FACT CHECK | ಭಾರತದ ಸೈನಿಕರನ್ನು ಭಯೋತ್ಪಾದಕರು ಅಂದ್ರಾ ನಟಿ ಸಾಯಿ ಪಲ್ಲವಿ ?

ನಟಿ ಸಾಯಿ ಪಲ್ಲವಿ ಅಭಿನಯದ ‘ಅಮರನ್’ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಭಾರತೀಯ ಸೇನೆಯ ರಜಪೂತ್ ರೆಜಿಮೆಂಟ್‌ನ ನಿಯೋಜಿತ ಅಧಿಕಾರಿ ಮೇಜರ್ ಮುಕುಂದ್ ವರದರಾಜನ್ ಅವರ ಜೀವನಾಧರಿತ ಚಿತ್ರವಾಗಿದೆ. ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯ ಸಮಯದಲ್ಲಿ ತಮ್ಮ ಶೌರ್ಯ ಪ್ರದರ್ಶಿಸಿದ್ದರು. ಇದಕ್ಕಾಗಿ ಜಮ್ಮು ಮತ್ತು ಕಾಶ್ಮೀರದ ರಾಷ್ಟ್ರೀಯ ರೈಫಲ್ಸ್ ಬೆಟಾಲಿಯನ್ ಅವರಿಗೆ ಅಶೋಕ ಚಕ್ರವನ್ನು ನೀಡಲಾಯಿತು. ಚಿತ್ರದಲ್ಲಿ ಮೇಜರ್ ಮುಕುಂದ್ ವರದರಾಜನ್ ಅವರ ಪತ್ನಿಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ.

ಇದರ ಮಧ್ಯೆ ನಟಿ ಸಾಯಿ ಪಲ್ಲವಿ ಭಾರತೀಯ ಸೇನೆಯ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

“ಭಾರತೀಯ ಸೇನೆ ಮತ್ತು ಪಾಕಿಸ್ತಾನ ಸೇನೆ – ಎರಡೂ ಒಂದೇ – ಸಾಯಿ ಪಲ್ಲವಿ” ಮುಂಬರುವ ಬಾಲಿವುಡ್ ಚಿತ್ರದಲ್ಲಿ ಮಾತೆ ಸೀತೆಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅವರು ಒಮ್ಮೆ ಕಾಶ್ಮೀರಿ ಹಿಂದೂಗಳ ನರಮೇಧವನ್ನು ದನದ ಕಳ್ಳಸಾಗಣೆದಾರರ ಹತ್ಯೆಗೆ ಹೋಲಿಸಿದರು. ಆಕೆ ಜಾಕಿರ್ ನಾಯ್ಕ್‌ನಿಂದ ಪ್ರಭಾವಿತಳಾಗಿದ್ದಾಳೆಂದು ತೋರುತ್ತದೆ. ಅವಳ ನಟನೆಯ ಯಾವುದೇ ಚಲನಚಿತ್ರವನ್ನು ನೋಡಬೇಡಿ”. ಎಂದು ಬಲಪಂಥೀಯ ಪ್ರತಿಪಾದಕ ಮಿ.ಸಿನ್ಹಾ ಎಂಬುವವರು ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ದಿವ್ಯ ಎಂಬ ಎಕ್ಟ್‌ ಬಳಕೆದಾರರು ನಟಿ ಸಾಯಿ ಪಲ್ಲವಿ ಹೇಳಿಕೆಯನ್ನು ಟೀಕಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದು ಆಕೆಯ ಮುಂಬರುವ ಚಿತ್ರವನ್ನು ವೀಕ್ಷಿಸದಂತೆ ಬರೆದುಕೊಂಡಿದ್ದಾರೆ. “ಭಾರತೀಯ ಸೇನೆ ಇರುವುದು ನಮ್ಮ ರಾಷ್ಟ್ರದ ರಕ್ಷಣೆಗಾಗಿಯೇ ಹೊರತು ಗಡಿಯಾಚೆಗಿನ ಅಮಾಯಕರಿಗೆ ತೊಂದರೆ ಕೊಡಲು ಅಲ್ಲ ಎಂದು ಆಕೆಗೆ ತಿಳುವಳಿಕೆ ಇಲ್ಲ. ಹೇ @ಸಾಯಿ_ಪಲ್ಲವಿ92 , ನಿಮಗೆ ಧೈರ್ಯವಿದ್ದರೆ, ಇದಕ್ಕೆ ಉತ್ತರಿಸಿ: ಪಾಕಿಸ್ತಾನದಲ್ಲಿ ನಡೆದ ಭಯೋತ್ಪಾದಕ ದಾಳಿಯು ಭಾರತೀಯ ಸೇನೆಯಿಂದಾಗಿ ಅಮಾಯಕರನ್ನು ಕೊಂದ ಒಂದೇ ಒಂದು ಉದಾಹರಣೆಯನ್ನು ನೀವು ಹೆಸರಿಸಬಹುದೇ? ನಮ್ಮ ಸೈನಿಕರು ಮತ್ತು ನಾಗರಿಕರನ್ನು ಕೊಲ್ಲಲು ಪಾಕಿಸ್ತಾನವು ಶಸ್ತ್ರಸಜ್ಜಿತ ಭಯೋತ್ಪಾದಕರನ್ನು ಕಳುಹಿಸಿದ ಉದಾಹರಣೆಗಳ ಪಟ್ಟಿ ನನ್ನ ಬಳಿ ಇದೆ. ಭಾರತೀಯ ಸೇನೆಯ ವಿರುದ್ಧ ಒಂದು ಮಾತು ಹೇಳುವ ಧೈರ್ಯ ಮಾಡಬೇಡಿ.” ಎಂದು ಬರೆದುಕೊಂಡಿದ್ದಾರೆ.

ಹಾಗಿದ್ದರೆ ನಟಿ ಸಾಯಿ ಪಲ್ಲವಿ ಹೇಳಿಕೆಯಂತೆ ಭಾರತೀಯ ಸೇನೆಯನ್ನು ಪಾಕಿಸ್ತಾನದ ಸೇನೆಗೆ ಹೋಲಿಸಿ ಮಾತನಾಡಿದ್ದಾರೆಯೇ? ಯಾವ ಸಂದರ್ಭದಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಲಾದ ಪ್ರತಿಪಾದನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಕೀವರ್ಡ್ ಬಳಸಿ ಗೂಗಲ್ ಸರ್ಚ್ ಮಾಡಿದಾಗ, ಜೂನ್ 12, 2022 ರಂದು, ಗ್ರೇಟ್‌ ಆಂಧ್ರ ಎಂಬ ಯುಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಲಾದ ಸಾಯಿ ಪಲ್ಲವಿಯವರ ಸಂದರ್ಶನದ ಪೂರ್ಣ ವಿಡಿಯೋ ಲಭ್ಯವಾಗಿದೆ.

ಈ ಸಂದರ್ಶನದ ವಿಡಿಯೋದಲ್ಲಿ ಸಾಯಿ ಪಲ್ಲವಿ ಹೇಳಿದ್ದೇನೆಂದರೆ, “ಪಾಕಿಸ್ತಾನದ ಸೇನೆಗೆ ಭಾರತೀಯ ಸೇನೆ ಭಯೋತ್ಪಾದಕರಂತೆ ಕಾಣುತ್ತದೆ. ನಮಗೆ ಪಾಕಿಸ್ತಾನ ಸೇನೆ ಟೆರರಿಸ್ಟ್‌ ಥರ ಕಾಣುತ್ತಾರೆ. ಅದು ನಮ್ಮ ನಮ್ಮ ದೃಷ್ಟಿಕೋನ. ಅವರು ತಮ್ಮವರ ರಕ್ಷಣೆಯಲ್ಲಿದ್ದಾರೆ. ನಮ್ಮ ಸೈನಿಕರು ನಮ್ಮವರ ರಕ್ಷಣೆಗೆ ನಿಂತಿದ್ದಾರೆ” ಎಂಬ ಮಾತನ್ನು ಅವರು ಹೇಳಿದ್ದಾರೆ. ಈ ವಿಡಿಯೋ ನಿನ್ನೆ, ಮೊನ್ನೆಯದಲ್ಲ. ಬದಲಿಗೆ ಎರಡು ವರ್ಷ ಹಳೆಯದು ಎಂಬುದನ್ನು ಗಮನಿಸಬೇಕು.

2022ರಲ್ಲಿ ವಿರಾಟ ಪರ್ವಂ ಸಿನಿಮಾದ ಬಿಡುಗಡೆ ಸಂದರ್ಭದಲ್ಲಿ ಸಾಯಿ ಪಲ್ಲವಿ ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆ ಇದಾಗಿದೆ. ಪಾಕಿಸ್ತಾನದ ಜನರಿಗೆ ಭಾರತೀಯ ಸೇನೆ ಭಯೋತ್ಪಾದಕ ಸಂಘಟನೆ ಇದ್ದಂತೆ ಎಂದು ವಿಡಿಯೋದಲ್ಲಿ ಹೇಳಿದ್ದು, ಭಾರತೀಯರನ್ನು ಕೆರಳಿಸಿದೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಸಾಯಿ ಪಲ್ಲವಿ ಆ ಕ್ಷಣದ ದೃಷ್ಟಿಕೋನದ ಬಗ್ಗೆ ಹೇಳಿಕೊಂಡಿದ್ದಾರೆ. ಆ ದೃಷ್ಟಿಕೋನಕ್ಕೆ ಇದೀಗ ವಿವಾದದ ಲೇಪನ ಮಾಡಿ ಟ್ರೋಲ್‌ ಮಾಡಲಾಗುತ್ತಿದೆ.

ಸಂದರ್ಶನದುದ್ದಕ್ಕೂ, ನಟಿ ಸಾಯಿ ಪಲ್ಲವಿ ಎಲ್ಲಿಯೂ ಭಾರತೀಯ ಸೇನೆಯನ್ನು ಭಯೋತ್ಪಾದಕರು ಎಂದು ಹೆಸರಿಸಲಿಲ್ಲ. ಬದಲಾಗಿ, “ಒಬ್ಬ ವ್ಯಕ್ತಿಯ ಭಯೋತ್ಪಾದಕ ಇನ್ನೊಬ್ಬ ವ್ಯಕ್ತಿಯ ಸ್ವಾತಂತ್ರ್ಯ ಹೋರಾಟಗಾರ” ಎಂಬ ಪರಿಕಲ್ಪನೆಯನ್ನು ಚರ್ಚಿಸಿದ್ದಾರೆ, ಈ ಕಲ್ಪನೆಯ ಬಗ್ಗೆ ತನ್ನ ಗೊಂದಲವನ್ನು ವ್ಯಕ್ತಪಡಿಸಿ ಮಾತನಾಡಿದ್ದಾರೆ.

ಭಾರತೀಯ ಸೇನೆಯನ್ನು ಭಯೋತ್ಪಾದಕರು ಎಂದು ಕರೆದಿದ್ದಾರೆಂದು ಸಾಯಿ ಪಲ್ಲವಿ ಹೇಳಿಕೆಯ ಎಡಿಟ್‌ ಮಾಡಿದ ವಿಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಿಂಸಾಚಾರದ ದೃಷ್ಟಿಕೋನಗಳು ರಾಷ್ಟ್ರಗಳ ನಡುವೆ ಭಿನ್ನವಾಗಿರುತ್ತವೆ ಎಂದು ಅವರು ವಿವರಿಸಿರುವುದನ್ನು ಇಲ್ಲಿ ನೋಡಬಹುದು.

ಸಾಯಿ ಪಲ್ಲವಿ ಭಾರತೀಯ ಸೇನೆಯನ್ನು ಭಯೋತ್ಪಾದಕರು ಎಂದು ಎಲ್ಲಿಯೂ ಕರೆದಿಲ್ಲ. ಬದಲಿಗೆ, ಹಿಂಸಾಚಾರದ ದೃಷ್ಟಿಕೋನಗಳು ರಾಷ್ಟ್ರಗಳ ನಡುವೆ ಭಿನ್ನವಾಗಿರುತ್ತವೆ ಎಂದು ಹೇಳಿದ್ದಾರೆ. ಅವರ ಹೇಳಿಕೆಗಳು ಹಿಂಸೆ ಮತ್ತು ನ್ಯಾಯವನ್ನು ಅರ್ಥಮಾಡಿಕೊಳ್ಳುವ ಸಂಕೀರ್ಣತೆಯ ಬಗ್ಗೆ ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, 2022ರಲ್ಲಿ ವಿರಾಟ ಪರ್ವಂ ಸಿನಿಮಾದ ಬಿಡುಗಡೆ ಸಂದರ್ಭದಲ್ಲಿ ಸಾಯಿ ಪಲ್ಲವಿ ಸಂದರ್ಶನದಲ್ಲಿ ನೀಡಿದ ಹೇಳಿಕೆಯನ್ನು ತಪ್ಪಾಗಿ ಹಂಚಿಕೊಳ್ಳುತ್ತಾ, ಪ್ರಸ್ತುತ ಅವರು ಅಭಿನಯಿಸಿರುವ ‘ಅಮರನ್’ ಚಿತ್ರವನ್ನು ಜನರು ನೋಡದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡಲಾಗುತ್ತಿದೆ.

ಕೃಪೆ : ಯೂಟರ್ನ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಬಾರ್ಮರ್‌ನಲ್ಲಿ ನಡೆದ ರೈಲು ಅಪಘಾತದ ಅಣಕು ಕಾರ್ಯಾಚರಣೆಯನ್ನು ನಿಜವಾದ ರೈಲು ಅಪಘಾತ ಎಂದು ತಪ್ಪಾಗಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights