ಕೊರೋನ ಸಂಕ್ರಾಮಿಕ: ಜೈಲುಗಳಲ್ಲಿ ತೆಗೆದುಕೊಂಡ ಕ್ರಮಗಳ ಬಗ್ಗೆ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ವಿಚಾರಣೆ
ಕೊರೋನ ವೈರಸ್ ಸಾಂಕ್ರಾಮಿಕ ದೇಶದಾದ್ಯಂತ ವೇಗವಾಗಿ ಹರಡುತ್ತಿರುವ ಹಿನ್ನಲಯಲ್ಲಿ, ದೇಶದಾದ್ಯಂತ ಜೈಲುಗಳಲ್ಲಿ ಜನದಟ್ಟಣೆ ವಿಪರೀತವಿರುವ ಸನ್ನಿವೇಶದಲ್ಲಿ, ಸ್ವಯಂಪ್ರೇರಿತ ವಿಚಾರಣೆ ನಡೆಸಿ, ಸಾಂಕ್ರಾಮಿಕವನ್ನು ತಡೆಗಟ್ಟಲು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ಮುಖ್ಯ ನ್ಯಾಯಾಧೀಶ ಎಸ್ ಬೋಬ್ಡೆ ಮತ್ತು ಎಲ್ ಎನ್ ರಾವ್ ಅವರನ್ನು ಒಳಗೊಂಡ ನ್ಯಾಯಪೀಠ, ಬಂಧೀಖಾನೆಗಳ ಮಹನಿರ್ದೇಶಕ ಹಾಗೂ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಲಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ನೀಡಿ, ಕೊರೋನ ತಡೆಗಟ್ಟುವುದಕ್ಕೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾರ್ಚ್ 20 ರೊಳಗೆ ಮಾಹಿತಿ ನೀಡುವಂತೆ ತಿಳಿಸಿದೆ.
ಈ ವಿಷಯವಾಗಿ ಕೋರ್ಟ್ ಗೆ ಸಹಾಯ ಮಾಡಬಲ್ಲ ಒಬ್ಬ ಅಧಿಕಾರಿಯನ್ನು ಮಾರ್ಚ್ 23ರಂದು ನಿಯೋಜಿಸಲು ಕೋರ್ಟ್ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪದೇಶಗಳನ್ನು ಕೇಳಿದೆ. ಹೀಗೆಯೇ ಬಾಲಾಪರಾಧಿಗಳನ್ನು ಬಂಧನದಲ್ಲಿರಿಸುವ ಗೃಹಗಳ ಬಗ್ಗೆಯೂ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ವಿಚಾರಣೆ ನಡೆಸಿದೆ.
ಈ ಸಾಂಕ್ರಾಮಿಕವನ್ನು ತಡೆಗಟ್ಟಲು ಕೆಲವು ರಾಜ್ಯಗಳು ಕ್ರಮ ತೆಗೆದುಕೊಂಡಿದ್ದರೂ, ಕೆಲವು ರಾಜ್ಯಗಳು ಎನೂ ಮಾಡುತ್ತಿಲ್ಲ ಎಂಬುದನ್ನು ಗಮನಿಸಿರುವ ಕೋರ್ಟ್, ಹೆಚ್ಚು ಜನ ಒಂದೆಡೆ ಸೇರುತ್ತಿರುವುದು ಕೊರೋನ ವೈರಸ್ ಹರಡಲು ಸುಲಭವಾಗುತ್ತಿದೆ ಎಂದು ಕೂಡ ಹೇಳಿದೆ.
ವಿಶ್ವದಾದ್ಯಂತ 1,50,000ಕ್ಕೂ ಹೆಚ್ಚು ಜನ ಕೊರೋನ ವೈರಸ್ ನಿಂದ ಬಳಲುತ್ತಿದ್ದು, 5,000ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.