ಫ್ಯಾಕ್ಟ್‌ಚೆಕ್ ಮೂಲಕವೇ ಸುಳ್ಳು ಹೇಳಿದ ದೆಹಲಿ ಪೊಲೀಸರು

ದೆಹಲಿಯ ಜಂತರ್ ಮಂತರ್‌ನಲ್ಲಿ ಜುಲೈ 20 ರಂದು ನಕಲಿ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಮತ್ತು ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನಡೆಸಿದ ‘ಸಂಸದ್ ಚಲೋ’ ಪ್ರತಿಭಟನೆಯಲ್ಲಿ ದೆಹಲಿ ಪೋಲೀಸರು ಹಾಗೂ ರ‍್ಯಾಪಿಡ್ ಆಕ್ಷನ್ ಫೋರ್ಸ್ (RAF) ಲಾಠಿಚಾರ್ಜ್ ಮತ್ತು ಟಿಯರ್ ಗ್ಯಾಸ್ ಬಳಸಿದ್ದರಿಂದ ವಾತಾವರಣ ಕಲುಷಿತಗೊಂಡಿತ್ತು. ಆದರೆ, ದೆಹಲಿ ಪೋಲೀಸರು ತಮ್ಮ ಅಧಿಕೃತ ‘X’ ಖಾತೆಯಲ್ಲಿ “ಅಂತಹ ಯಾವುದೇ ಘಟನೆ ನಡೆದಿಲ್ಲ, ಪ್ರತಿಭಟನೆಯನ್ನು ಅತ್ಯಂತ ವೃತ್ತಿಪರವಾಗಿ ನಿರ್ವಹಿಸಲಾಗಿದೆ” ಎಂದು ಹೇಳಿಕೊಳ್ಳುವ ಮೂಲಕ ಯಾವುದೇ ಬಲಪ್ರಯೋಗ ಅಥವಾ ಬಂಧನ ನಡೆದಿಲ್ಲ ಎಂದು ಸಂಪೂರ್ಣವಾಗಿ ನಿರಾಕರಿಸಿದ್ದರು.

ಇಷ್ಟೇ ಅಲ್ಲದೆ, ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಲು ಮೊಳೆಗಳನ್ನು ಸಿಕ್ಕಿಸಲಾಗಿದ್ದ  ಲಾಠಿಯ  ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದಾಗ, ಅದನ್ನು ‘ಫೇಕ್ ನ್ಯೂಸ್’ ಎಂದು ಕರೆದ ದೆಹಲಿ ಪೋಲೀಸ್ ಮತ್ತು ‘ಪಿಐಬಿ ಫ್ಯಾಕ್ಟ್ ಚೆಕ್’ (PIB Fact Check), ಈ ವಿಡಿಯೋಗೂ ದೆಹಲಿ ಪ್ರತಿಭಟನೆಗೂ ಯಾವುದೇ ಸಂಬಂಧವಿಲ್ಲ ಎಂದು ಪ್ರತಿಪಾದಿಸಿದ್ದವು. ಆದರೆ ‘ಬೂಮ್’ (BOOM) ನಡೆಸಿದ ಸುದೀರ್ಘ ಫ್ಯಾಕ್ಟ್‌ಚೆಕ್ ತನಿಖೆಯಲ್ಲಿ ಪೋಲೀಸರ ಈ ವಾದ ಸಂಪೂರ್ಣ ಸುಳ್ಳೆಂದು ಸಾಬೀತಾಗಿದೆ.

ಯುಪಿಎಸ್‌ಸಿ ಅಭ್ಯರ್ಥಿ ಉಪೇಂದ್ರ ಗೌರ್ ಎಂಬುವವರು ಜುಲೈ 20 ರಂದು ಜನಪಥ್ ಮೆಟ್ರೋ ಸ್ಟೇಷನ್ ಗೇಟ್ ನಂಬರ್ 3 ರ ಬಳಿ ಈ ವಿಡಿಯೋವನ್ನು ಸ್ವತಃ ರೆಕಾರ್ಡ್ ಮಾಡಿ, ಮರುದಿನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ‘ಬೂಮ್’ ಜೊತೆ ಮಾತನಾಡಿದ ಉಪೇಂದ್ರ ಗೌರ್, ಪೋಲೀಸರು ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸುತ್ತಿದ್ದಾಗ ಅವರಲ್ಲಿದ್ದ ಒಂದು ಲಾಠಿಗೆ ಮೊಳೆಗಳನ್ನು ಸಿಕ್ಕಿಸಿರುವುದನ್ನು ಮತ್ತು ಹಲವು ಯುವತಿಯರು ಗಾಯಗೊಂಡಿರುವುದನ್ನು ತಾವು ಕಣ್ಣಾರೆ ಕಂಡಿದ್ದಾಗಿ ಖಾತರಿಪಡಿಸಿದ್ದಾರೆ.

 

View this post on Instagram

 

A post shared by Gaur up (@gaur_95_com)

ಇದಲ್ಲದೆ, ಘಟನಾ ಸ್ಥಳದಲ್ಲಿದ್ದ ಮತ್ತೊಬ್ಬ 16 ಷರ್ಷದ ವಿದ್ಯಾರ್ಥಿ ಪ್ರತಿಭಟನೆಯ ವಿಡಿಯೋದ ‘ಮೆಟಾಡೇಟಾ’ (Metadata) ಮತ್ತು ‘ಜಿಪಿಎಸ್ ಮಾಹಿತಿಯನ್ನು ಆಲೈಸ್ ಮಾಡಿದಾಗ, ಆ ವಿಡಿಯೋ ಜುಲೈ 20, 2026 ರಂದು ಸಂಜೆ 4.33 ಕ್ಕೆ ನವದೆಹಲಿಯ ಜನಪಥ್‌ನಲ್ಲಿರುವ ಬಾಲ ಹಕ್ಕುಗಳ ರಕ್ಷಣಾ ಆಯೋಗದ (NCPCR) ಕಟ್ಟಡದ ಎದುರು ಚಿತ್ರೀಕರಣಗೊಂಡಿರುವುದು ತಾಂತ್ರಿಕವಾಗಿ ದೃಢಪಟ್ಟಿದೆ.

ಆದಾಗ್ಯೂ, ಈ ವಿಡಿಯೋಗಳು ಪ್ರತಿಭಟನಾ ಸ್ಥಳದಲ್ಲೇ ಚಿತ್ರೀಕರಣಗೊಂಡಿರುವುದು ಸಾಬೀತಾಗಿದ್ದರೂ, ಆ ಲಾಠಿಗೆ ಮೊಳೆಗಳನ್ನು ಯಾರು ಜೋಡಿಸಿದರು ಅಥವಾ ಅದನ್ನು ಪೋಲೀಸರೇ ಬಳಸಿದ್ದರೇ ಎಂಬುದನ್ನು ಸ್ವತಂತ್ರವಾಗಿ ಖಚಿತಪಡಿಸಲು ಸಾಧ್ಯವಾಗಿಲ್ಲ.

ಮತ್ತೊಂದೆಡೆ, “ಯಾವುದೇ ದೌರ್ಜನ್ಯ ನಡೆದಿಲ್ಲ” ಎಂಬ ಪೋಲೀಸರ ವಾದವನ್ನು ಸ್ಥಳದಲ್ಲಿದ್ದ ಮಾಧ್ಯಮ ಪ್ರತಿನಿಧಿಗಳು ಸಂಪೂರ್ಣವಾಗಿ ಸುಳ್ಳಾಗಿಸಿದ್ದಾರೆ. ವರದಿಗಾರಿಕೆ ಮಾಡುತ್ತಿದ್ದ ‘ಮೊಲಿಟಿಕ್ಸ್’ (Molitics) ಸಂಪಾದಕ ನೀರಜ್ ಝಾ ಅವರನ್ನು ಪೋಲೀಸರು ಬಲವಂತವಾಗಿ ವ್ಯಾನ್‌ಗೆ ತಳ್ಳಿ ಬುರಾರಿ ಪೋಲೀಸ್ ಠಾಣೆಗೆ ಕರೆದೊಯ್ದು ಬಂಧಿಸಿದ್ದರು. ‘ಬೂಮ್’ ವರದಿಗಾರ್ತಿ ಜಾಗೃತಿ ತ್ರಿಶಾ ಮತ್ತು ‘ಡಿಕೋಡ್’ನ ಹೆರಾ ರಿಜ್ವಾನ್, ಸ್ಥಳದಲ್ಲಿದ್ದ ಹತ್ತಾರು ವಿದ್ಯಾರ್ಥಿಗಳು ಮತ್ತು ಯುವತಿಯರು ಪೋಲೀಸರ ಲಾಠಿ ಏಟಿನಿಂದ ತೀವ್ರ ರಕ್ತಸ್ರಾವ, ತಲೆಯ ಗಾಯ ಹಾಗೂ ಕಾಲುಗಳ ಉಗುರುಗಳು ಕಿತ್ತುಹೋಗುವಂತಹ ದೌರ್ಜನ್ಯಕ್ಕೆ ಒಳಗಾಗಿದ್ದನ್ನು ಪ್ರತ್ಯಕ್ಷವಾಗಿ ವರದಿ ಮಾಡಿದ್ದಾರೆ.

ಅದಕ್ಕೂ ಮುನ್ನ ಜುಲೈ 18 ರಂದು, 20 ದಿನಗಳಿಂದ ಉಪವಾಸ ಸತ್ಯಾಗ್ರಹ ಕುಳಿತಿದ್ದ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರನ್ನು ಸಹ ಪೋಲೀಸರು ಪ್ರತಿಭಟನಾ ಸ್ಥಳದಿಂದ ಬಲವಂತವಾಗಿ ತೆರವುಗೊಳಿಸಿದ್ದರು. ಒಟ್ಟಾರೆಯಾಗಿ, ಜಂತರ್ ಮಂತರ್‌ನಲ್ಲಿ ನಡೆದ ಪೋಲೀಸ್ ಬಲಪ್ರಯೋಗದ ನೈಜ ಸಾಕ್ಷ್ಯಗಳನ್ನು ಮುಚ್ಚಿಹಾಕಲು ದೆಹಲಿ ಪೋಲೀಸ್ ಯತ್ನಿಸಿರುವುದು ಈ ಫ್ಯಾಕ್ಟ್‌ಚೆಕ್‌ನಿಂದ ಸ್ಪಷ್ಟವಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights