ಕೊರೋನಾ ವಿರುದ್ಧ ಹೋರಾಟದಲ್ಲಿ ಹಗಲಿರಳು ಶ್ರಮಿಸುವ ಪೊಲೀಸರಿಗೆ ಹ್ಯಾಟ್ಸಾಫ್…
ಕೊರೋನಾ ವಿರುದ್ಧ ಸಮರ ಜೋರಾಗಿದೆ. ಲಾಕ್ಡೌನ್ ಹೆಸರಲ್ಲಿ ದೇಶವೇ ಸ್ತಬ್ದವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರಸ್ತೆಯಲ್ಲಿ ಸಂಯಮ ತೋರಿ ಅವಿರತ ಶ್ರಮ ಪಡುತ್ತಿರುವ ಪೊಲೀಸರನ್ನು ನೆನೆಯಲೇಬೇಕಿದೆ.

ಆರೋಗ್ಯ ಕಾರ್ಯಕರ್ತರು, ಅಗತ್ಯ ಸೇವಾದಾರರು ಹೇಗೆ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೋ ಅದೇ ರೀತಿ ಸಾರ್ವಜನಿಕ ಶಾಂತಿ ಕದಡದ ರೀತಿಯಲ್ಲಿ ಲಾಕ್ಡೌನ್ ನಿರ್ವಹಣೆಯಲ್ಲಿ ಪೊಲೀಸರ ಪಾತ್ರವೂ ಹಿರಿದಾಗಿದೆ. ಅಲ್ಲೊಂದು ಇಲ್ಲೊಂದು ಸಂಯಮ ಮೀರಿದ ವರ್ತನೆಗಳು ದಾಖಲಾಗಿದ್ದರೂ ಒಟ್ಟಾರೆಯಾಗಿ ಪೊಲೀಸರು ತೋರುತ್ತಿರುವ ಸಾಮಾಜಿಕ ಕಾಳಜಿ ಪ್ರಶಂಸೆಗೆ ಪಾತ್ರವಾಗಿದೆ.


ಮನೆಯಿಂದ ಹೊರಗೆ ಕಾಲಿಡುವಾಗ ನಮಗೂ ಅಂಜಿಕೆ ಇರುತ್ತದೆ. ಮನೆಯವರ ಕಂಗಳಲ್ಲಿನ ಆತಂಕದ ಛಾಯೆ ಮನಸ್ಸನ್ನು ಹಿಂಡುತ್ತದೆ. ಆದರೆ ಸಮಾಜದ ಸ್ವಾಸ್ಥ್ಯದ ಕರೆಗೆ ಓಗೊಟ್ಟು ಕರ್ತವ್ಯ ನಿರ್ವಹಿಸುತ್ತೇವೆ ಎಂದು ಹೆಸರು ಹೇಳಲಿಚ್ಛಿಸದ ಪೊಲಿಸ್ ಅಧಿಕಾರಿ ಹೇಳುತ್ತಾರೆ.
ಲಾಕ್ಡೌನ್ ಕೇವಲ ಕಾನೂನಿನ ಸಮಸ್ಯೆಯಾಗಿರುವುದೇ ಅದರ ಹಿಂದಿನ ಉದ್ದೇಶ ಸಾಮಾಜಿಕವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಕೇವಲ ಶಿಸ್ತಿನ ಸಿಪಾಯಿಗಳಾಗಿರದೇ ಸಾರ್ವಜನಿಕರ ಹಿತರಕ್ಷಕರೂ ಆಗಬೇಕಿದೆ.
ಆಕ್ರೋಶಿತ ಜನರಿಂದ ಕೆಲವೊಮ್ಮೆ ಇರಿಸುಮುರಿಸು ಅನುಭವಿಸಿದರೂ ಪೊಲೀಸರು ತಾಳ್ಮೆ ಕಳೆದುಕೊಳ್ಳದೇ ವರ್ತಿಸುವುದರ ಜೊತೆಗೆ ಹಸಿದ ನಿರ್ಗತಿಕರಿಗೆ ತುತ್ತು ಕಲ್ಪಿಸುವ ವ್ಯವಸ್ಥೆಯನ್ನೂ ಮಾಡಿದ್ದಾರೆ.


ಲಾಕ್ಡೌನಿನ ಭಾರ ಜನರ ತಲೆ ಏರಿರುವ ಸಂದರ್ಭದಲ್ಲಿ ಪೊಲೀಸರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಈ ಭಾರ ಕೋಪಕ್ಕೆ ತಿರುಗದಂತೆ ಸಂಯಮ ತೋರುವ ಅಗತ್ಯವಿದ್ದು ಆ ಕಾರ್ಯದಲ್ಲಿ ಅವರು ನಿರತರಾಗಿದ್ದಾರೆ.
ನಮ್ಮ ಸಹೋದ್ಯೋಗಿಗಳು ಅಪಾರ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ತೋರುತ್ತಿರುವ ಸೈರಣೆ ಮೆಚ್ಚಬೇಕಾದ್ದಾಗಿದೆ ಎಂದು ಗೃಹ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

