ಮುಖ್ಯಮಂತ್ರಿ ಸ್ಥಾನಕ್ಕೆ ಕಮಲ್ ನಾಥ್ ರಾಜೀನಾಮೆ! ಬಿಜೆಪಿಯ ಆಪರೇಷನ್‌ಗೆ ಸರ್ಕಾರ ಬಲಿ!
ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‌ನಾಥ್ ವಿಶ್ವಾಸಮತ ಯಾಚನೆಗೂ ಮುನ್ನವೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇಂದು ಮಧ್ಯಾಹ್ನ 12 ಗಂಟೆಗೆ ಪತ್ರಿಕಾಗೋಷ್ಠಿ ಕರೆದಿದ್ದ ಕಮಲ್ ನಾಥ್ ರಾಜ್ಯಪಾಲಿಗೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿ, ಬಿಜೆಪಿಯು ತನ್ನ ಸರ್ಕಾರವನ್ನು ಮೊದಲ ದಿನದಿಂದ ಕೆಳಗಿಳಿಸಲು ಸಂಚು ರೂಪಿಸಿತ್ತು ಮತ್ತು “ಪ್ರಜಾಪ್ರಭುತ್ವವನ್ನು ಬಿಜೆಪಿ ಕೊಲೆ ಮಾಡಿದೆ” ಎಂದು ಆರೋಪಿಸಿದ್ದಾರೆ.
ಬಿಜೆಪಿಯ ಆಪರೇಷನ್ ರಂಗ್‌ಪಂಚಮಿಯಿಂದಾಗಿ ಭಂಡಾಯ ಎದ್ದಿದ್ದ ಕಾಂಗ್ರೆಸ್‌ನ 22 ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇಂದು ಸ್ಪೀಕರ್ ಈ ಎಲ್ಲಾ ಶಾಸಕರ ರಾಜೀನಾಮೆಯನ್ನು ಅಂಗೀಕರಿಸಿದ್ದರು. ಇದರಿಂದಾಗಿ ಮಧ್ಯಪ್ರದೇಶ ವಿಧಾನಸಭೆಯ ಬಲಾಬಲ 206ಕ್ಕೆ ಕುಸಿದಿದೆ. ಇಬ್ಬರು ಸದಸ್ಯರ ಮರಣದಿಂದಾಗಿ ಎರಡು ಸ್ಥಾನಗಳು ಖಾಲಿ ಇವೆ. ಬಹುಮತಕ್ಕೆ 104 ಸದಸ್ಯರ ಅಗತ್ಯವಿದ್ದು ಕಾಂಗ್ರೆಸ್ ಸದ್ಯಕ್ಕೆ 92 ಸದಸ್ಯರನ್ನು ಒಳಗೊಂಡಿದ್ದು 07 ಇತರ ಪಕ್ಷಗಳ ಮತ್ತು ಸ್ವತಂತ್ರ ಶಾಸಕರ ಬೆಂಬಲ ಪಡೆದಿದ್ದು ಅದರ ಒಟ್ಟು ಬಲ 99 ಇದೆ. ಸರಳ ಬಹುಮತಕ್ಕೆ 04 ಸದಸ್ಯರ ಕೊರತೆಯುಂಟಾಗಿತ್ತು.
ಭಂಡಾಯ ಶಾಸಕರು ಬಿಜೆಪಿ ಅಧಿಕಾರದಲ್ಲಿರುವ ಕರ್ನಾಟಕದ ಬೆಂಗಳೂರಿನ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಅವರನ್ನು ಸಂಪರ್ಕಿಸುವಲ್ಲಿ ವಿಫಲವಾಗಿದ್ದ ಕಾಂಗ್ರೆಸ್ ಬಹುಮತ ಯಾಚನೆಗೆ 15 ದಿನಗಳ ಕಾಲಾವಕಾಶ ಕೇಳಿತ್ತು. ಆದರೆ, ಸುಪ್ರೀಂ ಇಂದು ಸಂಜೆ 05 ಗಂಟೆಯೊಳಗೆ ವಿಶ್ವಾಸಮತ ಸಾಬೀತು ಪಡಿಸುವಂತೆ ಆದೇಶಿಸಿತ್ತು.
ಸುಪ್ರೀಂ ಆದೇಶದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ 2ಕ್ಕೆ ಮಧ್ಯಪ್ರದೇಶ ವಿಶ್ವಾಸಮತ ಯಾಚನೆಗೆ ಸಮಯ ನಿಗದಿ ಮಾಡಲಾಗಿತ್ತು. ಆದರೆ, ವಿಶ್ವಾಸಮತಕ್ಕೂ ಮನ್ನವೇ ಕಮಲ್‌ನಾಥ್ ರಾಜೀನಾಮೆ ಘೋಷಿಸಿದ್ದಾರೆ.

