ವಿಧಾನ ಪರಿಷತ್‌ಗೆ ಅವಿರೋಧ ಆಯ್ಕೆಯಾದ ಕೊರೊನಾ ಪರಿಷತ್‌ ಸದಸ್ಯರು; ಏನಿದು ಕೊರೊನಾ ಪರಿಷತ್‌!

ಕರ್ನಾಟಕ ವಿಧಾನಸಭೆಯಿಂದ ವಿಧಾನಪರಿಷತ್​ಗೆ ಆಯ್ಕೆ ಮಾಡುವ  7 ಸ್ಥಾನಗಳಿಗೆ ಜೂನ್‌ 29ರಂದು ನಡೆಯಬೇಕಿದ್ದ ಚುನಾವಣೆಯನ್ನು ನಡೆಸದೆ ಅವಿರೋಧವಾಗಿ ಏಳು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಬಿಜೆಪಿಯ ನಾಲ್ವರು, ಕಾಂಗ್ರೆಸ್ಸಿನ ಇಬ್ಬರು ಹಾಗೂ ಓರ್ವ ಜೆಡಿಎಸ್ ಸದಸ್ಯರನ್ನು ಮೇಲ್ಮನೆಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಅವಿರೋಧವಾಗಿಆಯ್ಕೆಯಾದ ಅಭ್ಯರ್ಥಿಗಳು ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿಯವರಿಂದ‌‌ ಪ್ರಮಾಣ‌ಪತ್ರ ಪಡೆದಿದ್ದಾರೆ.

ನಾಮಪತ್ರ ವಾಪಸ್ ಪಡೆಯಲು ಇವತ್ತು ಮಧ್ಯಾಹ್ನ 3 ಗಂಟೆ ಡೆಡ್​ಲೈನ್ ಆಗಿತ್ತು‌. ಒಟ್ಟು ಒಂಬತ್ತು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಸೂಚಕರಿಲ್ಲದೆ ನಾಮಪತ್ರ ಸಲ್ಲಿಸಿದ ಇಬ್ಬರು ಪಕ್ಷೇತರ ಅಭ್ಯರ್ಥಿಗಳ ನಾಮಪತ್ರ  ಚುನಾವಣಾಧಿಕಾರಿ ತಿರಸ್ಕರಿಸಿದ್ದರು. ಹಾಗಾಗಿ ಚುನಾವಣೆ ನಡೆಸುವ ಅಗತ್ಯವಿಲ್ಲವೆಂದು ಕಣದಲ್ಲಿ ಉಳಿದಿದ್ದ  7 ಮಂದಿಯನ್ನು ವಿಧಾನಪರಿಷತ್​ಗೆ ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿ ಘೋಷಿಸಿದ್ದಾರೆ.

ಕಾಂಗ್ರೆಸ್​ನಿಂದ ಬಿ.ಕೆ. ಹರಿಪ್ರಸಾದ್ ಮತ್ತು ನಜೀರ್ ಅಹಮ್ಮದ್, ಬಿಜೆಪಿಯಿಂದ ಎಂ.ಟಿ.ಬಿ.ನಾಗರಾಜ್, ಆರ್. ಶಂಕರ್, ಸುನೀಲ್ ವಲ್ಯಾಪುರೆ ಮತ್ತು ಪ್ರತಾಪ್ ಸಿಂಹ ನಾಯಕ್ ಹಾಗೂ ಜೆಡಿಎಸ್​ನಿಂದ ಗೋವಿಂದರಾಜು ಅವರು ಚುನಾವಣಾಧಿಕಾರಿ ವಿಶಾಲಾಕ್ಷಿ ಅವರಿಂದ ಪ್ರಮಾಣ‌ಪತ್ರ ಸ್ವೀಕರಿಸಿದರು.

ವಿಧಾನ ಪರಿಷತ್‌ಗೆ ಆಯ್ಕೆಯಾದ ಬಳಿಕ ಮಾತನಾಡಿದ ಆರ್ ಶಂಕರ್, ತಾವು ಮಂತ್ರಿಯಾಗುವುದು ನೂರಕ್ಕೆ ನೂರರಷ್ಟು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

“ಕೊರೋನಾ ಸಂದರ್ಭದಲ್ಲಿ ಎಂಎಲ್​ಸಿ ಆಗಿ ಆಯ್ಕೆಯಾಗಿದ್ದೇವೆ. ನಮ್ಮನ್ನು ಮುಂದೆ ‌ಮುಂದೆ ಕೊರೋನಾ ಪರಿಷತ್ ಸದಸ್ಯರು ಅಂತಾ ಕರೆಯುತ್ತಾರೇನೋ ಎಂದು ಎಂಟಿಬಿ ನಾಗರಾಜ್ ತಮಾಷೆ ಮಾಡಿದ್ದಾರೆ.

ಏಳು ಸ್ಥಾನಗಳಿಗೆ ಏಳಕ್ಕಿಂತ ಹೆಚ್ಚು ಮಂದಿ ಅಂತಿಮವಾಗಿ ಕಣದಲ್ಲಿ ಉಳಿದುಕೊಂಡಿದ್ದರೆ ಜೂನ್ 29ರಂದು ಚುನಾವಣೆ ನಡೆಯಲು ನಿಗದಿಯಾಗಿತ್ತು. ಆದರೆ, ಅಂತಿಮವಾಗಿ ಏಳು ಅಭ್ಯರ್ಥಿಗಳು ಮಾತ್ರ ಕಣದಲ್ಲಿ ಉಳಿದುಕೊಂಡಿದ್ದರಿಂದ ಚುನಾವಣೆಯ ಅಗತ್ಯ ಇಲ್ಲದೇ ಎಲ್ಲಾ ಅಭ್ಯರ್ಥಿಗಳು ಅವಿರೋಧ ಆಯ್ಕೆಗೊಂಡಿದ್ದಾರೆ.

ಈಗ ಚುನಾಯಿತ 64 ಹಾಗೂ ನಾಮನಿರ್ದೇಶಿತ 11 ಸ್ಥಾನ ಸೇರಿ ವಿಧಾನಪರಿಷತ್​ನಲ್ಲಿ ಒಟ್ಟು 75 ಸದಸ್ಯ ಬಲ ಇದೆ. ಬಿಜೆಪಿ ಪಾಳಯದಲ್ಲಿ ಇವತ್ತು ಆಯ್ಕೆಯಾದ ನಾಲ್ವರು ಸೇರಿ ಒಟ್ಟು 25 ಸದಸ್ಯರಿದ್ಧಾರೆ. ಕಾಂಗ್ರೆಸ್​ನ 35 ಹಾಗೂ ಜೆಡಿಎಸ್​ನ 15 ಸದಸ್ಯರು ಪರಿಷತ್​ನಲ್ಲಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights