ಅಖಿಲ್ ಗೊಗೋಯ್ ವಿರುದ್ದ ಪ್ರಕರಣಗಳನ್ನು ಕೈಬಿಟ್ಟ ನ್ಯಾಯಾಲಯ; ಜೈಲಿನಿಂದ ಬಿಡುಗಡೆ ಸಾಧ್ಯತೆ!
ಅಸ್ಸಾಂನ ಸಿಎಎ ವಿರೋಧಿ ಹೋರಾಟಗಾರ, ಕೃಷಿಕ್ ಮುಕ್ತಿ ಸಂಗ್ರಾಮ್ ಸಮಿತಿ (KMSS)ಯ ನಾಯಕ, ಶಾಸಕ ಅಖಿಲ್ ಗೊಗೋಯ್ ವಿರುದ್ಧ ಯುಎಪಿಎ ಕಾಯ್ದೆ ಅಡಿಯಲ್ಲಿ ದಾಖಲಾಗಿದ್ದ ಆರೋಪಗಳನ್ನು ಎನ್ಐಎ ನ್ಯಾಯಾಲಯ ತೆರವುಗೊಳಿಸಿದೆ. ಹೀಗಾಗಿ ಅವರು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.
ಡಿಸೆಂಬರ್ 2019 ರಲ್ಲಿ ಅಸ್ಸಾಂನಲ್ಲಿ ನಡೆದ ಸಿಎಎ ವಿರೋಧಿ ಹೋರಾಟದ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅವರನ್ನು ಯುಎಪಿಎ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿತ್ತು. ಶಿವ್ಸಾಗರ್ ಶಾಸಕ ಅಖಿಲ್ ಗೊಗೋಯ್ ವಿರುದ್ಧ ಯುಎಪಿಎ ಅಡಿಯಲ್ಲಿ ದಾಖಲಾಗಿದ್ದ ಎಲ್ಲಾ ಆರೋಪಗಳನ್ನು ಎನ್ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ವಿಶೇಷ ನ್ಯಾಯಾಲಯ ತೆರವುಗೊಳಿಸಿದೆ.
ಅಸ್ಸಾಂನಲ್ಲಿ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ರೈತ ಹೋರಾಟಗಾರ ಗೊಗೋಯ್ ಡಿಸೆಂಬರ್ 2019 ರಿಂದ ಬಂಧನಕ್ಕೊಳಗಾಗಿದ್ದಾರೆ. ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಅವರನ್ನು ಪ್ರಸ್ತುತ ಗುವಾಹಟಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ (ಜಿಎಂಸಿಎಚ್) ದಾಖಲಿಸಲಾಗಿದೆ.
ಇದನ್ನೂ ಓದಿ: CAA ವಿರೋಧಿ ಹೋರಾಟ; ಶಾಸಕ, ಹೋರಾಟಗಾರ ಅಖಿಲ್ ಗೊಗೊಯ್ ವಿರುದ್ದದ ಪ್ರಕರಣ ಖುಲಾಸೆ!
ಗುವಾಹಟಿಯ ಚಾಂದಮರಿಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಎನ್ಐಎ ನ್ಯಾಯಾಲಯ ಅಖಿಲ್ ಗೊಗೋಯ್ ಅವರನ್ನು ಬಿಡುಗಡೆ ಮಾಡಿದೆ. ದಿಬ್ರುಗಢ ಜಿಲ್ಲೆಯ ಚಾಬುವಾದಲ್ಲಿ ಎನ್ಐಎ ದಾಖಲಿಸಿದ ಇತರ ಪ್ರಕರಣದಲ್ಲಿ ನ್ಯಾಯಾಲಯವು ಈ ಹಿಂದೆಯೇ ಅವರನ್ನು ಬಿಡುಗಡೆ ಮಾಡಿದೆ ಎಂದು ಗೊಗೋಯ್ ಪರ ವಕೀಲ ಶಾಂತನು ಬೋರ್ತಾಕೂರ್ ಹೇಳಿದ್ದಾರೆ.
ನಿಷೇಧಿತ ಸಿಪಿಐ (ಮಾವೋವಾದಿ)ಯೊಂದಿಗಿನ ಸಂಪರ್ಕವಿದೆ ಎಂದು ಆರೋಪಿಸಿ ದೇಶದ್ರೋಹದ ಆರೋಪದ ಮೇಲೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ, ಅಖಿಲ್ ಗೊಗೋಯ್ ವಿರುದ್ಧ ಎನ್ಐಎ ಎರಡು ಪ್ರಕರಣಗಳನ್ನು ದಾಖಲಿಸಿತ್ತು. ಈ ಹಿಂದೆ ಚಾಬುವಾ ಪ್ರಕರಣದಲ್ಲಿ ಅವರನ್ನು ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: ಸಿಎಎ ವಿರೋಧಿ ಪತ್ರಿಭಟನಾಕಾರ ಅಖಿಲ್ ಗೊಗೊಯ್ಗೆ ಜಾಮೀನು!