ಒಂದಲ್ಲ, ಎರಡಲ್ಲ, ಮೂರೂ ಅಲ್ಲ, ಬರೊಬ್ಬರಿ ನಾಲ್ಕು ಮಕ್ಕಳನ್ನು ಹೆತ್ತ ಮಹಾತಾಯಿ

ಒಂದಲ್ಲ. ಎರಡಲ್ಲ. ಮೂರೂ ಆಲ್ಲ. ಬರೊಬ್ಬರಿ ನಾಲ್ಕು. ಹೌದು. ಒಂದು ಮಗುವಿಗೆ ಪರಿತಪಿಸುವವರು ಎಷ್ಟೋ ಜನರಿರುವಾಗ ಚತುರ್ವಳಿ ಅಂದರೆ ನಾಲ್ಕು ಮಕ್ಕಳಿಗೆ ಜನ್ಮ ನೀಡುವ ಮೂಲಕ ಮಹಿಳೆಯೊಬ್ಬರು ಮಹಾತಾಯಿ ಎನಿಸಿಕೊಂಡಿದ್ದಾರೆ.
ಈಗಾಗಲೇ ಎರಡು ಮಕ್ಕಳನ್ನು ಹೆತ್ತಿದ್ದ ಈ ತಾಯಿಗೆ ಜೀವಕ್ಕೆ ಅಪಾಯವಿದ್ದರೂ ನಾಲ್ಕು ಮಕ್ಕಳಿಗೆ ಜನ್ಮ ನೀಡಿ ಗಚ್ಟಿಗಿತ್ತಿ ಎನಿಸಿಕೊಂಡಿದ್ದು, ಈಗ ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ. ಆ ಮಹಾತಾಯಿ ಯಾರು ಮತ್ತು ಎಲ್ಲಿ ಈ ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ ಎಂಬುದರ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ.

ಇದು ಅಪರೂಪದಲ್ಲಿಯೇ ಅಪರೂಪುದ ಪ್ರಕರಣ. ಪ್ರತಿ ಆರು ಲಕ್ಷದಲ್ಲಿ ಒಂದು ಪ್ರಕರಣ. ಅದರಲ್ಲಿಯೂ ಶೇಕಡ 0.007 ರಷ್ಟು ಮಾತ್ರ ಯಶಸ್ವಿಯಾಗುವಂಥ ಪ್ರಕರಣ. ಇಂಥದ್ದೊಂದು ಅಪರೂಪದ ಹೆರಿಗೆಗೆ ಬಸವನಾಡು ವಿಜಯಪುರ ಮತ್ತೋಮ್ಮೆ ಸಾಕ್ಷಿಯಾಗಿದೆ.  ರಾಜಸ್ಥಾನದ ಜಾಲೋರ ಜಿಲ್ಲೆಯ ನೌಸ್ರಾ ಗ್ರಾಮದ ಸಗನಲಾಲ್ ಸಂದೇಶ ಮತ್ತು ದಾಲಿಬಾಯಿ ಸಂದೇಶ ದಂಪತಿ 25 ವರ್ಷಗಳ ಹಿಂದೆ ಮದುವೆಯಾಗಿದ್ದು, ಕಳೆದ 20 ವರ್ಷಗಳ ಹಿಂದೆ ಬಸವನಾಡು ವಿಜಯಪುರಕ್ಕೆ ಬಂದು ನೆಲೆಸಿದ್ದಾರೆ. ವಿಜಯಪುರ ನಗರದ ರಾಜರತನ್ ಕಾಲನಿಯಲ್ಲಿ ಇವರು ವಾಸಿಸುತ್ತಿದ್ದು, ಪ್ರೆಶರ್ ಕುಕ್ಕರ್ ಮಾರಾಟ ಮತ್ತು ದುರಸ್ಥಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಇವರಿಗೆ ಈ ಹಿಂದೆ ಎರಡು ಹೆಣ್ಣು ಮತ್ತು ಒಂದು ಗಂಡು ಮಕ್ಕಳಿದ್ದರು. ಮೂರು ಮಕ್ಕಳಾದ ಬಳಿಕ ಈ ದಂಪತಿ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಿದ್ದರು. ಈ ಮೂರು ಜನರ ಮಕ್ಕಳಲ್ಲಿ 21 ವರ್ಷದ ವಿಮಲಾ ಮದುವೆಯಾಗಿದ್ದರೆ, 19 ವರ್ಷದ ಗುಡ್ಡಿ ಅಂಗವಿಕಲೆಯಾಗಿದ್ದಾಳೆ. 16 ವರ್ಷದ ಲಲಿತ್ ಎಂಬ ಮಗ ಸಾವಿಗೀಡಾಗಿದ್ದಾನೆ.

ವಿಮಾಲಾ ಮದುವೆಯಾದ ಬಳಿಕ ಇವರಿಬ್ಬರೂ ಅಜ್ಜ ಮತ್ತು ಅಜ್ಜಿ ಎನಿಸಿಕೊಂಡಿದ್ದಾರೆ. ಆದರೂ, ತಮ್ಮನ್ನು ನೋಡಿಕೊಳ್ಳಲು ಗಂಡು ಮಗು ಬೇಕೆಂದು ಹಂಬಲಿಸಿದ ಈ ದಂಪತಿ ಬೆಂಗಳೂರಿನಲ್ಲಿ ಟೆಸ್ಟಟ್ಯೂಬ್ ಬೇಬಿ ಅಂದರೆ ಪ್ರನಾಳ ಶಿಶು ಚಿಕಿತ್ಸೆಗೆ ಮೊರೆ ಹೋಗಿದ್ದರು. ಅಲ್ಲಿ ಆ ಕಾರ್ಯ ಯಶಸ್ವಿಯಾದಾಗ ಒಟ್ಟು ನಾಲ್ಕು ಮಕ್ಕಳು ಹೊಟ್ಟೆಯಲ್ಲಿ ಬೆಳೆಯುತ್ತಿರುವ ಅಂಶ ಬೆಳಕಿಗೆ ಬಂತು. ದಾಲಿಬಾಯಿಗೆ 40 ವರ್ಷವಾಗಿದ್ದರಿಂದ ಕೇವಲ ಎರಡು ಮಕ್ಕಳನ್ನು ಉಳಿಸಿಕೊಳ್ಳೊಣ ಎಂದು ವೈದ್ಯರು ಸಲಹೆ ನೀಡಿದರೂ ಒಪ್ಪದ ಈ ತಾಯಿ ನಾಲ್ಕು ಮಕ್ಕಳನ್ನು ಬೆಳೆಸಿದ್ದಾರೆ.

ಬೆಂಗಳೂರಿನಿಂದ ವಿಜಯಪುರಕ್ಕೆ ಬಂದ ಈ ದಂಪತಿ ಇಲ್ಲಿನ ಡಾ. ಮುದನೂರ ಆಸ್ಪತ್ರೆಯಲ್ಲಿ ದಾಖಲಾದರು. ಈಗ 7 ತಿಂಗಳು 20 ದಿನಗಳ ಬಳಿಕ ಈ ತಾಯಿಗೆ ಸಿಸೇರಿಯನ್ ಶಸ್ತ್ರಚಿಕಿತ್ಸೆ ನಡೆಸಿದ ಡಾ. ಎಸ್. ಆರ್. ಮುದನೂರ ನೇತೃತ್ವದ ಡಾ. ನೇಹಾ ಚಂದ್ರಾ, ಡಾ. ಕಟ್ಟಿ ಮತ್ತು ಬಿ. ಜಿ. ಪಾಟೀಲ ಅವರನ್ನೊಳಗೊಂಡ ವೈದ್ಯರ ತಂಡ ಅದರಲ್ಲಿ ಯಶಸ್ವಿಯಾಗಿದೆ. ದಾಲಿಬಾಯಿ ಸಂದೇಶ ಮತ್ತು ಸಗನಲಾಲ ಸಂದೇಶ ದಂಪತಿಗೆ ಒಂದರ ಬದಲು ನಾಲ್ಕು ಅಂದರೆ ಎರಡು ಗಂಡು ಮತ್ತು ಎರಡು ಹೆಣ್ಣು ಮಕ್ಕಳು ಜನಿಸಿವೆ. ಈ ಮಕಕ್ಳು ಕ್ರಮವಾಗಿ 1.60, 1.50 ಕೆಜಿ, 1.30 ಕೆಜಿ ಮತ್ತು 1.10 ಕೆಜಿ ತೂಕ ಹೊಂದಿವೆ. ಈ ಮಕ್ಕಳನ್ನು ಹೆರಿಗೆಯಾದ ತಕ್ಷಣ ವಿಜಯಪುರ ನಗರದ ಬಿ ಎಲ್. ಡಿ. ಈ ಆಸ್ಪತ್ರೆಯ ನವಜಾತ ಶಿಶುಗಳ ಚಿಕಿತ್ಸಾ ಘಟಕಕ್ಕೆ ದಾಖಲಿಸಲಾಗಿದೆ. ಇದೀಗ ತಾಯಿ ಮತ್ತು ಮಕ್ಕಳು ಆರೋಗ್ಯದಿಂದ ಇದ್ದಾರೆ.

ಈಗ ಸಗನಲಾಲ್ ಗೆ 42 ವರ್ಷವಾಗಿದ್ದರೆ, ಆತನ ಪತ್ನಿ ದಾಲಿಬಾಯಿಗೆ 40 ವರ್ಷ. ಇಂಥ ಹಿರಿಯ ವಯಸ್ಸಿನಲ್ಲಿಯೂ ಪ್ರನಾಳ ಶಿಶುವಿನ ಚಿಕಿತ್ಸೆ ಮೂಲಕ ಇವರು ನಾಲ್ಕು ಮಕ್ಕಳಿಗೆ ಪೋಷಕರಾಗಿದ್ದಾರೆ. ಈ ಘಳಿಗೆ ಸಂದೇಶ ದಂಪತಿ ಸಂಬಂಧಿಕರಲ್ಲಿ ಸಂತಸ ಮೂಡಿಸಿದ್ದರೆ, ಆಸ್ಪತ್ರೆಯಲ್ಲಿರುವ ಈತರರಲ್ಲಿ ಅಚ್ಚರಿ ಮೂಡಿಸಿದೆ.

ಪ್ರತಿ 6 ಲಕ್ಷದಲ್ಲಿ ಒಬ್ಬರಲ್ಲಿ ಇಂಥ ಗರ್ಭಧಾರಣೆ ಸಾಧ್ಯತೆಗಳಿದ್ದು, ಹೀಗೆ ಗರ್ಭ ಧರಿಸಿದವರಲ್ಲಿ ನಾಲ್ಕು ಮಕ್ಕಳನ್ನು ಹೆರುವ ಸಾಧ್ಯತೆ ಕೂಡ 0.007 ರಷ್ಟಿರುವುದು ಗಮನಾರ್ಹವಾಗಿದೆ.  ಸುಮಾರು ಒಂದು ದಶಕದ ಹಿಂದೆಯೂ ಇದೇ ಆಸ್ಪತ್ರೆಯಲ್ಲಿ ಇದೇ ಡಾ. ಎಸ್. ಆರ್. ಮುದನೂರ ನೇತೃತ್ವದ ತಂಡ ಇಂಥದ್ದೆ ಶಸ್ತ್ರ ಚಿಕಿತ್ಸೆ ನಡೆಸಿತ್ತು. ಆಗ 4 ಮಕ್ಕಳಲ್ಲಿ ಮೂರು ಮಕ್ಕಳು ಬದುಕಿದ್ದವು. ಈಗ ಮತ್ತೆ ಇಲ್ಲಿ ನಾಲ್ಕು ಮಕ್ಕಳ ಹೆರಿಗೆಯಾಗಿದ್ದು, ತಾಯಿ ಮತ್ತು ಮಕ್ಕಳು ಆರೋಗ್ಯದಿಂದ ಇದ್ದಾರೆ. ಇನ್ನೆರಡು ದಿನಗಳಲ್ಲಿ ಎರಡು ಮಕ್ಕಳನ್ನು ನವಜಾತ ಶಿಶುಗಳ ವಾರ್ಡಿನಿಂದ ತಾಯಿಯ ಬಳಿಗೆ ಹಾಗೂ ಇನ್ನುಳಿದ ಎರಡು ಮಕ್ಕಳು ಸುಮಾರು ನಾಲ್ಕೈದು ದಿನಗಳ ನಂತರ ತಾಯಿಯ ಮಡಿಲು ಸೇರುವ ನಿರೀಕ್ಷೆಯಿದೆ ಎಂದು ಡಾ. ಎಸ್. ಆರ್. ಮುದನೂರ ನ್ಯೂಸ್ 18 ಕನ್ನಡಕ್ಕೆ ತಿಳಿಸಿದ್ದಾರೆ.

ಈ ಮಹಾ ತಾಯಿಯ ಗಟ್ಟಿತನಕ್ಕೆ ಒಂದು ಹ್ಯಾಟ್ಸಾಫ್ ಹೇಳಲೇಬೇಕು. ಅದಕ್ಕೆ ಹೇಳಿದ್ದು, ತಾಯಿಗಿಂತ ಬಂಧುವಿಲ್ಲ, ಉಪ್ಪಿ ರುಚಿಯಿಲ್ಲ ಅಂತ. ತನ್ನ ಜೀವದ ಹಂಗು ತೊರೆದು ನಾಲ್ಕು ಮಕ್ಕಳನ್ನು ತನ್ನ ಗರ್ಭದಲ್ಲಿ ಬೆಳೆಯಲು ಅವಕಾಶ ನೀಡಿ ಈಗ ದಾಲಿಬಾಯಿ ಸಂದೇಶ ಸಮಾಜಕ್ಕೆ ತಾಯಿ ಎಂದರೇನು ಎಂಬುದರ ಸಂದೇಶವನ್ನು ಸಾರಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights