FACT CHECK | 2023 ವಿಧಾನ ಸಭಾ ಚುನಾವಣೆ ಸಂದರ್ಭದ ಘಟನೆಯನ್ನು 2024ರ ಲೋಕಸಭಾ ಚುನಾವಣೆಯದ್ದು ಎಂದು ತಪ್ಪಾಗಿ ಹಂಚಿಕೆ

ಮತದಾನ ಮಾಡಲು ಮತಗಟ್ಟೆಗೆ ಬಂದ ವ್ಯಕ್ತಿಯೊಬ್ಬರು ಇವಿಎಂ ಕಂಟ್ರೋಲ್ ಯೂನಿಟ್ ಅನ್ನು ಏಕಾಏಕಿ ನೆಲಕ್ಕೆ ಬಡಿದಿರುವ ವಿಡಿಯೋವೊಂದು ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದ ದಿನವಾದ ಏಪ್ರಿಲ್ 26, 2024ರಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದೆ.

https://twitter.com/MeghUpdates/status/1783730129828782428

ಬಲಪಂಥೀಯ ಎಕ್ಸ್ ಖಾತೆ Megh Updates(@MeghUpdates)ವಿಡಿಯೋ ಹಂಚಿಕೊಂಡಿದ್ದು, “ಚುನಾವಣಾಧಿಕಾರಿಗಳು, ಭದ್ರತಾ ಸಿಬ್ಬಂದಿ ಎಚ್ಚರವಾಗಿರಬೇಕು ಮತ್ತು ಜಾಗರೂಕರಾಗಿರಬೇಕು. ಸೋಲಿನ ಭಯದಿಂದ ಅವರು ಏನು ಬೇಕಾದರೂ ಮಾಡಬಹುದು” ಎಂದು ಕರ್ನಾಕದಲ್ಲಿ ನಡೆದಿದೆ ಎಂದು ಪ್ರತಿಪಾದಿಸಿ ಬರೆದುಕೊಳ್ಳಲಾಗಿದೆ.

ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಎರಡನೇ ಹಂತದಲ್ಲಿ ಕರ್ನಾಟಕ ಸೇರಿ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 88 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್‌ 26ರಂದು ಮತದಾನ ನಡೆದಿದೆ. ಈ ವೇಳೆ ಮತದಾರರೊಬ್ಬರು ಇವಿಎಂ ಅನ್ನು ನಾಶಪಡಿಸಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 12 ಮೇ 2023ರಲ್ಲಿ ಸಿಎನ್‌ಎನ್‌ ನ್ಯೂಸ್‌18ನಲ್ಲಿ ಅಪ್‌ಲೋಡ್‌ ಮಾಡಿದ ವಿಡಿಯೋವೊಂದು ಲಭ್ಯವಾಗಿದೆ. ವಿಡಿಯೋ ವರದಿಯ ಪ್ರಕಾರ 2023ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಮೈಸೂರಿನಲ್ಲಿ ಮತದಾರನೊಬ್ಬ ಇವಿಎಂ ಅನ್ನು ನಾಶಪಡಿಸಿದ್ದಾನೆ ಎಂದು ಶೀರ್ಷಿಕೆಯೊಂದಿಗೆ ಪ್ರಕಟಿಸಲಾಗಿದೆ..

 

ಮೇ 10ರಂದು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾನದ ವೇಳೆ ವ್ಯಕ್ತಯೊಬ್ಬ ಮತದಾನ ಮಾಡಲು ಬಂದು ಇವಿಎಂ ನಿಯಂತ್ರಣ ಘಟಕವನ್ನು ಹಾನಿಗೊಳಿಸಿದ್ದ ಎಂದು  ಘಟನೆಯ ಬಗ್ಗೆ ಮೇ 2023ರ ಹಲವು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಮೇ 12, 2023ರಂದು ದಿ ಹಿಂದೂ ಈ ಘಟನೆಯ ಕುರಿತು ವರದಿ ಮಾಡಿದೆ. ಸುದ್ದಿಯಲ್ಲಿ “ಮೇ, 10ರಂದು ಮೈಸೂರಿನಲ್ಲಿ ಮತದಾನ ಮಾಡಲು ಬಂದ ವ್ಯಕ್ತಿಯೊಬ್ಬರು ಇವಿಎಂ ಕಂಟ್ರೋಲ್ ಯೂನಿಟ್‌ಗೆ ಹಾನಿ ಮಾಡಿದ್ದಾರೆ. ಪೊಲೀಸರು ಆ ವ್ಯಕ್ತಿಯನ್ನು ಮಾನಸಿಕ ಅಸ್ವಸ್ಥನೆಂದು ಶಂಕಿಸಿದ್ದಾರೆ. ಮತದಾನ ಮಾಡಲು ಬಂದ ವ್ಯಕ್ತಿಯು ಇವಿಎಂ ಕಂಟ್ರೋಲ್ ಯೂನಿಟ್‌ಗೆ ಹಾನಿ ಮಾಡಿದ ವಿಡಿಯೋ  ವೈರಲ್ ಆಗಿದೆ” ಎಂದು ಹೇಳಲಾಗಿತ್ತು.

ಇವಿಎಂ ಕಂಟ್ರೋಲ್ ಯೂನಿಟ್‌ಗೆ ಹಾನಿ ಮಾಡಿದ ವ್ಯಕ್ತಿಯನ್ನು 48 ವರ್ಷದ ಶಿವಮೂರ್ತಿ ಎಂದು ಗುರುತಿಸಲಾಗಿದೆ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೂಟಗಳ್ಳಿ ಮತಗಟ್ಟೆಯಲ್ಲಿ ಘಟನೆ ನಡೆದಿದೆ ಎಂದು ತಿಳಿಸಲಾಗಿತ್ತು.

ಕೂಡಲೇ ಆತನನ್ನು ವಶಕ್ಕೆ ಪಡೆಯಲಾಗಿತ್ತು. ಈ ಬಗ್ಗೆ ಮೈಸೂರಿನ ಕಾನೂನು ಮತ್ತು ಸುವ್ಯವಸ್ಥೆಯ ಡಿಎಸ್‌ಪಿ ಮುತ್ತುರಾಜ್‌ ಅವರು, ವ್ಯಕ್ತಿಯು ಮಾನಸಿಕ ಅಸ್ವಸ್ಥ ಎಂದು ಶಂಕಿಸಲಾಗಿದ್ದು, ಐಪಿಸಿ ಸೆಕ್ಷನ್ 84 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹೇಳಿದ್ದರು.

ಒಟ್ಟಾರೆಯಾಗಿ ಹೇಳುವುದಾದರೆ, ಲೋಕಸಭೆ ಚುನಾವಣೆಯ ಮತದಾನದ ದಿನ ಎಕ್ಸ್‌ ಖಾತೆಗಳಲ್ಲಿ ಹಂಚಿಕೊಂಡ ವಿಡಿಯೋ 2023ರ ವಿಧಾನಸಭೇಯ ಚುನಾವಣೆ ಸಂದರ್ಭದ್ದಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | BJP ಆಡಳಿತದಲ್ಲಿ ಗುಂಡಿ ಬಿದ್ದಿದ್ದ ರಸ್ತೆಗಳನ್ನು ಕಾಂಗ್ರೆಸ್‌ ಅವಧಿಯದ್ದು ಎಂದು ಸುಳ್ಳು ಪೋಸ್ಟ್‌ ಹಂಚಿಕೊಂಡ ಅಸ್ಸಾಂ ಮುಖ್ಯಮಂತ್ರಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights