ಉದ್ಯಮಿಗಳಿಗಾಗಿ ರೈತರ ಭೂಮಿ ಕಿತ್ತುಕೊಂಡು ಬೀದಿ ಪಾಲು ಮಾಡುತ್ತಿದೆ ಸರ್ಕಾರ: ಶಶಿಕಾಂತ್‌ ಸೆಂಥಿಲ್‌

ಭೂಸುಧಾರಣಾ ಕಾಯಿದೆ ತಿದ್ದುಪಡಿ ತಂದು ಸುಗ್ರೀವಾಜ್ಷೆ ಹೊರಡಿಸಿರುವ ರಾಜ್ಯದ ಬಿಜೆಪಿ ಸರ್ಕಾರದ ನಡೆಯನ್ನು ವಿರೋಧಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ನೇತೃತ್ವದಲ್ಲಿ ರೈತರು, ದಲಿತರು, ಕೃಷಿ ಕಾರ್ಮಿಕರು ರಾಜ್ಯಾದ್ಯಂತ ಜಾಥಾ ನಡೆಸುತ್ತಿದ್ದು, ಇಂದು ಮೈಸೂರು ಜಿಲ್ಲೆಯ ಹುಣಸೂರಿನ ಬಳಿ ಇರುವ ದಿ. ದೇವರಾಜ್ ಅರಸು ಅವರ ಸಮಾಧಿಯ ಬಳಿ ಜಾಥಾವನ್ನು ಮಾಜಿ ಐಎಎಸ್‌ ಅಧಿಕಾರಿ ಶಶಿಕಾಂತ್‌ ಸೆಂಥಿಲ್‌ ಅವರು ಉದ್ಘಾಟನೆ ಮಾಡಿದ್ದಾರೆ.

ಜಾಥಾ ಉದ್ಘಾಟನೆಯ ನಂತರ ಮಾಡಿದ ಅವರು, ದಿವಂಗತ ದೇವರಾಜ್ ಅರಸ್ ಅವರು ಕರ್ನಾಟಕದಲ್ಲಿ ಭೂಸುಧಾರಣಾ ಕಾಯಿದೆಯನ್ನು ಜಾರಿಗೊಳಿಸಿದ ಶ್ರೇಷ್ಟ ರಾಜಕಾರಣಿ.  ಬಡವರಿಗಾಗಿ, ರೈತರಿಗಾಗಿ ಜಾರಿಗೆ ತಂದ ಈ ಕಾನೂನು ಇಂದಿಗೂ ರೈತರಿಗೆ ಗೌರವ ಮತ್ತು ಸ್ವಾಭಿಮಾನದ ಬದುಕು ಕಟ್ಟಿಕೊಟ್ಟಿದೆ. ಇಂತಹ ಕಾನೂನನ್ನು ರಾಜ್ಯದ ಬಿಜೆಪಿ ಸರ್ಕಾರ ಬುಡಮೇಲು ಮಾಡುತ್ತಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.

ಅರಸು ಅವರು ಉಳುವವನೇ ಭೂಮಿಯ ಒಡೆಯ ಎಂದು ಹೇಳುವ ಮೂಲಕ ಕೃಷಿ ಭೂಮಿಯಲ್ಲಿ ದುಡಿಯುವ ಕೃಷಿ ಕಾರ್ಮಿಕರಿಗೆ ಭೂಮಿಯನ್ನು ನೀಡುವ ಭೂಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದಿದ್ದರು. ಇಂದರಿಂದಾಗಿ ರೈತರು ತಮ್ಮ ಬದುಕು ಕಟ್ಟಿಕೊಂಡು ಬದುಕಲು ನೆರವಾಗಿತ್ತು.  ಇಂತಹ ಕಾನೂನು ದೇಶದಲ್ಲಿ ಇನ್ನೆಲ್ಲೂ ಕಾಣಲು ಸಾಧ್ಯವಿಲ್ಲ. ಇದೊಂದು ಕ್ರಾಂತಿಕಾರಕ ಕಾನೂನು.  ಉಳುವವನಿಗೇ ಭೂಮಿ ಎನ್ನುವ ಪರಿಕಲ್ಪನೆ ಎಲ್ಲಿಯೂ ಇಲ್ಲ ಎಂದು ಸೆಂಥಿಲ್‌ ಹೇಳಿದ್ದಾರೆ.

ಇಪ್ಪತ್ತೊಂದನೇ ಶತಮಾನದಲ್ಲೂ ಕೂಡ ರೈತರಿಗೆ ಮರ್ಯಾದೆ ತರುವ ಕಾನೂನು ಇದು, ಬಡವರಿಗೆ ಬದುಕು ಕೊಡುವ ಕಾನೂನು ಇದು.
ಆದರೆ, ಕರ್ನಾಟಕದಲ್ಲಿ ಕೊರೊನಾ ಕಾಲವನ್ನು ಬಳಸಿಕೊಂಡು ಸಂಪೂರ್ಣವಾಗಿ ಕಾನೂನನ್ನು ಬದಲಾಯಿಸುತ್ತಾರೆಂದು ನಾನು ಕನಸಿನಲ್ಲಿಯೂ ಯೋಚಿಸಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಬಗ್ಗೆ ನನಗೆ ಯಾವುದೇ ಅಭಿಪ್ರಾಯವಿಲ್ಲ. ಕೇಂದ್ರ ಸರ್ಕಾರ ದೇಶವನ್ನು ಕರೆದೊಯ್ಯುತ್ತಿರುವ ದಾರಿ, ಬಡಜನರನ್ನು ನಡೆಸಿಕೊಳ್ಳುವ ರೀತಿ ಎಲ್ಲವೂ ತಿಳಿದಿದೆ. ಅದನ್ನು ವಿರೋಧಿಸಿಯೇ ನಾನು ರಾಜಿನಾಮೆ ನೀಡಿದೆ. ಆದರೆ, ಕರ್ನಾಟಕ ಸರ್ಕಾರ ಈ ರೀತಿ ಮಾಡುತ್ತದೆ ಎಂದು ಊಹಿಸಿರಲಿಲ್ಲ.

ರೈತರ ಹಾಗೂ ಬಡಜನರ ವಿರೋಧಿಯಾಗಿ ಕಾನೂನುಗಳನ್ನು ತಿದ್ದುಪಡಿ ಮಾಡುತ್ತಿದ್ದಾರೆ. ಕೆಲವು ಕಾನೂನುಗಳನ್ನು ತೆಗೆದು ಹಾಕಿದ್ದಾರೆ. ಇದನ್ನು ಜನರು ಒಪ್ಪಲು ಸಾಧ್ಯವಿಲ್ಲ. ಕೊರೊನಾ ಸಮಯವನ್ನು ದುರುಪಯೋಗಪಡಿಸಿಕೊಂಡು ನಮ್ಮ ಕೈ ಬಾಯಿ ಮುಚ್ಚಿ ಇಂತಹ ಕೆಲಸಗಳಿಗೆ ಕೈ ಹಾಕಿದ್ದಾರೆ ಎಂದು ಹೇಳಿದ್ದಾರೆ.

ಇದು `ಡ್ಯಾಮೇಜಿಂಗ್’ ತಿದ್ದುಪಡಿ ಎಂತಲೇ ಹೇಳಬಹುದು. ಹೊಸ ಕಾನೂನುಗಳನ್ನು ಜಾರಿಗೆ ತರಲು ಚರ್ಚೆ ಆಗಬೇಕು, ಜನರ ಅಭಿಪ್ರಾಯಗಳನ್ನು ಕೇಳಬೇಕು ಆದರೆ ಇವತ್ತು ಅಂತಹ ಯಾವುದೇ ಚರ್ಚೆಗಳನ್ನು ಮಾಡದೇ ತಮ್ಮ ಮನಸ್ಸಿಗೆ ಬಂದAತೆ ನಡೆದುಕೊಳ್ಳುತ್ತಿದೆ.

ಎಸೆಸ್ಶಿಯಲ್ ಕಮೊಡಿಟೀಸ್ ಆಕ್ಟ್, ಎಪಿಎಂಸಿ ಆಕ್ಟ್, ಕಾಂಟ್ರಾಕ್ಟ್‌ ಫಾರ್ಮಿಂಗ್-ಮೂರು ಕಾನೂನುಗಳನ್ನು ಕೇಂದ್ರ ಸರ್ಕಾರ ಬದಲಾವಣೆ ಮಾಡಿದೆ. ಲ್ಯಾಂಡ್ ಸೀಲಿಂಗ್ ತೆಗೆಯಲಾಗಿದೆ. ಉದ್ಯಮಿಗಳಿಗೆ ಅನುಕೂಲವಾಗುವಂತೆ ಬದಲಾವಣೆಗನ್ನು ತಂದುಬಿಟ್ಟರು.
ಸರ್ಕಾರ ಬಡವರಿಗಾಗಿ ಮಾಡಿರುವ ಕಾನೂನುಗಳು ಇವು ಎಂದು ಹೇಳುತ್ತವೆ. ಆದರೆ, ರೈತರು ಇವತ್ತು ೫ ಎಕರೆ ಭೂಮಿಯನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ. ಇನ್ನು ಎಂಟು-ಹತ್ತು ವರ್ಷಗಳಲ್ಲಿ ಒಂದು ಎಕರೆ, ಎರಡು ಎಕರೆ ರೈತರ ಭೂಮಿ ಇರುತ್ತದೆ ಎನ್ನುವುದು ನನಗೆ ಅನುಮಾನ. ಎಲ್ಲಾ ರೈತರು ಕೂಡ ತಮ್ಮ ಹೊಲದಲ್ಲೇ ಕೂಲಿ ಕಾರ್ಮಿಕರಾಗುವ ಪರಿಸ್ಥಿತಿ ಬಂದಿದೆ. ಈಗಾಗಲೇ ಹಲವೆಡೆ ಇಂತಹ ಸ್ಥಿತಿ ಬಂದೊದಗಿದೆ. ನಮ್ಮ ರೈತರ ಬಳಿ ಭೂಮಿ ಇಲ್ಲದಂತಾಗಿದೆ.

ಇನ್ನೊಂದೆಡೆ ಶೇ.೯೦ರಷ್ಟು ಜನರಿಗೆ ವಾಸಿಸಲು ಮನೆ ಇಲ್ಲದ ಪರಿಸ್ಥಿತಿ ಇದೆ. ಆದರೂ ಸರ್ಕಾರಗಳು ಮಾತ್ರ ಕಾರ್ಪೋರೇಟ್‌ಗಳಿಗೆ ಭೂಮಿ ಕೊಡಲು ಮುಂದಾಗಿವೆ. ಕಳೆದ ಐದು ವರ್ಷಗಳಿಂದ ಜನರ ವಿರೋಧಿಯಾಗಿರುವ ಕಾನೂನು-ಕಾಯ್ದೆಗಳನ್ನೇ ತರಲಾಗುತ್ತಿದೆ. ಜನಪರ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ಬಂಡವಾಳಿಗರಿಗೆ ಅನುಕೂಲವಾಗುವಂತೆ ಬದಲಾಯಿಸಲಾಗುತ್ತಿದೆ. ಸ್ವಾತಂತ್ರಾö್ಯ ನಂತರದಲ್ಲಿ ಯಾವ ಸರ್ಕಾರವೂ ಈ ರೀತಿ ಆಡಳಿತ ಕೊಟ್ಟಿರಲಿಲ್ಲ.

ಇನ್ನು ಐದು ವರ್ಷದಲ್ಲಿ ಅವರು ನಮ್ಮ ಎಲ್ಲಾ ಬಡ ಜನರ ಭೂಮಿಯನ್ನು ಕಿತ್ತುಕೊಳ್ಳುತ್ತಾರೆ ಎನ್ನುವುದು ನನ್ನ ಭಾವನೆ. ಆದ್ದರಿಂದ ಜನರು ಪ್ರಶ್ನೆ ಎತ್ತಬೇಕಿದೆ. ತಮ್ಮ ಹಕ್ಕುಗಳನ್ನು ಕೇಳಬೇಕಿದೆ.

ಪ್ರಜಾಪ್ರಭುತ್ವ ಎಂದರೆ ಅವರನ್ನು ಸೀಟಿನಲ್ಲಿ ಕೂರಿಸುವುದಲ್ಲ. ಯಾವ ಸರ್ಕಾರ ಬಂದರೂ ಜನ ವಿರೋದಿಯ ಕೆಲಸಗಳನ್ನು ಮಾಡಿದರೂ, ನಾವು ಅವರನ್ನು ಪ್ರಶ್ನೆ ಮಾಡಬೇಕು ಅದೇ ಪ್ರಜಾ ಪ್ರಭುತ್ವ. ನಾವು ಪ್ರಶ್ನೆ ಮಾಡದೆ ಕುಳಿತರೆ ಪ್ರಜಾಪ್ರಭುತ್ವ ಉಳಿಯುವುದಿಲ್ಲ ಎಂದು ಕರೆ ಕೊಟ್ಟಿದ್ದಾರೆ.

ಕೊರೊನಾವನ್ನು ತೋರಿಸಿ ಬಡವರ ಬದುಕು ಕಸಿದುಕೊಳ್ಳಲಾಗುತ್ತಿದೆಯೋ ಅದನ್ನು ವಿರೋಧಿಸಬೇಕು. ಈ ಕಾಯ್ದೆ-ಕಾನೂನುಗಳ ಕುರಿತು ಯಾವ ಮಾಧ್ಯಮಗಳೂ ಚರ್ಚೆ ನಡೆಸಿಲ್ಲ, ನಡೆಸುವುದೂ ಇಲ್ಲ. ಆದ್ದರಿಂದ ಈ ಹೋರಾಟದಲ್ಲಿ ಭಾಗಿಯಾಗಿರುವ ಜನರೇ ರಾಯಭಾರಿಗಳಾಗಬೇಕು. ಈ ಕಾನೂನುಗಳ ವಿರುದ್ಧ ಚರ್ಚೆ ಹುಟ್ಟು ಹಾಕಬೇಕು. ನಮ್ಮ ಪ್ರಶ್ನೆಗಳು ವಿಧಾನಸೌಧದಲ್ಲಿ ಚರ್ಚೆಯಾಗುವಂತೆ ಮಾಡಬೇಕು ಎಂದು ಹೇಳಿದ್ದಾರೆ.

ಜಾಥಾದ ಉದ್ಘಾಟನೆಯಲ್ಲಿ ಭೂಮಿ ವಸತಿ ಹೋರಾಟ ಸಮಿತಿಯ ನೂರ್ ಶ್ರೀಧರ್, ಕುಮಾರ್ ಸಮತಳ, ವರದರಾಜ್, ಸವಿತ ಕೊಡಗು, ಮನೋಜ್, ರಾಜಶೇಖರ್ ಅಂಗಡಿ ಸೇರಿದಂತೆ ಹಲವಾರು ರೈತರು, ದಲಿತ ಮುಖಂಡರು ಇದ್ದರು.


ಇದನ್ನೂ ಓದಿ:  ನವಿಲುಗಳೊಂದಿಗೆ ಬ್ಯುಸಿಯಿರುವ ಅಹಂಕಾರಿ ವ್ಯಕ್ತಿ ಹೇರಿದ ಲಾಕ್‌ಡೌನ್‌ ಕೊರೊನಾ ಹರಡಲು ಕಾರಣ: ರಾಹುಲ್‌ಗಾಂಧಿ

Spread the love

Leave a Reply

Your email address will not be published. Required fields are marked *