ನನ್ನ ತಪ್ಪಿನಿಂದಾಗಿ ರಾಹುಲ್‌ಗಾಂಧಿ ಕೆಟ್ಟ ಟ್ರೋಲ್‌ಗೆ ಒಳಗಾದರು; ಕಾಂಗ್ರೆಸ್‌ ಐಟಿ ಸೆಲ್‌ ತೊರೆಯಲು ಕಾರಣ ಬಿಚ್ಚಿಟ್ಟ ರಮ್ಯಾ!

2019ರ ಚುನಾವಣೆಗೂ ಮುನ್ನ ತಾವು ಮಾಡಿದ ಒಂದು ತಪ್ಪಿನಿಂದಾಗಿ ರಾಹುಲ್‌ಗಾಂಧಿ ಅವರು ಬಿಜೆಪಿಗರಿಂದ ಟ್ರೋಲ್‌ ಆಗಬೇಕಾಯಿತು. ಆದರೂ, ಅವರ ನಮ್ಮ ಬಗ್ಗೆ ಬೇಸರಗೊಳ್ಳಲಿಲ್ಲ. ಇನ್ನು ಮುಂದೆ ಜಾಗರೂಕರಾಗಿ ಎಂದಷ್ಟೇ ಹೇಳಿದರು ಎಂದು ನಟಿ, ಮಾಜಿ ಸಂಸದೆ ರಮ್ಯಾ ಹೇಳಿದ್ದಾರೆ.

ಸದ್ಯ, 2014ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತ ಬಳಿಕ ರಮ್ಯಾ ಅವರು ಕಾಂಗ್ರೆಸ್ಸಿನ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥೆಯಾಗಿದ್ದರು. ಆ ಬಳಿಕ ಆ ಸ್ಥಾನವನ್ನೂ ತೊರೆದರು. ಅವರ ಹಠಾತ್ ನಿರ್ಗಮನವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಈ ಪ್ರಶ್ನೆಗಳಿಗೆ ಇದೀಗ ಅವರು ಉತ್ತರ ನೀಡಿದ್ದಾರೆ.

ಕನ್ನಡ ಚಿತ್ರರಂಗ ಸೇರಿದಂತೆ ಬಹುಭಾಷ ನಟಿಯಾಗಿ ಮೆರೆದ ನಟಿ ರಮ್ಯಾ ರಾಜಕೀಯಕ್ಕೆ ಬಂದು ಮಂಡ್ಯ ಉಪಚುನಾವಣೆಯಲ್ಲಿ ಗೆದ್ದು ಸಂಸದೆಯಾದರು. ಬಳಿಕ ನಡೆದ 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋತಿದ್ದ ಅವರು, ಕಾಂಗ್ರೆಸ್ ಸೋಷಿಯಲ್ ಮೀಡಿಯಾದ ಮುಖ್ಯಸ್ಥೆ ಪಟ್ಟಕ್ಕೇರಿದ್ದರು. ಆದರೆ 2019 ರ ಲೋಕಸಭಾ ಚುನಾವಣೆ ಬಳಿಕ ಕಣ್ಮರೆಯಾಗಿದ್ದರು.

ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಉತ್ತರ ನೀಡಿದ್ದಾರೆ. ತಾವು ಮಾಡಿದ ತಪ್ಪಿನಿಂದ ಅಂದಿನ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಅವರಿಗಾದ ತೊಂದರೆಗಳ ಬಗ್ಗೆ ಮಾತನಾಡಿದ್ದಾರೆ. ತಾವು ಏಕೆ ಕಾಂಗ್ರೆಸ್ ಸೋಷಿಯಲ್ ಮೀಡಿಯಾದ ಮುಖ್ಯಸ್ಥೆ ಸ್ಥಾನಕ್ಕೆ ರಾಜೀನಾಮೆ ನೀಡಿದೆ ಎಂಬುದನ್ನು ತಿಳಿಸಿದ್ದಾರೆ.

ಅಂದಿನ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ 2018 ರ ಆಗಸ್ಟ್‌ನಲ್ಲಿ ಪಕ್ಷದ ಕೆಲ ಸಂಸದರೊಂದಿಗೆ ಜರ್ಮನಿಗೆ ಭೇಟಿ ನೀಡಿದ್ದರು. ಬರ್ಲಿನ್‌ನ ವಸ್ತುಸಂಗ್ರಹಾಲಯದ ಪ್ರವಾಸದ ವೇಳೆ ರಮ್ಯಾ ಫೋಟೋಗಳನ್ನು ತೆಗೆದಿದ್ದರಂತೆ. ಆ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬೇಡದ ಕಾರಣಕ್ಕೆ ವೈರಲ್ ಆಗಿ, ರಾಹುಲ್ ಗಾಂಧಿ ಅವರಿಗೆ ತೀವ್ರ ಮುಜುಗರ ಉಂಟು ಮಾಡಿದ್ದವು ಎಂದು ಹೇಳಿಕೊಂಡಿದ್ದಾರೆ.

”ರಾಹುಲ್ ಗಾಂಧಿ ಅವರ ಫೋಟೋಗಳು ಹೆಚ್ಚು ಟ್ರೋಲ್‌ಗೆ ಒಳಗಾದವು. ರಾಹುಲ್ ಗಾಂಧಿ ಬಗ್ಗೆ ಅಪಹಾಸ್ಯ ಮಾಡಲಾಯಿತು. ನಾನು ಮಾಡಿದ ತಪ್ಪಿನಿಂದ ರಾಹುಲ್ ಗಾಂಧಿ ಅವರನ್ನು ಕೆಟ್ಟ ರೀತಿಯಲ್ಲಿ ಟ್ರೋಲ್ ಮಾಡಲಾಯಿತು. ನಾನು ಮಾಡಿದ ತಪ್ಪಿನಿಂದ ಅಂದು ರಾತ್ರಿ ನನಗೆ ನಿದ್ದೆಯೇ ಬರಲಿಲ್ಲ” ಎಂದು ರಮ್ಯಾ ಬರೆದಿದ್ದಾರೆ.

ತಮ್ಮ ತಪ್ಪಿಗೆ ಕ್ಷಮಾಪಣೆ ಕೇಳಲು ಹಾಗೂ ಹುದ್ದೆಗೆ ರಾಜೀನಾಮೆ ನೀಡಲು ರಾಹುಲ್ ಗಾಂಧಿ ಬಳಿ ತೆರಳಿದ್ದಾಗಿ, ಅವರು ರಾಜೀನಾಮೆಯನ್ನು ತಿರಸ್ಕರಿಸಿ, ಇನ್ನು ಮುಂದೆ ಜಾಗರೂಕರಾಗಿರಿ ಎಂದು ಹೇಳಿದ್ದರು. ಆ ಸಮಯದಲ್ಲಿ ತಾವು ಕಣ್ಣೀರಿಟ್ಟಿದ್ದಾಗಿ ರಮ್ಯಾ ಹೇಳಿಕೊಂಡಿದ್ದಾರೆ.

“ನಾನು ಮಾಡಿದ ತಪ್ಪಿಗೆ, ನನ್ನನ್ನ ಹುದ್ದೆಯಿಂದ ಹೊರದಬ್ಬಬೇಕಿತ್ತು. ಆದರೆ, ಅವರು ಹಾಗೆ ಮಾಡಲಿಲ್ಲ. ರಾಹುಲ್ ಗಾಂಧಿ ಒಳ್ಳೆಯ ಮನುಷ್ಯ. ಅವರ ಜನಪರ ಕಾಳಜಿ ನನ್ನ ಮೇಲೆ ಸದಾ ಪ್ರಭಾವ ಬೀರುತ್ತದೆ” ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ನಟಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕನ್ನಡದಲ್ಲಿರುವ ಗ್ರಾಮಗಳ ಹೆಸರನ್ನು ಮಲೆಯಾಳಂಗೆ ಬದಲಾಯಿಸುವ ಉದ್ದೇಶ ಸರ್ಕಾರಕ್ಕಿಲ್ಲ: ಪಿಣರಾಯಿ ವಿಜಯನ್‌ ಸ್ಪಷ್ಟನೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights