ರಾಜಸ್ಥಾನ: ಆಪರೇಷನ್ ಕಮಲ ವಿಫಲ; ಕಾಂಗ್ರೆಸ್‌ ಸರ್ಕಾರ ಸ್ಥಿರ: ಬಿಜೆಪಿಗೆ ಮುಖಭಂಗ!

ಕಳೆದ ಎರಡು ತಿಂಗಳಿಂದ ಅಳಿವು-ಉಳಿವಿನ ಅಂಚಿನಲ್ಲಿದ್ದ ಕಾಂಗ್ರೆಸ್‌ ಸರ್ಕಾರ ಕೊನೆಗೂ ಬಹುಮತ ಸಾಬೀತು ಪಡಿಸಿ ಸರ್ಕಾರವನ್ನು ಉಳಿಸಿಕೊಂಡಿದೆ. ಇದರಿಂದಾಗಿ ರಾಜಸ್ಥಾನದ ವಿಧಾನಸಭೆಯಲ್ಲಿಂದು ಬಿಜೆಪಿ ಮಂಡಿಸಿದ ಅವಿಶ್ವಾಸ ಮತ ಗೊತ್ತುವಳಿಗೆ ಸೋಲುಂಡಿದ್ದು, ಬಿಜೆಪಿ ಮುಖಭಂಗ ಅನುಭವಿಸಿದೆ.

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಪರವಾಗಿ 125 ಮತಗಳು ಬಂದರೆ, ಅವಿಶ್ವಾಸ ಮತದ ಪರವಾಗಿ ಕೇವಲ 75 ಮತಗಳು ಮಾತ್ರ ಚಲಾವಣೆಗೊಂಡಿದ್ದು, ಅವಿಶ್ವಾಸವನ್ನು ಮಂಡಿಸುವಲ್ಲಿ ಬಿಜೆಪಿ ವಿಫಲವಾಗಿದೆ.

ಕಾಂಗ್ರೆಸ್‌ನ ಎಲ್ಲಾ ಬಂಡಾಯಗಾರರು ಸೇರಿ 107 ಸದಸ್ಯರು, 13 ಪಕ್ಷೇತರ ಶಾಸಕರು, ಸಿಪಿಎಂ ಇಬ್ಬರು ಸದಸ್ಯರು ಸೇರಿದಂತೆ ಒಟ್ಟು 125 ಮತಗಳು ಅಶೋಕ್ ಗೆಹ್ಲೋಟ್ ಪರವಾಗಿ ಬಂದವು. ಹೀಗಾಗಿ ಒಂದು ತಿಂಗಳ ಕಾಲ ಅನಿಶ್ಚಿತತೆಯಲ್ಲಿದ್ದ ಸರ್ಕಾರಕ್ಕೆ ದೊಡ್ಡ ಗೆಲುವು ಸಿಕ್ಕಂತಾಗಿದೆ.

ರಾಜಸ್ಥಾನ ಸರ್ಕಾರ ಉರುಳಿಹೋಗುವ ಎಲ್ಲಾ ಲಕ್ಷಣಗಳಿದ್ದರೂ ಒಂದು ತಿಂಗಳಾಂತ್ಯದಲ್ಲಿ ನಡೆದ ದಿಢೀರ್ ಬೆಳವಣಿಗೆಯಲ್ಲಿ ಸರ್ಕಾರ ಭದ್ರವಾಗಿದೆ.

ಗೆಹ್ಲೋಟ್ ವಿರುದ್ಧ ಬಂಡಾಯ ಎದ್ದಿದ್ದ ಸಚಿನ್ ಪೈಲಟ್ ಅವರು ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿಯೊಂದಿಗೆ ಮಾತುಕತೆ ನಡೆಸಿದ ಬಳಿಕ ಬಂಡಾಯ ತಣ್ಣಗಾಗಿತ್ತು. ಇದು ಗೆಹ್ಲೋಟ್ ಗೆಲುವಿನ ಹಾದಿಯನ್ನು ಸುಗಮಗೊಳಿಸಿತು.

ಬಹುಜನ ಸಮಾಜ ಪಕ್ಷದ ಆರು ಸದಸ್ಯರನ್ನು ಕಾಂಗ್ರೆಸ್  ಸೇರ್ಪಡೆಗೆ ಒಪ್ಪಿಗೆ ನೀಡುವ ಸ್ಪೀಕರ್ ನಿರ್ಧಾರಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿತ್ತು. ರಾಜಸ್ಥಾನ ಹೈಕೋರ್ಟ್ ಕೂಡ ಅದೇ ಮಾರ್ಗವನ್ನು ಅನುಸರಿಸಿತ್ತು.

ಆದರೆ ಇಂದು ಬಿಜೆಪಿ ಮಂಡಿಸಿದ ಅವಿಶ್ವಾಸ ಗೊತ್ತುವಳಿಗೆ ಪರವಾಗಿ 75 ಮತಗಳು ಬಿದ್ದು ಸೋಲಾಗಿದ್ದು, ಗೆಹ್ಲೋಟ್ ಸರ್ಕಾರ ಮುಂದಿನ ಅವಧಿ ಪೂರೈಸುವ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಸೇರಿ 19 ಶಾಸಕರು ಬಂಡಾಯದ ಬಾವುಟ ಹಾರಿಸಿದ ಸಂದರ್ಭವನ್ನು ಬಳಸಿಕೊಂಡು ಸರ್ಕಾರ ರಚನೆಗೆ ಮುಂದಾಗಿದ್ದ ಬಿಜೆಪಿಗೆ ಮುಖಭಂಗ ಉಂಟಾಗಿದೆ.

ಕರ್ನಾಟಕ, ಮಧ್ಯಪ್ರದೇಶದಲ್ಲಿ ರಾಜಕೀಯ ಪಲ್ಲಟಗಳು ನಡೆದಂತೆ ರಾಜಸ್ಥಾನದಲ್ಲೂ ನಡೆಸಬಹುದು ಎಂಬ ಬಿಜೆಪಿ ತಂತ್ರಗಳಿಗೆ ಹಿನ್ನಡೆಯಾಗಿದೆ.

ಶಾಸಕರ ಕುದುರೆ ವ್ಯಾಪಾರಕ್ಕೂ ಸೋಲುಂಟಾಗಿದೆ. ಇದರಿಂದ ರಾಜಸ್ಥಾನದಲ್ಲಿ ಉದ್ಭವಿಸಿದ್ದ ಅನಿಶ್ಚಿತತೆ ಮತ್ತು ರಾಜಕೀಯ ಬಿಕ್ಕಟ್ಟು ಕೊನೆಗೊಂಡಂತಾಗಿದೆ.


ಇದನ್ನೂ ಓದಿ:  ಮೋದಿ ಸರ್ಕಾರದ ಮಹಾದ್ರೋಹ – ಮಾರಾಟವಾಗುತ್ತಿರುವ “ಮಹಾರತ್ನಗಳು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights