ಹಿಂದೂ ಮಹಿಳೆಯ ಅಂತ್ಯಸಂಸ್ಕಾರಕ್ಕೆ ಮುಂದೆನಿಂತ ಮುಸ್ಲೀಂ ಯುವಕರು!

ಕೊರೊನಾ ವೈರಸ್‌ ಸೋಂಕು ಹರಡುತ್ತಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲೂ ದೇಶದ ಜನರ ಮನಸ್ಸಿನಲ್ಲಿ ಕೋಮುವಾದಿ ವಿಷ ಬಿತ್ತನೆಯಂತೂ ನಿಂತಿಲ್ಲ.  ಕೋಮು ವೈರತ್ವವನ್ನು ಬಿತ್ತುವಲ್ಲಿ ಮಾಧ್ಯಮಗಳೂ ಮುಂದೆನಿಂತಿವೆ. ಫೇಕ್‌ ನ್ಯೂಸ್‌ಗಳನ್ನು ಹರಡುತ್ತಿರುವ ಕೆಲವು ಮಾಧ್ಯಮಗಳು ಜನರನ್ನು ಒಂದು ಧರ್ಮದಿಂದ ಸಂಪೂರ್ಣವಾಗಿ ಪ್ರತ್ಯೇಕಿಸುವಲ್ಲಿ ಯಶಸ್ವಿಯಾಗುತ್ತಿವೆ.

ಇಂತಹ ಹೇಯ ಸಂದರ್ಭದಲ್ಲೂ ಮಧ್ಯಪ್ರದೇಶದ ಇಂದೋರ್‌ನಲ್ಲಿ ಹಿಂದೂ ಮಹಿಳೆಯೊಬ್ಬರು ಸಾವಿಗೀಡಾಗಿದ ಸಮಯದಲ್ಲಿ ಮುಸ್ಲೀಂ ಯುವಕರು ಅಂತ್ಯ ಸಂಸ್ಕಾರ ಮಾಡಲು ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಸಾವನ್ನಪ್ಪಿದ ಮಹಿಳೆಗೆ ಕೋವಿಡ್ 19 ಸೋಂಕು ಹರಡಿರಬಹುದಾದ ಶಂಕೆಯಿಂದ, ಸೋಂಕು ನಮಗೂ ಹರಡಬಹುದೆಂಬ ಭೀತಿಯಿಂದ ಮಹಿಳೆಯ ಸಂಬಂಧಿಕರು ಅಂತ್ಯ ಸಂಸ್ಕಾರ ಮಾಡಲು ಹಿಂದೇಟು ಹಾಕಿದ್ದಾರೆ. ಆದರೆ ಅದೇ ಪ್ರದೇಶದ ಮುಸ್ಲಿಂ ಯುವಕರು ವೈರಸ್‌ ಭೀತಿಯನ್ನೂ ಬದಿಗಿಟ್ಟು ಮಹಿಳೆಯ ಅಂತ್ಯ ಸಂಸ್ಕಾರಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ನಡೆಸಿದ್ದಾರೆ.

ಲಾಕ್‌ಡೌನ್ ಆಗಿದ್ದರಿಂದ ಮೃತದೇಹವನ್ನು ಸ್ಮಶಾನಕ್ಕೆ ಕೊಂಡೊಯ್ಯಲು ವಾಹನ ಸೌಲಭ್ಯ ಕೂಡಾ ದೊರಕಿಲ್ಲ. ಹಾಗಾಗಿ ಮಾಸ್ಕ್ ಧರಿಸಿದ ಯುವಕರು ಮಹಿಳೆಯ ಮೃತದೇಹಕ್ಕೆ ಹೆಗಲು ಕೊಟ್ಟು ಸುಮಾರು 2.5 ಕೀ.ಮೀ. ದೂರದಲ್ಲಿರುವ ಸ್ಮಶಾನಕ್ಕೆ ಸಾಗಿಸಿದ್ದಾರೆ.

ದ್ರೌಪದಿ ಭಾಯಿ ಎಂಬಾಕೆಯೇ ಮೃತಪಟ್ಟರಾಗಿದ್ದು, ವಯೋ ಸಹಜ ಅನಾರೋಗ್ಯದಿಂದಾಗಿ ಮೃತಪಟ್ಟಿದ್ದಾರೆ ಎಂಬುದು ತಿಳಿದು ಬಂದಿದೆ.

ಪ್ರಸ್ತುತ ಘಟನೆಯನ್ನು ಮಧ್ಯ ಪ್ರದೇಶ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಮುಖಂಡರಾಗಿರುವ ಕಮಲ್‌ನಾಥ್‌ ಟ್ವೀಟ್ ಮಾಡಿದ್ದಾರೆ. ‘ಇಂದೋರ್‌ನ ಥೋಡಾ ಪ್ರದೇಶದಲ್ಲಿ ಹಿಂದೂ ಮಹಿಳೆ ದ್ರೌಪದಿ ಭಾಯಿ ಅವರ ಮರಣದ ನಂತರ ಆಕೆಯ ಇಬ್ಬರು ಗಂಡು ಮಕ್ಕಳಿಗೆ ನೆರವಾದ ಮುಸ್ಲಿಂ ಧರ್ಮದ ಯುವಕರು ಅಂತ್ಯಸಂಸ್ಕಾರದ ಮೆರವಣಿಗೆಯಲ್ಲಿ ಸಾಥ್ ನೀಡಿದರು. ಇದು ಪರಸ್ಪರ ಸಾಮರಸ್ಯ ಹಾಗೂ ಮಾನವೀಯತೆಗೆ ಉದಾಹರಣೆಯಾಗಿದ್ದು, ಶ್ಲಾಘನೀಯವಾಗಿದೆ. ಇದೇ ನಮ್ಮ ಗಂಗಾ-ಯಮುನಾ ಸಂಸ್ಕೃತಿಯಾಗಿದೆ. ಇಂತಹ ದೃಶ್ಯಗಳ ಪರಸ್ಪರ ಪ್ರೀತಿ ಹಾಗೂ ಭ್ರಾತೃತ್ವವನ್ನು ಮೂಡಿಸುತ್ತದೆ’ ಎಂದು ಉಲ್ಲೇಖಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights