FACT CHECK | ದಾವಣಗೆರೆಯಲ್ಲಿ ಸ್ಮೋಕ್ ಬಿಸ್ಕೆಟ್ ತಿಂದ ಮಗು ಸಾವನಪ್ಪಿದೆ ಎಂಬುದು ಸುಳ್ಳು

ಪುಟ್ಟ ಮಕ್ಕಳ ಆಹಾರ ಮತ್ತು ಆರೋಗದ ಕಡೆ ಪೋಷಕರು ಹೆಚ್ಚಿನ ಗಮನ ನೀಡಬೇಕು, ಒಂದು ಸಣ್ಣ ನಿರ್ಲಕ್ಷ್ಯ ನಿಮ್ಮ ಮಗುವಿನ ಜೀವಕ್ಕೆ ಕುತ್ತು ತರಬಹುದು. ಟಿ ವಿ ಜಾಹಿರಾತುಗಳಲ್ಲಿ ತೋರಿಸುವ ಬಣ್ಣ ಲೇಪಿತ ತಿನಿಸುಗಳು, ಜಂಕ್ ಫುಡ್‌ಗಳು ಮಕ್ಕಳನ್ನು ಬೇಗನೆ ಆಕರ್ಷಿಸುತ್ತವೆ. ಮನೆಯಿಂದ ಹೊರಗೆ ಹೋಗುವುದೇ ತಡ ರಸ್ತೆ ಬದಿಯಲ್ಲಿ, ಹೊಟೆಲ್‌ಗಳಲ್ಲಿ ಅಥವಾ ಎಕ್ಸಿಬಿಷನ್‌ಗಳಿಗೆ ಹೋದಾಗ ಮಕ್ಕಳು ಐಸ್‌ ಕ್ರೀಮ್,ಬಿಸ್ಕೆಟ್, ಚಾಕೊಲೇಟ್,  ಕರಿದ ಪದಾರ್ಥಗಳನ್ನೆ ಅಪೇಕ್ಷಿಸುತ್ತವೆ. ಆದರೆ ಅವುಗಳ ಬಗ್ಗೆ ಪೋಷಕರು ಎಚ್ಚರಿಕೆಯಿಂದಿರಬೇಕು.

ಇದಕ್ಕೆ ಉದಾಹರಣೆ ಎಂಬಂತೆ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಡ್ರೈ ಐಸ್‌ ಕ್ರೀಂ ತಿಂದ ಮಗುವೊಂದು ಅಸ್ವಸ್ಥಗೊಂಡು ಸಾವನಪ್ಪಿದೆ. ಈ ಘಟನೆ ಆಂದ್ರ ಅಥವಾ ತೆಲಂಗಾಣದಲ್ಲಿ ನಡೆದಿರಬಹುದು ಪೋಷಕರು ಅನ್ಯಾಯವಾಗಿ ಮಗುವನ್ನು ಕಳೆದುಕೊಂಡರು ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ವಿಡಿಯೋವೊಂದು ವೈರಲ್ ಆಗಿದ್ದು ಈ ಘಟನೆ ಎಲ್ಲಿ ನಡೆದಿದೆ ಎಂದು ತಿಳಿದಿಲ್ಲ, ಯಾರಿಗಾದರೂ ಇದರ ಬಗ್ಗೆ ಸುಳಿವು ಸಿಕ್ಕರೆ ತಿಳಿಸಿ. ಮಗುವಿಗೆ ಏನಾಯಿತು ಎಂದು ಆತಂಕವಾಗಿದೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.  ವೈರಲ್ ವಿಡಿಯೋದಲ್ಲಿ ಮಗುವೊಂದು ಆಹಾರ ಸೇವಿಸಿ ಅಸ್ವಸ್ಥಗೊಂಡಿರುವುದನ್ನು ಕಾಣಬಹುದು. ಹಾಗಿದ್ದರೆ ಈ ಘಟನೆಯ ಹಿನ್ನಲೆ ಏನು ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಈ ಘಟನೆ ಕರ್ನಾಟಕದ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ ಎಂದು ಹೇಳುವ ಹಲವು ವರದಿಗಳು ಲಭ್ಯವಾಗಿದೆ.

18 ಏಪ್ರಿಲ್ 2024ರಂದು  ಫಸ್ಟ್‌ ನ್ಯೂಸ್‌ ಕನ್ನಡ ಮಾಡಿರುವ ವರದಿಯ ಪ್ರಕಾರ ಸ್ಮೋಕ್ ಬಿಸ್ಕೆಟ್ ತಿಂದು ಬಾಲಕ ಅಸ್ವಸ್ಥಗೊಂಡ ಘಟನೆ ದಾವಣಗೆರೆ ನಗರದ ಪಿಬಿ ರಸ್ತೆ ಬಳಿ ನಡೆದಿದೆ ಎಂದು ತಿಳಿಸಿದೆ. ಬರ್ಡ್ಸ್ ಎಕ್ಸ್ಯೂಬ್ಯುಶನ್​ನಲ್ಲಿ ಬಾಲಕ ಸ್ಮೋಕ್​ ಬಿಸ್ಕೆಟ್​ ತಿಂದಿದ್ದಾನೆ. ತಿನ್ನುತ್ತಿದ್ದಂತೆಯೇ ಬಾಲಕ ಪ್ರಜ್ಞೆ ತಪ್ಪಿದ್ದಾನೆ.ಕೂಡಲೇ ಬಾಲಕನನ್ನು ಪೋಷಕರು ಆಸ್ಪತ್ರೆ ಕರೆದುಕೊಂಡುಹೋಗಿ ಚಿಕಿತ್ಸೆ ಕೊಡಿಸಿದ್ದಾರೆ.

ಚಿಕಿತ್ಸೆ ನಂತರ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬಳಿಕ ಸ್ಮೋಕ್ ಬಿಸ್ಕೆಟ್ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಲಾಗಿದ್ದು, ದೂರಿನ ಬಳಿಕ ಅಧಿಕಾರಿಗಳು ಸ್ಮೋಕ್ ಬಿಸ್ಕೆಟ್ ಮಾರಾಟ ಬಂದ್ ಮಾಡಿ ಅವುಗಳನ್ನ ವಶಕ್ಕೆ ಪಡೆದಿದ್ದಾರೆ. ಎಂದು ವರದಿಯಾಗಿದೆ.

ಕನ್ನಡ ದುನಿಯಾ ವರದಿಯ ಪ್ರಕಾರ ದಾವಣಗೆರೆಯ ಪಿ.ಬಿ.ರಸ್ತೆಯಲ್ಲಿ ರೋಬೋಟಿಕ್ ಬರ್ಡ್ಸ್ ಎಕ್ಸಿಬಿಷನ್ ಏರ್ಪಡಿಸಲಾಗಿತ್ತು. ಇಲ್ಲಿ ಬಾಲಕನೊಬ್ಬ ಸ್ಮೋಕ್ ಬಿಸ್ಕೆಟ್ ತಿಂದಿದ್ದಾನೆ. ಬಾಯಿಗೆ ಹೊಗೆ ಹೋಗುತ್ತಿದ್ದಂತೆ ಅಸ್ವಸ್ಥನಾದ ಬಾಲಕ ಪ್ರಜ್ಞೆ ಕಳೆದುಕೊಂಡಿದ್ದಾನೆ. ತಕ್ಷಣ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬಾಲಕನ ಪೋಷಕರು ಸ್ಮೋಕ್ ಬಿಸ್ಕೆಟ್ ಬಗ್ಗೆ ದಾವಣಗೆರೆ ಪಾಲಿಕೆಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅಧಿಕರಿಗಳು ಸ್ಮೋಕ್ ಬಿಸ್ಕೆಟ್ ಮಾರಾಟಕ್ಕೆ ತಡೆಯೊಡ್ಡಿದ್ದಾರೆ. ಸ್ಮೋಕ್ ಬಿಸ್ಕೆಟ್ ನಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಕೆ ಮಾಡಲಾಗುತ್ತದೆ. ಅದು ಏಕಾಏಕಿ ದೇಹದ ಒಳಗೆ ಹೋದಾಗ ಉಸಿರಾಟದ ತೊಂದರೆ ಆಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ

Viral Video; ಸ್ಮೋಕ್ ಬಿಸ್ಕೆಟ್ ತಿನ್ನುತ್ತಿದ್ದಂತೆಯೇ ಬಾಲಕ ಅಸ್ವಸ್ಥ - NAMMAKUDLA NEWS - ನಮ್ಮಕುಡ್ಲ ನ್ಯೂಸ್

ಮತ್ತೊಂದು ನ್ಯೂಸ್‌ ಪೋರ್ಟಲ್ ಘಟನೆಯನ್ನು ವರದಿ ಮಾಡಿದ್ದು, ದಾವಣಗೆರೆ ನಗರದ ಅರುಣ್ ಸರ್ಕಲ್ ಬಳಿಯ ಎಕ್ಸಿಬಿಷನ್ ವೊಂದರಲ್ಲಿ ಸ್ಮೋಕ್ ಬಿಸ್ಕೆಟ್ ತಿಂದು ಬಾಲಕನೊರ್ವ ಅಸ್ವಸ್ಥನಾದ ಘಟನೆ ನಡೆದಿದೆ. ದಾವಣಗೆರೆಯ ಅರುಣಾ ಸರ್ಕಲ್ ಬಳಿ ಪ್ರತಿ‌ ಬೇಸಿಗೆ ಕಾಲದಲ್ಲಿ ಮಕ್ಕಳ ಮನರಂಜನೆಗಾಗಿ ಖಾಸಗಿ ಕಂಪನಿಯಿಂದ ಎಕ್ಸಿಬಿಷನ್ ನಡೆಯುತ್ತದೆ. ಈ ಎಕ್ಸಿಬಿಷನ್​ನಲ್ಲಿ ಸ್ಮೋಕ್ ಬಿಸ್ಕೆಟ್ ದೊಡ್ಡವರಿಂದ ಚಿಕ್ಕ‌ ಮಕ್ಕಳವರೆಗೂ ಗಮನ ಸೆಳೆದಿತ್ತು. ಒಂದು ಕಪ್‌ನಲ್ಲಿ 80 ರೂಪಾಯಿಗೆ ಐದು ಚಿಕ್ಕ‌ ಚಿಕ್ಕ ಬಿಸ್ಕೆಟ್​ನ್ನು ಕೊಡಲಾಗುತ್ತದೆ. ಹೀಗೆ ಕೊಟ್ಟ ಬಿಸ್ಕೆಟ್​ನ್ನು ಮಗುವೊಂದು ಒಂದೇ ಸಲ ಬಾಯಿಗೆ ಹಾಕಿಕೊಂಡು ಉಗಿಯಲು ಆಗದೇ ನುಂಗಲು ಆಗದೇ ಕಷ್ಟಪಟ್ಟು ಅಸ್ವಸ್ಥವಾಗಿದೆ.

ಇನ್ನು ಅಸ್ವಸ್ಥಗೊಂಡ ಮಗುವನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಗುವಿಗೆ ಚಿಕಿತ್ಸೆ ನೀಡಿದ ನಂತರ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಈ ಘಟನೆಯಿಂದ ಆಕ್ರೋಶಗೊಂಡು ಪೋಷಕರು, ಎಕ್ಸಿಬಿಷನ್​ನಲ್ಲಿ ಹಾಕಲಾಗಿದ್ದ ಸ್ಟಾಲ್ ನ್ನು ಕಿತ್ತುಬಿಸಾಕಿದ್ದಾರೆ. ರಾಜ್ಯದ ಯಾವುದೇ ಮೂಲೆಯಲ್ಲಿ ಇಂತಹ ಸ್ಮೋಕ್ ಬಿಸ್ಕೆಟ್​ನ್ನು ಮಕ್ಕಳಿಗೆ ಕೊಡಬೇಡಿ ಎಂದು ಎಚ್ಚರಿಸುವ ಆಡಿಯೋ ವೈರಲ್ ಆಗಿದೆ. ಇನ್ನು ಘಟನೆ ಕುರಿತು ದಾವಣಗೆರೆ ಮಹಾನಗರ ಪಾಲಿಕೆಗೆ ಪೋಷಕರು ದೂರು ನೀಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಇಂಡಿಯಾ ಟುಡೇ ಬಾಲಕನ ತಂದೆ ಆರ್‌ಟಿ ಸತ್ಯನಾರಾಯಣ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದಿದೆ. ಈ ಘಟನೆ ಏಪ್ರಿಲ್ 14 ರಂದು ನಡೆದಿದೆ ಮತ್ತು ತನ್ನ ಮಗ ಚೇತರಿಸಿಕೊಂಡಿದ್ದಾನೆ ಎಂದು ದೃಢಪಡಿಸಿದರು. ಅಲ್ಲದೆ, ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಇಂಡಿಯಾ ಟುಡೇಗೆ ಇದನ್ನು ಖಚಿತಪಡಿಸಿದ್ದಾರೆ. ಆದರೆ  ಮಗುವಿನ ಪೋಷಕರು ಯಾವುದೇ ದೂರು ನೀಡಲು ಮುಂದಾಗಿಲ್ಲ, ಹಾಗಾಗಿ ಯಾರ ವಿರುದ್ದವು ಪ್ರಕರಣ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ . ಆದರೂ ಪೊಲೀಸರು ಘಟನಾ ಸ್ಥಳಕ್ಕೆ ಬೇಟಿ ನೀಡಿ ಸ್ಟಾಲ್‌ಅನ್ನು ಮುಚ್ಚಿಸಿ, ಆಹಾರ ಭದ್ರತಾ ಇಲಾಖೆಗೆ ಮಾಹಿತಿ ನೀಡಿದರು ಎಂದು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ದಾವಣಗೆರೆಯಲ್ಲಿ ಸ್ಮೋಕ್ ಬಿಸ್ಕಟ್‌ ತಿಂದ ಮಗು ಅಸ್ವಸ್ಥಗೊಂಡಿದ್ದು ನಿಜ, ಆದರೆ ಮಗು ಸಾವನ್ನಪ್ಪಿದೆ ಎಂಬುದು ಸುಳ್ಳು.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | 2023 ವಿಧಾನ ಸಭಾ ಚುನಾವಣೆ ಸಂದರ್ಭದ ಘಟನೆಯನ್ನು 2024ರ ಲೋಕಸಭಾ ಚುನಾವಣೆಯದ್ದು ಎಂದು ತಪ್ಪಾಗಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights