ವಿಜ್ಞಾನಿಗಳನ್ನು ತೆಗಳುವುದು ನಿಲ್ಲಲಿ – ನೊಬೆಲ್ ಪುರಸ್ಕೃತ ವಿಜ್ಞಾನಿ ವೆಂಕಿ ರಾಮಕೃಷ್ಣನ್

ಕೆಲವು ದಶಕಗಳ ಹಿಂದೆ ತನ್ನ ಜೀವಸಂಕುಲದ ಗಡಿಯನ್ನು ಜಿಗಿದು ಬಂದಿದ್ದ ವೈರಾಣುವೊಂದು 1981ರಲ್ಲಿ ಮನುಷ್ಯರಲ್ಲಿ ಸೋಂಕು ಹರಡಲು ಪ್ರಾರಂಭಿಸಿತ್ತು. ಅದು ಸ್ಯಾನ್ ಫ್ರಾನ್ಸಿಸ್ಕೋ ಹಾಗೂ ನ್ಯೂಯಾರ್ಕಿನಲ್ಲಿ ಸಲಿಂಗಿಗಳಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಿತ್ತು. ಈ ಸೋಂಕಿಗೆ ಮೂಲವನ್ನು ಹುಡುಕುವುದಕ್ಕೆ ಒಂದು ಕಾರ್ಯಪಡೆಯನ್ನು ನೇಮಿಸಲಾಯಿತು. ಏಡ್ಸ್‍ಗೆ ನಿಜವಾದ ಕಾರಣ ಹೆಚ್‍ಐವಿ ವೈರಾಣು ಅಂತ ತಿಳಿಯುವುದಕ್ಕೆ ಹಲವು ವರ್ಷಗಳೇ ಹಿಡಿದವು. ಹಾಗೆಯೇ ಆ ವೈರಾಣುವಿನ ಜಿನೋಮಿನ ಅನುಕ್ರಮಣಿಕೆಯನ್ನು ಪತ್ತೆ ಹಚ್ಚುವುದಕ್ಕೆ ಸಾಕಷ್ಟು ವರ್ಷಗಳು ಬೇಕಾಯಿತು. ಆಮೇಲೆ ಈ ಸೋಂಕೇನು ಮರಣದಂಡನೆ ಆಗಬೇಕಾಗಿಲ್ಲ. ಹಲವು ಔಷಧಿಗಳ ಮಿಶ್ರಣವನ್ನು ಅದರ ಶುಶ್ರೂಷೆಗೆ ಬಳಸಿ ಅದನ್ನು ನಿಯಂತ್ರಿಸಬಹುದು ಅಂತ ಕಂಡುಕೊಳ್ಳುವುದಕ್ಕೆ 15 ವರ್ಷ ಹಿಡಿಯಿತು.

45 ವರ್ಷಗಳ ನಂತರ ವುಹಾನಿನಲ್ಲಿ ಕೋವಿಡ್-19 ವೈರಾಣು ಕಾಣಿಸಿಕೊಂಡಿದೆ. ಆದರೆ ಈಗ ಕೆಲವೇ ವಾರಗಳಲ್ಲಿ ಸಾರ್ಸ್-ಕೋವ್-2 ಕಾರಣ ಅಂತ ಕಂಡುಹಿಡಿಯುವುದಕ್ಕೆ ಸಾಧ್ಯವಾಗಿದೆ. ಅಷ್ಟೇ ಅಲ್ಲ ಅದರ ಅನುಕ್ರಮಣಿ ಪತ್ತೆ ಹಚ್ಚಲಾಗಿದೆ. ಹಾಗಾಗಿ ಈಗ ಸೋಂಕನ್ನು ಪರೀಕ್ಷಿಸುವುದಕ್ಕೆ ಹೆಚ್ಚು ಸೂಕ್ಷ್ಮವಾದ ವಿಧಾನವನ್ನುಕಂಡುಹಿಡಿಯಲು ಸಾಧ್ಯವಾಗಿದೆ.  ಈಗ ಪ್ರತಿಕಾಯ-ಅಂಟಿಬಾಡೀಸ್‍ಗಾಗಿ ಪರೀಕ್ಷೆ ಮಾಡುವ ಮೂಲಕ ಈ ಮೊದಲೇ ಸೋಂಕು ಬಂದಿದ್ದವರನ್ನುಗುರುತಿಸಬಹುದು. ವಿಜ್ಞಾನದ ಮೇಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾಗಿ ಹೂಡಿಕೆಯಾಗುತ್ತಿರುವುದರಿಂದ ಇಂದು ವಿಜ್ಞಾನ ಆ ಮಟ್ಟಕ್ಕೆ ಬೆಳೆದಿದೆ. ತೀರಾ ಕಡಿಮೆ ಅವಧಿಯಲ್ಲಿ ವೈರಾಣುವಿನ ಬಗ್ಗೆ ಅಷ್ಟೊಂದು ಮಾಹಿತಿಯನ್ನು ಸಂಗ್ರಹಿಸುವುದಕ್ಕೆ ಸಾಧ್ಯವಾಗಿದೆ.

ಆದರೂ ನಮಗೆ ಎಷ್ಟೋ ವಿಷಯಗಳು ಗೊತ್ತಿಲ್ಲ. ಉಳಿದ ವೈರಾಣುವಿಗಿಂತಇದು ಏಕೆ ಅಷ್ಟು ಬೇಗ ಹರಡುತ್ತದೆ, ಸೋಂಕಿತರಿಗೆ ರೋಗ ನಿರೋಧಕ ಶಕ್ತಿ ಬರುವುದೇ, ಹಾಗೆ ಬಂದರೆ ಆ ಶಕ್ತಿ ಎಷ್ಟು ಕಾಲ ಉಳಿಯಬಹುದು. ಇದು ಕೆಲವರಲ್ಲಿ ಯಾಕೆ ತೀವ್ರವಾದ ಉರಿಯೂತವನ್ನು ಉಂಟುಮಾಡುತ್ತದೆ, ಕೊನೆಗೆ ಅವರ ಸಾವಿಗೂ ಕಾರಣವಾಗುತ್ತದೆ. ಕೆಲವರು ಮಾತ್ರ ಈ ಸೋಂಕಿನಿಂದ ಯಾಕೆ ಸಾಯುತ್ತಾರೆ? ಹೀಗೆ ಹಲವು ಪ್ರಶ್ನೆಗಳು ಹಾಗೆಯೇ ಉಳಿದಿವೆ.

ಇಂದು ಇದರ ಲಸಿಕೆಗಾಗಿ ಜಗತ್ತಿನಾದ್ಯಂತ ಹುಡುಕಾಟ ನಡೆದಿದೆ. ಇಷ್ಟೊಂದು ವ್ಯಾಪಕವಾದ ಅನ್ವೇಷಣೆ ಹಿಂದೆಂದೂ ಆಗಿರಲಿಲ್ಲ.  ಆದರೆ ಇನ್ನೊಂದು ಸತ್ಯವನ್ನು ಈ ಸಮಯದಲ್ಲಿ ಮರೆಯಬಾರದು. ಏಡ್ಸ್‍ ಅಥವಾ ಇತರ ಹಲವು ವೈರಾಣುವಿನ ಸೋಂಕಿಗೆ ನಮಗೆ 40 ವರ್ಷಗಳ ನಂತರವೂ ಲಸಿಕೆಯನ್ನು ಕಂಡುಹಿಡಿಯುವುದಕ್ಕೆ ಸಾಧ್ಯವಾಗಿಲ್ಲ. ಇದು ಕಟು ವಾಸ್ತವ. ಅದರಿಂದ ಹೊಸ ಔಷಧಿಗಳನ್ನು ಕಂಡುಹಿಡಿಯುವ ನಿಟ್ಟಿನಲ್ಲಿ ಹಾಗೂ ಈಗ ಲಭ್ಯವಿರುವ ಔಷಧಿಗಳನ್ನು ಇದಕ್ಕೆ ಬಳಸುವ ಸಾಧ್ಯತೆಯತ್ತ ಪ್ರಯತ್ನಿಸುವುದು ತುಂಬಾ ಮುಖ್ಯ.

ಹೊಸ ಪುರಾವೆಗಳು ಸಿಕ್ಕಾಗ ವಿಜ್ಞಾನಿಗಳು ತಮ್ಮ ತೀರ್ಮಾನಗಳಲ್ಲಿ ಆಗಿರಬಹುದಾದ ತಪ್ಪನ್ನು ಒಪ್ಪಿಕೊಳ್ಳಬೇಕು. ತಪ್ಪಿನಿಂದ ಹೊಸಪಾಠವನ್ನು ಕಲಿಯುವುದಕ್ಕೆ ತಯಾರಿರಬೇಕು. ವಿಜ್ಞಾನದ ಒಳಗೇ ಅಂತಹ ಅನಿಶ್ಚಿತತೆ ಇದೆ. ನಿಧಾನವಾಗಿ ಪುರಾವೆಗಳು ಸೇರಿಕೊಳ್ಳುತ್ತಾ ಹೋದಂತೆ ಮತ್ತು ಸಮುದಾಯದ ಪರಿಶೀಲನೆಗೆ ಒಳಗಾದಂತೆ ತಪ್ಪುಗಳು ಕಮ್ಮಿಯಾಗುತ್ತಾ, ಅಂತಿಮವಾಗಿ ಒಂದು ಒಮ್ಮತ ಮೂಡುತ್ತದೆ. ವಿಜ್ಞಾನದಲ್ಲಿಈ ಕ್ರಮ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಾ ಬಂದಿದೆ. ಆದರೆ ಈಗ ಎಲ್ಲರ ದೃಷ್ಟಿಯೂ ವಿಜ್ಞಾನದ ಮೇಲಿದೆ. ಎಲ್ಲರಿಗೂ ತಕ್ಷಣ ಪರಿಹಾರ ಬೇಕು. ಹಾಗಾಗಿ ವಿಜ್ಞಾನದ ಮೇಲೆ ಒತ್ತಡ ಹೆಚ್ಚಾಗಿದೆ. ಅವರ ನಿರ್ಧಾರಗಳಲ್ಲಿ ಅನಿಶ್ಚತತೆ ಅನಿವಾರ್ಯ. ಅದನ್ನು ವಿಜ್ಞಾನಿಗಳು ಸ್ಪಷ್ಟಪಡಿಸಬೇಕು. ಸ್ವಾಭಾವಿಕವಾಗಿಯೇ ಇಷ್ಟೊಂದು ಅನಿಶ್ಚಿತತೆ ಇದ್ದಾಗ  ಮುಂದಿರುವ ಸಾಧ್ಯತೆಗಳ ಬಗ್ಗೆ ಒಂದು ಒಮ್ಮತದ ತೀರ್ಮಾನ ಸಾಧ್ಯವಿಲ್ಲ. ಹಲವು ವಿಭಿನ್ನವಾದ ತೀರ್ಮಾನಗಳು ಸಾಧ್ಯ. ಇದು  ವಾಸ್ತವ, ಇದನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ತೀರ್ಮಾನಗಳಲ್ಲಿನ ವೈವಿಧ್ಯತೆ ಅವರು ಕೊಡುವ ಸಲಹೆಯನ್ನೂ ಪ್ರಭಾವಿಸುತ್ತದೆ. ಹೊಸ ಪುರಾವೆಗಳು ಸಿಕ್ಕಾಗ ತಮ್ಮ ನಿರ್ಧಾರದ ತಪ್ಪುಗಳು ಅವರಿಗೆ ಕಾಣಿಸಬಹುದು. ತಮ್ಮ ತಪ್ಪನ್ನುಅವರು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು. ಮತ್ತು ಅದರಿಂದ ಕಲಿಯಲು ಸಿದ್ಧರಿರಬೇಕು.  ಸಾಮಾನ್ಯವಾಗಿ ಹೆಚ್ಚಿನ ಉದ್ದಿಮೆಗಳಲ್ಲಿ ಒಂದು ಗುಂಪಾಗಿ ನಿರ್ಧಾರ ತೆಗೆದುಕೊಳ್ಳುವ ಪರಿಪಾಠ ಇರುತ್ತದೆ. ಅದು ತಪ್ಪಬೇಕು. ನಿರ್ಧಾರಗಳಿಗೆ ಜೋತು ಬೀಳಬಾರದು. ಆಂತರಿಕ ಚರ್ಚೆ ತುಂಬಾ ಸಕ್ರಿಯವಾಗಿ ನಡೆಯಬೇಕು. ತಮ್ಮ ಪುರಾವೆಗಳು ಮತ್ತು ನಿರ್ಧಾರಗಳ ಬಗ್ಗೆ ಮುಕ್ತವಾಗಿರಬೇಕು. ಆಗಷ್ಟೇ ಅವುಗಳನ್ನು ಪರಿಶೀಲಿಸುವುದಕ್ಕೆ ಸಾಧ್ಯವಾಗುತ್ತದೆ. ಆದರೆ ತೀರಾ ಕ್ಲಿಷ್ಟವಾದ ನೀತಿಗಳಿಗೆ ಸಂಬಂಧಿಸಿದ ನಿರ್ಧಾರಗಳಿಗೆ ವಿಜ್ಞಾನಿಗಳನ್ನು ಬಲಿಪಶುಗಳನ್ನಾಗಿ ಮಾಡಬಾರದು. ತಾವು ಬಲಿಪಶುಗಳಾಗುತ್ತೇವೆ ಎಂಬ ಭಾವನೆ ವಿಜ್ಞಾನಿಗಳಲ್ಲಿ ಬಂದರೆ ಅವರಿಗೆ ಮುಕ್ತವಾಗಿ ಸಲಹೆಗಳನ್ನು ಕೊಡುವುದಕ್ಕೆ ಸಾಧ್ಯವಾಗುವುದಿಲ್ಲ.

ಅಷ್ಟೇ ಅಲ್ಲ ವೈಜ್ಞಾನಿಕ ಸಲಹೆಗಳನ್ನು ಒಂದು ನೀತಿಯಾಗಿ ರೂಪಿಸುವುದಕ್ಕೆ ಹಲವು ದಾರಿಗಳು ಸಾಧ್ಯ. ಜಗತ್ತಿನಾದ್ಯಂತ ಕೋವಿಡ್-19ಗೆ ಕಾಣುತ್ತಿರುವ ವಿಭಿನ್ನ ಪ್ರತಿಕ್ರಿಯೆಗಳನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ. ಯಾಕೆಂದರೆ ನೀತಿಗಳನ್ನು ರೂಪಿಸುವುದರಲ್ಲಿ ವೈಜ್ಞಾನಿಕ ಸಲಹೆಗಳು ಒಂದು ಅಂಶ ಅಷ್ಟೆ. ವಿಜ್ಞಾನದ ಸಂದಿಗ್ಧತೆಯನ್ನು ಸರ್ಕಾರ ಒಪ್ಪಿಕೊಳ್ಳಬೇಕು. ಅಷ್ಟೇ ಅಲ್ಲ ಅವುಗಳ ಸಾಧ್ಯತೆಯನ್ನೂ ಸೇರಿದಂತೆ, ಇತರ ಹಲವು ಪ್ರಾಯೋಗಿಕ ಅಂಶಗಳನ್ನು ಗಮನಿಸಬೇಕು.  ಈ ಎಲ್ಲಾ ವಿಷಯಗಳಲ್ಲೂ ಅವರು ವಿಜ್ಞಾನಿಗಳಿಂದ ಒಂದು ನಿಖರವಾದ ಹಾಗೂ ನಿಶ್ಚಿತವಾದ ಉತ್ತರ ನಿರೀಕ್ಷಿಸುತ್ತಾರೆ. ಆಗ ಅವರು “ನಾವು ವಿಜ್ಞಾನವನ್ನುಅನುಸರಿಸುತ್ತಿದ್ದೇವೆ” ಅಂದುಕೊಳ್ಳಬಹುದು ಅಥವಾ ಹೇಳಿಕೊಳ್ಳಬಹುದು. ಆದರೆ ಬಯಸಿದ್ದು ಆಗಬೇಕಾಗಿಲ್ಲ.

ನಾವು ಏನು ಮಾಡುತ್ತಿದ್ದೇವೆ ಎಂಬುದನ್ನು ನಿರಂತರವಾಗಿ ಹೊಸದಾಗಿ ಸಿಗುತ್ತಿರುವ ಪುರಾವೆಗಳ ಬೆಳಕಿನಲ್ಲಿ ಪರಿಶೀಲಿಸುತ್ತಾ ಹೋಗುತ್ತಿರಬೇಕು. ಇಂತಹ ಬಿಕ್ಕಟ್ಟಿನ ಸಮಯದಲ್ಲಿಇದು ತುಂಬಾ ಮುಖ್ಯ. ನಮ್ಮ ನಿಲುವು ಸರಿ ಅಲ್ಲ ಅಂತ ತಿಳಿದ ತಕ್ಷಣ, ಕಚ್ಚಾಡುತ್ತಾ, ಬೇರೆಯವರ ಮೇಲೆ ಆರೋಪ ಹೊರಿಸುತ್ತಾ ಪ್ರಶಸ್ತವಾದ ಸಮಯ ಹಾಳುಮಾಡುತ್ತಾ ಹೋಗಬಾರದು. ಅದರಲ್ಲೂಇಂತಹ  ಆನಿಶ್ಚಿತತೆಯ ಸಂದರ್ಭದಲ್ಲಿ ವಿಜ್ಞಾನಿಗಳನ್ನು, ಅವರು ನೀಡಿರುವ ಸಲಹೆಗಳಿಗಾಗಿ ಟೀಕಿಸುವುದು ಸರಿಯಲ್ಲ. ಹಾಗೆ ಟೀಕಿಸುವುದು, ವಿಜ್ಞಾನ ಹೇಗೆ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ಅವರಿಗಿರುವ ಮೂಲಭೂತ ತಪ್ಪುಕಲ್ಪನೆಯನ್ನುತೋರಿಸುತ್ತದೆ. ಇತ್ತೀಚೆಗೆ ಮಂತ್ರಿಯೊಬ್ಬರು ವಿಜ್ಞಾನಿಗಳನ್ನು ಟೀಕಿಸಿದಾಗ ಉಳಿದವರು ಆ ಟೀಕೆಯಿಂದ ದೂರ ಉಳಿದದ್ದು ಸಮಾಧಾನದ ಸಂಗತಿ. ಇಂತಹ ಪರಿಸ್ಥಿತಿಯಲ್ಲಿ ಅದು ವಿಜ್ಞಾನಿಗಳಲ್ಲಿ ವಿಶ್ವಾಸವನ್ನು ಮೂಡಿಸುತ್ತದೆ.

ನಾವು ಭಿನ್ನವಾದ ಅಥವಾಇ ನ್ನೂ ಸುಧಾರಿತ ಹಾದಿಯನ್ನು ಹಿಡಿಯಬೇಕು ಅಂತ ಪುರವೆಗಳು ಸೂಚಿಸಿದರೆ ಸರ್ಕಾರ ಹಾಗೂ ವಿಜ್ಞಾನಿಗಳು ಅದನ್ನು ಒಪ್ಪಿಕೊಳ್ಳಬೇಕು. ಅದಕ್ಕೆ ಸರಿಯಾಗಿ ಕಾರ್ಯನೀತಿಯನ್ನು ಬದಲಾಯಿಸಿಕೊಳ್ಳಬೇಕು. ಜನರಿಗೆ ಅದನ್ನು ವಿವರಿಸಬೇಕು. ಜನರು ಅರ್ಥ ಮಾಡಿಕೊಳ್ಳುತ್ತಾರೆ. ಹಿಂದೆ ಲಭ್ಯವಿದ್ದ ಮಾಹಿತಿಯನ್ನು ಆಧರಿಸಿ ಹಾಗೆ ಮಾಡಲಾಗಿತ್ತು. ಅದು ಆ ಪರಿಸ್ಥಿತಿಯಲ್ಲಿ ತೆಗೆದುಕೊಳ್ಳಬಹುದಾಗಿದ್ದ ಒಳ್ಳೆಯ ನಿರ್ಧಾರ ಅನ್ನುವುದು ಜನರಿಗೂ ಅರ್ಥವಾಗುತ್ತದೆ. ಆದರೆ ಅದು ತಪ್ಪು ಎಂದು ಗೊತ್ತಾದಾಗ ಆದಷ್ಟು ಬೇಗ ಅದನ್ನು ಸರಿಪಡಿಸಬೇಕು.

ವೈರಾಣುವಿನ ಪಿಡುಗು ನಮ್ಮ ಎದುರಿಗಿನ ಅತ್ಯಂತ ದೊಡ್ಡ ಅಪಾಯ ಅನ್ನುವುದು ಗೊತ್ತಿತ್ತು. ಅದನ್ನು ಎದುರಿಸಲು ತಾನು ಸಂಪೂರ್ಣ ತಯಾರಾಗಿದ್ದೇನೆ ಅಂತ ಇಂಗ್ಲೆಂಡ್ ಭಾವಿಸಿತ್ತು. ಆದರೆ ನಿಜವಾಗಿ ಸಿದ್ಧವಾಗಿರಲಿಲ್ಲ. ಅದು ಸ್ಪಷ್ಟ. ನಾವು ಈ ಪಿಡುಗಿಗೆ ಸಂಬಂಧಿಸಿದಂತೆ ನಮ್ಮ ಸೋಲು ಗೆಲುವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಅದರಿಂದ ಪಾಠ ಕಲಿಯಬೇಕು. ಆಗ ಮುಂದೆ ಅಂತಹ ಪಿಡುಗು ಮತ್ತೆ ಬಂದಾಗ- ಬರುವುದು ಅನಿವಾರ್ಯ- ಅದನ್ನು ಎದುರಿಸಲು ಹೆಚ್ಚು ಪರಿಣಾಮಕಾರಿಯಾಗಿ ಸಿದ್ಧತೆ ಮಾಡಿಕೊಳ್ಳಬಹುದು.

  • ವೆಂಕಿ ರಾಮಕೃಷ್ಣನ್, ರಸಾಯನಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ
  • (ಕೃಪೆ): ದಿ ಗಾರ್ಡಿಯನ್ ಪತ್ರಿಕೆ
  • (ಕನ್ನಡಕ್ಕೆ) : ಟಿ ಎಸ್ ವೇಣುಗೋಪಾಲ್
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights