Lockdown effect: ಊರು ತಲುಪಲು ಬಸ್‌ ಇಲ್ಲದೆ ನಡೆದು ಹೊರಟಿದ್ದ ವ್ಯಕ್ತಿ ಸಾವು

ದೇಶದಲ್ಲಿ ಕೊರೋನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್’ಡೌನ್ ಘೋಷಣೆ ಮಾಡಲಾಗಿದ್ದು, ಪರಿಣಾಮ ಸಂಚಾರ ವ್ಯವಸ್ಥೆಗಳಿಲ್ಲದೆ ಕಂಗಾಲಾಗಿರುವ ವಲಸಿಗರು ಮನೆಗಳಿಗೆ ಕಾಲ್ನಡಿಗೆ ಮೂಲಕ ತೆರಳಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸುಮಾರು 200 ಕಿ,ಮೀವರೆಗೂ ಸುದೀರ್ಘವಾಗಿ ನಡೆದ ಪರಿಣಾಮ ವಲಸಿಗರೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

ರಣವೀರ್ ಸಿಂಗ್ (39) ಮೃತಪಟ್ಟ ವ್ಯಕ್ತಿ ಎಂದು ತಿಳಿದುಬಂದಿದೆ. ಮೃತ ವ್ಯಕ್ತಿ ಮಧ್ಯಪ್ರದೇಶದ ಮುರೈನಾ ಜಿಲ್ಲೆಯ ಅಂಬಾ ಗ್ರಾಮ ಮೂಲದವರಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ದೆಹಲಿಯಲ್ಲಿ ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ಮನೆಗೆ ತೆರಳಲು ನಿರ್ಧರಿಸಿದ್ದ ಸಿಂಗ್ ಅವರು, ಸಂಚಾರ ವ್ಯವಸ್ಥೆಗಳಿಲ್ಲದ ಕಾರಣ ಕಾಲ್ನಡಿಗೆ ಮೂಲಕ ಮನೆಗೆ ತೆರಳಲು ನಿರ್ಧರಿಸಿದ್ದರು.

ಕಾಲ್ನಡಿಗೆಯಲ್ಲಿ ತೆರಲುವ ವೇಳೆ ಮಾರ್ಗದ ಮಧ್ಯೆ ಆಹಾರ ಹಾಗೂ ನೀರಿನ ಕೊರತೆಗಳೂ ಎದುರಾಗಿದೆ. ಸುಮಾರು 200 ಕಿ.ಮೀ ಸುದೀರ್ಘವಾಗಿ ನಡೆದ ಬಳಿಕ ಸಿಂಗ್ ಅವರ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಈ ವೇಳೆ ಜೊತೆಯಲ್ಲಿ ನಡೆಯುತ್ತಿದ್ದ ಮತ್ತೊಬ್ಬ ವ್ಯಕ್ತಿ, ವಿಚಾರಿಸಿದಾಗ ಎದೆನೋವಾಗುತ್ತಿರುವುದಾಗಿ ತಿಳಿಸಿದ್ದಾರೆ. ಬಳಿಕ ವಿಶ್ರಾಂತಿ ಪಡೆಯುವಂತೆ ತಿಳಿಸಿ, ಟೀ ನೀಡಿದ್ದಾರೆ. ಇದಾದ ಕೆಲವೇ ನಿಮಿಷಗಳಲ್ಲಿ ಸಿಂಗ್ ಅವರು ಸಾವನ್ನಪ್ಪಿದ್ದಾರೆ.

ಇದೀಗ ವ್ಯಕ್ತಿಯ ಮೃತದೇಹವನ್ನು ಅಧಿಕಾರಿಗಳು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಲು ಆರಂಭಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights