ರೈಲ್ವೇ ಪ್ರಯಾಣದರ ಭರಿಸುತ್ತೇವೆ ಎಂದ ಕಾಂಗ್ರೆಸ್‌; ಉಚಿತ ಪ್ರಯಾಣ ಎಂದ ಬಿಜೆಪಿ

ಉದ್ಯೋಗ ಹರಸಿ ರಾಜ್ಯದಿಂದ ರಾಜ್ಯಕ್ಕೆ ವಲಸೆ ಹೋಗಿದ್ದ ಕಾರ್ಮಿಕರನ್ನು ತವರು ರಾಜ್ಯಗಳಿಗೆ ಕರೆದೊಯ್ಯಲು ಸಂಚಾರಕ್ಕೆ ಸಿದ್ದವಾಗಿರುವ ವಿಶೇಷ ರೈಲುಗಳ ಟಿಕೆಟ್ ದರದಲ್ಲಿ ಶೇಕಡಾ 85ರಷ್ಟು ರಿಯಾಯಿತಿಯನ್ನು ರೈಲ್ವೇ ಇಲಾಖೆ ನೀಡಿದ್ದು,  ಉಳಿದ ಶೇಕಡಾ 15ರಷ್ಟನ್ನು ಆಯಾ ರಾಜ್ಯ ಸರ್ಕಾರಗಳು ಭರಿಸಲಿವೆ ಎಂದು ಭಾರತೀಯ ಜನತಾ ಪಾರ್ಟಿ ಕಾಂಗ್ರೆಸ್ ಗೆ ತಿರುಗೇಟು ನೀಡಿದೆ.

ಕೇಂದ್ರ ಸರ್ಕಾರಕ್ಕೆ ವಲಸೆ ಕಾರ್ಮಿಕರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ, ಕಾರ್ಮಿಕರಿಗೆ ಉಚಿತ ಪ್ರಯಾಣವನ್ನು ಕಲ್ಪಸಬೇಕಿದ್ದ ಸರ್ಕಾರ ಕಾರ್ಮಿಕರಿಂದ ಹಣ ವಸೂಲಿ ಮಾಡಲು ಮುಂದಾಗಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕಾರ್ಮಿಕರ ರೈಲು ಪ್ರಯಾಣ ವೆಚ್ಚವನ್ನು ಸಂಪೂರ್ಣವಾಗಿ ಕಾಂಗ್ರೆಸ್ ಭರಿಸಲಿದೆ ಎಂದು ಇಂದು ಬೆಳಗ್ಗೆ ಪ್ರಕಟಿಸಿದ್ದರು.

ಅಲ್ಲದೆ, ಪ್ರಧಾನ ಮಂತ್ರಿ ಕೇರ್ ನಿಧಿಗೆ 151 ಕೋಟಿ ರೂಪಾಯಿ ನೀಡಿದ್ದರೂ ಸಹ ಕೇಂದ್ರ ಸರ್ಕಾರ ವಲಸೆ ಕಾರ್ಮಿಕರಿಂದ ಪ್ರಯಾಣ ದರ ಕಿತ್ತುಕೊಳ್ಳುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.

ಈ ಎಲ್ಲಾ ವಿದ್ಯಾಮಾನಗಳು ಜರುಗಿದ ನಂತರ, ರೈಲ್ವೇ ಇಲಾಖೆಯು ಪ್ರಯಾಣದರದಲ್ಲಿ 85% ರಿಯಾಯಿತಿ ನೀಡಿದ್ದು, ಆಯಾ ರಾಜ್ಯ ಸರ್ಕಾರಗಳು ಶೇಕಡಾ 15ರಷ್ಟು ಟಿಕೆಟ್ ದರವನ್ನು ಕಾರ್ಮಿಕರಿಗೆ ನೀಡಲಿದೆ. ಮಧ್ಯ ಪ್ರದೇಶ ಸರ್ಕಾರ ಈ ರೀತಿ ಮಾಡುತ್ತಿದೆ. ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿಯೂ ಈ ಕ್ರಮ ಪಾಲಿಸುವಂತೆ ಹೇಳಿ ಎಂದು ರಾಹುಲ್ ಗಾಂಧಿಗೆ ತಿರುಗೇಟು ನೀಡಿ ಬಿಜೆಪಿ ವಕ್ತಾರ ಸಂಬಿತ್ ಪತ್ರ ಟ್ವೀಟ್‌ ಮಾಡಿದ್ದಾರೆ.

ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಸಂಬಿತ್ ಪತ್ರ, ಗೃಹ ಸಚಿವಾಲಯದ ಮಾರ್ಗಸೂಚಿಗಳನ್ನು ಓದಿ. ಅದರಲ್ಲಿ ಯಾವ ರೈಲು ನಿಲ್ದಾಣಗಳಲ್ಲಿ ಸಹ ಕಾರ್ಮಿಕರಿಂದ ಪ್ರಯಾಣ ದರ ತೆಗೆದುಕೊಳ್ಳುತ್ತಿಲ್ಲ ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ. ವಲಸೆ ಕಾರ್ಮಿಕರಿಗಾಗಿಯೇ ಶ್ರಮಿಕ್ ರೈಲು ಸಂಚರಿಸುತ್ತಿದ್ದು ರೈಲ್ವೆ ಇಲಾಖೆ ಸುಮಾರು 1,200 ಟಿಕೆಟ್ ಗಳನ್ನು ಸಂಬಂಧಪಟ್ಟ ರಾಜ್ಯ ಸರ್ಕಾರಗಳಿಗೆ ಈಗಾಗಲೇ ನೀಡಲಾಗಿದೆ ಎಂದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ಸಂಸದ ಸುಬ್ರಹ್ಮಣ್ಯನ್ ಸ್ವಾಮಿ, ವಲಸೆ ಕಾರ್ಮಿಕರ ಪ್ರಯಾಣ ವೆಚ್ಚವನ್ನು ಇಲಾಖೆ ಮತ್ತು ರಾಜ್ಯ ಸರ್ಕಾರಗಳು ಭರಿಸಲಿವೆ. ಕಾರ್ಮಿಕರು ಉಚಿತವಾಗಿ ಪ್ರಯಾಣಿಸಬಹುದು ಎಂದು ಈಗಷ್ಟೇ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರ ಕಚೇರಿಗೆ ಕರೆ ಮಾಡಿ ಖಚಿತಪಡಿಸಿಕೊಂಡಿದ್ದೇನೆ ಎಂದಿದ್ದಾರೆ.

ಕರ್ನಾಟಕದಲ್ಲಿ ಮೇ 01ರಿಂದ ರಾಜ್ಯದ ಹೊರ ಜಿಲ್ಲೆಗಳಲ್ಲಿರುವ ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ಹೋಗಲು ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆ ಮಾಡಲಾಗಿದ್ದು, ಆರಂಭದ ದಿನ ಸಾಮಾನ್ಯ ದರಕ್ಕಿಂತ ಎರಡೂವರೆ ಪಟ್ಟು ದರ ವಿಧಿಸಿದ್ದ ಸರ್ಕಾರ, ನಂತರ ಒಮ್ಮುಖ ದರವನ್ನಷ್ಟೇ ಪಡೆಯುವುದಾಗಿ ಹೇಳಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಕಾರ್ಮಿಕರ ಪ್ರಯಾಣಕ್ಕಾಗಿ ಒಂದು ಕೋಟಿಯನ್ನು ಕೆಎಸ್‌ಆರ್‌ಟಿಸಿ ನೀಡುವುದಾಗಿ ಘೋಷಿಸಿದ ನಂತರ ನಿನ್ನೆ ರಾಜ್ಯ ಸರ್ಕಾರ ಉಚಿತ ಬಸ್‌ ವ್ಯವಸ್ಥೆ ಕಲ್ಪಿಸಿತ್ತು. ಕಾರ್ಮಿಕರ ವಿಚಾರದಲ್ಲಿ ಎರಡೂ ರಾಜಕೀಯ ಪಕ್ಷಗಳು ರಾಜಕೀಯ ಚದುರಂಗವನ್ನು ಆಡಲು ಮುಂದಾಗಿರುವುದು ಇದರಿಂದ ಸ್ಪಷ್ಟವಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights