ಸ್ವಾತಂತ್ರ್ಯ ಹೋರಾಟಗಾರನನ್ನು ಅಪರಾಧಿಯಂತೆ ಚಿತ್ರಿಸಿದ ಜೀ5 ವೆಬ್‌ಸೀರಿಸ್‌; ಸಾರ್ವಜನಿಕ ಆಕ್ರೋಶ

ಕುನಾಲ್ ಖೇಮು ಅಭಿನಯದ ’ಅಭಯ್ 2’ ವೆಬ್‌ಸಿರೀಸ್‌  ZEE5 ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಈ ಸೀರೀಸ್‌ನ  ದೃಶ್ಯವೊಂದರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಖುದಿರಾಮ್ ಬೋಸ್‌ನನ್ನು ’ಅಪರಾಧಿ’ ಎಂಬಂತೆ ಚಿತ್ರಿಸಿಲಾಗಿದ್ದು, ಈ ವಿಚಾರವಾಗಿ ವಿವಾದ ಎದ್ದಿದೆ. ಬಂಗಾಳಿ ಸಮುದಾಯದ ಜನರು ಜೀ5 ವಿರುದ್ಧ ಆಕ್ರೋಶಗೊಂಡಿದ್ದಾರೆ.

ನಟ ರುದ್ರಾನಿಲ್ ಘೋಷ್ ಮತ್ತು ಶಾಸಕ ಮದನ್ ಮಿತ್ರ ಸೇರಿದಂತೆ ಹಲವಾರು ಜನರು ಇದನ್ನು ಖಂಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಜಫರ್‌ ನಗರ ಪಿತೂರಿ ಪ್ರಕರಣದಲ್ಲಿನ ಪಾತ್ರಕ್ಕಾಗಿ 18 ವರ್ಷದ ಖುದಿರಾಮ್ ಬೋಸ್‌ ಅವರಿಗೆ ಬ್ರಿಟಿಷ್ ಸರ್ಕಾರ ಮರಣದಂಡನೆ ವಿಧಿಸಿತ್ತು. ಪ್ರಕರಣದಲ್ಲಿ ಅವರು ಮತ್ತು ಕ್ರಾಂತಿಕಾರಿ ಪ್ರಫುಲ್ಲಾ ಚಾಕಿ ಬ್ರಿಟಿಷ್ ನ್ಯಾಯಾಧೀಶರನ್ನು ಹತ್ಯೆ ಮಾಡಲು ಪ್ರಯತ್ನಿಸಿದ್ದರು, ಆದರೆ ಅದು ವಿಫಲವಾಗಿತ್ತು. ಆಗಸ್ಟ್ 11, 1908 ರಂದು ಗಲ್ಲಿಗೇರಿಸಲ್ಪಟ್ಟ ಬೋಸ್, ಗಲ್ಲು ಶಿಕ್ಷೆಗೆ ಗುರಿಯಾದ ಅತ್ಯಂತ ಕಿರಿಯ ಸ್ವಾತಂತ್ರ್ಯ ಹೋರಾಟಗಾರ ಎಂದು ಹೆಸರು ಪಡೆದಿದ್ದರು.

ಸ್ವಾತಂತ್ರ್ಯ ದಿನಾಚರಣೆಯಂದು ಬಿಡುಗಡೆಯಾದ ”ಅಭಯ್ 2” ರ ಮೂರನೇ ಎಪಿಸೋಡ್‌ಗಳಲ್ಲಿ, ಖುದಿರಾಮ್ ಬೋಸ್‌ರ ಭಾವಚಿತ್ರವನ್ನು ಇತರ ಅಪರಾಧಿಗಳೊಂದಿಗೆ ಪೊಲೀಸ್ ಠಾಣೆಯಲ್ಲಿರುವ ಬೋರ್ಡ್‌ನಲ್ಲಿ ಅಂಟಿಸಿ ಇಡಲಾಗಿತ್ತು. ಇದನ್ನು ವಿರೋಧಿಸಿ ಜಾಲತಾಣಿಗರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.

ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರ ಇದನ್ನು “ಅತ್ಯಂತ ನಾಚಿಕೆಗೇಡು” ಎಂದು ಬಣ್ಣಿಸಿ “ಎಲ್ಲಾ ಕ್ಷೇತ್ರಗಳಲ್ಲಿ ಬಂಗಾಳಿಗಳ ಕೊಡುಗೆಯನ್ನು ದುರ್ಬಲಗೊಳಿಸಿದ್ದಾರೆ” ಎಂದು ಬಿಜೆಪಿಯನ್ನು ದೂಷಿಸಿದ್ದಾರೆ. “ಬಿಜೆಪಿ ಸರ್ಕಾರದಲ್ಲಿ ಇದು ಹೊಸ ರೂಡಿಯಾಗಿದೆ ಎಂದು ನಾನು ಊಹಿಸುತ್ತೇನೆ, ಎಲ್ಲಾ ಕ್ಷೇತ್ರಗಳಲ್ಲಿ ಬಂಗಾಳಿಗಳ ಕೊಡುಗೆಯನ್ನು ಹಾಳುಮಾಡಲು ಇತಿಹಾಸವನ್ನು ವಿರೂಪಗೊಳಿಸಿದೆ” ಎಂದು ಅವರು ಹೇಳಿದ್ದಾರೆ.

ಬಂಗಾಳಿ ಚಿತ್ರೋದ್ಯಮದ ಪ್ರಮುಖ ನಟ ರುದ್ರಾನಿಲ್ ಘೋಷ್ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡು, ಅದರಲ್ಲಿ ಅವರು ತಮ್ಮ ಟಿವಿಯಲ್ಲಿ ಓಡುತ್ತಿರುವ ದೃಶ್ಯವನ್ನು ತೋರಿಸಿದರು ಮತ್ತು “ಇದು ಅನಪೇಕ್ಷಿತ ತಪ್ಪು ಎಂದು ನಾನು ನಂಬುತ್ತೇನೆ. ಇದನ್ನು ಎಡಿಟ್ ಮಾಡಲು ನಾನು ZEE5 ಗೆ ವಿನಂತಿಸುತ್ತೇನೆ” ಎಂದಿದ್ದಾರೆ.

ಒಂದು ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ, ZEE5 ಅಧಿಕೃತ ಹ್ಯಾಂಡಲ್, ವೆಬ್‌ಸೀರಿಸ್ ತಯಾರಕರು ಯಾವುದೇ ಸಮುದಾಯದ ಭಾವನೆಯನ್ನು ನೋಯಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಹೇಳಿದೆ.

“ನಿರ್ಮಾಪಕರು, ವೆಬ್‌ಸೀರಿಸ್‌ ಮತ್ತು ವೇದಿಕೆ, ಯಾವುದೇ ಸಮುದಾಯದ ಭಾವನೆಗಳನ್ನು ನೋಯಿಸುವ ಯಾವುದೇ ಉದ್ದೇಶವನ್ನು ಹೊಂದಿಲ್ಲ. ಪ್ರತಿಕ್ರಿಯೆಗಳನ್ನು ಗಮನದಲ್ಲಿಟ್ಟುಕೊಂಡು ಅಭಯ್ 2 ರ ದೃಶ್ಯದಲ್ಲಿ ಬಳಸಿದ ಚಿತ್ರವನ್ನು ನಾವು ಮಸುಕಾಗಿಸಿದ್ದೇವೆ” ಎಂದು ಟ್ವೀಟ್ ಹೇಳಲಾಗಿದೆ.


Read Also:  ಯಾವುದೇ ರಾಜಕೀಯ ಸ್ಥಾನ ಅಥವಾ ಪಕ್ಷವನ್ನು ಲೆಕ್ಕಿಸದೇ ಹಿಂಸಾತ್ಮಕ ಪೋಸ್ಟ್‌ಗಳನ್ನು ನಿರ್ಬಂಧಿಸುತ್ತೇವೆ: ಫೇಸ್‌ಬುಕ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love
Verified by MonsterInsights