ಎತ್ತಿಗೆ ಜ್ವರ, ಎಮ್ಮೆಗೆ ಬರೆ: ಉಳ್ಳವರಿಗೆ ಪ್ಲೈಟ್‌, ಇಲ್ಲದವರಿಗೆ ಲಾಠಿ ಏಟು

ಕೊರೊನಾ ವೈರಸ್ ಜಗತ್ತಿನಾದ್ಯಂತ ತಾಂಡವವಾಡುತ್ತಿದೆ. ಇಡೀ ಜನ ಸಮೂಹವೇ ಕೊರೊನಾ ವೈರಸ್‌ಗೆ ಹೆದರಿ, ಯಾವಾಗ ತಮಗೂ ಕೊರೊನಾ ವೈರಸ್‌ ಬರುವುದೋ ಎಂಬ ಆತಂಕದಲ್ಲಿ ಕಂಗಾಲಾಗಿದ್ದಾರೆ. ಈ ಕೊರೊನಾ ವೈರಸ್‌ಗೆ ಇಟಲಿಯಲ್ಲಿ 8,215 ಜನರು ಬಲಿಯಾಗಿದ್ದರೆ, ಸ್ಪೇನ್‌ ನಲ್ಲಿ 4,365, ಚೀನಾದಲ್ಲಿ 3,292, ಇರಾನ್‌ನಲ್ಲಿ 2,234, ಪ್ರಾನ್ಸ್‌ನಲ್ಲಿ 1,696 ಹಾಗೂ ಅಮೇರಿಕಾದಲ್ಲಿ 1,300 ಜನರು ಬಲಿಯಾಗಿದ್ದಾರೆ. ಅಲ್ಲದೆ ಭಾರತದಲ್ಲಿಯೂ 21 ಜನರು ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ.

ಇಡೀ ಜಗತ್ತನೆ ಭಯದ ಭೀತಿಗೆ ದೂಡಿರುವ ಕೊರೊನಾ ವೈರಸ್‌ ನಿಯಂತ್ರಿಸುವುದಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಹಕಾರ,  ನೆರವು ಎಲ್ಲಾ ದೇಶಗಳಿಗೂ ನೀಡಲಾಗುತ್ತಿದೆ. ಭಾರತಲದಲ್ಲಿ 21 ದಿನಗಳ ಕಾಲ ಲಾಕ್‌ಡೌನ್‌ ಮಾಡಲಾಗಿದೆ. ಇದು ದೇಶದಲ್ಲಿ ಕೊರೊನಾ ಹರಡವುದನ್ನು ನಿಯಂತ್ರಿಸಲು ನೆರವಾದರೂ ಇದೊಂದೇ ಪರಿಹಾರವೂ ಅಲ್ಲ. ಕೊರೊನಾ ಹರಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ತುರ್ತು ಲಾಕ್‌ಡೌನ್‌ ಘೋಷಣೆಯಿಂದಾಗಿ ಬಡವರು, ಸಾಮಾನ್ಯ ಜನರು ಕಂಗಾಲಾಗಿರುವು ಅಷ್ಟೇ ಸತ್ಯವೂ ಹೌದು.

ಕೊರೊನಾ ನಿಯಂತ್ರಣದ ದೃಷ್ಠಿಯಿಂದ ಲಾಕ್‌ಡೌನ್ ಒಂದು ಒಳ್ಳೆಯ ನಿರ್ಧಾರ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ನಿರ್ಧಾರದಿಂದಾಗಿ ಆಗುತ್ತಿರುವ ತೊಂದರೆಗಳು ನಿರೀಕ್ಷೆಗೂ ಮೀರಿದ್ದು. ಭಾರತದಂತಹ ರಾಷ್ಟ್ರದಲ್ಲಿ ಸುಸ್ಥಿರ ಜೀವನ ಸಾಗಿಸುತ್ತಿರುವವರ ಸಂಖ್ಯೆ ತುಂಬಾ ವಿರಳ. ಅಂದಿನ ದಿನದ ಹೊಟ್ಟೆಪಾಡಿಗಾಗಿ ದುಡಿದು ಜೀವನ ಸಾಗಿಸುವವರ ಸಂಖ್ಯೆಯೇ ಹೆಚ್ಚು. ಇಂತಹ ಬಡವರು, ಜನಸಾಮಾನ್ಯರು ದಿನನಿತ್ಯದ ಕೂಲಿಗಾಗಿ, ಉದ್ಯೋಗಕ್ಕಾಗಿ ತಮ್ಮೂರನ್ನು ಬಿಟ್ಟು ನಗರ-ಪಟ್ಟಣಗಳಿಗೆ ಗುಳೆಹೋಗುವುದು, ವಲಸೆ ಹೋಗುವುದು ಸಾಮಾನ್ಯವಾಗಿದೆ.

ಕರ್ನಾಟಕದ ಬೆಂಗಳೂರಿನಲ್ಲಿ ವಾಸಿಸುತ್ತಿರುವವರ ಬಹುಸಂಖ್ಯಾತರು ಈ ವಲಸೆ ಬಂದವರೆ. ಇವರಲ್ಲಿ ಕಟ್ಟಡಗಳ ಗಾರೆ ಕೆಲಸ, ಮಾರ್ಕೆಟ್‌ಗಳಲ್ಲಿ ಲೋಡಿಂಗ್‌-ಅನ್‌ಲೋಡಿಂಗ್‌ ಕೂಲಿಗಳಾಗಿ ದುಡಿಯುವ ಬಡವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಂತಹ ಜನರಲ್ಲಿ ಕೆಲವರು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದರೆ, ಇನ್ನೂ ಹಲವರು ಚಿಕ್ಕ ಟೆಂಟ್‌ಗಳಲ್ಲಿ, ಬಸ್‌ ಸ್ಟಾಂಡ್‌ಗಳಲ್ಲಿ, ರಸ್ತೆ ಬದಿಗಳಲ್ಲಿ ವಾಸಿಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಇವರ್ಯಾರು ದೇಶ-ವಿದೇಶಗಳಿಗೆ ಹೋದವರೂ ಅಲ್ಲ, ಅಲ್ಲಿಂದ ಬಂದವರೂ ಅಲ್ಲ.

ಇಂದಿನ ಸರ್ಕಾರದ ಲಾಕ್‌ಡೌನ್‌ನಿಂದ ಹೆಚ್ಚು ತೊಂದರೆಯನ್ನೂ, ಹಿಂಸೆಯನ್ನೂ ಈ ಅಮಾಯಕ ಜನರು ಅನುಭವಿಸುತ್ತಿದ್ದಾರೆ. ಲಾಕ್‌ಡೌನ್‌ ಘೋಷಣೆಯಾದ ತಕ್ಷಣವೇ ತಮ್ಮೂರಿಗೆ ಹೋಗಲು ಸಾರಿಗೆ ಸೌಲಭ್ಯವೂ ಇಲ್ಲ. ಇಲ್ಲೇ ಉಳಿಯಲೂ ಮನೆಯೂ ಇಲ್ಲದೆ ಕಂಗಾಲಾಗಿ, ಬೀದಿಯಲ್ಲೂ ಜಾಗವಿಲ್ಲದೆ ಪರದಾಡುತ್ತಿದ್ದಾರೆ.

ಅಂದಹಾಗೆ, ಕೊರೊನಾ ವೈರಸ್‌ ಕಾಣಿಸಿಕೊಂಡಿದ್ದು, ಭಾರತದಲ್ಲಂತೂ ಅಲ್ಲ. ಚೀನಾದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್‌ ಜಗತ್ತಿನಾದ್ಯಂತ ಹರಡಿದ್ದು, ಶ್ರೀಮಂತರಿಂದಲೇ ಹೊರತು, ಇಂತಹ ಬಡ ಜನರಿಂದ ಅಲ್ಲ. ಚೀನಾ-ಇಟಲಿಗಳಲ್ಲಿ ಕೊರೊನಾ ಹಾವಳಿ ಹೆಚ್ಚಾಗಿ, ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಭಾರತದಿಂದ ಆ ದೇಶಗಳಿಗೆ ವಲಸೆಯೋ-ಪ್ರವಾಸವೋ ಹೋಗಿದ್ದ ಜನರನ್ನು ಕರೆತರಲು  ಭಾರತ ಸರ್ಕಾರವು ತ್ವರಿತ ಕಾಳಜಿವಹಿಸಿ, ವಿಶೇಷ ವಿಮಾನಗಳ ಮೂಲಕ ಆ ಜನರನ್ನು ಭಾರತಕ್ಕೆ ಕರೆತಂದಿತ್ತು. ಇದು ಅತಿಮುಖ್ಯವೂ, ವಿದೇಶದಲ್ಲಿದ್ದ ಭಾರತೀಯ ಜನರನ್ನು ರಕ್ಷಿಸುವ ಜವಬ್ದಾರಿ  ಹೌದು. ಸರ್ಕಾರದ ಶೀಘ್ರಗತಿಯ ನಡೆ ಶ್ಲಾಘನೀಯ.

 

ಆದರೆ, ಭಾರತದಲ್ಲಿ ಕೊರೊನಾ ಹರಡಲು ಕಾರಣವಾದವರೂ ಹೊರದೇಶದಿಂದ ಬಂದ ಈ ಉಳ್ಳವರೇ, ಚೀನಾ-ಇಟಲಿಯಿಂದ ರಕ್ಷಿಸಿ ಕರೆತಂದ ಇವರನ್ನು ಸರ್ಕಾರ ಹೋಂ ಕ್ವಾರಂಟೈನ್‌ಗೆ ಒಳಪಡಿಸಿ, ಅವರನ್ನು ಸಾಮಾಜಿಕವಾಗಿ ಓಡಾಡತಂದೆ ನಿರ್ಬಂಧಿಸಿದ್ದರೆ, ಇಂದು ಇಡೀ ದೇಶವೇ ಲಾಕ್‌ಡೌನ್‌ ಆಗುವ ಪರಿಸ್ಥಿತಿ ಬರುತ್ತಿರಲಿಲ್ಲ, ಅವರನ್ನು ಓಡಾಡಲು ಬಿಟ್ಟಿದ್ದೆ ಈ ಪರಿಸ್ಥಿತಿಗೆ ಕಾರಣವೆಂಬುದು ವೈದ್ಯಕೀಯ ಕ್ಷೇತ್ರದವರ ಅಭಿಪ್ರಾಯ.

ವಿಡಿಯೋ ನೋಡಿ:

Lockdown

ಯಾರನ್ನು ಮೊದಲು ಲಾಕ್ ಡೌನ್ ಮಾಡಬೇಕು… ವಿಡಿಯೋ ನೋಡಿ

Posted by EnSuddi on Friday, March 27, 2020

ಆದರೆ, ಸರ್ಕಾರ ಮೊದಮೊದಲು ಹೀಗೆ ಕರೆತಂದವರ ಮೇಲೆ ಹೆಚ್ಚು ನಿಗಾವನ್ನು, ಗಂಭೀರತೆಯನ್ನು ಹೊಂದಿರಲೇ ಇಲ್ಲ. ಸರ್ಕಾರ ಹೆಚ್ಚೆತ್ತುಕೊಳ್ಳುವಷ್ಟರಲ್ಲಿ ಕೊರೊನಾ ಎರಡನೇ ಹಂತಕ್ಕೆ ಬಂದು ನಿಂತಾಗಿತ್ತು.

ದಿನಕಳೆದಂತೆ ಸೋಂಕಿನ ಸಂಖ್ಯೆ ಹೆಚ್ಚಾದಂತೆ ಪ್ರಧಾನಿ ಮೋದಿಯವರು ದಿಢೀರನೆ ಲಾಕ್‌ಡೌನ್‌ ಘೋಷಿಸಿದರು. ಇದರಿಂದಾಗಿ ವಿದೇಶದಿಂದ ಬಂದವರಿಗಾಗಲೀ ಅಥವಾ ಶ್ರೀಮಂತರಿಗಾಗಲೀ ಯಾವ ಸಮಸ್ಯೆಯೇನೂ ಆಗಿಲ್ಲ. ಆದರೆ, ಸಂಸಷ್ಟಕ್ಕೆ ಸಿಕ್ಕಿಕೊಂಡವರು ಮಾತ್ರ ಈಗಾಗಲೇ ಕೊರೊನಾ ಭಯದಿಂದ ಕಂಗಾಲಾಗಿದ್ದ ಬಡಜನರು ಮಾತ್ರ.

ಕನಿಷ್ಟ ಸರ್ಕಾರಗಳು ನಿರ್ಗತಿಕರಿಗೆ ಉಳಿಯುವ ವ್ಯವಸ್ಥೆಯನ್ನೂ, ಆಹಾರ ಪೂರೈಕೆಯನ್ನೂ, ಅಥವಾ ತಮ್ಮೂರಿಗೆ ಹೋಗುವವರಿಗೆ ಕೊರೊನಾ ಟೆಸ್ಟ್‌ ಮಾಡಿಸಿ, ಅವರರವರ ಹಳ್ಳಿಗಳಿಗೆ ಹೋಗುವ ವ್ಯವಸ್ಥೆ ಮಾಡಬೇಕಿತ್ತು. ಆದರೆ, ಸರ್ಕಾರಗಳು ಮಾಡಿದ್ದು ಇದಕ್ಕೆಲ್ಲಾ ವ್ಯತಿರಿಕ್ತವಾದದ್ದು, ಬೆಂಗಳೂರಿನಲ್ಲಿರುವ ಜನರಿಗೆ ಇಂಧಿರಾಕ್ಯಾಂಟೀನ್‌ಗಳಲ್ಲಿ ಉಚಿತ ಊಟದ ವ್ಯವಸ್ಥೆ ಮಾಡುವುದಾಗಿ ಘೋಷಿಸಿದ್ದ ರಾಜ್ಯ ಸರ್ಕಾರ ಒಂದೇ ದಿನಕ್ಕೆ ಇಂಧಿರಾ ಕ್ಯಾಂಟೀನ್ ಮುಚ್ಚಿಕೊಂಡಿತು.

ಊರುಗಳಿಗೆ ಹೋಗುವವರು ಹೋಗಬಹುದು ಎಂದು ಐದು ಗಂಟೆಯ ಕಾಲಾವಕಾಶಕೊಟ್ಟ ಸರ್ಕಾರ, ಊರಿಗೆ ಹೊರಟ ಜನರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲಿಲ್ಲ. ಸಾರಿಗೆ ಇರಲಿ ಕನಿಷ್ಟ ಸ್ವಂತ ವಾಹನಗಳಲ್ಲಿ ಹೊರಟವರನ್ನು ಊರು ತಲುಪುವ ವೇಳೆಗೆ ಎಲ್ಲಿಯೂ ಕೊರೊನಾ ಟೆಸ್ಟ್‌ ಕೂಡ ಮಾಡಲಿಲ್ಲ. ಬೆಂಗಳೂರಿನಲ್ಲೇ ಉಳಿದ ಬಡಜನರಿಗೆ ಉಳಿಯ ವ್ಯವಸ್ಥೆಯೂ ಆಗಲಿಲ್ಲ.

ಅಲ್ಲದೆ, ಹಲವಾರು ಹಳ್ಳಿಗಳಲ್ಲಿ ಸಂಪರ್ಕ ರಸ್ತೆಗಳನ್ನು ಬ್ಯಾರಿಕೇಡ್‌ಗಳು, ಮುಳ್ಳಿನ ಬೇಲಿಗಳನ್ನು ಹಾಕಿ ಮುಚ್ಚಲಾಗುತ್ತಿದೆ. ಇದರಿಂದಾಗಿ ಜನರು ಇತರ ಊರುಗಳಿಗೆ ಹೋಗದಂತಾಗಿದೆ. ಒಂದು ವೇಳೆ ಯಾರಾದರು ಅನಾರೋಗ್ಯಕ್ಕೆ ತುತ್ತಾದರೂ ಹಳ್ಳಿಯಿಂದ ಆಸ್ಪತ್ರೆಗಳಿಗೆ ಬರಲು ಅವಕಾಶವಿಲ್ಲದಂತಾಗಿದೆ. ಇನ್ನೂ ಆಂಬುಲೆನ್ಸ್‌ಗಳು ಆ ಹಳ್ಳಿಗಳಿಗೆ ಹೋಗುವುದು ಕನಸಿನ ಮಾತು ಎಂಬಂತಾಗಿದೆ. ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳು ಹರಿದಾಡುತ್ತಿವೆ.

ತಿನ್ನಲು ಆಹಾರವೂ ಇಲ್ಲದೆ, ಉಳಿಯಲೂ ಮನೆಯೂ ಇಲ್ಲದೆ ಜನರು ಪರದಾಡುತ್ತಿದ್ದಾರೆ. ವಿದೇಶ ಸುತ್ತಾಡಿ, ದೇಶಕ್ಕೆ ಕೊರೊನಾ ತಂದ ಸರಿವಂತರು ಹಾಯಾಗಿ ತಮ್ಮ ಬಂಗಲೆಗಳಲ್ಲಿ ಮೋಜು ಮಾಡುತ್ತಿದ್ದರೆ, ಕೂಲಿ ಮಾಡಿಕೊಂಡು  ಬದುಕುತಿದ್ದ ಜನರು ಪೊಲೀಸರ ಕೈಯಲ್ಲಿ ಲಾಠಿ ಏಟು ತಿನ್ನುತ್ತ, ಊರು ತಲುಪಲು ಸಾರಿಗೆಯೂ ಇಲ್ಲದೆ ನೂರಾರು ಕಿ.ಮೀಗಳಷ್ಟು ದೂರವನ್ನು ನಡೆದುಕೊಂಡೇ ಸಾಗುತ್ತಿದ್ದಾರೆ. ಇದೆಲ್ಲವೂ ತಿಳಿದಿದ್ದೂ ಸರ್ಕಾರಗಳು ಕಣ್ಣು-ಕಿವಿ ಮುಚ್ಚಿಕೊಂಡು ಕುಳಿತಿರುವುದು ವಿಪರ್ಯಾಸ.

 

– ಸೋಮಶೇಖರ್‌ ಚಲ್ಯ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights