ಪ್ರತಿಭಟನಾಕಾರರ ಮೇಲೆ ಗುಂಡು : ಇದು ಹಿಟ್ಲರ್‌ ಮುಸ್ಸಲೋನಿ ರಾಜ್ಯವೇ? – ಸಿದ್ದು ಗರಂ

144 ಸೆಕ್ಷನ್‌ ಉಲ್ಲಂಘಿಸಿ ಎಂದು ಯಾವುದೇ ರಾಜಕೀಯ ಪಕ್ಷಗಳು ಕರೆ ಕೊಟ್ಟಿರಲಿಲ್ಲ. ಜನ ಪಕ್ಷಾತೀತವಾಗಿ ಕರಾಳ ಕಾಯ್ದೆಯ ವಿರುದ್ಧ ಹೋರಾಡುತ್ತಿದ್ದರು. ಅವರು ಮೇಲೆ ಗುಂಡು ಹೊಡೆಯುವುದು ಎಂದರೇನು? ಇದು ಹಿಟ್ಲರ್‌ ಮುಸ್ಸಲೋನಿ ರಾಜ್ಯವೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನಾನು ಈಗ 2 ಗಂಟೆಗೆ ಮಂಗಳೂರಿಗೆ ಹೋಗುತ್ತಿದ್ದೇನೆ. ಜನರಿಗೆ ಸಾಂತ್ವನ ಹೇಳಲು ಜನರ ಪ್ರತಿನಿಧಿಯಾಗಿ ಹೋಗುತ್ತಿದ್ದೇನೆ. ಅಲ್ಲಿ ಅಮಾನುಷವಾಗಿ ಕೊಂದಿದ್ದಾರೆ ಇಬ್ಬರನ್ನು.. ಅವರ ಕುಟುಂಬಕ್ಕೆ ಪರಿಹಾರ ಕೊಡಬೇಕು. ಆ ಜೀವಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಿಪಡಿಸಿದ್ದಾರೆ.

ಏನ್ರಿ ಗುಂಡು ಹೊಡೆದರೂ ಯಾರೂ ಸತ್ತಿಲ್ಲ ಎಂದು ಒಬ್ಬ ಪೊಲೀಸ್‌ ಹೇಳುವ ವಿಡಿಯೋ ಟಿವಿಯಲ್ಲಿ ನೋಡಿದೆ. ಸರ್ಕಾರದಿಂದ ಸೂಚನೆಯಿಲ್ಲದೇ ಗುಂಡುಹೊಡೆದರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ದೇಶಾದ್ಯಂತ ಹಿಂಸೆಯ ಹಿಂದೆ ಇರುವವರು ನರೇಂದ್ರ ಮೋದಿ ಮತ್ತು ಅಮಿತ್‌ ಶಾ. ಅವರು ಕರ್ನಾಟಕದಲ್ಲಿ ಯಡಿಯೂರಪ್ಪನವರ ಸರ್ಕಾರದ ಮೂಲಕ ಹಿಂಸೆ ಉಂಟುಮಾಡುತ್ತಿದ್ದಾರೆ. ನಾನು ಪೊಲೀಸರ ಅಮಾನವೀಯ ವರ್ತನೆಯನ್ನು, ಸರ್ಕಾರದ ಧೋರಣೆಯನ್ನು ಖಂಡಿಸುತ್ತೇನೆ. ಮೂಲಭೂತ ಹಕ್ಕುಗಳನ್ನು ದಮನ ಮಾಡುತ್ತಿರುವ ಈ ಸರ್ಕಾರ ವಿರುದ್ಧ ಹೋರಾಡುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ನಮ್ಮ ರಾಜ್ಯದ ಜನತೆ ಶಾಂತಿಪ್ರಿಯರು. ಈ ನೆಲದ ಕಾನೂನಿಗೆ ಗೌರವಕೊಡುವವರು. ನಮ್ಮ ಆಡಳಿತದಲ್ಲಿ ಒಂದು ಸಣ್ಣ ಲಾಠಿಚಾರ್ಜ್‌ ಬಿಟ್ಟರೆ ಉಳಿದಂತೆ ಯಾವುದೇ ಹೋರಾಟಗಳನ್ನು ದಮನ ಮಾಡಿಲ್ಲ. ಐದು ವರ್ಷಗಳಲ್ಲಿ ನಮಗೆ ಬಂದೂಕುಗಳು ನೆನಪಿಗೆ ಬರಲೇ ಇಲ್ಲ. ಬಡವರಿಗೆ ಅಕ್ಕಿ, ಮಕ್ಕಳಿಗೆ ಹಾಲು, ಮೊಟ್ಟೆ ಕೊಡಬೇಕು, ರೈತರ ಸಾಲ ಮನ್ನಾ ಮಾಡೋದು, ಇದೇ ನಮ್ಮ ಉದ್ದೇಶವಾಗಿತ್ತು. ಕಬ್ಬು ಬೆಳೆಗಾರರು ದೊಡ್ಡ ಹೋರಾಟ ನಡೆಸಿದ್ದರು. ನಾವು ಅದಕ್ಕೆ ಅವಕಾಶ ನೀಡಿದ್ದಲ್ಲದೇ ಶಾಂತಿಯುತ ಮಾತುಕತೆ ಮೂಲಕ ಅದನ್ನು ಬಗೆಹರಿಸಿದ್ದೆವು. ಆದರೆ ಈ ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ರಾಮಚಂದ್ರಗುಹಾ ಒಬ್ಬ ದೊಡ್ಡ ಇತಿಹಾಸಕಾರ. ಅವರು ನಿನ್ನೆ ಟೌನ್‌ಹಾಲ್‌ ಮುಂದೆ ಗಲಾಟೆ ಮಾಡುತ್ತಿರಲಿಲ್ಲ. ಶಾಂತ ರೀತಿಯಲ್ಲಿ ಪ್ರತಿಭಟಿಸುತ್ತಿದ್ದರು. ಅವರು ಅಭಿಪ್ರಾಯ ಹೇಳಲು ಬಿಡದ ಪೊಲೀಸರನ್ನು ಪಾಪ ಅವರನ್ನು ಎಳೆದಾಡಿ ಬಂಧಿಸಿದ್ದಾರೆ. ಇದು ರಾಜ್ಯಕ್ಕೆ ನಾಚಿಕೆಯಲ್ಲವೇ ಎಂದಿದ್ದಾರೆ.

ಈ ಕಾಯ್ದೆಯಲ್ಲಿ ಮೂರು ದೇಶಗಳಿಂದ ಬಂದಿರುವ ಮುಸ್ಲಿಮೇತರರಿಗೆ ಪೌರತ್ವ ಕೊಡುತ್ತೀವಿ ಎಂದು ಏಕೆ ಬರೆದಿದ್ದೀರಿ? ಇದು ತಾರತಮ್ಯ ಅಲ್ಲವೇ? ಇದಕ್ಕೆ ಒಂದು ಧರ್ಮವನ್ನು ಟಾರ್ಗೆಟ್‌ ಮಾಡುತ್ತಿಲ್ಲವೇ? ಅದಕ್ಕೆ ಜನ ಪ್ರತಿಭಟನೆ ನಡೆಸುತ್ತಿದ್ದಾರೆ. ದೇಶದ ಜನ ಜಾತಿ ಮತ ಲಿಂಗಬೇಧ ತೊರೆದು ಹೋರಾಡುತ್ತಿದ್ದಾರೆ. ರಾಮಚಂದ್ರ ಗುಹಾ ಮುಸಲ್ಮಾನರೆ ಎಂದು ಸಿದ್ದು ಪ್ರಶ್ನಿಸಿದ್ದಾರೆ.

ದೇಶದ ಆರ್ಥಿಕ ಪರಿಸ್ಥಿತಿ ಕುಸಿದುಹೋಗಿದೆ. ಜಿಡಿಪಿ ನಾಲ್ಕು ಕ್ಕಿಂತ ಕಡಿಮೆ. ನಿರುದ್ಯೋಗ ೪೫ ವರ್ಷ ಬೆಲೆಏರಿಕೆ ಗಗನ, ಫ್ಯಾಕ್ಟರಿ ಮುಚ್ಚಿಹೋಗುತ್ತಿದೆ. ಜನ ಬೀದಿಗೆ ಬೀಳುತ್ತಿದ್ದಾರೆ. ಇದನ್ನು ಮರೆಮಾಚಲು ಸರ್ಕಾರ ಈ ಕಾಯ್ದೆ ಜಾರಿಗೆ ತರುತ್ತಿದೆ.

ಜನರ ನೈಜ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು ಅಲ್ವಾ.. ಅಮಿತ್‌ ಶಾ ಈ ಕಾಯದೆ ಕಾಂಟ್ರವರ್ಸಿ ಅಲ್ಲಾ ಎಂದು ಹೇಳಿದ್ದಾರೆ. ಹಾಗಾದರೆ ನಾವು ಈ ದೇಶದ ಜನ ಎಂದು ಖಚಿತಪಡಿಸಲು ಜನ ಏಕೆ ರಿಸ್ಕ್‌ ತೆಗೆದುಕೊಳ್ಳಬೇಕು ಇದು ಬ್ರಿಟಿಷ್‌ ಕಾಲ, ಜಲಿಯನ್‌ ವಾಲಾಬಾಗ್, ಹಿಟ್ಲರ್ ಮುಸಲೋನಿಯವರ ಆಡಳಿತವನ್ನು ನೆನಪಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಿಜೆಪಿ ಸರ್ಕಾರಕ್ಕೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲ. ಸಂವಿಧಾನದ ಗೌರವ ಇಲ್ಲ. ಅದಕ್ಕಾಗಿ ಇಂಟರ್‌ನೆಟ್‌, ಸಾಮಾಜಿಕ ಮಾಧ್ಯಮಗಳನ್ನು ಬಂದ್‌ ಮಾಡಿದ್ದಾರೆ. ಸುಪ್ರೀಂ ಕೋರ್ಟ್‌‌ನಲ್ಲಿ ಪ್ರಕರಣವಿದೆ. ದೇಶಾದ್ಯಂತ ಹೋರಾಟ ನಡೆಯುತ್ತಿದೆ. ಈಗಿದ್ದಾಗ ಈ ಕಾಯ್ದೆಯನ್ನು ಹೇಗೆ ಜಾರಿಗೊಳಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights