂಬಿಕ ಕಲಹದಿಂದ ನಡೆದಿರುವ ಈ ಘಟನೆಯನ್ನು, ಬಾಂಗ್ಲಾದೇಶದಲ್ಲಿ ಮುಸ್ಲಿಮರು ಹಿಂದೂ ವ್ಯಕ್ತಿಯ ಕತ್ತು ಸೀಳಿ ಕೊಂದಿದ್ದಾರೆಂದು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ :FACT CHECK | ನಟ ವಿಜಯ್ ಸೇತುಪತಿ ಹಂಚಿಕೊಂಡ ಕೋಟ್‌ ರತನ್ ಟಾಟಾ ಹೇಳಿಕೆಯಲ್ಲ! ಫೇಕ್‌ ಪೋಸ್ಟ್‌ ಎಂದ ನೆಟ್ಟಿಗರು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights