FACT CHECK | ದರ್ಶನ್ ಅಭಿನಯದ ‘ಶಾಸ್ತ್ರಿ’ ಚಿತ್ರದ ಟಿಕೆಟ್‌ಗಾಗಿ ನೂಕುನುಗ್ಗಲು ಎಂದು ಹಂಚಿಕೊಂಡ ವಿಡಿಯೋದ ಅಸಲೀಯತ್ತೇನು ಗೊತ್ತೇ?

ಕೊಲೆ ಪ್ರಕರಣದಲ್ಲಿ ಬಂಧನದಲ್ಲಿರುವ ನಟ ದರ್ಶನ್ ಅಭಿನಯದ ಸಿನಿಮಾ “ಶಾಸ್ತ್ರಿ” ಮರು ಬಿಡುಗಡೆ ಆಗಿದ್ದು, ಟಿಕೆಟ್ ತೆಗೆದುಕೊಳ್ಳಲು ಯುವಕರು ನೂಕುನುಗ್ಗಲಿನಲ್ಲಿ ಸ್ಟೀಲ್‌ ಕಂಬಿಗಳ ತಡೆಗೋಡೆಯನ್ನು ಮುರಿದು ಬೀಳುವ  ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.

ಟ್ವಿಟರ್ ನಲ್ಲಿ ಕಂಡುಬಂದ ಕ್ಲೇಮ್
ಟ್ವಿಟರ್ ನಲ್ಲಿ ಕಂಡುಬಂದ ಕ್ಲೇಮ್

2005 ರಲ್ಲಿ ತೆರೆಕಂಡು ಭರ್ಜರಿ ಯಶಸ್ಸು ಕಂಡಿದ್ದ ‘ದರ್ಶನ್ ಶಾಸ್ತ್ರಿ’ ಸಿನಿಮಾ ರಾಜ್ಯದ ಕೆಲವು ಥಿಯೇಟರ್ನಲ್ಲಿ ಕಳೆದ ಶುಕ್ರವಾರ ರೀ- ರಿಲೀಸ್ ಆಗಿದೆ. ಬೆಳ್ಳಂಬೆಳಗ್ಗೆಯೇ ಡಿಬಾಸ್ ಅಭಿಮಾನಿಗಳು ದರ್ಶನ್ ಕಟ್‌ಔಟ್‌ಗೆ ಹಾರ ಹಾಕಿ ಸಂಭ್ರಮಿಸಿ ಶಾಸ್ತ್ರಿ ಸಿನಿಮಾದ ಟಿಕೆಟ್ ಖರೀದಿಗೆ ಕ್ಯೂ ನಿಂತು ನೂಕು ನುಗ್ಗಲು ನಡೆದಿದೆ ಎಂಬ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ತೂಗುದೀಪ ಡೈನಾಸ್ಟಿ ಎಂಬ ಎಕ್ಸ್ ಬಳಕೆದಾರರು, ”ಮೈಸೂರಿನ ಖುಷಿ ಥಿಯೇಟರ್ನಲ್ಲಿ ಶಾಸ್ತ್ರಿ ಸಿನಿಮಾದ ಕ್ರೇಜ್,” ಎಂದು ಬರೆದು ಸರದಿ ಸಾಲಿನಲ್ಲಿ ಜನರು ನೂಕು ನುಗ್ಗಲು ನಡೆಸುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ. ವಿಡಿಯೋದ ಮೇಲೆ ಟಿಕೆಟ್ ತೆಗೆದುಕೊಳ್ಳಲು ನೂಕು ನುಗ್ಗಲು ಎಂದು ಬರೆಯಲಾಗಿದೆ. ಆದರೆ ವೈರಲ್ ದೃಶ್ಯಗಳಿಗೂ ಹೇಳಿಕೆಗೂ ಸಂಬಂಧವಿಲ್ಲ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಮಾಡಿದ ಪ್ರತಿಪಾದನೆಯನ್ನು ನಿಜವೇ ಎಂದು ತಿಳಿಯಲು 0.23 ಸೆಕೆಂಡ್ ನ ಈ ವೀಡಿಯೋವನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇವೆ. ಈ ವೇಳೆ ವಿಡಿಯೋದಲ್ಲಿ ಕನ್ನಡವಲ್ಲದೆ ಬೇರೆ ಭಾಷೆಯನ್ನು ಮಾತನಾಡುತ್ತಿರುವುದನ್ನು ಕೇಳಬಹುದು. ಬಳಿಕ ವಿಡಿಯೋದ ಕೀಫ್ರೇಂಗಳನ್ನು ತೆಗೆದು ಗೂಗಲ್  ರಿವರ್ಸ್ ಇಮೇಜ್‌ ನಲ್ಲಿ ಸರ್ಚ್ ಮಾಡಿದಾಗ, 11 ಜುಲೈ 2024ರಂದು ಒನ್‌ ಇಂಡಿಯಾ ಮಾಡಿದ ವರದಿ ಲಭ್ಯವಾಗಿದೆ.

ಒನ್‌ ಇಂಡಿಯಾ ವರದಿ ಪ್ರಕಾರ, ”ಗುಜರಾತ್‌ನ ಭರೂಚ್‌ನಲ್ಲಿರುವ ಖಾಸಗಿ ಕಂಪನಿಯೊಂದು 10 ಹುದ್ದೆಗಳ ನೇಮಕಾತಿಗಾಗಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಿತ್ತು.‌ ಹೋಟೆಲ್ ಒಂದರಲ್ಲಿ ಆಯೋಜನೆಗೊಂಡಿದ್ದ ಈ ಉದ್ಯೋಗ ನೇಮಕಾತಿ ಸಂದರ್ಶನಕ್ಕೆ 1,800ಕ್ಕೂ ಹೆಚ್ಚು ಅಭ್ಯರ್ಥಿಗಳು ಆಗಮಿಸಿದ್ದರು. ಈ ಸಂದರ್ಭದಲ್ಲಿ ಸಂದರ್ಶನಕ್ಕೆ ಹಾಜರಾಗಿದ್ದ ಅಭ್ಯರ್ಥಿಗಳ ನಡುವೆ ನೂಕುನುಗ್ಗಲು ಉಂಟಾಗಿ, ಮೆಟ್ಟಿಲಿನ ರೇಲಿಂಗ್ ಕಳಚಿ ಬಿದ್ದಿದೆ. ಆಗ ಕೆಲ ಅಭ್ಯರ್ಥಿಗಳು ಮೆಟ್ಟಿಲಿನ ಮೇಲಿಂದ ಕೆಳಕ್ಕೆ ಬಿದ್ದಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ,” ಎಂದು ಬರೆಯಲಾಗಿದೆ.

ಇದರ ಆಧಾರದಲ್ಲಿ ನಾವು ಇನ್ನಷ್ಟು ಶೋಧ ನಡೆಸಿದ್ದೇವೆ.  ಜುಲೈ 11, 2024ರ ಮನಿ ಕಂಟ್ರೋಲ್‌ ವರದಿ ಪ್ರಕಾರ, ಗುಜರಾತ್  ಭರೂಚ್ ನ ಹೋಟೆಲ್ ನಲ್ಲಿ ನೂರಾರು ಮಂದಿ ಉದ್ಯೋಗ ಸಂದರ್ಶನಕ್ಕಾಗಿ ಆಗಮಿಸಿದ್ದು, ಕಾಲ್ತುಳಿತದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದಿದೆ. ಥೆರಾಮ್ಯಾಕ್ಸ್ ಎಂಬ ರಾಸಾಯನಿಕ ಕಂಪೆನಿ 10 ಹುದ್ದೆಗಳಿಗೆ ನೇಮಕಾತಿ ನಡೆಸಿದ್ದು, ಯುವಕರು ಭಾರೀ ಪ್ರಮಾಣದಲ್ಲಿ ಆಗಮಿಸಿದ್ದರಿಂದ ಕಾಲ್ತುಳಿತದ ಪರಿಸ್ಥಿತಿ ನಿರ್ಮಾಣವಾಯಿತು ಎಂದಿದೆ. ಈ ವೀಡಿಯೋದಲ್ಲಿ ಅಭ್ಯರ್ಥಿಗಳು ನೇಮಕಾತಿ ಸಂದರ್ಶನ ಹೋಟೆಲ್ ಒಳಗೆ ಪ್ರವೇಶಿಸಲು ಯತ್ನಿಸುವ ವೇಳೆ ರೈಲಿಂಗ್ ವೇಳೆ ಕೆಲವು ಅಭ್ಯರ್ಥಿಗಳು ನಿಂತಿದ್ದು ಅದು ಮುರಿಯಲು ಕಾರಣವಾಯಿತು ಎಂದಿದೆ.

ಮನಿ ಕಂಟ್ರೋಲ್ ವರದಿ
ಮನಿ ಕಂಟ್ರೋಲ್ ವರದಿ

ಜುಲೈ 12ರ ದಿ ಹಿಂದೂ ವರದಿಯಲ್ಲಿ ಗುಜರಾತಿನ ಅಂಕೆಲೇಶ್ವರದಲ್ಲಿ ಥರ್ಮಾಕ್ಸ್ ರಾಸಾಯನಿಕ ಸಂಸ್ಥೆಯು ಭರೂಚ್ ಜಿಲ್ಲೆಯ ತನ್ನ ಸ್ಥಾವರಕ್ಕಾಗಿ ಕೇವಲ ಹತ್ತು ಖಾಲಿ ಹುದ್ದೆಗಳಿಗಾಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ಉದ್ಯೋಗ ನೇಮಕಾತಿಗೆ, ನೂರಾರು ಯುವಕರು ಉದ್ಯೋಗ ಸಂದರ್ಶನಕ್ಕೆ ಬಂದಾಗ ಕಾಲ್ತುಳಿತದಂತಹ ಪರಿಸ್ಥಿತಿ ಉಂಟಾಗಿತ್ತು ಎಂದು ವರದಿ ಮಾಡಿದೆ.

Fact Check: 'ಶಾಸ್ತ್ರಿ' ಸಿನೆಮಾ ಟಿಕೆಟ್ ಗೆ ನೂಕುನುಗ್ಗಲು ಎಂದ ವೀಡಿಯೋ ನಿಜವೇ?

ದಿ ಹಿಂದೂ ವರದಿ

ಹಾಗೆಯೆ ಟಿವಿ9 ಕನ್ನಡ ಮಾಧ್ಯಮವೂ ಈ ಬಗ್ಗೆ ವಿಡಿಯೋ ಹಂಚಿಕೊಂಡಿದ್ದು, ”10 ಹುದ್ದೆಗೆ ನೂರಾರು ಯುವಕರ ನೂಕುನುಗ್ಗಲು; ಇಂಟರ್ವ್ಯೂ ವೇಳೆ ಕಾಲ್ತುಳಿತದ ವಿಡಿಯೋ ವೈರಲ್,” ಎಂಬ ಶೀರ್ಷಿಕೆ ನೀಡಿದೆ.

”ಜಗಾಡಿಯಾದಲ್ಲಿರುವ ಗುಜರಾತ್ ಕೈಗಾರಿಕಾ ಅಭಿವೃದ್ಧಿ ನಿಗಮದ ಸಂಕೀರ್ಣದಲ್ಲಿರುವ ಇಂಜಿನಿಯರಿಂಗ್ ಕಂಪನಿಯೊಂದು ಪ್ರಕಟಿಸಿದ 10 ಹುದ್ದೆಗಳಿಗೆ ಸಂದರ್ಶನಕ್ಕಾಗಿ ಅಂಕಲೇಶ್ವರದ ಲಾರ್ಡ್ಸ್ ಪ್ಲಾಜಾ ಹೋಟೆಲ್‌ನಲ್ಲಿ 1,800 ಜನರು ಕಾಣಿಸಿಕೊಂಡಿದ್ದಾರೆ,” ಎಂದು NDTV ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾರೆ, ಗುಜರಾತಿನಲ್ಲಿ 10 ಹುದ್ದೆಗಳಿಗೆ ನಡೆದ ಸಂದರ್ಶನಕ್ಕೆ 1500ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಸಂದರ್ಶನಕ್ಕೆಂದು ಬಂದಾಗ ನಡೆದ ಘಟನೆಯ ವಿಡಿಯೋವನ್ನು, ಶಾಸ್ತ್ರಿ ಸಿನಿಮಾದ ಟಿಕೆಟ್ ಖರೀದಿಗೆ ನೂಕು ನುಗ್ಗಲು ನಡೆದಿದೆ ಎಂಬ ತಪ್ಪಾಗಿ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | TATA ಈಗ ಮತ್ತೊಂದು ಅಗ್ಗದ ಕಾರನ್ನು ಕೇವಲ ರೂ1.65 ಲಕ್ಷಕ್ಕೆ ಪರಿಚತಿಸುತ್ತಿದೆ ಎಂಬುದು ನಿಜವೇ ? ಈ ಸ್ಟೋರಿ ಓದಿ


 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights