FACT CHECK | ದಲಿತ ಯುವಕನನ್ನು ಮರಕ್ಕೆ ಕಟ್ಟಿ ಥಳಿಸಲಾಗಿದೆ ಎಂದು ಸಂಬಂಧವಿಲ್ಲ ವಿಡಿಯೋ ಹಂಚಿಕೆ

ವ್ಯಕ್ತಿಯೊಬ್ಬನನ್ನು ಮರಕ್ಕೆ ಕಟ್ಟಿ ಗುಂಪೊಂದು ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. “ಮುಸಲ್ಮಾನರ ದ್ವೇಷದಲ್ಲಿ ಸಮಾಜ ಸೋಮಾರಿಗಳಾಗಿ, ಭಯೋತ್ಪಾದಕರಾಗಲು ಬಿಡಬೇಡಿ @narendramodi ಜೀ ದಲಿತರ ಮೇಲೆ ಈ ಥಳಿತ ನಡೆಯುತ್ತಿದೆ ಆದರೆ ಯಾವುದೇ ಒಂದು ಸಮುದಾಯದ ಮೇಲೆ ದ್ವೇಷವನ್ನು ಪ್ರಚಾರ ಮಾಡಿದಾಗ ಈ ವಿಷವು ಎಲ್ಲೆಡೆ ಹರಡುತ್ತದೆ ” ಎಂಬ ಬರಹದೊಂದಿಗೆ ಹಂಚಿಕೊಳ್ಳಲಾಗಿದೆ.

ಈ ಘಟನೆ ಎಲ್ಲಿ ನಡೆದಿದೆ ಯಾವ ಕಾರಣಕ್ಕೆ ನಡೆದಿದೆ ಎಂಬ ಯಾವ ವಿಷಯವನ್ನು ಪ್ರಸ್ತಾಪಿಸದೆ, ದಲಿತ ಯುವಕನನ್ನು ಥಳಿಸಲಾಗುತ್ತಿದೆ ಎಂದಷ್ಟೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಜಾತಿ ಕಾರಣಕ್ಕೆ ದಲಿತ ಯುವಕನ್ನು ಮರಕ್ಕೆ ಕಟ್ಟಿ ಥಳಿಸಲಾಗುತ್ತಿದೆ ಎಂದು ಹಂಚಿಕೊಳ್ಳಲಾಗುತ್ತಿರುವ ವಿಡಿಯೋದ ಸತ್ಯಾಸತ್ಯತೆಗಳನ್ನು ಪರಿಶೀಲಿಸಲು ಕೀ ಫ್ರೇಮ್‌ಗಳನ್ನು ತೆಗೆದು ಗೂಗಲ್ ಲೆನ್ಸ್‌ನಲ್ಲಿ ಸರ್ಚ್ ಮಾಡಿದಾಗ, 30 ಸೆಪ್ಟೆಂಬರ್ 2024 ರಂದು ದೈನಿಕ್ ಭಾಸ್ಕರ್‌ನಲ್ಲಿ ಪ್ರಕಟವಾದ ವರದಿಯೊಂದು ಲಭ್ಯವಾಗಿದೆ.

ದೈನಿಕ್ ಭಾಸ್ಕರ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಬಿಹಾರದ ವೈಶಾಲಿ ಮತ್ತು ಮುಜಾಫರ್‌ಪುರ ಜಿಲ್ಲೆಯ ಗಡಿ ಪ್ರದೇಶದಲ್ಲಿ ದೀಪಕ್ ಕುಮಾರ್ (30), ತಂದೆ ತಿಲಕೇಶ್ವರ ಠಾಕೂರ್ ಅವರನ್ನು ಸ್ಥಳೀಯ ಜನರು ಮಕ್ಕಳ ಕಳ್ಳತನದ ಶಂಕೆಯ ಮೇಲೆ ಥಳಿಸಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಯುವಕನನ್ನು ಜನರಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಪಡೆದ ನಂತರ ಪೊಲೀಸರು ಅವರನ್ನು ಮುಜಾಫರ್‌ಪುರ ಜಿಲ್ಲೆಯ ಬರಿಯಾರ್‌ಪುರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ ಎಂದು ತಿಳಿಸಲಾಗಿದೆ.

ಈ ನಿಟ್ಟಿನಲ್ಲಿ, ಮಕ್ಕಳ ಕಳ್ಳತನದ ಆರೋಪದ ಮೇಲೆ ಭಾನುವಾರ ಸಂಜೆ ಬರಿಯಾರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪೈತಾಪುರ್ ಗ್ರಾಮದಲ್ಲಿ ವೈಶಾಲಿ ಜಿಲ್ಲೆಯ ಫತೇಚಕ್ ಸುಲೇಮಾನ್ ನಿವಾಸಿ ದೀಪಕ್ ಠಾಕೂರ್ ಅವರನ್ನು ಗ್ರಾಮಸ್ಥರು ಥಳಿಸಿದ್ದಾರೆ ಎಂದು ಹಿಂದೂಸ್ತಾನ್ ವರದಿಯಲ್ಲಿ ತಿಳಿಸಲಾಗಿದೆ. ಅದೇ ಗ್ರಾಮದ ಮುನ್ನಿದೇವಿ ಮಗುವನ್ನು ಕದ್ದು ಓಡಿ ಹೋಗಿದ್ದಾಳೆ ಎಂದು ಆರೋಪಿಸಿ ಗಲಾಟೆ ಆರಂಭಿಸಿದ್ದಾಳೆ. ಬಳಿಕ ಗ್ರಾಮಸ್ಥರು ಯುವಕನನ್ನು ಸುತ್ತುವರಿದು ಹಿಡಿದಿದ್ದಾರೆ. ಬಳಿಕ ಆತನಿಗೆ ಥಳಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬಾರಿಯಾರ್‌ಪುರ ಪೊಲೀಸ್ ಠಾಣೆಯ ಉಸ್ತುವಾರಿ ಚಾಂದಿನಿ ಕುಮಾರಿ ಸನ್ವಾರಿಯಾ ಘಟನೆ ಬಗ್ಗೆ ಮಾಹಿತಿ ನೀಡಿದ್ದು, ಮಕ್ಕಳ ಕಳ್ಳತನದ ಶಂಕೆಯಲ್ಲಿ ಯುವಕನಿಗೆ ಥಳಿಸಲಾಗಿದ್ದು, ಘಟನೆಯಲ್ಲಿ ಯಾವುದೇ ಜಾತಿಯ ಕೋನವಿಲ್ಲ ಎಂದು ತಿಳಿಸಿದ್ದಾರೆ. ಹಾಗಾಗಿ ಜಾತಿ ದ್ವೇಷದಿಂದ ಈ ಘಟನೆ ನಡೆದಿಲ್ಲ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ವಿಡಿಯೋದಲ್ಲಿ ಹಂಚಿಕೊಳ್ಳಲಾದ ಘಟನೆ ಬಿಹಾರದ್ದು ಮತ್ತು ದೀಪಕ್ ಠಾಕೂರ್ ಎಂಬ ಯುವಕನನ್ನು ಮರಕ್ಕೆ ಕಟ್ಟಿಹಾಕಿರುವುದು ಸ್ಪಷ್ಟವಾಗಿದೆ. ಘಟನೆಗೂ ದಲಿತ ಸಮುದಾಯಕ್ಕೂ ಯಾವುದೇ ಸಂಬಂಧವಿಲ್ಲ.ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | 2024ರಲ್ಲಿ ಉಚಿತ ಲ್ಯಾಪ್‌ಟಾಪ್ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights