FACT CHECK | ಮೃತ ನೇಹ ಹಿರೇಮಠ್ ಮನೆಗೆ ಒಬ್ಬೆ ಒಬ್ಬ ಕಾಂಗ್ರೆಸ್‌ ನಾಯಕರು ಭೇಟಿ ನೀಡಿ ಸಾಂತ್ವನ ಹೇಳಿಲ್ಲ ಎಂಬುದು ಸುಳ್ಳು

“ಜೆ.ಪಿ ನಡ್ಡಾ ಅವರ ಬಳಿಕ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ನೇಹಾ ಮನೆಗೆ ಭೇಟಿ ನೀಡಿ, ಕಾಂಗ್ರೆಸ್ ಕೌನ್ಸಿಲರ್ ಆಗಿರುವ ನೇಹಾಳ ತಂದೆ ನಿರಂಜನ್ ಹಿರೇಮಠ್ ಅವರನ್ನು ಭೇಟಿಯಾಗಿದ್ದಾರೆ.ಆದರೆ, ಕಾಂಗ್ರೆ‌ಸ್‌ನ ಒಬ್ಬನೇ ಒಬ್ಬ ವ್ಯಕ್ತಿ ನೇಹಾ ಮನೆಗೆ ಭೇಟಿ ನೀಡಿಲ್ಲ. ಪ್ರಿಯಾಂಕಾ ಗಾಂಧಿ ರಾಜಕೀಯ ರ್‍ಯಾಲಿಗಾಗಿ ಕರ್ನಾಟಕಕ್ಕೆ ಬಂದಿದ್ದರು. ಆದರೆ ತಮ್ಮದೇ ಪಕ್ಷದ ನಾಯಕರಾಗಿರುವ ದುಃಖತಪ್ತ ತಂದೆಯನ್ನು ಭೇಟಿ ಮಾಡಲು ಅವರು ಮುಂದಾಗಿಲ್ಲ. ಮುಸ್ಲಿಂ ಓಲೈಕೆಗಾಗಿ ಕಾಂಗ್ರೆಸ್ ಅತ್ಯಂತ ಕೆಳಮಟ್ಟಕ್ಕೆ ಇಳಿದಿದೆ.” ಎಂದು ಅರೋಪಿಸಿದ ಸಂದೇಶವೊಂದನ್ನು ಅನೇಕರು ಹಂಚಿಕೊಂಡು ಕಾಂಗ್ರೆಸ್‌ ನಾಯಕರನ್ನು ಟೀಕಿಸುತ್ತಿದ್ದಾರೆ. ಅವುಗಳನ್ನು ನೀವು ಇಲ್ಲಿಇಲ್ಲಿ ಮತ್ತು ಇಲ್ಲಿ ನೋಡಬಹುದು.

ಹುಬ್ಬಳ್ಳಿಯ ನೇಹಾ ಹಿರೇಮಠ್ ಎಂಬ ವಿದ್ಯಾರ್ಥಿನಿಯನ್ನು ಆತನ ಗೆಳೆಯ ಫಯಾಜ್ ಪ್ರೀತಿಗೆ ಒಪ್ಪಲಿಲ್ಲ ಎಂಬ ಕಾರಣಕ್ಕಾಗಿ ಏಪ್ರಿಲ್ 18, 2023ರಂದು ಕಾಲೇಜು ಆವರಣದಲ್ಲಿಯೇ ಹನ್ನೊಂದಕ್ಕು ಹೆಚ್ಚು ಬಾರಿ ಇರಿದು ಬರ್ಭರವಾಗಿ ಹತ್ಯೆ ಮಾಡಿದ ಘಟನೆ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ರಾಜ್ಯವೇ ಈ ಘಟನೆಯನ್ನು ಖಂಡಿಸಿ ಕೊಲೆಗಾರನಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಒತ್ತಾಯಿಸುತ್ತಿದೆ. ಆದರೆ ಕೊಲೆ ಮಾಡಿದ ವ್ಯಕ್ತಿ ಮುಸ್ಲಿ ಆದ ಕಾರಣಕ್ಕಾಗಿ ಬಿಜೆಪಿ ನಾಯಕರು ಇದನ್ನು ಲವ್ ಜಿಹಾದ್ ಎಂದು ಬಿಂಬಿಸಲು ಪ್ರಯತ್ನಸಿದರು ಆದರೆ ಆಕೆ ಮತ್ತು ಫಯಾಜ್ ಪ್ರೀತಿಸುತ್ತಿದ್ದರು ಎಂದು ತಿಳಿದ ಮೇಲೆ ಅದನ್ನು ಕೈ ಬಿಟ್ಟಿದ್ದಾರೆ. ಜೊತೆಗೆ ಈ ಘಟನೆಯನ್ನು ರಾಜಕೀಯವಾಗಿ ಬಳಸಿಕೊಳ್ಳಲು ಪ್ರಯತ್ನಿಸಿ ಅನೇಕ ಬಿಜೆಪಿ ನಾಯಕರು ನೇಹಾ ಅವರ ಮನೆಗೆ ಭೇಟಿ ನೀಡಿ ಆಕೆಯ ತಂದೆ ಕಾಂಗ್ರೆಸ್‌ ಕಾರ್ಪೊರೇಟರ್ ನಿರಂಜನ್ ಹಿರೇಮಠ್ ಅವರನ್ನು ಭೇಟಿಯಾಗಿ ಸಾಂತ್ವಾನ ಹೇಳಿದ್ದಾರೆ ಮತ್ತು ರಾಜ್ಯ ಸರ್ಕಾರ ಇದಕ್ಕೆ ನೇರ ಹೊಣೆ ಎಂದು ಟೀಕಿಸಿದ್ದಾರೆ.

ಕಾಲೇಜಿನ ಆವರಣದಲ್ಲಿ ಹಾಡುಹಗಲೇ ತನ್ನ ಗೆಳೆಯ ಫಯಾಜ್‌ನಿಂದ ಹತ್ಯೆಯಾದ ನೇಹಾ ಹಿರೇಮಠ್ ಮನೆಗೆ ಕಾಂಗ್ರೆಸ್‌ ನಾಯಕರು ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ ಎಂದು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಪರಿಶೀಲನೆ ನಡೆಸಿ, ವೈರಲ್ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ಸುಳ್ಳು ಎಂದು ನಿರೂಪಿಸಿದೆ.

ಫ್ಯಾಕ್ಟ್‌ಚೆಕ್‌ :

ನೇಹಾ ಹಿರೇಮಠ್ ಹತ್ಯೆಯ ಬಳಿಕ ಆಕೆಯ ಮನೆಗೆ ಸಿಎಂ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಸಚಿವರಾದ ಹೆಚ್‌.ಕೆ ಪಾಟೀಲ್, ಲಕ್ಷೀ ಹೆಬ್ಬಾಳ್ಕರ್ ಸೇರಿದಂತೆ ಅನೇಕರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಸಚಿವ ಸಂತೋಷ್ ಲಾಡ್ ಅವರು ನೇಹಾ ಹತ್ಯೆಯಾದ ಮರುದಿನ ಏಪ್ರಿಲ್ 18ರಂದು ಕಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿ ಕುಟಂಬಸ್ಥರಿಗೆ ಸಮಾಧಾನ ಹೇಳಿದ್ದರು.

ನೇಹಾಳ ಮೃತದೇಹವಿದ್ದ ಕಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಸಚಿವ ಸಂತೋಷ್ ಲಾಡ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು “ನೇಹಾಳ ಹತ್ಯೆಯಂತಹ ಪ್ರಕರಣಗಳಲ್ಲಿ ಅಪರಾಧಿಯನ್ನು ಎನ್‌ಕೌಂಟರ್ ಮಾಡುವಂತಹ ಕಾನೂನು ತರಬೇಕು” ಎಂದು ಹೇಳಿದ್ದರು.

ಏಪ್ರಿಲ್ 20ರಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷೀ ಹೆಬ್ಬಾಳ್ಕರ್ ಅವರು ನೇಹಾ ಮನೆಗೆ ಭೇಟಿ ಕೊಟ್ಟು ಪೋಷಕರಿಗೆ ಸಾಂತ್ವನ ಹೇಳಿದ್ದರು.

ಏಪ್ರಿಲ್ 23ರಂದು ಸಚಿವ ಹೆಚ್‌.ಕೆ ಪಾಟೀಲ್ ಅವರು ಭೇಟಿ ನೀಡಿ ತಂದೆ-ತಾಯಿಗೆ ಸಾಂತ್ವನ ಹೇಳಿದ್ದರು.

ಏಪ್ರಿಲ್ 24ರಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ನೇಹಾ ಮನೆಗೆ ಭೇಟಿ ಕೊಟ್ಟು ಪೋಷಕರಿಗೆ ಸಾಂತ್ವನ ಹೇಳಿದ್ದರು.

ಏಪ್ರಿಲ್ 25ರಂದು ಸಿಎಂ ಸಿದ್ದರಾಮಯ್ಯ ಅವರು ನೇಹಾ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, “ನೇಹಾ ಹಿರೇಮಠ್ ಕೊಲೆ ಅತ್ಯಂತ ದುರದೃಷ್ಟಕರ. ತ್ವರಿತ ವಿಚಾರಣೆಗಾಗಿ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಜೊತೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಿ, ಪ್ರತ್ಯೇಕ ವಿಚಾರಣೆ ಮಾಡಿ ಅಪರಾಧಿಗೆ ಕಠಿಣ ಶಿಕ್ಷೆ ಕೊಡಿಸಲು ಸರ್ಕಾರ ಬದ್ದವಾಗಿದೆ” ಎಂದಿದ್ದರು.

ಇದಿಷ್ಟೇ ಅಲ್ಲದೆ, ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆನಂದ್ ಅಸೂಟಿ, ಹುಬ್ಬಳ್ಳಿ-ಧಾರವಾಡ ಜಿಲ್ಲಾ ಕಾಂಗ್ರೆಸ್ ಮುಖಂಡರು ಸೇರಿದಂತೆ ಅನೇಕರು ನೇಹಾ ಹಿರೇಮಠ್ ಮನೆಗೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ. ಎಂದು ಕನ್ನಡ ಫ್ಯಾಕ್ಟ್‌ಚೆಕ್ ತಂಡ ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ರಾಜ್ಯ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದೆ. ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸುವುದಾಗಿ ಹೇಳಿದೆ. ಹಾಗಾಗಿ, ಯಾವುದೇ ಕಾಂಗ್ರೆಸ್ ನಾಯಕರು ನೇಹಾ ಹಿರೇಮಠ್ ಮನೆಗೆ ಭೇಟಿ ನೀಡಿಲ್ಲ ಎಂಬುದು ಸಂಪೂರ್ಣ ಸುಳ್ಳು.

ಕೃಪೆ : ಕನ್ನಡ ಫ್ಯಾಕ್ಟ್‌ಚೆಕ್  

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ :  FACT CHECK | ದಾವಣಗೆರೆಯಲ್ಲಿ ಸ್ಮೋಕ್ ಬಿಸ್ಕೆಟ್ ತಿಂದ ಮಗು ಸಾವನಪ್ಪಿದೆ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights