ಸಾಮೂಹಿಕ ನಾಯಕತ್ವದಿಂದ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದೇವೆ: ಡಾ.ಜಿ. ಪರಮೇಶ್ವರ

ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡುವ ಉದ್ದೇಶದಿಂದ ದೆಹಲಿಗೆ ತೆರಳಿದ್ದೆ. ಈ ವೇಳೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದೆ. ಹೀಗಾಗಿ ಸಿಎಲ್‍ಪಿ ಸಭೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಇದನ್ನು ಹೊರತುಪಡಿಸಿ ನನಗೂ ಹಾಗೂ ಸಿದ್ಧರಾಮಯ್ಯ ನಡುವೆ ಯಾವುದೇ ಶತೃತ್ವವಿದೆ ಎಂದು ಅನಗತ್ಯವಾದ ಗೊಂದಲ ಉಂಟು ಮಾಡುವುದು ಸರಿಯಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಡಾ,ಜಿ, ಪರಮೇಶ್ವರ ಅವರು ಸ್ಪಷ್ಟಪಡಿಸಿದರು.

ಸದಾಶಿವನಗರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರ ವಿಚಾರಣೆ ವೇಳೆ ನನಗೆ ಆರೋಗ್ಯ ಹದಗೆಟ್ಟಿದ್ದ ಕಾರಣ ಅವರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ದೆಹಲಿಗೆ ತೆರಳಿ ಅವರ ಆರೋಗ್ಯ ಹಾಗೂ ಪರಿಸ್ಥಿತಿ ವಿಚಾರಿಸಿದೆ. ಇದೇ ಸಂದರ್ಭದಲ್ಲಿ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿದೆ.
ಕರ್ನಾಟಕದಲ್ಲಿ ಪಕ್ಷ ಬಲಗೊಳಿಸುವ ಬಗ್ಗೆ ಮಾತನಾಡಿದ್ದಾರೆ. ದೆಹಲಿಗೆ ಹೋದರೆ ಎಐಸಿಸಿ ಅಧ್ಯಕ್ಷರು, ಮುಖಂಡರನ್ನು ಭೇಟಿ ಮಾಡುವುದು ನಮ್ಮ ಸಂಪ್ರದಾಯ. ಒಂದು ವರ್ಷದಿಂದ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅವರನ್ನು ಭೇಟಿ ಮಾಡಿದೆ. ಅವರ ಆರೋಗ್ಯವನ್ನು ವಿಚಾರಿಸಿದೆ. ಡಿ.ಕೆ. ಶಿವಕುಮಾರ್ ಅವರ ಬಗ್ಗೆಯೂ ವಿವರಣೆ ನೀಡಿದೆ ಎಂದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಬಲವಾಗಿದೆ. ಅದನ್ನು ಇನ್ನಷ್ಟು ಬಲಿಷ್ಠಗೊಳಿಸಿ ಎಂದು ಸೋನಿಯಾಗಾಂಧಿ ಅವರು ಸಲಹೆ ನೀಡಿದರು. ಇದು ಬಿಟ್ಟರೆ ಬೇರಾವುದನ್ನು ಚರ್ಚೆ ಮಾಡಲಿಲ್ಲ. ಕೆಪಿಸಿಸಿ ಅಧ್ಯಕ್ಷಸ್ಥಾನದ ಬಗ್ಗೆ ಚರ್ಚೆ ಮಾಡುವ ಪ್ರಸಂಗವೇ ಬರುವುದಿಲ್ಲ. ವಿಪಕ್ಷ ನಾಯಕ ಸ್ಥಾನದ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.
ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಶತೃತ್ವ ಇರುವಂತೆ ಬಿಂಬಿಸಿರುವ ಹಿಂದೆ ಯಾರದ್ದೋ ಕೈವಾಡವಿದೆ ಎಂದೆನಿಸುತ್ತದೆ. ನಾನು ಮೂತಹ ಕಾಂಗ್ರೆಸ್‍ನವನು. ಕೊನೆಯವರೆಗೂ ಇಲ್ಲಿಯೇ ಉಳಿಯುತ್ತೇವೆ. ಕಾಂಗ್ರೆಸ್‍ನಲ್ಲಿ ಇರುವ ಪ್ರತಿಯೊಬ್ಬರೂ ಪಕ್ಷದ ಸಿದ್ಧಾಂತವನ್ನು ಒಪ್ಪಿದವರೇ ಆಗಿದ್ದಾರೆ. ಇಲ್ಲಿ ಹೊರಗಿಂದ ಬಂದವರು, ಮೂಲ ಕಾಂಗ್ರೆಸ್‍ನವರು ಎಂಬ ಬೇಧವಿಲ್ಲ. ಇಲ್ಲಿ ಎಲ್ಲರೂ ಕಾಂಗ್ರೆಸ್‍ನವರೆ. ನಮ್ಮೆಲ್ಲರ ನಡುವೆ ಯಾವುದೇ ಭಿನ್ನಮತವಿಲ್ಲ ಎಂದು ಹೇಳಿದರು.
ನಾವೆಲ್ಲಾ ಒಟ್ಟಿಗೆ ಪಕ್ಷ ಕಟ್ಟಿ ಮತ್ತೆ ಅಧಿಕಾರಕ್ಕೆ ತರುವತ್ತ ಕೆಲಸ ಮಾಡಲಿದ್ದೇವೆ. ಒಬ್ಬರೇ ಪಕ್ಷ ಬೆಳೆಸುತ್ತೇವೆ ಎಂದುಕೊಳ್ಳುವುದು ತಪ್ಪು. ನಮ್ಮೆಲ್ಲರ ಮಧ್ಯೆ ಆ ಒಮ್ಮತವಿದೆ ಎಂದು ಸ್ಪಷ್ಟಪಡಿಸಿದರು.

ಸೋನಿಯಾಗಾಂಧಿ ಅವರ ಭೇಟಿ ವಿಷಯದಲ್ಲಿ ಯಾವುದೇ ಭಿನ್ನಾಭಿಪ್ರಾಯದ ಉದ್ದೇಶವಿರಲಿಲ್ಲ. ಪಕ್ಷದಲ್ಲಿ ಯಾರನ್ನೂ ದೂರವಿಟ್ಟು ಪಕ್ಷ ಕಟ್ಟಲು ಸಾಧ್ಯವಿಲ್ಲ. ಸಾಮೂಹಿಕ ನಾಯಕತ್ವದಿಂದ ಮಾತ್ರ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಧ್ಯ.
2013ರಲ್ಲಿ ಸಾಮೂಹಿಕ ನಾಯಕತ್ವದಿಂದಲೇ ಪಕ್ಷವನ್ನು ಅಧಿಕಾರಕ್ಕೆ ತರಲಾಗಿತ್ತು. ಈಗಲೂ ಹಾಗೇ ನಡೆಯಲಿದ್ದೇವೆ ಎಂದರು.

ಡಿಸೆಂಬರ್‍ನಲ್ಲಿ ಮಧ್ಯಂತರ ಚುನಾವಣೆ ಸಾಧ್ಯತೆ ಇದೆ ಎಂಬ ಸುದ್ದಿ ಬಲವಾಗಿ ಕೇಳಿಬರುತ್ತಿದೆ. ಈ ಬಗ್ಗೆಯೂ ಸೋನಿಯಾಗಾಂಧಿ ಅವರ ಬಳಿ ಚರ್ಚೆ ಮಾಡಿದೆ.
ವಿರೋಧ ಪಕ್ಷದ ನಾಯಕರನ್ನು ಅಧಿವೇಶನದ ಒಳಗಾಗಿ ಆಯ್ಕೆ ಮಾಡಲಾಗುತ್ತದೆ. ಎಐಸಿಸಿ ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ಗೊಂದಲವಿದ್ದ ಕಾರಣ ವಿಪಕ್ಷ ನಾಯಕರ ಆಯ್ಕೆ ತಡವಾಗಿದೆ, ಶೀಘ್ರವೇ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿ ನೆರೆ ಪರಿಸ್ಥಿತಿ ಇದ್ದರೂ ಕೇಂದ್ರ ಸರಕಾರ ಪರಿಹಾರ ನೀಡಿಲ್ಲ. ಕೇಂದ್ರದ ಬಳಿ ಪರಿಹಾರ ಮೊತ್ತ ಕೇಳುವ ಧೈರ್ಯ ಯಡಿಯೂರಪ್ಪ ಅವರಿಗಿಲ್ಲ. ಕನಿಷ್ಠ ಪಕ್ಷ ರಾಜ್ಯದಿಂದ ನಿಯೋಗ ಕರೆದುಕೊಂಡು ಹೋಗುವ ಧೈರ್ಯವನ್ನು ಮುಖ್ಯಮಂತ್ರಿಗಳು ಮಾಡುತ್ತಿಲ್ಲ. ಬಿಜೆಪಿ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights