ಕನ್ನಡತಿ ಅನುಷ್ಕಾ ಶೆಟ್ಟಿ
ಕರ್ನಾಟಕದಲ್ಲಿ ಕನ್ನಡತಿ/ಕನ್ನಡಿಗರಾಗಿ ಹುಟ್ಟಿ ಬೆಳೆದ ಹಲವಾರು ಕಲಾವಿದರು ಅನ್ಯ ಭಾಷಾ ಚಿತ್ರರಂಗದಲ್ಲಿ ಬಣ್ಣಹಚ್ಚಿ ಖ್ಯಾತಿ ಪಡೆದು ಸ್ಟಾರ್ಗಳಾಗಿ ಮಿಂಚುತ್ತಿದ್ದಾರೆ. ಅವರಲ್ಲಿ ಕಾಲಿವುಡ್ನಲ್ಲಿ ಮಿಂಚಿದವರು ರಜನೀಕಾಂತ್ ಮತ್ತು ಜಯಲಲಿತ. ತಮಿಳು ಸಿನಿ ಇಂಡಸ್ಟ್ರಿಯ ಟಾಪ್ ಸ್ಟಾರ್ಗಳಲ್ಲಿ ಒಬ್ಬರಾಗಿದ್ದ ಜಯಲಲಿತಾ ತಮಿಳುನಾಡು ರಾಜಕೀಯಕ್ಕೂ ತಮ್ಮ ಛಾಪನ್ನು ವಿಸ್ತರಿಸಿ ಮುಖ್ಯಮಂತ್ರಿಯಾಗಿ ರಾಜ್ಯಾಡಳಿತ ಮಾಡಿದರು. ವಿಶ್ವಸುಂದರಿ ಪಟ್ಟ ಗಿಟ್ಟಿಸಿಕೊಂಡಿದ್ದ ಐಶ್ವರ್ಯ ರೈ ಸೇರಿದಂತೆ ದೀಪಿಕಾ ಪಡುಕೋಣೆ, ಶಿಲ್ಪಶೆಟ್ಟಿ, ಫ್ರೀಡಾ ಪಿಂಟೊ, ಜೆನೆಲಿಯಾ ಡಿ’ಸೌಜಾರಂತಹ ಸ್ಟಾರ್ ಹೀರೋಯಿನ್ಗಳು ಬಾಲಿವುಡ್ ಅಂಗಳದಲ್ಲಿ ಮಿಂಚುತ್ತಿದ್ದಾರೆ.
ಅಲ್ಲದೆ ಪ್ರಿಯಾಮಣಿ, ಹರಿಪ್ರಿಯ, ಪ್ರಣೀತಾ, ನಿತ್ಯಾ ಮೆನನ್, ಮೇಘನಾ ರಾಜ್, ಸಂಜನಾ ಸೇರಿದಂತೆ ಹಲವಾರು ನಟಿಯರು ಕನ್ನಡವೂ ಸೇರಿದಂತೆ ಹಲವಾರು ಭಾಷಾ ಸಿನಿ ಇಂಡಸ್ಟ್ರಿಯಲ್ಲಿ ಬಹುಭಾಷಾ ನಟಿಯರಾಗಿ ಖ್ಯಾತಿ ಪಡೆದಿದ್ದಾರೆ. ಇವರಲ್ಲಿ ಹಲವರು ಕನ್ನಡ ಫಿಲ್ಮ್ ಇಂಡಸ್ಟ್ರಿ ಸ್ಯಾಂಡಲ್ವುಡ್ನಲ್ಲಿ ನಟಿಸಿ, ನಂತರದಲ್ಲಿ ಅನ್ಯಭಾಷಾ ಸಿನಿ ಇಂಡಸ್ಟ್ರಿಗೂ ತಮ್ಮ ನಟನೆಯನ್ನು ವಿಸ್ತರಿಸಿಕೊಂಡರು. ಇವರಲ್ಲಿ ವಿಶೇಷವೆಂಬಂತೆ ಕನ್ನಡ ಸಿನಿ ಅಡ್ಡದಲ್ಲಿ ಬಣ್ಣಹಚ್ಚದೇ ನೇರವಾಗಿ ಕನ್ನಡ ಇಂಡಸ್ಟ್ರಿ ಟಾಲಿವುಡ್ ಪ್ರವೇಶಿಸಿದವರು ಅನುಷ್ಕಾಶೆಟ್ಟಿ.

ಕನ್ನಡ ಸಿನಿಮಾ ಆಫರ್ ಕೈತಪ್ಪಿದ ನಂತರ ಟಾಲಿವುಡ್ನಲ್ಲಿ ಬಣ್ಣ ಹಚ್ಚಿದ ಅನುಷ್ಕಾ ತಮ್ಮ ಕನ್ನಡತನವನ್ನು ಆಗಾಗ್ಗೆ ಪ್ರದರ್ಶಿಸುತ್ತಾ ಕನ್ನಡಿಗರ ಮನ ಗೆದ್ದಿದ್ದಾರೆ. ಇತ್ತೀಚೆಗೆ ಅವರ ಅಮ್ಮನ ಹುಟ್ಟುಹಬ್ಬಕ್ಕೆ ವಿಷಸ್ ಹೇಳಿದ್ದ ಅನುಷ್ಕಾ, ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹುಟ್ಟುಹಬ್ಬದ ಶುಭಾಷಯಗಳು ಅಮ್ಮಾ ಎಂದು ಕನ್ನಡದಲ್ಲಿಯೇ ಬರೆದುಕೊಂಡಿದ್ದರು. ಅಂತೆಯೇ ಕಳೆದ ವಾರ ನಡೆದ ಯುಗಾದಿ ಹಬ್ಬದ ಸಂದರ್ಭದಲ್ಲಿಯೂ ಅಭಿಮಾನಿಗಳಿಗೆ ಕನ್ನಡದಲ್ಲಿಯೇ ಹಬ್ಬದ ಶುಭಾಷಯ ಕೋರಿದ್ದರು. ವಿಶೇಷ ದಿನಗಳು, ಹಬ್ಬಗಳ ಸಂದರ್ಭದಲ್ಲಿ ಕನ್ನಡದಲ್ಲಿಯೇ ಶುಭಾಷಯ ಕೋರುವ ಅನುಷ್ಕಾ ತಮ್ಮ ಕನ್ನಡತನವನ್ನು ಮರೆತಿಲ್ಲವೆಂಬುದನ್ನು ಆಗಾಗ್ಗೆ ಸಾಬೀತು ಪಡಿಸುತ್ತಿದ್ದಾರೆ.
ಅಲ್ಲದೆ, ಎಂದೂ ಕನ್ನಡ ಇಂಡಸ್ಟ್ರಿಯಲ್ಲಿ ಬಣ್ಣ ಹಚ್ಚದೇ ಇರುವ ಅನುಷ್ಕಾ ಟಾಲಿವುಡ್ ಇಂಡಸ್ಟ್ರಿಯಲ್ಲಿಯೇ ಕನ್ನಡತಿಯಾಗಿ ಬಣ್ಣಹಚ್ಚುತ್ತಿದ್ದಾರೆ. ಹಲವಾರು ಐತಿಹಾಸಿಕ ಸಿನಿಮಾಗಳಲ್ಲಿ ನಟಿಸಿರುವ ಅನುಷ್ಕಾ, ಈಗ ಮೈಸೂರು ಸಂಸ್ಥಾನದಲ್ಲಿ ಸಂಗೀತ ವಿದ್ವಾಂಸರು, ಕರ್ನಾಟಕ ಸಂಗೀತ ಸಾಧಕಿ, ದೇವದಾಸಿಯೂ ಆಗಿದ್ದ ನಾಗರತ್ನಮ್ಮ ಅವರ ಪಾತ್ರದಲ್ಲಿ ಅನುಷ್ಕಾ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಸಂಗೀತಂ ಶ್ರೀನಿವಾಸ್ ನಿರ್ದೇಶಿಸುತ್ತಿದ್ದಾರೆ.

