ಐಎಂಎ ಹಗರಣದಲ್ಲಿ ಐಪಿಎಸ್‌ ಅಧಿಕಾರಿಗಳೇ ಭಾಗಿ; ತನಿಖೆಗೆ ಸರ್ಕಾರ ಅನುಮತಿ!

ಬಹುಕೋಟಿ ಐಎಂಎ ವಂಚನೆ ಹಗರಣದಲ್ಲಿ ಹಿರಿಯ ಐಪಿಎಸ್ ಅಧಿಕಾರಿಗಳಾದ ಹೇಮಂತ್‌ ನಿಂಬಾಳ್ಕರ್‌, ಅಜಯ್‌ ಹಿಲೋರಿ ಹಾಗೂ  ಡಿವೈಎಸ್ಪಿ ಇ.ಬಿ. ಶ್ರೀಧರ್‌, ಇನ್ಸ್‌ಪೆಕ್ಟರ್‌ ಎಂ. ರಮೇಶ್‌ ಮತ್ತು ಎಸ್‌ಐ ಗೌರಿಶಂಕರ್ ಅವರನ್ನು ನ್ಯಾಯಾಲದಲ್ಲಿ ವಿಚಾರಣೆಗೆ ಒಳಪಡಿಸಲು ಸರ್ಕಾರ ಅನುಮತಿ ನೀಡಿದೆ.

ಐಎಂಎ ಹಗರಣಕ್ಕೆ ಸಂಬಂಧಿಸಿ ಸಿಬಿಐ 2019ರ ಆಗಸ್ಟ್‌ 30ರಂದು ಎಫ್‌ಐಆರ್‌ ದಾಖಲಿಸಿತ್ತು. ಅದಕ್ಕೂ ಮೊದಲು ಹಗರಣದ ಬಗ್ಗೆ ತನಿಖೆ ನಡೆಸಿದ್ದ ಹೇಮಂತ್ ನಿಂಬಾಳ್ಕರ್ ಮತ್ತು ಅಜಯ ಹಿಲೊರಿ ಅವರು ಐಎಂಎ ಪರವಾಗಿ ವರದಿ ಸಿದ್ಧಪಡಿಸಿ ಕ್ಲೀನ್ ಚಿಟ್
ನೀಡಿದ್ದರು. ಅಲ್ಲದೆ, ಸಿಬಿಐ ತನಿಖೆ ವೇಳೆ, ಹಗರಣದಲ್ಲಿ ಐಪಿಎಸ್‌ ಅಧಿಕಾರಿಗಳು ಮತ್ತು ಪೊಲೀಸರು ಭಾಗಿಯಾಗಿರುವುದಾಗಿ ಕೆಲವು ಸಾಕ್ಷ್ಯಗಳು ಸಿಕ್ಕಿದ್ದು, ಫೆಬ್ರವರಿಯಲ್ಲಿ ನಿಂಬಾಳ್ಕರ್ ಹಾಗೂ ಹಿಲೊರಿ ವಿರುದ್ಧವೂ ಎಫ್ಐಆರ್ ದಾಖಲಿಸಿತ್ತು.

ಈ ಅಧಿಕಾರಿಗಳನ್ನು ‘ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆದಾರರ ಹಿತರಕ್ಷಣೆ ಕಾಯ್ದೆ –2004’ (ಕೆಪಿಐಡಿಎಫ್‌ಇ) ಅಡಿ ಪ್ರಾಸಿಕ್ಯೂಷನ್ ತನಿಖೆಗೆ ಒಳಪಡಿಸಲು ಅನುಮತಿ ನೀಡುವಂತೆ ‌ರಾಜ್ಯ ಸರ್ಕಾರಕ್ಕೆ ಸಿಬಿಐ ಪತ್ರ ಬರೆದಿತ್ತು.

ಸಿಐಡಿಯಲ್ಲಿ 2018-19ರ ಅವಧಿಯಲ್ಲಿ ಐಜಿಪಿ ಆಗಿದ್ದ ಹೇಮಂತ್‌ ನಿಂಬಾಳ್ಕರ್‌, ಆರ್‌ಬಿಐ ಸೂಚನೆ ಮೇರೆಗೆ ಐಎಂಎ ವಿರುದ್ಧ ತನಿಖೆ ನಡೆಸಿದ್ದರು. ಆದರೆ ಮನ್ಸೂರ್‌ ಅಲಿ ಖಾನ್‌ಗೆ ಅನುಕೂಲಕರ ವರದಿ ಸಲ್ಲಿಸಿದ್ದರು. ಅಲ್ಲದೆ ಐಎಂಎ ಪರವಾಗಿ ಕೆಲಸ ಮಾಡುವಂತೆ ಅಂದಿನ ಉಪವಿಭಾಗಾಧಿಕಾರಿ ಎಲ್‌. ಸಿ. ನಾಗರಾಜು ಮೇಲೆ ಒತ್ತಡ ಹೇರಿದ್ದರು. ಈ ಕೆಲಸಗಳಿಗೆ ಮನ್ಸೂರ್‌ ಖಾನ್‌ನಿಂದ ಭಾರೀ ಮೊತ್ತದ ಹಣ ಮತ್ತು ವಸ್ತುಗಳನ್ನು ಪಡೆದಿದ್ದರು ಎಂಬುದು ತನಿಖೆಯಲ್ಲಿ ಬಯಲಾಗಿದೆ.

ಇದನ್ನೂ ಓದಿ: ಕೊರೊನಾ ಕಿಟ್ ಹಗರಣ: ಕಾಂಗ್ರೆಸ್‌ – ಬಿಜೆಪಿ ನಡುವೆ ಜಟಾಪಟಿ

ಪೂರ್ವ ವಿಭಾಗದ ಡಿಸಿಪಿ ಅಜಯ್‌ ಹಿಲೋರಿ ಅವರು 2017ರ ಜ.1ರಿಂದ 2018ರ ಅ.16ರ ನಡುವೆ ಅಧಿಕಾರ ದುರುಪಯೋಗಪಡಿಸಿಕೊಂಡು ಐಎಂಎ ಅಕ್ರಮಗಳನ್ನು ಮುಚ್ಚಿಡಲು ವಿವಿಧ ಹಂತಗಳಲ್ಲಿ ಐಎಂಎ ಕಂಪನಿಯ ನಿರ್ದೇಶಕ ನಿಜಾಮುದ್ದೀನ್‌ ಮತ್ತು ಇತರರಿಂದ ಲಂಚ ಪಡೆದಿದ್ದಾರೆ. ಅಲ್ಲದೆ, ತಮ್ಮ ಮನೆಯ ಒಳಾಂಗಣ ವಿನ್ಯಾಸ ಸಾಮಗ್ರಿಗಳನ್ನು
ಐಎಂಎ ಮೂಲಕ ಪಡೆದಿದ್ದಾರೆ. ಈ ಮೂಲಕ ಐಎಂಎ ಅಕ್ರಮ ಮುಂದುವರೆಯಲು ನೆರವಾಗಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.

ರಾಜ್ಯ ಡಿಜಿಪಿ ಸೂಚನೆ ಮೇರೆಗೆ ಸಿಐಡಿಯ ಆರ್ಥಿಕ ಅಪರಾಧ ದಳದ ಡಿಐಜಿಪಿ ಹೇಮಂತ್‌ ನಿಂಬಾಳ್ಕರ್‌ ನೇತೃತ್ವದಲ್ಲಿ ತನಿಖೆಗೆ ವಹಿಸಲಾಗಿತ್ತು. ಇವರ ಅಧೀನದಲ್ಲಿ ಕೆಲಸ ಮಾಡುತ್ತಿದ್ದ ಡಿವೈಎಸ್ಪಿ ಇ.ಬಿ ಶ್ರೀಧರ್‌ ವಿಚಾರಣೆ ನಡೆಸಿ, ಐಎಂಎ ಕಂಪನಿಯು ಹಣಕಾಸು ಸಂಸ್ಥೆಗಳ ಅಡಿಯಲ್ಲಿ ಬರುವುದಿಲ್ಲವಾದ ಕಾರಣ ಕೆಪಿಐಡಿ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗದು. ಐಎಂಎ ಸಂಗ್ರಹಿಸಿದ ಹಣವನ್ನು ಡೆಪಾಸಿಟ್‌ ಎನ್ನಲಾಗದು ಎಂದು ವಿಚಾರಣೆ ಮುಗಿಸಿ ಷರಾ ಬರೆದು ಡಿಜಿಪಿಗೆ ವರದಿ ಸಲ್ಲಿಸಿದ್ದರು. ಈ ವರದಿಯನ್ನು  ಬೆಂಗಳೂರು ಉತ್ತರ ವಿಭಾಗದ ಅಂದಿನ ಎ.ಸಿ. ಎಲ್‌.ಸಿ ನಾಗರಾಜ್‌ ಅವರಿಗೆ ಡಿಸಿ ಮತ್ತು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮೂಲಕ ಸಲ್ಲಿಕೆಯಾಗಿತ್ತು. ಈ ಮೂಲಕ ಐಎಂಎ ಕಂಪನಿಯ ಮನ್ಸೂರ್‌ಖಾನ್‌ನನ್ನು ಕಾನೂನು ಕ್ರಮಗಳಿಂದ ರಕ್ಷಿಸಲಾಗಿದೆ ಎಂದು ಸಿಬಿಐ ಆರೋಪಿಸಿದೆ.


ಇದನ್ನೂ ಓದಿ: ಉದ್ಯಮಿಗಳಿಗಾಗಿ ರೈತರ ಭೂಮಿ ಕಿತ್ತುಕೊಂಡು ಬೀದಿ ಪಾಲು ಮಾಡುತ್ತಿದೆ ಸರ್ಕಾರ: ಶಶಿಕಾಂತ್‌ ಸೆಂಥಿಲ್‌

Spread the love

Leave a Reply

Your email address will not be published. Required fields are marked *