ಸಿಎಎ ವಿರೋಧಿ ಪತ್ರಿಭಟನಾಕಾರ ಅಖಿಲ್‌ ಗೊಗೊಯ್‌ಗೆ ಜಾಮೀನು!

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಬಂಧಿಸಲಾಗಿದ್ದ ರೈತ ಹೋರಾಟಗಾರ ಅಖಿಲ್‌ ಗೊಗೊಯ್‌ ಅವರಿಗೆ ಅಸ್ಸಾಂನ ಗೌಹಾತಿ ಹೈಕೋರ್ಟ್‌ ಜಾಮೀನು ನೀಡಿದೆ.

ಸಿಎಎ ವಿರೋಧಿ ಹೋರಾಟದಲ್ಲಿ ಮುಂಚೂಣಿ ಪಾತ್ರ ವಹಿಸಿದ್ದ ಅಖಿಲ್‌ ಗೊಗೊಯ್‌ ಅವರನ್ನು ಅಸ್ಸಾಂನ ಚಾಬುವಾ ಪೊಲೀಸರು ಬಂಧಿಸಿದ್ದರು. ಗೊಗೊಯ್‌ ವಿರುದ್ಧ ಮಾವೋವಾದಿ ಸಂಬಂಧ ಸೇರಿಸಂತೆ 12 ಪ್ರಕರಣಗಳನ್ನು ಆರೋಪಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಅಸ್ಸಾಂ ಪೊಲೀಸರು ದೂರು ದಾಖಲಿಸಿದ್ದಾರೆ. ಅವುಗಳಲ್ಲಿ ಮೂರು ಪ್ರಕರಣಗಳ ವಿಚಾರಣೆ ನಡೆಸಿದ ಗೌಹತಿ ಹೈ ಕೋರ್ಟ್ ಅವರಿಗೆ ಜಾಮೀನು ನೀಡಿದೆ.

ಗೊಗೊಯ್ ವಿರುದ್ಧ ಅಸ್ಸಾಂ ಪೊಲೀಸರು ಸಲ್ಲಿಸಿರುವ 12 ಪ್ರಕರಣಗಳಲ್ಲಿ 293/2019, 296/2019 ಮತ್ತು 307/2019 ಪ್ರಕರಣಗಳ ವಿಚಾರಣೆ ನಡೆಸಲಾಗಿದ್ದು, ಇದಕ್ಕಾಗಿ ಅವರು ಗುರುವಾರ ಜಾಮೀನು ಪಡೆದಿದ್ದಾರೆ. ಗೊಗೊಯ್‌ ವಿರುದ್ಧ ದಾಖಲಿಸಲಾಗಿರುವ ಮಾವೋವಾದಿ ಸಂಬಂಧಗಳನ್ನು ಹೊಂದಿದ್ದರೆಂಬ ಆರೋಪ ಪ್ರಕರಣ ಸೇರಿದಂತೆ ಎರಡು ಪ್ರಕರಣಗಳ ವಿಚಾರಣೆಯನ್ನು ಜುಲೈ 20 ಮತ್ತು 21 ರಂದು ನಡೆಸಲು ಕೋರ್ಟ್‌ ನಿಗದಿಪಡಿಸಿದೆ.

ಗೊಗೊಯ್‌ ಅವರ ಕಾನೂನು ಸಲಹೆಗಾರರ ಪ್ರಕಾರ, ಅವರ ಮೇಲೆ ಸೆಕ್ಷನ್‌ 144, 143, 148, 153, 153 (ಎ), 153 (ಬಿ), ಹಾಗೂ ಸಾರ್ವಜನಿಕ ಆಸ್ತಿಗೆ ಹಾನಿ ತಡೆಗಟ್ಟುವ (ಪಿಡಿಪಿಪಿಎ ಸೆಕ್ಷನ್ 3 ಮತ್ತು 4 ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

289/19 ಮತ್ತು 13/19 ಎಂಬ ಎರಡು ಪ್ರಕರಣಗಳನ್ನು ಚಾಂದಮರಿ ಪೊಲೀಸ್ ಠಾಣೆ ಮತ್ತು ಚಾಬುವಾ ಪೊಲೀಸ್ ಠಾಣೆಯಲ್ಲಿ ಡಿಸೆಂಬರ್‌ ತಿಂಗಳಿನಲ್ಲಿ ದಾಖಲಿಸಲಾಗಿದೆ. ಈ ಪ್ರಕರಣಗಳ ತನಿಖೆಯನ್ನು ಎನ್‌ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ವಹಿಸಿಕೊಂಡ ನಂತರ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ ಅಡಿಯಲ್ಲಿ ಆರೋಪಗಳನ್ನು ಸೇರಿಸಿದೆ.

ಪ್ರಕರಣ ಸಂಖ್ಯೆ 289/19 ಅನ್ನು ಜುಲೈ 20 ರಂದು ಗೌಹತಿ ಹೈಕೋರ್ಟ್ ಮತ್ತು 13/19 ಪ್ರಕರಣವನ್ನು ಜುಲೈ 21 ರಂದು ಎನ್ಐಎ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಲಿದೆ.

ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಸಿಎಎ ವಿರೋಧಿ ಪ್ರತಿಭಟನೆ ಆಯೋಜಿಸಿದ್ದ ಗೊಗೊಯ್ ಅವರನ್ನು ಡಿಸೆಂಬರ್‌ 12 ರಂದು ಜೋಹಾರ್ಟ್‌ನಲ್ಲಿಬಂಧಿಸಲಾಗಿತ್ತು. ಗೊಗೊಯ್ ಬಂಧನದ ನಂತರದ ದಿನಗಳಲ್ಲಿ, ಉಳಿದ ಕೆಎಂಎಸ್ಎಸ್ ಮತ್ತು ಸತ್ಯ ಮುಕ್ತಿ ಸಂಗ್ರಾಮ್ ಸಮಿತಿ (ಎಸ್‌ಎಂಎಸ್ಎಸ್) ಮುಖಂಡರಾದ ಧರ್ಜ್ಯಾ ಕೊನ್ವಾರ್, ಬಿಟು ಸೋನೊವಾಲ್ ಮತ್ತು ಮನಸ್ ಕೊನ್ವಾರ್ ಅವರನ್ನು ಯುಎಪಿಎ ಅಡಿಯಲ್ಲಿ ಎನ್ಐಎ ಬಂಧಿಸಿತ್ತು.

ಗೋಗೊಯಿ ವಿರುದ್ಧದ ಆರೋಪಗಳಲ್ಲಿ ಕಾನೂನುಬಾಹಿರ ಸಭೆ, ಗಲಭೆಯಲ್ಲಿ ತೊಡಗುವುದು ಮತ್ತು ಮಾರಣಾಂತಿಕ ಆಯುಧಗಳನ್ನು ಹೊಂದಿರುವುದು, ಗಲಭೆಗೆ ಪ್ರಚೋಧನೆ, ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು, ಸಾರ್ವಜನಿಕ ಆಸ್ತಿಗೆ ಹಾನಿ ಉಂಟುಮಾಡುವ ಕಿಡಿಗೇಡಿತನ ಹಾಗೂ ಇತರೆ ಆರೋಪಗಳನ್ನು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights