ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸಿದರೆ ವಿದ್ಯುತ್‌, ನೀರು ಬಂದ್‌!

ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಕುರಿತು ಖಾಸಗಿ ಆಸ್ಪತ್ರೆಗಳ ಮಾಲೀಕರು, ವ್ಯವಸ್ಥಾಪಕರೊಂದಿಗೆ ಸರ್ಕಾರ ಇಂದು ಸಭೆ ನಡೆಸಿದೆ. ಒಂದು ವೇಳೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ಹಿಂದೇಟು ಹಾಕಿದರೆ ಅಂತಹ ಆಸ್ಪತ್ರೆಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ಸಿಎಂ ಬಿಎಸ್​ ಯಡಿಯೂರಪ್ಪ ತಿಳಿಸಿದ್ದಾರೆ.

ಕೊರೊನಾ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸಿದರೆ,  ಸರ್ಕಾರ ಕೇಳಿದಷ್ಟು ಹಾಸಿಗೆ ಒದಗಿಸದಿದ್ದರೆ, ಸರ್ಕಾರದ ಆದೇಶಕ್ಕೆ‌ ಕಿಮ್ಮತ್ತು ಕೊಡದಿದ್ದರೆ ಅಂತಹ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಚಿಂತಿಸಿದೆ. ಇದರ ಭಾಗವಾಗಿ, ಮೊದಲ ಹಂತವಾಗಿ ವಿದ್ಯುತ್, ನೀರು, ಮೂಲಭೂತ ಸೌಕರ್ಯ ಬಂದ್ ಮಾಡಲು ಯೋಚಿಸಿದೆ.  ಎಲ್ಲಾ ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕೆ ಡಿಸಿ ಮೂಲಕ ಕಾನೂನಿನ ಅಸ್ತ್ರ ಬಳಸಿಕೊಳ್ಳಲು ಮೌಖಿಕ ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ಬೆಸ್ಕಾಂ, ಬೆಂಗಳೂರು ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ‌ಮಂಡಳಿ ಅಧಿಕಾರಿಗಳಿಂದ ಅನೌಪಚಾರಿಕೆ ಸಭೆ ನಡೆಸಲಾಗಿದೆ. ಖಾಸಗಿ ಆಸ್ಪತ್ರೆ ಯವರು ಹಾಸಿಗೆ ಕೊಡಲು ನಿರಾಕರಿಸಿದರೆ ಮೊದಲ ಹಂತದಲ್ಲಿ ವಿದ್ಯುತ್ , ನೀರು ಬಂದ್ ಮಾಡಿ. ಇಷ್ಟಕ್ಕೂ ಜಗ್ಗದಿದ್ದರೆ ಖಾಸಗಿ ಆಸ್ಪತ್ರೆಗಳು ಸರ್ಕಾರದ ವಶಕ್ಕೆ ಚಿಂತನೆ ನಡೆಸಲಾಗಿದ್ದು, ಈ ಬಗ್ಗೆ ಗೌಪ್ಯವಾಗಿ ಕಾರ್ಯಸೂಚಿಯನ್ನು ಸರ್ಕಾರ ಸಿದ್ಧಮಾಡಿಕೊಂಡಿದೆ. ಜೊತೆಗೆ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆ ಅಡಿಯಲ್ಲೂ ಪ್ರಕರಣ ದಾಖಲಿಸಲು ನಿರ್ಧಾರ ಮಾಡಿದೆ.

ಸರ್ಕಾರದ ಜೊತೆ ನೀವು ಕೈ ಜೋಡಿಸಿದರೆ ಮಾತ್ರ ಈ ಪಿಡುಗನ್ನು ತೊಲಗಿಸಲು ಸಾಧ್ಯ. ಇಲ್ಲವಾದಲ್ಲಿ ಕಷ್ಟ ಆಗುತ್ತೆ. ಜನರ ಕಷ್ಟ ಅರಿತುಕೊಂಡು ನೀವು ಸರ್ಕಾರದ ಜೊತೆ ಕೈ ಜೋಡಿಸಬೇಕು. ನಿಮಗೇ ಏನು ಬೇಕೋ ಅಗತ್ಯ ನೆರವು ಕೊಡಲು ನಾವು ಸಿದ್ದರಿದ್ದೇವೆ. ಆದರೆ ಕೋವಿಡ್​ಗೆ ನೀವು ಚಿಕಿತ್ಸೆ ಕೊಡಲೇಬೇಕು. ನಾವು ಹೇಳಿರುವಷ್ಟು ಬೆಡ್​ಗಳನ್ನು ಮೀಸಲಿಡಬೇಕು. ನಿಮ್ಮ ಏನೇ ಸಮಸ್ಯೆಗಳು ಇದ್ದರೂ ಅದನ್ನು ತಿಳಿಸಿ. ನಮ್ಮ‌ ಸಚಿವರ ಜೊತೆ ಸಮಸ್ಯೆ ಬಗ್ಗೆ ತಿಳಿಸಿ. ಆ ಸಮಸ್ಯೆ ಬಗೆಹರಿಸುವ ಕೆಲಸ ಮಾಡ್ತೇವೆ. ಆದರೆ ಕೊವೀಡ್ ತಡೆಗೆ ಸಂಪೂರ್ಣವಾದ ಸಹಕಾರ ಕೊಡಬೇಕು ಎಂದು ಖಾಸಗಿ ಆಸ್ಪತ್ರೆಯ ವ್ಯವಸ್ಥಾಪಕರಿಗೆ ಸಿಎಂ ಬಿಎಸ್​ವೈ ಮನವಿ ಕೂಡ ಮಾಡಿದರು.

ಖಾಸಗಿ ಆಸ್ಪತ್ರೆಯ ವ್ಯವಸ್ಥಾಪಕರ ಮೇಲೆ ಸಿಟ್ಟಾದ ಸಿಎಂ

ಸರ್ಕಾರದ ಮನವಿಗೆ ನಾಳೆ ಉತ್ತರ ಹೇಳುವುದಾಗಿ ಹೇಳಿದ ಖಾಸಗಿ ಆಸ್ಪತ್ರೆಗಳ ಮೇಲೆ ಸಿಎಂ ಬಿಎಸ್​ವೈ ಗರಂ ಆಗಿದ್ದಾರೆ. ನಾಳೆವರೆಗೆ ಆಗಲ್ಲ, ಇಂದೇ ತಿಳಿಸಿ. ಸದ್ಯ ನಿಮ್ಮ ಆಸ್ಪತ್ರೆಗಳಲ್ಲಿ ಎಷ್ಟು ಬೆಡ್ ಗಳಿವೆ…? ಇವಾಗ ಎಷ್ಟು ಮಾಡಬಹುದು..? ನಾವು ಹೇಳಿದಂತೆ ಶೇಕಡ 50 ರಷ್ಟು ಬೆಡ್ ಮೀಸಲಿಡಿ. ಈ ಬಗ್ಗೆ ಇಂದೇ ತಮ್ಮ ನಿರ್ಧಾರ ತಿಳಿಸಿ. ನಾಳೆ‌ವರೆಗೂ ನಾವು ಕಾಯೋಕೆ ಆಗಲ್ಲ. ನಾನು ಇವಾಗ ಮತ್ತೆ ಬರ್ತೇನೆ, ಅದೇನು ಚರ್ಚಿಸಿ ತಿಳಿಸಿ ಎಂದು ಹೇಳಿ ಸಿಎಂ ಬಿಎಸ್​ ಯಡಿಯೂರಪ್ಪ ಸಭೆಯಿಂದ ಹೊರಬಂದರು.


ಇದನ್ನೂ ಓದಿ: ಖಾಸಗಿ ಆಸ್ಪತ್ರೆಗಳಿಂದ ಭಾರಿ ವಸೂಲಿ : ಕೊರೊನಾ ಚಿಕಿತ್ಸೆಗಾಗಿ ದುಬಾರಿ ದರ ನಿಗದಿ…

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights