FACT CHECK | ಯುವತಿ ಮಹಾಲಕ್ಷ್ಮಿ ಕೊಲೆ ಪ್ರಕರಣವನ್ನು’ಅಶ್ರಫ್’ ತಲೆಗೆ ಕಟ್ಟಿದ ಕೆಲವು ಮಾಧ್ಯಮಗಳು
ಈ ದೇಶದಲ್ಲಿ ಮುಸ್ಲಿಮರೆಂದರೆ ” ಟೇಕ್ ಫಾರ್ ಗ್ರಾಂಟೆಡ್ ” ಎಂಬಂತಾಗಿದೆ. ಯಾರೋ ಒಬ್ಬರು ಮಾಡುವ ತಪ್ಪಿಗೆ ಇಡೀ ಸಮುದಾಯವನ್ನೆ ಗುರಿಯಾಗಿಸಿ ಕಟಕಟೆಯಲ್ಲಿ ನಿಲ್ಲುಂತೆ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಅದರಲ್ಲೂ ಹೆಚ್ಚು ಸೂಕ್ಷ್ಮತೆ ಹೊಂದಿರಬೇಕಾದ ಮಾಧ್ಯಮ ಕೂಡ ಕೋಮು ಭಾವನೆ ಕೆರಳಿಸುವಂತೆ, ಮುಸ್ಲಿಂ ಸಮಾಜವನ್ನೆ ಕೆಟ್ಟವರಂತೆ ಬಿಂಬಿಸುವ ಕೆಲಸಗಳನ್ನು ಯಾವುದೇ ಅಂಜಿಕೆ ಇಲ್ಲದೆ ಮಾಡುತ್ತಿವೆ. ಇದಕ್ಕೆ ಇತ್ತೀಚೆಗೆ ನಡೆದ ಮಹಾಲಕ್ಷ್ಮಿ ಕೊಲೆ ಪ್ರಕರಣ ಸಾಕ್ಷಿ.
ಹೌದು ಸೆಪ್ಟೆಂಬರ್ 21, 2024ರಂದು ಬೆಂಗಳೂರಿನ ವೈಯ್ಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ 29 ವರ್ಷದ ಮಹಾಲಕ್ಷ್ಮಿ ಎಂಬ ಮಹಿಳೆಯ ಕೊಲೆ ನಡೆದಿರುವುದು ಬೆಳಕಿಗೆ ಬಂದಿತ್ತು. ಮಹಾಲಕ್ಷ್ಮಿಯ ದೇಹವನ್ನು ಸುಮಾರು 30 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಇಡಲಾಗಿತ್ತು.
ದೆಹಲಿಯಲ್ಲಿ ಶ್ರದ್ದಾ ವಾಕರ್ ಎಂಬ ಯುವತಿಯ ಕೊಲೆ ನಡೆದ ರೀತಿಯಲ್ಲೇ ಮಹಾಲಕ್ಷ್ಮಿಯನ್ನು ಕೊಲೆ ನಡೆದಿತ್ತು. ಶ್ರದ್ದಾ ವಾಕರ್ ಕೊಲೆಯನ್ನು ಆಕೆಯ ಸ್ನೇಹಿತ ಅಫ್ತಾಬ್ ಅಮೀನ್ ಪೂನವಲ್ಲ ಎಂಬಾತ ಮಾಡಿರುವುದು ತನಿಖೆಯಿಂದ ಬಯಲಾಗಿತ್ತು. ಅದೇ ರೀತಿ ಮಹಾಲಕ್ಷ್ಮಿ ಕೊಲೆ ಪ್ರಕರಣದಲ್ಲೂ ಅಶ್ರಫ್ ಎಂಬಾತ ಹೆಸರು ತಳುಕು ಹಾಕಿಕೊಂಡಿತ್ತು.
ಈ ಪೋಸ್ಟ್ ಅನ್ನು ನೋಡಿದ ಹಲವು ಮಂದಿ ಮಹಾಲಕ್ಷ್ಮಿಯನ್ನು ಕೊಂದಿದ್ದು ಅಶ್ರಫ್ ಎಂದು ನಂಬಿಕೊಂಡಿದ್ದಾರೆ. ಇನ್ನೂ ಕೆಲವರು “ಮಹಾಲಕ್ಷ್ಮಿ ಕನ್ನಡವನ್ನು ಬಹಳ ಸ್ಪಷ್ಟವಾಗಿ ಮಾತನಾಡುತ್ತಿದ್ದಳು. ಆದರೆ ಅವಳನ್ನು ರಕ್ಷಿಸಲು ಯಾವುದೂ ಅಸ್ತ್ರವಾಗಿ ಬರಲಿಲ್ಲ. ಜಾತಿ, ಭಾಷೆ, ರಾಜ್ಯದ ಹೆಸರಿನಲ್ಲಿ ಜಗಳವಾಡುವುದನ್ನು ನಿಲ್ಲಿಸಿ. ಹಿಂದೂಗಳೇ ಒಗ್ಗಟ್ಟಾಗಿ ಎಲ್ಲರ ಸಾಮಾನ್ಯ ಶತ್ರುವಿನ ವಿರುದ್ಧ ಹೋರಾಡಲು ಸಿದ್ದರಾಗಿದೆ.” ಎಂದು ತೆರೆದ ಫ್ರಿಜ್‌ನಲ್ಲಿ ಕತ್ತರಿಸಿದ ದೇಹದ ತುಂಡು ಹಾಗೂ ಅದರ ಮುಂದೆ ಮುಸ್ಲಿಂ ಟೋಪಿ ಧರಿಸಿದ್ದ ವ್ಯಕ್ತಿ ಕುಳಿತಿರುವ ಫೋಟೋವನ್ನು ಹಂಚಿಕೊಂಡು, ಮಹಾಲಕ್ಷ್ಮಿಯನ್ನು ಕೊಂದಿದ್ದು ಮುಸ್ಲಿಂ ಎಂಬಂತೆ ಹಂಚಿಕೊಳ್ಳಲಾಗುತ್ತಿದೆ.
Remember , #Mahalakshmi was fluent in speaking Kannada …. But , that didn’t save her life …. Stop fighting on caste , language , state … Unite o Hindu and fight against the Common enemy who is after your life and your daughters #Karnataka #MahalakshmiCase #LoveJihaad pic.twitter.com/3z9YngNRjc
— Amitabh Chaudhary (@MithilaWaala) September 25, 2024
‘ಅಶ್ರಫ್’ ಎಂಬ ಹೆಸರು ಕೇಳಿ ಬಂದಿದ್ದೆ ತಡ ಮಾಧ್ಯಮಗಳು, ಬಲಪಂಥೀಯ ಸಾಮಾಜಿಕ ಜಾಲತಾಣ ಪ್ರಭಾವಿಗಳು, ಕೆಲ ರಾಜಕೀಯ ಪಕ್ಷಗಳ ಮುಖಂಡರು ಒಂದು ಸಮುದಾಯದ ವಿರುದ್ದ ಆರೋಪಗಳ ಸುರಿಮಳೆ ಸುರಿಸಿದ್ದರು.
ಅನೇಕರು ಶ್ರದ್ದಾ ಕೊಲೆಗೆ ಮಹಾಲಕ್ಷ್ಮಿ ಕೊಲೆಯನ್ನು ಹೋಲಿಕೆ ಮಾಡಿ ಚರ್ಚಿಸಿದ್ದರು. ಇನ್ನೂ ಕೆಲವರು ‘ಲವ್ ಜಿಹಾದ್ ‘ ಆರೋಪ ಮಾಡಿದ್ದರು. ಮತ್ತೂ ಕೆಲವರು ಈ ರೀತಿಯ ಕೊಲೆಗಳು ‘ಒಂದು ಸಮುದಾಯದ ವಿರುದ್ದದ ವ್ಯವಸ್ಥಿತ ಸಂಚಿನ ಭಾಗ’ ಎಂದಿದ್ದರು. ಕೆಲ ಮಾಧ್ಯಮಗಳು ಸಾಮಾಜಿಕ ಜಾಲತಾಣವನ್ನೇ ಪ್ರಮುಖ ಮೂಲವನ್ನಾಗಿಟ್ಟುಕೊಂಡು ಒಂದು ಸಮುದಾಯದ ಜನರನ್ನು ಅರೋಪಿ ಸ್ಥಾನದಲ್ಲಿ ನಿಲ್ಲಿಸಿತ್ತು.
ಆದರೆ ವಾಸ್ತವವಾಗಿ ಆಗಿದ್ದೇನು ?
ವರದಿಗಳ ಪ್ರಕಾರ, 29 ವರ್ಷದ ಮಹಾಲಕ್ಷ್ಮಿ ಅವರು ನೆಲಮಂಗಲದಲ್ಲಿ ವಾಸಿಸುವ ಮತ್ತು ಮೊಬೈಲ್ ಪರಿಕರಗಳ ಅಂಗಡಿಯನ್ನು ನಡೆಸುತ್ತಿರುವ ಹೇಮಂತ್ ದಾಸ್ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಒಂದು ಮಗು ಕೂಡ ಇದೆ. ತನ್ನ ಪತಿಯಿಂದ ಬೇರ್ಪಟ್ಟ ನಂತರ, ಆಕೆ ತನ್ನ ಸಹೋದರ ಹುಕುಮ್ ಸಿಂಗ್ ಮತ್ತು ಆತನ ಹೆಂಡತಿಯೊಂದಿಗೆ ವಾಸಿಸುತ್ತಿದ್ದರು. ಸಹೋದರರ ನಡುವೆ ಜಗಳ ನಡೆದ ನಂತರ ಹುಕುಮ್ ಸಿಂಗ್ ತನ್ನ ಹೆಂಡತಿಯೊಂದಿಗೆ ಮನೆ ಬಿಟ್ಟು ಹೋಗಿದ್ದರು. ಅಂದಿನಿಂದ ಮಹಾಲಕ್ಷ್ಮಿ ಒಂಟಿಯಾಗಿ ವಾಸಿಸುತ್ತಿದ್ದರು. ಆಕೆಯ, ತಾಯಿಯ ಹೇಳಿಕೆಯ ಪ್ರಕಾರ, ಮಹಾಲಕ್ಷ್ಮಿ ಸೆಪ್ಟೆಂಬರ್ 2 ರಂದು ಕೊನೆಯದಾಗಿ ತಾಯಿಗೆ ಕರೆ ಮಾಡಿ ಮಾತನಾಡಿದ್ದರು. ಶೀಘ್ರದಲ್ಲೇ ತನ್ನ ವಿಚ್ಛೇದಿತ ಪತಿಯನ್ನು ಭೇಟಿಯಾಗುವುದಾಗಿ ತಿಳಿಸಿದ್ದರು. ಸೆಪ್ಟೆಂಬರ್ 21 ರಂದು ಆಕೆ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.
ಮಹಾಲಕ್ಷ್ಮಿಯ ಕೊಲೆ ನಡೆದ ಬಳಿಕ, ಆಕೆಯ ವಿಚ್ಛೇದಿತ ಪತಿ ಹೇಮಂತ್ ದಾಸ್ ಒಬ್ಬ ವ್ಯಕ್ತಿಯ ಮೇಲೆ ಅನುಮಾನ ವ್ಯಕ್ತಪಡಿಸಿ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದರು. ಆಕೆ ಆತನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದಿದ್ದರು. ಆರು ವರ್ಷಗಳ ವೈವಾಹಿಕ ಜೀವನದ ಬಳಿಕ, ಒಂಬತ್ತು ತಿಂಗಳ ಹಿಂದೆ ನಾವು ಬೇರೆಯಾಗಿದ್ದೇವೆ. ನೆಲಮಂಗಲದ ಸಲೂನ್‌ನಲ್ಲಿ ಕೆಲಸ ಮಾಡುತ್ತಿದ್ದ ಅಶ್ರಫ್ ಎಂಬಾತನೇ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ಇದೆ ಎಂದು ಅವರು ಹೇಳಿದ್ದರು.
ಹೇಮಂತ್ ದಾಸ್ ಹೇಳಿರುವಂತೆ, ಮಹಾಲಕ್ಷ್ಮಿ ಅಶ್ರಫ್ ಜೊತೆ ಅಕ್ರಮ ಸಂಬಂಧ ಹೊಂದಿದ್ದರು. ಕೆಲ ತಿಂಗಳ ಹಿಂದೆ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಅಶ್ರಫ್ ವಿರುದ್ಧ ಮಹಾಲಕ್ಷ್ಮಿ ವಂಚನೆ ಆರೋಪ ಮಾಡಿ ದೂರು ಕೂಡ ದಾಖಲಿಸಿದ್ದರು.
ವಾಸ್ತವವಾಗಿ, ಪೊಲೀಸರು ಅಶ್ರಫ್ ಅನ್ನು ಪ್ರಮುಖ ಆರೋಪಿ ಎಂದು ಹೆಸರಿಸಿರಲಿಲ್ಲ. ಆತನನ್ನು ವಿಚಾರಣೆಗೆ ಒಳಪಡಿಸಿ ಬಿಟ್ಟು ಕಳಿಸಿದ್ದರು. ಆ ಕುರಿತ ಮಾಧ್ಯಮ ವರದಿ ಇಲ್ಲಿದೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 23 ರಂದು ಹೇಳಿಕೆ ನೀಡಿದ್ದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಅವರು “ಪ್ರಕರಣದ ಪ್ರಮುಖ ಶಂಕಿತನನ್ನು ಗುರುತಿಸಲಾಗಿದೆ. ಆತ ಹೊರಗಿನ (ಹೊರ ರಾಜ್ಯದ) ವ್ಯಕ್ತಿಯಾಗಿದ್ದು, ತಲೆ ಮರೆಸಿಕೊಂಡಿದ್ದಾನೆ. ಪೊಲೀಸರು ಆತನ ಬಗ್ಗೆ ಹೆಚ್ಚುವರಿ ಮಾಹಿತಿಗಳನ್ನು ಕಲೆ ಹಾಕಿದ್ದಾರೆ ಎಂದಿದ್ದರು.
ಇದಾದ ನಂತರ, ಕೊಲೆ ಪ್ರಕರಣದ ಶಂಕಿತ ಆರೋಪಿ ಒಡಿಶ್ಶಾದಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಮಾಧ್ಯಮಗಳಲ್ಲಿ ವರದಿಯಾದಾಗ ಪ್ರಕರಣ ಮಹತ್ವದ ತಿರುವು ಪಡೆಯಿತು. ಆರೋಪಿ ಮುಕ್ತಿರಾಜನ್ ಪ್ರತಾಪ್ ರೇ ಯ ಮೃತದೇಹವು ಬುಧವಾರ (ಸೆ.25) ಬೆಳಿಗ್ಗೆ ಒಡಿಶಾದ ಭದ್ರಕ್ ಜಿಲ್ಲೆಯ ಭುಯಿನ್‌ಪುರ್ ಗ್ರಾಮದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆರೋಪಿ ಭುಯಿನ್‌ಪುರ್ ಗ್ರಾಮದವನು ಎಂದು ವರದಿಗಳು ಹೇಳಿತ್ತು. ಹೆಚ್ಚಿನ ವರದಿಗಳು ಆರೋಪಿ ಮುಕ್ತಿ ರಂಜನ್ ರೇ ಎಂದು ಹೆಸರನ್ನು ಉಲ್ಲೇಖಿಸಿತ್ತು.
ಭದ್ರಕ್ ಎಸ್ಪಿ ವರುಣ್ ಗುಂಟುಪಲ್ಲಿ ಅವರ ಪ್ರಕಾರ, ಬೆಂಗಳೂರು ಪೊಲೀಸ್ ತಂಡವು ಬಂಧಿಸುವ ಮೊದಲು, ಆರೋಪಿಯನ್ನು ಮುಕ್ತಿರಾಜನ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಪತ್ರ ಸಿಕ್ಕಿದ್ದು, ಅದರಲ್ಲಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
Karnataka | Mahalakshmi murder accused Mukthirajan Pratap Roy has died by suicide in Odisha: DCP Central-Bengaluru, Shekar H Tekkannavar
— ANI (@ANI) September 25, 2024
“ಬೆಂಗಳೂರಿನ ಕೊಲೆಗೆ ಸಂಬಂಧಿಸಿದಂತೆ ಬಂಧನದ ಭಯದಿಂದ ಆತನು ತನ್ನ ಜೀವನವನ್ನು ಕೊನೆಗೊಳಿಸಿದ್ದಾನೆ ಎಂದು ನಾವು ಬಲವಾಗಿ ಅನುಮಾನಿಸುತ್ತೇವೆ” ಎಂದು ಟೈಮ್ಸ್ ಆಫ್ ಇಂಡಿಯಾಗೆ ಎಸ್ಪಿ ಹೇಳಿದ್ದರು.
ಹೆಬ್ಬಗೋಡಿಯಲ್ಲಿ ಸಹೋದರನ ಜತೆ ವಾಸವಾಗಿದ್ದ ಮುಕ್ತಿ ರಂಜನ್ ನಿತ್ಯ ಅಲ್ಲಿಂದಲೇ ಮಲ್ಲೇಶ್ವರದ ಬಟ್ಟೆ ಷೋರೂಂಗೆ ಕೆಲಸಕ್ಕೆ ಬರುತ್ತಿದ್ದ. ಕೊಲೆ ಮಾಡಿದ ಬಳಿಕ ಸಹೋದರನಿಗೆ ಕರೆ ಮಾಡಿ, ಮಹಾಲಕ್ಷ್ಮಿ ಅವರನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದ. ಬಳಿಕ ಮನೆಗೂ ತೆರಳಿ, ಸಹೋದರನ ಜತೆ ಮಾತನಾಡಿ, ಒಡಿಶಾಗೆ ಪರಾರಿಯಾಗಿದ್ದ. ನಂತರ, ಮೊಬೈಲ್ ಫೋನ್ ಅನ್ನು ಸ್ವಿಚ್ ಮಾಡಿಕೊಂಡಿದ್ದ. ಫೋನ್ ಬಳಸದೆ ಒಡಿಶಾದಲ್ಲಿ ಓಡಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಸಹೋದರ ವಶಕ್ಕೆ: ಪ್ರಕರಣದಲ್ಲಿ ಮುಕ್ತಿ ರಂಜನ್ ಕೈವಾಡ ಸ್ಪಷ್ಟವಾಗುತ್ತಿದ್ದಂತೆಯೇ ಆತನ ಸಹೋದರರನ್ನು ವೈಯಾಲಿಕಾವಲ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಆರೋಪಿ ಪತ್ತೆಗೆ ಕೇಂದ್ರ ವಿಭಾಗದ ಪೊಲೀಸರ ಆರು ವಿಶೇಷ ತಂಡಗಳನ್ನು ರಚಿಸಿದ್ದರು. ಮೂರು ತಂಡಗಳು, ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಎರಡು ದಿನಗಳಿಂದ ಬೀಡುಬಿಟ್ಟು ಹುಡುಕಾಟ ನಡೆಸುತ್ತಿದ್ದವು.
‘ಮದುವೆಗೂ ಮೊದಲು ಮಹಾಲಕ್ಷ್ಮಿ ಅವರು ತಂದೆ–ತಾಯಿ ಜತೆಗೆ ನೆಲಮಂಗಲದಲ್ಲೇ ನೆಲೆಸಿದ್ದರು. ಹೇಮಂತ್‌ದಾಸ್ ಅವರ ಜತೆಗೆ ಆರು ವರ್ಷಗಳ ಹಿಂದೆ ಮದುವೆ ಆಗಿತ್ತು. ಈ ದಂಪತಿಗೆ ನಾಲ್ಕು ವರ್ಷದ ಹೆಣ್ಣು ಮಗುವಿತ್ತು. ಪತಿ–ಪತ್ನಿಯರ ನಡುವೆ ವೈಮನಸ್ಸು ಉಂಟಾಗಿ, ಪ್ರತ್ಯೇಕವಾಗಿ ವಾಸಿಸಲು ನಿರ್ಧರಿಸಿದ್ದರು. 2023ರ ಅಕ್ಟೋಬರ್‌ನಲ್ಲಿ ಮಹಾಲಕ್ಷ್ಮಿ ಅವರು ವೈಯಾಲಿಕಾವಲ್‌ನ ಬಸಪ್ಪ ಗಾರ್ಡನ್‌ನ ಪೈಪ್‌ಲೈನ್ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ಜೀವನ ಸಾಗಿಸುತ್ತಿದ್ದರು. ಹೇಮಂತ್‌ದಾಸ್ ಅವರು ನೆಲಮಂಗಲದಲ್ಲೇ ಮೊಬೈಲ್ ಫೋನ್ ಬಿಡಿಭಾಗಗಳ ಮಾರಾಟ ಮುಂದುವರೆಸಿದ್ದರು. ಮಗುವನ್ನೂ ಹೇಮಂತ್ ಅವರೇ ಸಾಕುತ್ತಿದ್ದರು. ಈ ಮಧ್ಯೆ ಮಹಾಲಕ್ಷ್ಮಿ ಅವರು ಮಲ್ಲೇಶ್ವರದ ಬಟ್ಟೆ ಷೋರೂಂನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಆಗ ಆರೋಪಿಯ ಪರಿಚಯವಾಗಿತ್ತು’ ಎಂದು ಮೂಲಗಳು ತಿಳಿಸಿವೆ.
ಸೆ.1ರಂದು ಮಹಾಲಕ್ಷ್ಮಿ ಹಾಗೂ ಮುಕ್ತಿ ರಂಜನ್ ಕೆಲಸಕ್ಕೆ ಹಾಜರಾಗಿದ್ದರು. ಸೆ.2ರಂದು ಮಹಾಲಕ್ಷ್ಮಿ ವಾರದ ರಜೆ ತೆಗೆದುಕೊಂಡಿದ್ದರು. ಅಂದು ನೆಲಮಂಗಲದಲ್ಲಿರುವ ತಾಯಿ ಮನೆಗೆ ಬರುವುದಾಗಿ ಹೇಳಿದ್ದರು. ಅಲ್ಲಿಗೆ ಹೋಗಿರಲಿಲ್ಲ. ಅಂದು ರಾತ್ರಿಯಿಂದಲೇ ಮಹಾಲಕ್ಷ್ಮಿ ಅವರ ಮೊಬೈಲ್ ಸ್ವಿಚ್ ಆಫ್ ಬರುತ್ತಿತ್ತು. ಅಂದೇ ದಿನ ಆರೋಪಿ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ
ಕೊಲೆಯಾದ ಮಹಾಲಕ್ಷ್ಮಿ ವಾಸಿಸುತ್ತಿದ್ದ ಮನೆಯಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ತಜ್ಞರು ಆರೋಪಿ ಗುರುತು ಪತ್ತೆಗೆ ಶೋಧ ನಡೆಸಿದ್ದರು. ಆಗ ಹಲವರ ಬೆರಳಚ್ಚು ಗುರುತು ಪತ್ತೆಯಾಗಿವೆ. ಕೃತ್ಯ ಎಸಗಲು ಆರೋಪಿ ಕೆಲವರ ಸಹಕಾರ ಪಡೆದಿರುವ ಅನುಮಾನವಿದೆ. ಆ ನಿಟ್ಟಿನಲ್ಲೂ ತನಿಖೆ ಮುಂದುವರೆಸಲಾಗುವುದು ಎಂದು ಮೂಲಗಳು ತಿಳಿಸಿವೆ. ಎಂದು ಪ್ರಜಾವಾಣಿ ವರದಿ ಮಾಡಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಟೆಸ್ಟ್ ಕ್ರಿಕೆಟ್ ಪಂದ್ಯದ ವೇಳೆ ಬಾಂಗ್ಲಾ ಅಭಿಮಾನಿಯನ್ನು ಟೀಂ ಇಂಡಿಯಾ ಅಭಿಮಾನಿಗಳು ಥಳಿಸಿದ್ದಾರೆ ಎಂಬುದಕ್ಕೆ ಆಧಾರಗಳಿಲ್ಲ