ಕೊರೊನಾದಿಂದಾಗಿ ಯುರೋಪಿಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಕ್ರೀಡಾಕೂಟ ರದ್ದು..!
ಎಲ್ಲೆಡೆ ಕೊರೊನಾ ಸೋಂಕು ವೇಗವಾಗಿ ಹರಡುತ್ತಿರುವುದರಿಂದ ವಿಶ್ವಾದ್ಯಂತ ಕ್ರೀಡಾ ಚಟುವಟುಕೆಗಳನ್ನು ಸ್ಥಗಿತಗೊಳಸಲಾಗಿದ್ದು, ಆಗಸ್ಟ್ 25 ರಿಂದ 30 ರವರೆಗೆ ಪ್ಯಾರಿಸ್ನಲ್ಲಿ ನಡೆಯಬೇಕಿದ್ದ ಯುರೋಪಿಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಕ್ರೀಡಾಕೂಟವನ್ನು ಕೊರೊನಾ ವೈರಸ್ ಭೀತಿಯಿಂದ ರದ್ದುಪಡಿಸಲಾಗಿದೆ.
ಕೊರೊನಾ ವೈರಸ್ನ ಹರಡುತ್ತಿರುವುದರಿಂದ ವಿಶ್ವಾದ್ಯಂತ ಎಲ್ಲಾ ಕ್ರೀಡಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಅನೇಕ ಪಂದ್ಯಾವಳಿಗಳಲ್ಲಿ ಮುಂದೂಡಲ್ಪಟ್ಟಿದೆ ಅಥವಾ ರದ್ದುಗೊಂಡಿದೆ.
ಸಂಘಟನಾ ಸಮಿತಿ ಮತ್ತು ಫ್ರಾನ್ಸ್ ಅಥ್ಲೆಟಿಕ್ಸ್ ಫೆಡರೇಶನ್ ಜಂಟಿಯಾಗಿ ಹೇಳಿಕೆ ನೀಡಿದೆ. “ಕಳೆದ ಹಲವು ವಾರಗಳಿಂದ ಈ ಚಾಂಪಿಯನ್ಶಿಪ್ ನಡೆಸುವ ಆಯ್ಕೆಯನ್ನು ಚರ್ಚಿಸಿದ ನಂತರ, ಈ ಚಾಂಪಿಯನ್ಶಿಪ್ ರದ್ದುಗೊಳಿಸುವ ನಿರ್ಧಾರಕ್ಕೆ ಬಂದೆವು” ಎಂದು ತಿಳಿಸಿದೆ.
“ಈ ಸಾಂಕ್ರಾಮಿಕ ರೋಗದಿಂದ ಉಂಟಾಗುವ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು, ನಾವು ಜನರ ಆರೋಗ್ಯಕ್ಕೆ ಆದ್ಯತೆ ನೀಡಿದ್ದೇವೆ ಮತ್ತು ವೈರಸ್ ಹರಡದಂತೆ ತಡೆಯಲು ಚಾಂಪಿಯನ್ಶಿಪ್ ರದ್ದುಗೊಳಿಸಲು ತೀರ್ಮಾನಿಸಿದ್ದೇವೆ” ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಫ್ರಾನ್ಸ್ನಲ್ಲಿ 1,50,000 ಜನರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ ಮತ್ತು 20,000 ಜನರು ಸಾವನ್ನಪ್ಪಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ದೇಶದಲ್ಲಿ ಜಾರಿಗೆ ತಂದಿರುವ ಲಾಕ್ಡೌನ್ ಅನ್ನು ಮೇ 11 ರೊಳಗೆ ವಿಸ್ತರಿಸಲು ನಿರ್ಧರಿಸಿದ್ದಾರೆ.

