ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಮಹಾರಾಷ್ಟ್ರ ಸರ್ಕಾರ ಸಂಪುಟಕ್ಕೆ ಮೂವತ್ತಾರು ಮಂತ್ರಿಗಳ ಸೇರ್ಪಡೆ…

ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ತನ್ನ ಸಂಪುಟಕ್ಕೆ ಮೂವತ್ತಾರು ಮಂತ್ರಿಗಳನ್ನು ಸೇರಿಸಿಕೊಳ್ಳಲಾಗಿದೆ. ಇಂದು ಪ್ರಮಾಣ ವಚನ ಸ್ವೀಕರಿಸಿದ ಮಂತ್ರಿಗಳಲ್ಲಿ ಉದ್ಧವ್ ಅವರ 29 ವರ್ಷದ ಮಗ ಆದಿತ್ಯ ಠಾಕ್ರೆ ಸೇರಿದ್ದು, ಮಹಾರಾಷ್ಟ್ರದಲ್ಲಿ ಇದೇ ಮೊದಲ ಬಾರಿಗೆ ತಂದೆ-ಮಗ ಜೋಡಿಯನ್ನು ರಾಜ್ಯದ ಮಂತ್ರಿ ಮಂಡಳಿಯಲ್ಲಿ ನೋಡುವಂತಾಗಿದೆ.

ಎನ್‌ಸಿಪಿ ನಾಯಕ ಅಜಿತ್ ಪವಾರ್ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.  ಎರಡು ತಿಂಗಳ ಅವಧಿಯಲ್ಲಿ ಎರಡನೇ ಬಾರಿ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ದಾಖಲೆ ಅವರದು. ನವೆಂಬರ್‌ನಲ್ಲಿ ಕೇವಲ ಮೂರು ದಿನಗಳ ಕಾಲ ಬಿಜೆಪಿಯ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಸರ್ಕಾರ ರಚಿಸುವ ಒಪ್ಪಂದದಲ್ಲಿ ಅವರು ಡಿಸಿಎಂ ಆಗಿದ್ದರು.

ಮಹಾರಾಷ್ಟ್ರದ ಒಟ್ಟು 36 ಮಂತ್ರಿಗಳಲ್ಲಿ (ಒಟ್ಟು ಶಾಸಕರ 15%) 26 ಮಂತ್ರಿಗಳು ಕ್ಯಾಬಿನೆಟ್ ಮಂತ್ರಿಗಳಾಗಿ ಮತ್ತು 10 ಮಂತ್ರಿಗಳು ಕಿರಿಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ವಿಸ್ತೃತ ಸಂಪುಟದಲ್ಲಿ ಮೂವರು ಮಹಿಳೆಯರಿದ್ದರೆ, ನಾಲ್ವರು ಮುಸ್ಲಿಮರಿದ್ದಾರೆ.

ಆದಿತ್ಯ ಠಾಕ್ರೆಯವರಲ್ಲದೇ ಹಿರಿಯ ಎನ್‌ಸಿಪಿ ಮುಖಂಡ ಮತ್ತು ಸಂಸದ ಸುನಿಲ್ ತತ್ಕರೆ ಅವರ ಪುತ್ರಿ ಅದಿತಿ ಕೂಡ ಮೊದಲ ಬಾರಿಗೆ ಶಾಸಕರಾಗಿದ್ದರೂ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.

ಉದ್ಧವ್ ಠಾಕ್ರೆ ಅವರು ರೈತ ಮುಖಂಡ ಮತ್ತು ವಿದರ್ಭದ ನಾಲ್ಕು ಅವಧಿಯ ಸ್ವತಂತ್ರ ಶಾಸಕ ಬಚು ಕಾಡು, ಅಹಮದ್‌ನಗರದ ಶಂಕರ್ ಗಡ್ಡಖ್, ಕೊಲ್ಹಾಪುರದ ರಾಜೇಂದ್ರ ಯಾದ್ರವ್ಕರ್ ಸೇರಿದಂತೆ ಮೂವರು ಸ್ವತಂತ್ರರಿಗೆ ಸಂಪುಟದಲ್ಲಿ ಅವಕಾಶ ನೀಡಿದ್ದಾರೆ. ಈ ಎಲ್ಲಾ ಸ್ವತಂತ್ರರು ಶಿವಸೇನೆಗೆ ಬೆಂಬಲ ನೀಡಿದ್ದರು.

ಕಾಂಗ್ರೆಸ್ ತನ್ನ ಪಾಲಿನ 10 ಸಚಿವ ಸ್ಥಾನಗಳಲ್ಲಿ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಅವರನ್ನು ಕೈಬಿಟ್ಟು, ಮಾಜಿ ಸಿಎಂ ಅಶೋಕ್ ಚವಾಣ್ ಅವರನ್ನು ಪಟ್ಟಿಯಲ್ಲಿ ಸೇರಿಸಿದೆ.

ಶಿವಸೇನೆಯಿಂದ ಠಾಕ್ರೆ ಅವರು ಎಂಎಲ್ಸಿ ಅನಿಲ್ ಪರಬ್ ಅವರಂತಹ ಪಕ್ಷದ ನಿಷ್ಠಾವಂತರಿಗೆ ಮತ್ತು ಮಾಜಿ ಸಚಿವರಾದ ಸಂಜಯ್ ರಾಥೋಡ್, ಗುಲಾಬ್ರಾವ್ ಪಾಟೀಲ್, ದಾದಾ ಭೂಸ್, ಉದಯ್ ಸಮಂತ್, ಶಂಭುರಾಜೆ ದೇಸಾಯಿ ಅವರನ್ನು ಮತ್ತು ಹೊಸಬರಾದ ಸತ್ತಾರ್, ಸಂದೀಪನ್ ಭುಮ್ರೆ (ಮರಾಠವಾಡ)ರವರನ್ನು ಉಳಿಸಿಕೊಂಡಿದ್ದಾರೆ. ಹೊರಗುಳಿದವರಲ್ಲಿ ಮಾಜಿ ಸಚಿವ ರವೀಂದ್ರ ವೈಕರ್, ಸೇನಾ ಸಂಸದ ಸಂಜಯ್ ರೌತ್ ಅವರ ಸಹೋದರ ಸುನಿಲ್ ರೌತ್ ಇತರರು ಸೇರಿದ್ದಾರೆ.

ಇದರಿಂದ ಸಂಸದ ಸಂಜಯ್ ರೌತ್ ಅಸಮಾಧಾನಗೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ ಸಂಜಯ್‌ ರಾವತ್‌ ಅದನ್ನು ನಿರಾಕರಿಸಿದ್ದು ತಮ್ಮ ಕೆಲಸವನ್ನು ಮಾತ್ರ ತಾವು ಮಾಡಿದ್ದು ಮತ್ತು ಪ್ರತಿಯಾಗಿ ಏನನ್ನೂ ನಿರೀಕ್ಷಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಮೂರು ಪಕ್ಷಗಳು ಸಚಿವರನ್ನು ಆರಿಸುವಲ್ಲಿ ಪ್ರದೇಶ, ಜಾತಿ ಮತ್ತು ಧರ್ಮವನ್ನು ಗಮನದಲ್ಲಿಟ್ಟುಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಮೊದಲೇ ಆರು ಜನ ಸಚಿವರು ಸಿಎಂ ಉದ್ಧವ್‌ ಠಾಕ್ರೆಯವರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights