ತಬ್ರ್ಲೀಘ್ ಜಮಾತ್‌ ಬಗ್ಗೆ ತಿಳಿಯಬೇಕಾದ ವಿಷಯಗಳೇನು? ಡಿಟೈಲ್ ಸ್ಟೋರಿ

ಈಗ ಎಲ್ಲೆ ನೋಡಿದರೂ ತಬ್ಲೀಘ ಜಮಾತಿನ ಮಾತೇ ಮಾತು. ಇದರಿಂದಾಗಿ ಠೀವಿಯವರಿಗೆ ಟಿಆರಪಿ ಜಮಾ ಆಗಿದ್ದೇ ಆಗಿದ್ದು.
ಹೀಗಾಗಿಯೇ ಈ ಬಾರಿ ಇಲ್ಲಿಯೂ ಅದೇ ಮಾತು.

ತಬ್ಲೀಘ ಜಮಾತು ಅಂದರ `ಸಂದೇಶ ವಾಹಕರ ಸಮಿತಿ’. ಮರಕಜ ಅಂದರ ಕೇಂದ್ರ. ಇಜ್ತೆಮಾ ಅಂದರ ಸಮಾರಂಭ. ನಿಜಾಮುದ್ದೀನ ಅಂದರ ದೆಹಲಿಯ ನಿಜಾಮುದ್ದೀನ ಪ್ರದೇಶದಾಗ ಇರೋ ತಬ್ಲೀಘಿನ ಮಸೀದಿ. ಅಲ್ಲಿ ಮಾರ್ಚು 10 ರಿಂದ 13 ರವರೆಗೆ ಇಸ್ಲಾಮಿನ ಅಂತಾರಾಷ್ಟ್ರೀಯ ಸಮಾವೇಶ ನಡೆಯಿತು. ಅದರಲ್ಲಿ ಸುಮಾರು 3,600 ಜನ ಸೇರಿದ್ದರು. ಅವರು ಫೆಬ್ರವರಿ ಒಂದರಿಂದ ಅಲ್ಲಿಗೆ ಹೋಗಿ ಸೇರಿಕೊಂಡು ಮಾರ್ಚ 29 ರವರೆಗೂ ಇದ್ದರು. ಫೆಬ್ರವರಿಯೊಳಗ ಇಂಡೋನೇಷಿಯಾದಾಗ ಇಂಥಾದ್ದ ಒಂದು ಮೀಟಿಂಗ ಆಗಿತ್ತು. ಅದಕ್ಕ ಹೋಗಿ ಬಂದವರು ಕೆಲವರು ಇಲ್ಲಿಗೆ ಬಂದಿದ್ದರು. ಅವರೊಳಗ ಕೆಲವರಿಗೆ ಸೋಂಕು ತಗಲಿ ಬ್ಯಾರೆದವರಿಗೆ ಬಂತು.ಅವರನ್ನ ದೆಹಲಿ ಮಹಾನಗರ ಪಾಲಿಕೆ ಅವರು ಅವರವರ ಊರಿಗೆ ವಾಪಸ್ಸು ಕಳಿಸಲಾರದೇ ದೆಹಲಿಯ ಫಿರೋಜ ಷಾ ಕೋಟ್ಲಾ ಕ್ರಿಕೆಟ್ಟು ಆಟದ ಮೈದಾನದಾಗ ಪ್ರತ್ಯೇಕಿಸಿ (ಐಸೋಲೇಷನ್ನು), ಸಂಪರ್ಕ ನಿರೋಧಿಸಿ (ಕ್ವಾರಂಟೈನು) ಮಾಡಿ ಬಿಟ್ಟಿದ್ದರ ಆ ಸೋಂಕು ಬ್ಯಾರೆದವರಿಗೆ ಹರಡತಿದ್ದಿಲ್ಲ.

ಇನ್ನು ಕೇಂದ್ರ ಗೃಹ ಮಂತ್ರಿಯ ಕೈಕೆಳಗೆ ಕೆಲಸ ಮಾಡೋ ದೆಹಲಿ ಪೋಲಿಸರು ಥೇಟು ಹಳೇ ಕನ್ನಡ ಸಿನಿಮಾದಾಗಿನ ಪೋಲಿಸರು ಮಾಡಿದಂಗ ಎಲ್ಲಾ ಮುಗದ ಮ್ಯಾಲೆ ಕ್ರೈಂ ಸೀನಿಗೆ ಬಂದರು. ನಿಜಾಮುದ್ದೀನದ ಮುಖ್ಯಸ್ಥರು ದೆಹಲಿ ಪೋಲಿಸರು ಮತ್ತು ದೆಹಲಿ ಸರಕಾರಕ್ಕ ತಮ್ಮ ಕಾರ್ಯಕ್ರಮ ಮುಗದ ಮ್ಯಾಲೆ ಎರಡು ಪತ್ರ ಬರದರು. ನಮಗ ವಾಹನ ಪರವಾನಗಿ ಮತ್ತು ಪಾಸು ಕೊಡರಿ ಅಂದರ ಕೊಟ್ಟಿಲ್ಲ ಅಂತ ಹೇಳಿದ್ದರು. ಅವು ಕಿವುಡು ಸರಕಾರಕ್ಕ ಕೇಳಲಿಲ್ಲ.

ಮಾರ್ಚು 29 ನೇ ತಾರೀಕಿಗೆ ಪೋಲಿಸರು ಹಾಗೂ ಪಾಲಿಕೆ ಅಧಿಕಾರಿಗಳು ಮರಕಜದಿಂದ ಸುಮಾರು ಒಂದು ಸಾವಿರ ಜನರನ್ನ ಹೊರಗೆ ಕಳಿಸಿದರು. ಇಲ್ಲೇ ತಪ್ಪು ಮಾಡಿದರು. ಅವರನ್ನ ಅವರವರ ರಾಜ್ಯಕ್ಕ ಕಳಸೋ ಬದಲಿಗೆ ಅಲ್ಲೇ ದೆಹಲಿ ಒಳಗ ಇಟಗೊಂಡಿದ್ದರ ಈ ಪರಿಸ್ಥಿತಿ ಬರತಿರಲಿಲ್ಲ.

ಅದು ಹೋಗಲಿ ಬಿಡ್ರಿ. ತಬ್ಲೀಘು ಅಂದರೆ ಯಾರು? ಮುಸ್ಲೀಮರ ಒಳ ಪಂಗಡಗಳ ಬಗ್ಗೆ ತಿಳಕೊಂಡರ ಇದು ಅರ್ಥ ಆಗತದ. ಪ್ರವಾದಿ ಮೊಹಮ್ಮದ ಅವರು ಕಡೆಯ ಪ್ರವಾದಿ, ಸಂತ – ಸಂದೇಶವಾಹಕ ಅಂತ ತಿಳಕೊಂಡವರು ಸುನ್ನಿಗಳು. ಹಂಗೇನಿಲ್ಲ, ದೇವರು ಇಗಲೂ ಸಂದೇಶವಾಹಕರನ್ನ ಕಳಿಸಬಹುದು ಅಂತ ತಿಳಕೊಂಡವರು ಶಿಯಾ ಪಂಥಿಗಳು. ಭಾರತದೊಳಗ ಇರೋ ಮುಸ್ಲೀಮರ ಪೈಕಿ 90 ಶೇಕಡಾ ಜನ ಸುನ್ನಿಗಳು. ಅವರೊಳಗ ನಾಲ್ಕು – ಐದು ಸಿದ್ಧಾಂತ ಆಧಾರಿತ ಪಂಗಡಗಳು ಅವ. ಉದಾಹರಣಗೆ ಜಮಾತೇ ಇಸ್ಲಾಮಿ. ಇವರು ಮೌಲಾನಾ ಮೌದೂದಿ ಅನ್ನೂ ಧರ್ಮ ಗುರುವಿನ ಸಿದ್ಧಾಂತ ಪಾಲಿಸೋರು. ಮುಸ್ಲೀಮರು ಇತರ ಧರ್ಮದವರ ಜೊತೆ ಸ್ನೇಹ ಸಂಬಂಧ ಹೊಂದಿರಬೇಕು, ಕುರಾನನ್ನು ಭಾರತೀಯ ಭಾಷೆಗಳಿಗೆ ಭಾಷಾಂತರಿಸಬೇಕು, ವಿಜ್ಞಾನ, ರಾಜಕೀಯ ಪ್ರಜ್ಞೆ, ಆರ್ಥಿಕ ಪರಿಸ್ಥಿತಿ ಇವೆಲ್ಲದರ ಬಗ್ಗೆ ಮುಸ್ಲೀಮರು ಚಿಂತಿಸುತ್ತಾ ಇರಬೇಕು ಅಂತ ಇವರು ನಂಬತಾರ. ಅದರಂಗ ನಡಕೊಳ್ಳಲಿಕ್ಕೆ ಪ್ರಯತ್ನ ಮಾಡತಾರ. ಜಮಾತುಲ್ ಉಲೇಮಾ ಅನ್ನೋದು ಧರ್ಮಗುರುಗಳ ಸಂಘಟನೆ. ಅದರಾಗ ಬರೇ ಧರ್ಮದ ವಿಚಾರನ ಜಾಸ್ತಿ.

ತಬ್ಲೀಘ ಅನ್ನೋದು ಮುಸಲ್ಮಾನರು ಒಳ್ಳೆಯ ಮುಸಲ್ಮಾನರಾಗಿರಬೇಕು, ತಮ್ಮ ಧರ್ಮದ ಆಚರಣೆಗಳನ್ನ ಮರಿಯಬಾರದು, ದಿನಕ್ಕ ಐದು ಸಲೆ ನಮಾಜು ಮಾಡಬೇಕು, ರಮಝಾನಿನಲ್ಲಿ ಉಪವಾಸ ಮಾಡಬೇಕು, ಸುಳ್ಳು ಹೇಳಬಾರದು, ಜೂಜು ಆಡಬಾರದು, ಚುಗಲಿ (ಪುಕಾರು) ಎಬ್ಬಿಸಬಾರದು, ಇತ್ಯಾದಿಗಳನ್ನು ಮುಸಲ್ಮಾನರಿಗೆ ಹೇಳಿಕೊಡುವ ಸಂಸ್ಥೆ. ಇವರು ಮುಸಲ್ಮಾನೇತರರ ಹತ್ತಿರ ವ್ಯಾಪಾರ – ವ್ಯವಹಾರ ಮಾಡತಾರ ಆದರ ಧರ್ಮದ ಮಾತಾಡೋದಿಲ್ಲ. ಧರ್ಮ ಪ್ರಚಾರ ಅಂತೂ ದೂರದ ಮಾತು.

ಇನ್ನು ಅವರು ರಾಜಕೀಯ- ವಿಜ್ಞಾನ-ಆರ್ಥಿಕ – ಸಾಮಾಜಿಕ ಪರಿಸ್ಥಿತಿ ಬಗ್ಗೆ ಚರ್ಚೆ ಮಾಡೋದಿಲ್ಲ. ಇಂಥಾ ಸಮಕಾಲಿನ ವಿಚಾರಗಳನ್ನು ಜಮಾತೆ ಇಸ್ಲಾಮನವರು ಚರ್ಚೆ ಮಾಡತಾರ. ತಬ್ಲೀಘನವರು ಮಾಡೋದಿಲ್ಲ. ಇಸ್ಲಾಮಿಕ್ ಇತಿಹಾಸಕಾರ ಸಯ್ಯದ ಉಬೇದುರ ರಹಮಾನ ಅವರು ತಬ್ಲೀಘಿನ ಈಗಿನ ಮುಖ್ಯಸ್ಥ ಮೌಲಾನಾ ಸಾದ ಅವರನ್ನು ನವಂಬರನಲ್ಲಿ ಭೇಟಿಯಾಗಿ ಎನ್‍ಆರ್‍ಸಿ ಸಿಎಎ ಬಗ್ಗೆ ಕೇಳಿದಾಗ “ಅದೇನೂ ಗಂಭೀರ ಸಮಸ್ಯೆ ಅಲ್ಲ, ಅದು ದೇಹಕ್ಕೆ ಸಣ್ಣ ರೋಗ ಬಂದಂತೆ. ಅದು ಕೆಲವು ದಿನಗಳ ನಂತರ ಸರಿ ಯಾಗುತ್ತದೆ” ಅಂತ ಹೇಳಿದರಂತ. ಅವರು ಹಾಗೇಕೆ ಹೇಳಿದರು ಅಂದರೆ ಅವರಿಗೆ ಅದರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ, ಅಂತ ಹೇಳಿ ರಹಮಾನ ಅವರು ಇತ್ತೀಚೆಗೆ ಬರೆದ ಲೇಖನದಲ್ಲಿ ಹೇಳಿಕೊಂಡಾರ.

ಸಾದ ಅವರನ್ನ ಇಸ್ಲಾಮಿನ ಇತರ ಪಂಗಡಗಳು ದೂರ ಇಟ್ಟಾರ. ಐದಾರು ವರ್ಷದ ಹಿಂದ ಅವರು `ದೆಹಲಿಯ ನಿಜಾಮುದ್ದೀನ ಅಂದರೆ ಇಸ್ಲಾಮಿನ ಮಕ್ಕಾ- ಮದೀನಾ ಬಿಟ್ಟರೆ ಅತಿ ಪವಿತ್ರ ಮಸೀದಿ’ ಅಂತ ಘೋಷಿಸಿದರು. ಮೊದಲನೇಯದಾಗಿ ಅದು ಸುಳ್ಳು ಯಾಕಂದರ ಇಸ್ಲಾಮಿನ ಮೂರನೇ ಪವಿತ್ರ ಮಸೀದಿ ಜರೂಸಲ್ಲಮಿನ ಮಸೀದಿ.

ಇನ್ನೊಂದು ಅದು ಅತಾರ್ಕಿಕ. ಒಂದು ನೂರಕ್ಕೂ ಕಮ್ಮಿ ವಯಸ್ಸಿನ ಮಸೀದಿ 1,400 ವರ್ಷದ ಧರ್ಮದ ಮೂರನೇ ಪವಿತ್ರ ಸ್ಥಾನ ಆಗಲಿಕ್ಕೆ ಹೆಂಗ ಸಾಧ್ಯ ಅದ?

ಸಾದ ಅವರ ವಿರುದ್ಧ ದೇವಬಂದನ ವಿಧ್ವಾಂಸರು ಫತ್ವಾ (ಅಭಿಪ್ರಾಯ) ಹೊರಡಿಸಿದರು. ಆ ನಂತರ ಅವರ ಗುಂಪು ವಿಭಜನೆ ಆತು. ಈಗ ನಿಜಾಮುದ್ದೀನ ಮಸೀದಿ ಹಾಗೂ ಶೂರಾ ಮಸೀದಿ ಅಂತ ಎರಡು ಗುಂಪು ಅವ. ನಿಜಾಮುದ್ದೀನನ ಹಿಂಬಾಲಕರು ಉತ್ತರ ಭಾರತದಾಗ ಜಾಸ್ತಿ ಇದ್ದರ ಶೂರಾದ ನಂಬಿಕಸ್ತರು ದಕ್ಷಿಣ ಭಾರತದಾಗ ಜಾಸ್ತಿ.

ಕರ್ನಾಟಕದ ಹೆಚ್ಚಾನು ಹೆಚ್ಚು ಮುಸ್ಲೀಮರು ಶೂರಾ ಮಸೀದಿಗೆ ನಡಕೊಳ್ಳೋರು.

ಮಹಮ್ಮದ ಇಲ್ಯಾಸ ಅನ್ನುವ ದೇವಬಂದಿ ಧರ್ಮ ಗುರುಗಳು ತಬ್ಲೀಘ ಜಮಾತನ್ನು 1926-27 ರೊಳಗ ಆರಂಭ ಮಾಡಿದರು. ಅವರಿಗೆ ಮುಸ್ಲೀಮರಿಗೆ ತಮ್ಮ ಧರ್ಮದ ಅರಿವಿಲ್ಲ. ಅವರ ಆಚಾರ – ವಿಚಾರ ಧರ್ಮಸಿಂಧುವಿನ ಪ್ರಕಾರ ಇಲ್ಲ ಅನ್ನುವ ಕೊರಗು ಇತ್ತು. ಅತಿ ಕಮ್ಮಿ ಖರ್ಚಿನಲ್ಲಿ ಸಂಘಟನೆ ಕಟ್ಟಬೇಕು, ಅತಿ ಬಡವರು, ಅಶಿಕ್ಷಿತರು ಇದರಿಂದ ಲಾಭ ಪಡಿಬೇಕು ಅಂತ ಅವರಿಗೆ ಅನ್ನಿಸಿತು. ಅವರ ಚಿಂತನೆ ಪ್ರಕಾರ ಇಂದಿಗೂ ತಬ್ಲೀಘಿನವರು ಸಮಾಜದ ಅತ್ಯಂತ ಬಡ- ಅಶಿಕ್ಷಿತರ ನಡುವೆ ಕೆಲಸಾ ಮಾಡತಾರ. ಕೂಲಿಕಾರರು, ದುಡಕೊಂಡು ತಿನ್ನೋರು, ಟೈರು ಪಂಚರ ಮಾಡೊರು, ಕಾಯಿಪಲ್ಯಾ ಮಾರಾಟ ಮಾಡೋರು, ಭಿಕ್ಷಾ ಬೇಡೋ ಫಕೀರರು, ಇಂಥವರೆಲ್ಲಾ ಇದರ. ಅವರ ನಡೂವನ ಇರತಾರ. ಸಂಘಟನೆಗೆ ಬಹಳ ಕಟ್ಟು ಪಾಡು ಇಲ್ಲ. ಸಭೆಗೆ ಅವರು ಖರ್ಚು ಮಾಡೋದಿಲ್ಲ. ಮಸೀದಿ ಪ್ರಾಂಗಣದಾಗನ ಸಭೆ.

ಸದಸ್ಯರು ಪ್ರವಾಸ ಮಾಡೋದು ಕಡ್ಡಾಯ. ಅವರು ವರ್ಷಕ್ಕ 10 ರಿಂದ 40 ದಿವಸ ಪ್ರವಾಸ ಮಾಡತಾರ. ಅವರು ಪ್ರವಾಸ ಮಾಡುವಾಗ ಕಡ್ಡಾಯವಾಗಿ ಮಸೀದಿಯೊಳಗ ಇರತಾರ. ಅಲ್ಲೇ ಒಲಿ ಹಚ್ಚಿ ಅಡಗಿ ಮಾಡತಾರ. ಅಲ್ಲೇ ಮಲಕೋತಾರ. ಸಂಜೆ ನಮಾಜಿಗೆ ಮೊದಲು ಸ್ಥಳೀಯ ನಾಯಕನೊಬ್ಬನನ್ನು ಕರಕೊಂಡು ಹೋಗಿ ಮುಸ್ಲೀಮ ಮನಿ- ಮನಿಗೆ ಹೋಗಿ ಪ್ರಾರ್ಥನೆಗೆ ಕರೀತಾರ. ಪ್ರಾರ್ಥನೆ ನಂತರದ ಭಾಷಣ ಸಂಘಟನೆಯ ನಾಯಕರೇ ಮಾಡಬೇಕಂತ ಇಲ್ಲ. ಹೊಸದಾಗಿ ಸೇರಿದ ಯುವಕರ ಹತ್ತರನೂ ಭಾಷಣ ಮಾಡಸ್ತಾರ. ಅತಿ ಕಮ್ಮಿ ಖರ್ಚಿನಾಗ ಸಂಘಟನೆ ನಡಸಬೇಕು ಅನ್ನೋದು ಒಂದು ಅವರ ನಿಯಮ.

ಅವರು ಹೆಚ್ಚು ಓದಿರೋದಿಲ್ಲ. ಅರ್ಧಕ್ಕ ಸಾಲಿ ಬಿಟ್ಟಿರತಾರ. ದಿನ ನಿತ್ಯ ಪೇಪರ್ ಓದೋದಿಲ್ಲ. ಠೀವಿ ನೋಡಿ- ಚರ್ಚೆ ಮಾಡಿ, ಸೋಷಿಯಲ್ ಮೀಡಿಯಾದಾಗ ವಿಚಾರ ವಿನಿಮಯ ಮಾಡೋ ಅಷ್ಟು ಅವರಿಗೆ ಶಿಕ್ಷಣ ಇರಂಗಿಲ್ಲ. ಹೊಟ್ಟಿ ತುಂಬಿಕೊಳ್ಳೋದರಾಗ ಅವರ ಶಕ್ತಿ- ಬುದ್ಧಿ ಖರ್ಚಾಗಿರತದ. ನಾ ಎಲ್ಲೆ ಧರ್ಮ ಬಿಟ್ಟು ಹೊಂಟೇನೋ ಅನ್ನೋ ಹೆದರಿಕಿ ಒಳಗ ಅವರು ತಬ್ಲೀಘಿಗೆ ಬಂದಿರತಾರ.

ತಬ್ಲೀಘು- ಜಮಾತು-ನಿಜಾಮುದ್ದೀನು- ಮರಕಜು- ಇಜ್ತೆಮಾ ಅನ್ನೋದು ಇತರರಿಗೆ ಎಷ್ಟು ಅಪರಿಚಿತನೋ, ಇವರಿಗೆ ಕೋವಿಡ್ಡು-ಐಸೋಲೇಷನ್ನು – ಕ್ವಾರಂಟೈನು- ಪಿಸಿಆರು- ಥ್ರೋಟು ಸ್ವಾಬು- ಹರ್ಡು ಇಮ್ಯನಿಟಿ ಅನ್ನೋವೆಲ್ಲಾ ಅಷ್ಟೇ ಅಪರಿಚಿತ.
ಇದು ಇತರರಿಗೆ ಅರ್ಥ ಆದರೆ ಅರ್ಧ ಕೆಲಸ ಆದಹಂಗ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights