ಕೊರೊನಾ ಕಷ್ಟದ ನಡುವೆ ಅದ್ಧೂರಿ ವರ್ಷಾಚರಣೆಗೆ ಬಿಜೆಪಿ ಚಿಂತನೆ…!
ಕೊರೊನಾ ಲಾಕ್ ಡೌನ್ ನಿಂದಾಗಿ ಇಡೀ ದೇಶವೇ ಸಂಕಷ್ಟಕ್ಕೆ ಗುರಿಯಾಗಿದೆ. ಈ ನಡುವೆ ಕೇಂದ್ರ ಸರ್ಕಾರ 2ನೇ ಬಾರಿಗೆ ಅಧಿಕಾರಕ್ಕೆ ಬಂದ ವರ್ಷ ಪೂರೈಸುತ್ತಿದ್ದು, ವರ್ಷಾಚಾರಣೆಗೆ ಮುಂದಾಗಿದೆ.
ದೇಶ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು ಆರ್ಥಿಕ ನೆರವಿಗಾಗಿ ಹಲವಾರು ಕ್ಷೇತ್ರಗಳು ಬೇಡಿಕೆ ಒಡ್ಡಿವೆ. ಆದರೆ ಇಂಥಹ ಸಂದರ್ಭದಲ್ಲಿ ಆಚರಣೆ ಮಾತು ಕೇಳಿಬಂದಿದ್ದು ಕೆಂಗಣ್ಣಿಗೆ ಗುರಿ ಮಾಡಿದೆ. ಕೊರೊನಾ ಕಾರಣಕ್ಕೆ ಈಗ ಬೃಹತ್ ಸಮಾವೇಶಗಳನ್ನು ಮಾಡಲು ಸಾಧ್ಯವಿಲ್ಲದ ಕಾರಣಕ್ಕೆ ವರ್ಚ್ಯುಯಲ್ ಸಮಾವೇಶಗಳನ್ನು ನಡೆಸಲು ನಿರ್ಧರಿಸಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಈಗಾಗಲೇ ಈ ಬಗ್ಗೆ ರಾಜ್ಯ ಘಟಕಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ರಾಷ್ಟ್ರೀಯ ಬಿಜೆಪಿ ವತಿಯಿಂದ ದೇಶಾದ್ಯಂತ 750 ವರ್ಚ್ಯುಯಲ್ ಸಮಾವೇಶಗಳನ್ನು ಮಾಡಲು ನಿರ್ಧರಿಸಿದ್ದಾರೆ. ಇದಲ್ಲದೆ ರಾಜ್ಯ ಘಟಕಗಳಿಗೆ 1 ಸಾವಿರ ವರ್ಚ್ಯುಯಲ್ ಸಮಾವೇಶಗಳನ್ನು ಮಾಡುವಂತೆ ಸೂಚನೆ ನೀಡಿದ್ದಾರೆ.
ಪ್ರತಿ ವರ್ಚ್ಯುಯಲ್ ಸಮಾವೇಶದಲ್ಲೂ ಕನಿಷ್ಠ 750 ಜನರು ಇರುವಂತೆ ನೋಡಿಕೊಳ್ಳುವಂತೆ, ರಾಜ್ಯಗಳ ಮಟ್ಟದಲ್ಲಿ ಪತ್ರಿಕಾಗೋಷ್ಠಿ ನಡೆಸುವಂತೆ ಹಾಗೂ ವರ್ಷಾಚರಣೆ ಹಿನ್ನೆಲೆಯಲ್ಲಿ ಮಾಸ್ಕ್, ಸ್ಯಾನಿಟೈಸೇಷನ್ ವಿತರಣೆ ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ.

