ಚಾಮರಾಜನಗರ ದುರಂತ : ಸರ್ಕಾರ ನೀಡಿದ ಸಾವಿನ ಲೆಕ್ಕ ತಪ್ಪು ಎಂದು ಡಿಕೆಶಿ ಆಕ್ರೋಶ..!

ಚಾಮರಾಜನಗರ ದುರಂತದಲ್ಲಿ ಸಾವಿನ್ನಪ್ಪಿದವರ ಲೆಕ್ಕವನ್ನು ಸರ್ಕಾರ ತಪ್ಪಾಗಿ ನೀಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಆಕ್ರೋಶ ಹೊರಹಾಕಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಾಧ್ಯಕ್ಷರ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಕೆ ಶಿವಕುಮಾರ್, ಆಕ್ಸಿಜನ್ ಕೊರತೆಯಿಂದ ಚಾಮರಾಜನಗರದಲ್ಲಿ ಸಾವನ್ನಪ್ಪಿದವರ ಸಂಖ್ಯೆ 36ರ ಬದಲು 24 ಅಂತ ಸರ್ಕಾರ ತಪ್ಪು ಲೆಕ್ಕ ನೀಡಿದೆ. ಚಾಮರಾಜನಗರದಲ್ಲಿ ಆಮ್ಲಜನಕ ಕೊರತೆಯಿಂದ ಉಂಟಾದ ಸಾವು ಸರ್ಕಾರದ ಕೊಲೆ. ಇದುವರೆಗೂ ಯಾವುದೇ ಸಚಿವರು, ಮುಖ್ಯಮಂತ್ರಿ ಭೇಟಿ ಕೊಟ್ಟು ಪರಿಶೀಲಿಸದಿರುವುದು ದುರಂತ ಎಂದು ಹರಿಹಾಯ್ದರು.

ಚಾಮರಾಜನಗರದಲ್ಲಿ ಆಮ್ಲಜನಕ ಇಲ್ಲದೆ ಜನ ಸಾವಿಗೀಡಾಗುತ್ತಿದ್ದರೆ ಅಂದು ಅಲ್ಲಿ ಒಬ್ಬ ವೈದ್ಯರಿರಲಿಲ್ಲ, ದಾದಿಯರು ಗಮನಿಸಿಲ್ಲ. 10-15 ಮಂದಿಯನ್ನು ಒಂದು ಕೊಠಡಿಯಲ್ಲಿ ತುಂಬಿಸಿಡಲಾಗಿದೆ. ಒಬ್ಬರ ಮೇಲೆ ಒಬ್ಬರು ಬಿದ್ದು ವಿಲ ವಿಲ ಒದ್ದಾಡಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರನ್ನು ರಾಶಿ ಹಾಕಿ ಇಡಲಾಗಿತ್ತು. ಅದರ ಚಿತ್ರಗಳು, ದಾಖಲೆ ನನ್ನ ಬಳಿ ಇದೆ. ಕೋವಿಡ್​ನಿಂದ 36 ಜನ ಮೃತ ಪಟ್ಟಿದ್ದಾರೆ. ಇವರಲ್ಲಿ 40 ವರ್ಷ ಒಳಗಿನ ವಯೋಮಾನದವರೇ ಶೇ.80 ರಷ್ಟು ಮಂದಿ ಇದ್ದಾರೆ.

ಈಗಾಗಲೇ ನಾವು 28 ಜನರ ಕುಟುಂಬಕ್ಕೆ ಭೇಟಿ ಕೊಟ್ಟಿದ್ದೆವು. ಎಲ್ಲರಿಗೆ ತಲಾ 1 ಲಕ್ಷ ಚೆಕ್ ನೀಡಿದ್ದೇವೆ. ಉಳಿದವರ ಕುಟುಂಬವನ್ನು ಭೇಟಿ ಮಾಡಲಾಗಲಿಲ್ಲ. ನಮ್ಮ ಮುಖಂಡರ ಮೂಲಕ ಅವರಿಗೆ ನೆರವು ತಲುಪಿಸಿದ್ದೇವೆ ಎಂದರು.

ಮೊದಲಿಗೆ ನಾನು, ಸಿದ್ದರಾಮಯ್ಯ ಹೋಗಿದ್ದೆವು. ಅಧಿಕಾರಿಗಳನ್ನ ಅವರೇ ಚೆನ್ನಾಗಿ ಪ್ರಶ್ನೆ ಮಾಡಿದ್ದರು. ಆಗ 24 ಜನ ಸತ್ತಿದ್ದು ನಮ್ಮ ಗಮನಕ್ಕೆ ಬಂತು. ವಿಧಾನಸಭೆ ಅಧಿವೇಶನ ಕರೆಯುವುದನ್ನು ಕಾಯುತ್ತಿದ್ದೇನೆ. ದಾಖಲೆ ಸಮೇತ ಅಲ್ಲಿಯೇ ವಿಚಾರ ಮಂಡಿಸುತ್ತೇನೆ. ವೈದ್ಯ ಸೇವೆಗೆ ರಾಜ್ಯಕ್ಕೆ ಉತ್ತಮ ಹೆಸರಿದೆ. ಆದರೆ, ಈ ಘಟನೆ ಇಡೀ ದೇಶಕ್ಕೆ ತಲುಪಬೇಕು. ಆಸ್ಪತ್ರೆ, ವೈದ್ಯರು ಇದ್ದೂ ಇಂತಹ ಸ್ಥಿತಿ ಚಾಮರಾಜನಗರದಲ್ಲಿ ನಡೆದಿದೆ.

ಆದರೆ ಸರ್ಕಾರ ಮೂರು ಜನ ಮಾತ್ರ ಎಂದಿತ್ತು. ನಂತರ ಸರ್ಕಾರ 24 ಜನ ಅಂತ ಹೇಳಿತ್ತು. ಇನ್ನು ಆರು ವಾರದಲ್ಲಿ ಸಂತ್ರಸ್ತರಿಗೆ ನೆರವು ನೀಡುವಂತೆ ಒತ್ತಾಯಿಸಿದೆ. ಕೋವಿಡ್​ನಿಂದ ಮೃತಪಟ್ಟವರಿಗೆ ನೆರವು ನೀಡುವಂತೆ ಸರ್ಕಾರಕ್ಕೆ ಸುಪ್ರೀಂ ನಿರ್ದೇಶನ ನೀಡಿದೆ. ನ್ಯಾಯಾಂಗ ಜನರ ಪರವಾಗಿ ನಿಂತಿದೆ ಎಂದರು.

ಸಚಿವರು ಮಾನವೀಯತೆಯಿಂದ ತೆರಳಿ ತಲಾ 1 ಲಕ್ಷ ರೂ. ಪರಿಹಾರ ಕೊಡಬೇಕಿತ್ತು. ಅವತ್ತು ಹೆಣಗಳು ಕೂಡ ಬದಲಾವಣೆ ಆಗಿದೆ. ಅವಸರದಲ್ಲಿ ಹೆಣಗಳನ್ನು ಸಾಗಾಣೆ ಮಾಡಿದ್ದಾರೆ. ಪ್ರಕರಣ ಬೆಳಕಿಗೆ ಬಾರದಂತೆ ತಡೆಯುವ ಪ್ರಯತ್ನ ಮಾಡಿದ್ದಾರೆ. ಹೆಣಗಳು ಮನೆಯವರಿಗೆ ತಲುಪಿಸದೇ ಅಂತ್ಯಕ್ರಿಯೆ ಮಾಡಿದ್ದಾರೆ. ಇನ್ನೂ ಕೆಲವರಿಗೆ ಡೆತ್ ಸರ್ಟಿಫಿಕೇಟ್ ಕೊಟ್ಟಿಲ್ಲ. ಸರ್ಕಾರ ಪರಿಹಾರ ಕೊಡುತ್ತೇನೆ ಎನ್ನುತ್ತಿದೆ.

ಆದರೆ ಸರ್ಟಿಫಿಕೇಟ್ ಕೊಡದೆ ಪರಿಹಾರ ಹೇಗೆ ತಲುಪಿಸುತ್ತೀರಿ. ಪರಿಹಾರಕ್ಕೆ ಅವರು ಅರ್ಜಿ ಹಾಕಬೇಕು. ನಾನು ಮಾನವಿಯತೆಯಿಂದ ಚೆಕ್ ಮೂಲಕ ಪರಿಹಾರ ನೀಡಿದ್ದೇನೆ ಎಂದರು. 36 ಕ್ಕೂ ಹೆಚ್ಚು ಮಂದಿ ಚಾಮರಾಜನಗರದಲ್ಲಿ ಸಾವಾಗಿದೆ. ಆದರೆ, ಇದಕ್ಕೆ ಯಾರನ್ನೂ ಜವಾಬ್ದಾರರಾಗಿಲ್ಲ. ಸಚಿವರು ಯಾರೂ ಜವಾಬ್ದಾರಿ ವಹಿಸಿಲ್ಲ. ಇದನ್ನು ಸುಮೋಟೊ ಕೇಸು ದಾಖಲಿಸಿಕೊಂಡು ತನಿಖೆ ನಡೆಸಿ. ತಪ್ಪಿತಸ್ತರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights