FACT CHECK | ಕೋಮು ದ್ವೇಷದ ಹಿನ್ನಲೆಯಲ್ಲಿ ಹಳೆಯ ವಿಡಿಯೋ ಪೋಸ್ಟ್ ಮಾಡಿದ ಚಕ್ರವರ್ತಿ ಸೂಲಿಬೆಲೆ
ಚಿಂತಕ, ಅಂಕಣಕಾರ, ಬರಹಗಾರ, ಸಾಮಾಜಿಕ ಕಾರ್ಯಕರ್ತ ಮತ್ತು ಯುವ ಬ್ರಿಗೇಡ್ ಸಂಘಟನೆಯ ಸಂಸ್ಥಾಪಕ ಎಂಬ ಬಿರುದ್ದು ಬಾವಲಿಗಳನ್ನು ಹೊಂದಿರುವ ಚಕ್ರವರ್ತಿ ಸೂಲಿಬೆಲೆ ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ತಮ್ಮ ಮುಸ್ಲಿಂ ದ್ವೇಷದ ಮನಸ್ಥಿತಿಯನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ.
ಹೆರೋದ್ ಹೆರ್ತಾರೆ. ಇಂತಹ ಅಸಹ್ಯಗಳನ್ನೇ ಹೆರ್ತಾರಲ್ಲ ಇವರು?! ರೈಲು ದುರಂತ ಸುಮ್ ಸುಮ್ನೆ ಆಗ್ತಿರೋದಲ್ಲ, ವ್ಯವಸ್ಥಿತ ಷಡ್ಯಂತ್ರ.. pic.twitter.com/C6EaIOxNYv
— Chakravarty Sulibele (@astitvam) October 26, 2024
“ಹೆರೋದ್ ಹೆರ್ತಾರೆ. ಇಂತಹ ಅಸಹ್ಯಗಳನ್ನೇ ಹೆರ್ತಾರಲ್ಲ ಇವರು?! ರೈಲು ದುರಂತ ಸುಮ್ ಸುಮ್ನೆ ಆಗ್ತಿರೋದಲ್ಲ, ವ್ಯವಸ್ಥಿತ ಷಡ್ಯಂತ್ರ.” ಎಂದು ಬರೆದುಕೊಂಡು ವಿಡಿಯೋವೊಂದನ್ನು ಚಕ್ರವರ್ತಿ ಸೂಲಿಬೆಲೆ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ರೈಲು ದುರಂತಕ್ಕೆ ಮುಸ್ಲಿಮರು ಕಾರಣ ಎನ್ನುಂತೆ ಬಿಂಬಿಸುವ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.
Hahha.. no where i have mentioned that this video is from India. But thanks for the proof that wherever they are the same skill they possess..
@zoo_bear https://t.co/CmggeMcYST— Chakravarty Sulibele (@astitvam) October 27, 2024
ಚಕ್ರಚರ್ತಿ ಸೂಲಿಬೆಲೆ ಕೋಮುದ್ವೇಷದ ಶೀರ್ಷಿಕೆಯನ್ನು ನೀಡಿದ ನಂತರ ಹಲವರು ಇದು ಸುಳ್ಳು ಎಂದು ಹೇಳಿದ್ದು, ಕೆಲವರು ಫ್ಯಾಕ್ಟ್‌ಚೆಕ್ ವರದಿಗಳನ್ನು ಕೂಡ ನೀಡಿದ್ದರು. ಆದರೆ ತನ್ನ ಸುಳ್ಳು ಬಯಲಾಗುತ್ತಿದ್ದಂತೆ, ಈಗ ತಾನು ನೀಡಿರು ಶೀರ್ಷಿಕೆಯನ್ನು ಸಮರ್ಥಿಸಿ “ಹಹ್ಹ.. ಈ ವಿಡಿಯೋ ಭಾರತದ್ದು ಎಂದು ಎಲ್ಲಿಯೂ ಹೇಳಿಲ್ಲ. ಆದರೆ ಅವರು ಎಲ್ಲಿದ್ದರೂ ಅದೇ ಕೌಶಲ್ಯವನ್ನು ಹೊಂದಿದ್ದಾರೆ. ಆದರೆ ಅವರು ಎಲ್ಲೇ ಇದ್ದರು ಇಂತಹ ಕೃತ್ಯಗಳಿಗೆ ಮುಂದಾಗುತ್ತಾರೆ ಎಂಬುದಕ್ಕೆ ಪುರಾವೆ ನೀಡಿದ್ದಕ್ಕೆ ಧನ್ಯವಾದಗಳು” ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜ಼ುಬೈರ್ ಅವರ ಫ್ಯಾಕ್ಟ್‌ಚೆಕ್ ಪೋಸ್ಟ್‌ಗೆ ರೀ ಪೋಸ್ಟ್ ಮಾಡಿ ಪ್ರತಿಕ್ರಿಯೆ ನೀಡಿದ್ದು, ತಮ್ಮ ಬರಹದ ಅರ್ಥವನ್ನು ತಿರುಚಿ, ಮತ್ತೊಮ್ಮೆ ಕೋಮುದ್ವೇಷವನ್ನೂ ಹೊರಹಾಕಿದ್ದಾರೆ.
ಈಗ ಚರ್ಕವರ್ತಿ ಸೂಲಿಬೆಲೆ ತನ್ನ ಎಕ್ಸ್ ಕಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ ಈ ಹಿಂದೆಯೂ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಭಾರತದಲ್ಲಿ ರೈಲು ಅಪಘಾತಗಳಿಗೆ ಮುಸ್ಲಿಮರು ಕಾರಣ ಎಂಬ ಆರೋಪದೊಂದಿಗೆ ಈ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿತ್ತು. ಆದರೆ ಈ ವಿಡಿಯೋ ಭಾರತದ್ದಲ್ಲ ಎಂದು ಹೇಳುವ ಹಲವು ಫ್ಯಾಕ್ಟ್‌ಚೆಕ್ ವರದಿಗಳನ್ನು ಏನ್‌ಸುದ್ದಿ.ಕಾಂ ಸೇರಿದಂತೆ ಇತರೆ ಫ್ಯಾಕ್ಟ್‌ಚೆಕ್ ಘಟಕಗಳು ಲೇಖನ ಪ್ರಕಟಿಸಿದ್ದವು.

ಈಗ ಇದೇ ವಿಡಿಯೋವನ್ನು ಹಂಚಿಕೊಂಡಿರುವ ಚರ್ಕವರ್ತಿ ಸೂಲಿಬೆಲೆ ಈ ವಿಡಿಯೋವನ್ನು ಭಾರತದ್ದು ಎಂಬ ಅರ್ಥ ಬರುವಂತೆ ಪರೋಕ್ಷ ಶೀರ್ಷಿಕೆಯನ್ನು ನೀಡಿ, ಮುಸಲ್ಮಾನರ ವಿರುದ್ಧ ದ್ವೇಷ ಹರಡಿದ್ದಾರೆ. ಬಳಿಕ ಈ ವಿಡಿಯೋದಲ್ಲಿ ನೀಡಲಾದ ಮಾಹಿತಿ ಸುಳ್ಳು ಎಂದು ಹಲವು ಫ್ಯಾಕ್ಟ್‌ಚೆಕ್ ವರದಿಗಳು ಬಂದ ಬೆನ್ನಲ್ಲೆ, ತಾನು ಈ ಶೀರ್ಷಿಕೆಯಲ್ಲಿ ಎಲ್ಲಿಯೂ ಈ ವಿಡಿಯೋ ಭಾರತದ್ದೂ ಎಂದು ಉಲ್ಲೇಖಿಸಿಲ್ಲ ಎಂದು ಮತ್ತೊಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದು, ಅದರಲ್ಲೂ ಕೂಡ ಮುಸಲ್ಮಾನ ದ್ವೇಷವನ್ನು ಹರಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಇರುವುದು ಏನು ?
ವೈರಲ್ ವಿಡಿಯೋದಲ್ಲಿ ಕೆಲ ಹುಡುಗರು ರೈಲು ಹಳಿಯನ್ನು ಧ್ವಂಸಗೊಳಿಸುವ/ ಕಳ್ಳತನ ಮಾಡಲು ಯತ್ನಿಸುತ್ತಿರುವುದು ಕಂಡು ಬಂದಿದೆ. ಆದರೆ ಈ ವಿಡಿಯೋ ಎಲ್ಲಿಯದ್ದು ಎಂಬುದು ಆ ಕ್ಲಿಪ್‌ನಲ್ಲಿ ಉಲ್ಲೇಖವಾಗಿಲ್ಲ. ಹಾಗಾಗಿ ಸಾಕಷ್ಟು ಮಂದಿ ಇದು ಭಾರತದ ವಿಡಿಯೋ, ಭಾರತದಲ್ಲಿ ಮುಸಲ್ಮಾನರೇ ರೈಲು ಹಳಿಗಳನ್ನು ಧ್ವಂಸ ಮಾಡುತ್ತಿದ್ದಾರೆ. ಆ ಮೂಲಕ ರೈಲು ಅಪಘಾತಕ್ಕೆ ಮುಸಲ್ಮಾರೇ ಕಾರಣ ಎಂದು ಬಿಂಬಿಸಲಾಗುತ್ತಿದೆ. ಆದರೆ ಇದು ಸುಳ್ಳು ಎಂದು ಹಲವು ಫ್ಯಾಕ್ಟ್‌ಚೆಕ್ ವರದಿಗಳು ಈ ಹಿಂದೇಯೇ ಸ್ಪಷ್ಟ ಪಡಿಸಿವೆ.
ವಾಸ್ತವಾಂಶ ಏನು?
ಕೆಲ ಹುಡುಗರು ರೈಲ್ವೇ ಹಳಿಗಳನ್ನು ಧ್ವಂಸಗೊಳಿಸುವುದು ಅಥವಾ ಕಳ್ಳತನದಲ್ಲಿ ತೊಡಗಿರುವುದನ್ನು ತೋರಿಸುವ ವಿಡಿಯೋ ದೃಶ್ಯಗಳು ಭಾರತದಲ್ಲಿ ನಡೆದುದಲ್ಲ ಬದಲಾಗಿ ಪಾಕಿಸ್ತಾನದ ಕರಾಚಿಯಲ್ಲಿ ನಡೆದಿದೆ 2023ರ ಡಿಸೆಂಬರ್ 5ರಂದು ಪಾಕಿಸ್ತಾನಿ ಟ್ರೈನ್ಸ್ ಎಂಬ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸರ್ತಾಜ್ ಖಾನ್ ಪಾಠಕ್ ಬೋಟ್ ಬಾಸಿನ್ ಚೌಕಿಯಲ್ಲಿ ಕೆಲ ಹುಡುಗರು ರೈಲ್ವೆ ಹಳಿಗಳಲ್ಲಿ ಭಾರೀ ಮೌಲ್ಯದ ವಸ್ತುಗಳ ಕಳ್ಳತನ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಪಾಕಿಸ್ತಾನದಲ್ಲಿ 2022ರಿಂದಲೂ ಕೂಡ ರೈಲ್ವೆ ಪರಿಕರಗಳ ಕಳ್ಳತನ ಹೆಚ್ಚಾಗುತ್ತಲೇ ಇದ್ದು ಈ ಬಗ್ಗೆ ಹಲವು ವರದಿಗಳು ಕೂಡ ಕಂಡು ಬಂದಿವೆ.
ಇನ್ನು ಭಾರತದಲ್ಲಿ ರೈಲು ದುರಂತಕ್ಕೆ ತಾಂತ್ರಿಕ ದೋಷ, ಸಿಬ್ಬಂಧಿ ಕೊರತೆ, ನಿರ್ವಹಣೆ ಸಮಸ್ಯೆ ಸೇರಿದಂತೆ ಹಲವು ರೀತಿಯ ಸಮಸ್ಯೆಗಳು ಮುಖ್ಯವಾದ ಕಾರಣವಾಗಿದೆ. ಇದಕ್ಕೆ ಸಂಬಂಧ ಪಟ್ಟಂತೆ ಹಲವು ಪ್ರಮುಖ ಸುದ್ದಿ ಸಂಸ್ಥೆಗಳು ಕೂಡ ಈ ಬಗ್ಗೆ ವರದಿ ಮಾಡಿವೆ. ಹಾಗಾಗಿ ಚಕ್ರವರ್ತಿ ಸೂಲಿಬೆಲೆ ಉಲ್ಲೇಖಿಸಿದಂತೆ ದೇಶದಲ್ಲಿ ರೈಲು ದುರಂತಕ್ಕೆ ಮುಸಲ್ಮಾನರು ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂಬುದು ಸುಳ್ಳು ಮತ್ತು ಇದಕ್ಕೆ ಯಾವುದೇ ಪುರಾವೆಗಳು ಕೂಡ ಇಲ್ಲ.
ಚಿಂತಕ, ಅಂಕಣಕಾರ, ಬರಹಗಾರ, ಸಾಮಾಜಿಕ ಕಾರ್ಯಕರ್ತ ಮತ್ತು ಯುವ ಬ್ರಿಗೇಡ್ ಸಂಘಟನೆಯ ಸಂಸ್ಥಾಪಕ ಎಂಬ ಬಿರುದ್ದು ಬಾವಲಿಗಳನ್ನು ಹೊಂದಿರುವ ಚಕ್ರವರ್ತಿ ಸೂಲಿಬೆಲೆ ಒಂದು ವೇಳೆ ಜವಬ್ದಾರಿ ಇರುವ ವ್ಯಕ್ತಿ ಆಗಿರುತ್ತಿದ್ದರೆ, ವಿಡಿಯೋವನ್ನು ಪೋಸ್ಟ್ ಮಾಡುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಬಹುದಿತ್ತು? ಪರಿಶೀಲಿಸಿಯೂ ಬೇಕೆಂದೇ ಹಂಚಿಕೊಂಡಿದ್ದರೆ ಅವರ ಹಿಂದಿನ ಬಿರುದ್ದುಗಳಿಗೆ ಯಾವುದೇ ಅರ್ಥವೂ ಇಲ್ಲ, ಬೆಲೆಯೂ ಇಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ಚಕ್ರವರ್ತಿ ಸೂಲಿಬೆಲೆ ಹಂಚಿಕೊಂಡಿರುವ ವಿಡಿಯೋ ಭಾರತದ್ದಲ್ಲ. ಪಾಕಿಸ್ತಾನದ ಕರಾಚಿಯಲ್ಲಿ ನಡೆದ ರೈಲ್ವೆ ಹಳಿಗಳ ಕಳ್ಳತನದ ಹಳೆಯ ವಿಡಿಯೋ ಇದಾಗಿದೆ. ಆದರೆ ಇದ್ನು ಭಾರತದ್ದು ಎಂಬಂತೆ ಬಿಂಬಿಸಿ, ಕೋಮು ದ್ವೇಷದ ಹಿನ್ನಲೆಯಲ್ಲಿ ಹಂಚಿಕೊಂಡಿದ್ದಾರೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಭಾರತದ ಸೈನಿಕರನ್ನು ಭಯೋತ್ಪಾದಕರು ಅಂದ್ರಾ ನಟಿ ಸಾಯಿ ಪಲ್ಲವಿ ?

