FACT CHECK | ಭಾರತೀಯ ಮುಸ್ಲಿಮರ ಮಸೀದಿಯನ್ನು ರೋಹಿಂಗ್ಯಾ ಮುಸ್ಲಿಮರು ಆಕ್ರಮಿಸಿಕೊಂಡಿದ್ದು ನಿಜವೇ?
ಭಾರತೀಯ ಮುಸ್ಲಿಮರ ಮಸೀದಿಯನ್ನು ರೋಹಿಂಗ್ಯಾ ಮುಸ್ಲಿಮರು ಆಕ್ರಮಿಸಿಕೊಂಡಿದ್ದಾರೆ. ಇದರಿಂದಾಗಿ ಭಾರತೀಯ ಮುಸ್ಲಿಮರು ಮತ್ತು ರೋಹಿಂಗ್ಯಾ ಮುಸ್ಲಿಮರ ಮಧ್ಯೆ ಹಿಂಸಾತ್ಮಕ ಘರ್ಷಣೆ ನಡೆಯುತ್ತಿದೆ ಎಂಬ ಪ್ರತಿಪಾದನೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದೆ.
ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು “ರೋಹಿಂಗ್ಯಾ ಮುಸ್ಲಿಮರು ಭಾರತೀಯ ಮುಸ್ಲಿಮರ ಮಸೀದಿಯನ್ನು ಆಕ್ರಮಿಸಿದ್ದಾರೆ” ಎಂಬ ಕೀವರ್ಡ್ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ, ವೈರಲ್ ಪೋಸ್ಟ್‌ಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಮತ್ತಷ್ಟು ಮಾಹಿತಿಗಾಗಿ ವೈರಲ್ ಚಿತ್ರದ ಜೀ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 2023ರ ಜನವರಿ 3ರಂದು ಪ್ರಕಟವಾದ ANI ವರದಿ ಲಭ್ಯವಾಗಿದೆ. ವರದಿಯ ಪ್ರಕಾರ ಡಿಸೆಂಬರ್ 30 ರಂದು ಅಸ್ಸಾಂನ ಧುಬ್ರಿ ಜಿಲ್ಲೆಯ ಬಿಲಾಸಿಪಾರಾ ಪ್ರದೇಶದಲ್ಲಿ ಮಸೀದಿಯೊಂದರ ಆಡಳಿತ ಮಂಡಳಿಯ ಅಧಿಕಾರಕ್ಕಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿತ್ತು. ಆ ಘರ್ಷಣೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ವರದಿ ಮಾಡಿದೆ.
2024ರ ಜನವರಿ 3ರಂದು ಅಸ್ಸಾಂ ಮೂಲದ ನ್ಯೂಸ್ ಲೈವ್‌ನ ಕಾರ್ಯನಿರ್ವಾಹಕ ಸಂಪಾದಕರು ಟ್ವಿಟರ್‌ನಲ್ಲಿ ವೈರಲ್ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. 2023ರ ಜನವರಿ 5 ರಂದು ಯುಟ್ಯೂಬ್‌ನಲ್ಲಿ ಟೈಮ್ಸ್ ನೌ ವರದಿಯು ಅದೇ ವಿಡಿಯೋವನ್ನು ಹಂಚಿಕೊಂಡಿದ್ದು, ರೋಹಿಂಗ್ಯಾ ಮುಸ್ಲಿಮರು ಭಾರತದ ಮಸೀದಿಯನ್ನು ಆಕ್ರಮಿಸಿಕೊಂಡಿರುವುದರ ಕುರಿತು ಯಾವುದೇ ವರದಿಗಳು ಲಭ್ಯವಾಗಿಲ್ಲ.
ಬಿಲಾಸಿಪಾರಾ ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿ ಇನ್ಸ್‌ಪೆಕ್ಟರ್ ಟಿ ಬೊರೊ ಘಟಟನೆ ಬಗ್ಗೆ ಮಾಹಿತಿ ನೀಡಿ, “ಮಸೀದಿಯ ಆಡಳಿತ ಸಮಿತಿಯ ಅಧಿಕಾರಕ್ಕಾಗಿ ಆಂತರಿಕ ಘರ್ಷಣೆಯಾಗಿದೆ. 2022ರಲ್ಲಿ ಗುಂಪುಗಳ ನಡುವಿನ ಘರ್ಷಣೆಗೆ ಸಂಬಂಧಿಸಿದಂತೆ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಘಟನೆಯಲ್ಲಿ ರೋಹಿಂಗ್ಯಾ ಮುಸ್ಲಿಮರು ಭಾಗಿಯಾಗಿಲ್ಲ” ಎಂದು ಖಚಿತಪಡಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಅಸ್ಸಾಂನ ಮಸೀದಿಯ ಎರಡು ಬಣಗಳ ನಡುವಿನ ಆಂತರಿಕ ಘರ್ಷಣೆಯ ಹಳೆಯ ವಿಡಿಯೋವನ್ನು ರೋಹಿಂಗ್ಯಾ ಮುಸ್ಲಿಮರು ಭಾರತೀಯ ಮುಸ್ಲಿಮರ ಮಸೀದಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳುತ್ತಿದ್ದಾರೆ ಎಂದು ಸುಳ್ಳು ಮತ್ತು ದ್ವೇಷದ ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಮಹಿಳೆಯರನ್ನು ಮಾರಾಟ ಮಾಡುವ ಮಾರುಕಟ್ಟೆ ಅಫ್ಘಾನಿಸ್ತಾನದಲ್ಲಿ ಇರುವುದು ನಿಜವೇ?