ರವೀಶ್ ಕುಮಾರ್ ರವರಿಗೆ ನಾಳೆ ಗೌರಿ ಲಂಕೇಶ್ ಪ್ರಶಸ್ತಿ: ಪುಸ್ತಕ ಬಿಡುಗಡೆ, ಗೌರಿಲಂಕೇಶ್ ನ್ಯೂಸ್ ವೆಬ್ ಸೈಟ್ ಲೋಕಾರ್ಪಣೆ..

Ndtv ಹಿಂದಿಯ ವ್ಯವಸ್ಥಾಪಕ ಸಂಪಾದಕ, ದಿಟ್ಟ ಪತ್ರಕರ್ತ ರವೀಶ್ ಕುಮಾರ್ ರವರು ನಾಳೆ ಬೆಂಗಳೂರಿನಲ್ಲಿ ‘ಗೌರಿ ಲಂಕೇಶ್ ರಾಷ್ಟ್ರೀಯ ಪತ್ರಿಕೋದ್ಯಮ ಪ್ರಶಸ್ತಿ’ಸ್ವೀಕರಿಸಲಿದ್ದಾರೆ.

ಗೌರಿ ಸ್ಮಾರಕ ಟ್ರಸ್ಟ್ ನಿಂದ ಪ್ರಶಸ್ತಿ ನೀಡಲಾಗುತ್ತಿದ್ದು ಪ್ರಶಸ್ತಿ ಪ್ರದಾನ ಸಮಾರಂಭವು ಸೆಪ್ಟೆಂಬರ್ 22ರ ಭಾನುವಾರ ಸಂಜೆ 4 ಗಂಟೆಗೆ ನಗರದ ಸೇಂಟ್ ಜೋಸೆಫ್ ಕಾಲೇಜ್ ಆಡಿಟೋರಿಯಂ, ಲ್ಯಾಂಗ್‍ಫೋರ್ಡ್ ರಸ್ತೆ, ರಿಚ್‍ಮಂಡ್ ಸರ್ಕಲ್ ಹತ್ತಿರ, ನಡೆಯಲಿದೆ.

ಅಂದು ಟ್ರಸ್ಟಿನ ಗೌರವ ಕಾರ್ಯದರ್ಶಿಗಳೂ, ಹಿರಿಯ ಭಾಷಾ ಶಾಸ್ತ್ರಜ್ಞರೂ ಆಗಿರುವ ಪ್ರೊ. ಗಣೇಶ ದೇವಿಯವರು ಗೌರಿ ಲಂಕೇಶ್ ಸ್ಮಾರಕ ಉಪನ್ಯಾಸವನ್ನು ಮಾಡಲಿದ್ದಾರೆ. ಹಿರಿಯ ಪತ್ರಕರ್ತರಾದ ಡಿ.ಉಮಾಪತಿಯವರ ‘ದೆಹಲಿ ನೋಟ’ ಮತ್ತು ವಿನಯಾ ಒಕ್ಕುಂದರವರ ‘ನೀರನಡೆ’ ಪುಸ್ತಕ ಬಿಡುಗಡೆಯೂ ನಡೆಯಲಿದೆ. ಜೊತೆಗೆ ‘ಗೌರಿ ಲಂಕೇಶ್ ನ್ಯೂಸ್’ gaurilankeshnews.com ವೆಬ್‍ಸೈಟ್ ಲೋಕಾರ್ಪಣೆ ಸಹ ನಡೆಯಲಿದೆ.

 

ರವೀಶ್ ಕುಮಾರ್ ಅವರು ತಮ್ಮ ಹರಿತವಾದ ಸುದ್ದಿ ವಿಶ್ಲೇಷಣೆಗೆ ಮತ್ತು ರಾಜಿ ಇಲ್ಲದ ಸೆಕ್ಯುಲರ್ ನಿಲುವಿಗೆ ಬದ್ಧರಾಗಿದ್ದಾರಷ್ಟೇ ಅಲ್ಲದೆ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ತಮ್ಮ ವೃತ್ತಿ ಘನತೆಯನ್ನು ಎತ್ತಿಹಿಡಿಯುತ್ತಾ, ಪ್ರಜಾತಾಂತ್ರಿಕ ನಿಲುವಿಗೆ ಅಚಲವಾದ ನಿಷ್ಠಯನ್ನು ತೋರುತ್ತಾ ಬಂದಿದ್ದಾರೆ. ಇಂಥವರು ಗೌರಿ ಪ್ರಶಸ್ತಿಯ ಮೊದಲ ಪುರಸ್ಕೃತರು ಎಂಬುದು ನಮಗೆಲ್ಲಾ ಹೆಮ್ಮೆಯ ವಿಷಯ ಎಂದು ಗೌರಿ ಸ್ಮಾರಕ ಟ್ರಸ್ಟಿನ ಅಧ್ಯಕ್ಷರಾದ ಎಚ್.ಎಸ್ ದೊರೆಸ್ವಾಮಿಯವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಕವಿತಾ ಲಂಕೇಶ್, ತೀಸ್ತಾ ಸೆಟ್ಲವಾದ್, ಕೆ.ಫಣಿರಾಜ್ ಮಂತಾದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಪ್ರಶಸ್ತಿಯು ಗೌರವ ಫಲಕ ಮತ್ತು ಒಂದು ಲಕ್ಷ ರೂ.ಗಳ ಸನ್ಮಾನ ಧನವನ್ನು ಒಳಗೊಂಡಿರುತ್ತದೆ. ಕಾರ್ಯಕ್ರಮದ ಹೆಚ್ಚಿನ ವಿವರಗಳಿಗಾಗಿ 9448127571, 9448256216 ಈ ನಂಬರ್ ಗಳಿಗೆ ಸಂಪರ್ಕಿಸಬಹುದಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights