ಕಮಲ್ ನಾಥ್ ಸರ್ಕಾರಕ್ಕೆ ಇಂದು ಬಹುಮತ ಪರೀಕ್ಷೆ ಇಲ್ಲ; ಸುಪ್ರೀಂ ಕೋರ್ಟ್‌ಗೆ ಬಿಜೆಪಿ

ಮಧ್ಯಪ್ರದೇಶದ ರಾಜ್ಯಪಾಲರಾದ ಲಾಲ್ಜಿ ಟಂಡನ್ ಅವರ ಒಂದು ನಿಮಿಷದ ನಾಟಕೀಯ ಭಾಷಣದ ನಂತರ ವಿಧಾನಸಭೆ ಅಧಿವೇಶನವನ್ನು ಮಾರ್ಚ್ 26 ಕ್ಕೆ ಮುಂದೂಡಲಾಗಿದೆ. ಇದರಿಂದಾಗಿ ಮಧ್ಯಪ್ರದೇಶದ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ 10 ದಿನಗಳ ಕಾಲಾವಕಾಶ ಸಿಕ್ಕಂತಾಗಿದೆ. ಆಡಳಿತಾ ರೂಢ ಕಾಂಗ್ರೆಸ್‌ ಸರ್ಕಾರವನ್ನು ಉರುಳಿಸುವ ವಿಶ್ವಸ ಹೊಂದಿರುವ ಬಿಜೆಪಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದು, ನಾಳೆ ವಿಚಾರಣೆ ನಡೆಸುವ ಸಾಧ್ಯತೆಗಳಿವೆ.

ವಿಧಾನಸಭೆಗೆ ರಾಜ್ಯಪಾಲರು ನೀಡಿದ ಭಾಷಣದ ಪ್ರತಿಯ ಕೊನೆಯ ಪುಟವನ್ನು ಓದಿದ ನಂತರ ರಾಜ್ಯಪಾಲರು ಮಧ್ಯಪ್ರದೇಶದ ಕಾಂಗ್ರೆಸ್‌ ಸರ್ಕಾರವು “ಸಂವಿಧಾನವನ್ನು ಅನುಸರಿಸಬೇಕು” ಎಂದು ಹೇಳಿದರು. ಈ ನಡುವೆ “ಸದನವನ್ನು ಗೌರವಿಸಿ” ಎಂದು ಕಾಂಗ್ರೆಸ್‌ ಶಾಸಕರು ಘೋಷಣೆ ಕೂಗಲಾರಂಭಿಸುತ್ತಿದ್ದಂತೆ ರಾಜ್ಯಪಾಲರು ಸದನದಿಂದ ಹೊರನಡೆದರು.

“ಎಲ್ಲರೂ ಸಂವಿಧಾನದಡಿಯಲ್ಲಿ ನಿಯಮಗಳನ್ನು ಪಾಲಿಸಬೇಕು. ಆದ್ದರಿಂದ ಮಧ್ಯಪ್ರದೇಶದ ಘನತೆ ಕಾಪಾಡಿಕೊಳ್ಳಬೇಕು” ಎಂದು ರಾಜ್ಯಪಾಲರು ಸ್ಪೀಕರ್‌ಗೆ ಪತ್ರ ಬರೆದಿದ್ದು, 15 ತಿಂಗಳ ಕಮಲ್ ನಾಥ್ ಸರ್ಕಾರಕ್ಕೆ ಇಂದು ಬಹುಮತ ಸಾಬೀತು ಪಡಿಸಲು ಅವಕಾಶ ಮಾಡಿಕೊಡಬೇಕು ಎಂದು ತಿಳಿಸಿದ್ದಾರೆ.

ರಾಜ್ಯಪಾಲರ ವಾಕ್ ಔಟ್ ಮಾಡಿದ ಬಹಳ ಸಮಯದ ನಂತರ, ಸರ್ಕಾರದ ಮತ್ತು ಪ್ರತಿಪಕ್ಷ ಬಿಜೆಪಿಯ ಶಾಸಕರು ಸದನದ ಒಳಗೆ ಉಳಿದು ಪರಸ್ಪರ ಘೋಷಣೆಗಳನ್ನು ಕೂಗಿದರು.

ಕಮಲ್ ನಾಥ್ ಅವರು ಇಂದು ಬೆಳಿಗ್ಗೆ ರಾಜ್ಯಪಾಲರಿಗೆ ಪತ್ರವೊಂದನ್ನು ಬರೆದಿದ್ದಾರೆ, ಅವರು “ಸ್ಪೀಕರ್ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುವುದು ರಾಜ್ಯಪಾಲರ ವ್ಯಾಪ್ತಿಯಲ್ಲಿಲ್ಲ ಮತ್ತು ವಿಶ್ವಾಸಾರ್ಹ ಮತ ಯಾಚನೆಗೆ ನಿರ್ದೇಶಿಸುವುದು ಅಸಂವಿಧಾನಿಕ” ಎಂದು ಹೇಳಿದ್ದಾರೆ. ಭಾನುವಾರ ರಾತ್ರಿ ನಡೆದ ರಾಜ್ಯಪಾಲರೊಂದಿಗಿನ ಸಭೆಯಲ್ಲಿ, ಕರೋನಾ ವೈರಸ್ ಕಾರಣದಿಂದಾಗಿ ಅಧಿವೇಶನವನ್ನು ಮುಂದೂಡುವ ಆಯ್ಕೆಯನ್ನು ಕಮಲ್ ನಾಥ್ ಅವರು ರಾಜ್ಯಪಾಲರೊಂದಿಗೆ ಚರ್ಚಿಸಿದ್ದರು ಎನ್ನಲಾಗಿದೆ.

ಕಳೆದ ವಾರ ಜ್ಯೋತಿರದಿತ್ಯ ಸಿಂಧಿಯಾ ಮತ್ತವರ ಹಿಂಬಾಲಕರಾದ 22 ಕಾಂಗ್ರೆಸ್ ಶಾಸಕರ ರಾಜೀನಾಮೆಯಿಂದಾಗಿ ರಾಜ್ಯ ಸರ್ಕಾರವನ್ನು ಬೀಳಿಸುವ ಅಂಚಿಗೆ ತಂದಿದೆ. ಬಿಜೆಪಿ ಆಡಳಿತವಿರುವ ಕರ್ನಾಟಕದ ಬೆಂಗಳೂರಿಗೆ ಹಾರಿದ್ದ ಶಾಸಕರು, ಸಿಂಧಿಯಾ ಹಿಂದೆಯೇ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಆದರೆ, 22 ರಾಜೀನಾಮೆಗಳಲ್ಲಿ ಆರು ರಾಜೀನಾಮೆಗಳನ್ನು ಮಾತ್ರ ಸ್ಪೀಕರ್ ಸ್ವೀಕರಿಸಿದ್ದಾರೆ.

ಮಧ್ಯಪ್ರದೇಶ ವಿಧಾನಸಭೆಯ 230 ಸದಸ್ಯರಲ್ಲಿ ಪ್ರಸ್ತುತ 222 ಸದಸ್ಯರಿದ್ದು, ಬಹುಮತ 112 ಆಗಿದೆ. ಕಾಂಗ್ರೆಸ್ ಸದನದಲ್ಲಿ 108 ಶಾಸಕರನ್ನು ಹೊಂದಿದ್ದು, ಏಳು ಮಿತ್ರ ಶಾಸಕರ ಬೆಂಬಲವಿದೆ. ಆದರೆ, ಎಲ್ಲಾ 22 ಶಾಸಕರ ರಾಜೀನಾಮೆಯನ್ನು ಅಂಗೀಕರಿಸಿದರೆ, ಕಾಂಗ್ರೆಸ್ ಬಲವು 104ಕ್ಕೆ ಕುಸಿಯಲಿದೆ. ಹೊಸ ಬಹುಮತಕ್ಕಿಂತಲೂ ಈ ಸಂಖ್ಯೆ ಕಡಿಮೆಯಾಗಲಿದ್ದು, 107 ಶಾಸಕರೊಂದಿಗೆ ಬಿಜೆಪಿ ಸರ್ಕಾರ ರಚಿಸಬಹುದು. ಇಂತಹ ಸಂದರ್ಭದಲ್ಲಿ ಪ್ರತಿ ಮತವು ನಿರ್ಣಾಯಕವಾಗಿದ್ದು, ಸ್ವತಂತ್ರ ಶಾಸಕರಾದ ಶೇರಾ ಭೈಯಾ ಅವರು ಬಿಜೆಪಿ ಶಾಸಕರೊಂದಿಗೆ ಕುಳಿತಾಗ ಸದನದಲ್ಲಿ ಗದ್ದಲ ಉಂಟಾಯಿತು.

ಬಂಡೆದ್ದಿರುವ ಶಾಸಕರನ್ನು ಬೆಂಗಳೂರಿನಲ್ಲಿ ಸೆರೆಯಲ್ಲಿಡಲಾಗಿದೆ, ಅವರನ್ನು ಬಹುಶಃ ಅವರನ್ನು ಮರಳಿ ಕರೆತರುತ್ತೇವೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಕಳೆದ ವಾರ, “ಅಪಹರಣಕ್ಕೊಳಗಾದ” ಶಾಸಕರನ್ನು ಬನಿಡುಗಡೆಗೊಳಿಸಲು “ಸಹಾಯ” ಮಾಡುವಂತೆ ಗೃಹ ಸಚಿವ ಅಮಿತ್ ಶಾ ಅವರಿಗೆ ಮುಖ್ಯಮಂತ್ರಿ ಕಮಲ್‌ನಾಥ್‌ ಪತ್ರ ಬರೆದಿದ್ದಾರೆ.

ಒಂದು ವೇಳೆ ಸರ್ಕಾರ ವಿಶ್ವಾಸಾರ್ಹ ಮತಯಾಚನೆಯನ್ನು ಪ್ರಾರಂಭಿಸದಿದ್ದರೆ, ಪ್ರತಿಪಕ್ಷಗಳು ಸರ್ಕಾರದ ವಿರುದ್ಧ “ಅವಿಶ್ವಾಸ ನಿರ್ಣಯ”ವನ್ನು ಮಂಡಿಸಬಹುದು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights