“ಪೌರತ್ವ ತಿದ್ದುಪಡಿ ಮೂಲಭೂತವಾಗಿ ತಾರತಮ್ಯದಿಂದ ಕೂಡಿದ ಶಾಸನ”

ದೇಶದಲ್ಲಿ, ನಿರ್ದಿಷ್ಟವಾಗಿ ಈಶಾನ್ಯ ರಾಜ್ಯಗಳಲ್ಲಿ ಕಳೆದೆರಡು ದಿನಗಳಿಂದ ಜನರ ಆಕ್ರೋಶಭರಿತ ಪ್ರತಿಭಟನೆಗೆ ಕಾರಣವಾಗಿರುವ ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಮಸೂದೆಯ ಕುರಿತಂತೆ ತನ್ನ ಕಳವಳ ವ್ಯಕ್ತಪಡಿಸಿರುವ ವಿಶ್ವಸಂಸ್ಥೆಯ ಮಾನವಹಕ್ಕುಗಳ ವಿಭಾಗವು `ಇದೊಂದು ಮೂಲಭೂತವಾಗಿ ತಾರತಮ್ಯದಿಂದ ಕೂಡಿದ ಶಾಸನ’ ಎಂದು ಹೇಳಿದೆ.

ವಿಶ್ವಸಂಸ್ಥೆಯ ಮಾನವಹಕ್ಕು ವಿಭಾಗದ ವಕ್ತಾರ ಜೆರೆಮಿ ಲಾರೆನ್ಸ್ ಅವರು ಜಿನೇವಾದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ನೀಡಿದ ಹೇಳಿಕೆಯಲ್ಲಿ “ಭಾರತದ ಹೊಸ ಪೌರತ್ವ ತಿದ್ದುಪಡಿ ಕಾಯ್ದೆ 2019, ಮೂಲಭೂತವಾಗಿ ತಾರತಮ್ಯ ಗುಣದಿಂದ ಕೂಡಿದೆ ಎಂಬ ಕಳವಳ ವಿಶ್ವಸಂಸ್ಥೆಗಿದೆ” ಎಂದಿದ್ದಾರೆ.

ತಿದ್ದುಪಡಿ ಕಾಯ್ದೆಯು ಭಾರತದ ಸಂವಿಧಾನದತ್ತ ಕಾನೂನುಗಳಲ್ಲಿ ಉಲ್ಲೇಖಿಸಲಾಗಿರುವ ಎಲ್ಲರನ್ನು ಸಮಾನವಾಗಿ ಕಾಣುವ ಬದ್ಧತೆಯನ್ನೆ ಅಲ್ಲಗಳೆಯುತ್ತಿದೆ. ಅಷ್ಟೇ ಅಲ್ಲ ಸ್ವತಃ ಭಾರತವೂ ಸಹಿ ಮಾಡಿರುವ ಅಂತಾರಾಷ್ಟ್ರೀಯ ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಒಪ್ಪಂದ ಹಾಗೂ ಜನಾಂಗೀಯ ತಾರತಮ್ಯ ನಿರ್ಮೂಲನಾ ಒಪ್ಪಂದಗಳನ್ನು ಭಾರತ ಉಲ್ಲಂಘಿಸಿದಂತಾಗಿದೆ. ಈ ಒಪ್ಪಂದಗಳು ಜನಾಂಗೀಯ ಮತ್ತು ಧಾರ್ಮಿಕ ಆಧಾರಗಳಲ್ಲಿ ತಾರತಮ್ಯ ಮಾಡುವುದನ್ನು ನಿರ್ಬಂಧಿಸುತ್ತವೆ” ಎಂದಿದ್ದಾರೆ.

“ವಿಶಾಲ ಮನೋಭಾವದ ಭಾರತದ ಹಳೆಯ ಪೌರತ್ವ ನಿಯಮಗಳು ಜಾರಿಯಲ್ಲಿರುತ್ತವೆಯಾದರು ಈ ಹೊಸ ಕಾಯ್ದೆ ಮಾತ್ರ ಪೌರತ್ವ ನೀಡುವಲ್ಲಿ ತಾರತಮ್ಯ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ವಲಸೆಯ ಸ್ಥಿತಿ ಏನೇ ಇರಲಿ, ಎಲ್ಲಾ ವಲಸಿಗರನ್ನು ಅವರಿಗಿರುವ ಮಾನವಹಕ್ಕುಗಳನ್ನು ಪರಿಗಣಿಸಿ ಸಮಾನ ಗೌರವ, ರಕ್ಷಣೆಯನ್ನು ಒದಗಿಸಬೇಕಾದ್ದು ಸರ್ಕಾರಗಳ ಕರ್ತವ್ಯ” ಎಂಬ ಮಾತನ್ನೂ ಅವರು ಹೇಳಿದ್ದಾರೆ.

“ಕೇವಲ 12 ತಿಂಗಳ ಹಿಂದಷ್ಟೇ ಭಾರತವು ಸಮಗ್ರ ಸುರಕ್ಷತಾ, ನಿಯಮಿತ ಮತ್ತು ಕ್ರಮಬದ್ಧ ವಲಸೆ ಒಪ್ಪಂದವನ್ನು ಅನುಮೋದಿಸಿತ್ತು. ಈ ಒಪ್ಪಂದವು ಅಸಹಾಯಕ ಪರಿಸ್ಥಿತಿಗಳಲ್ಲಿ ವಲಸಿಗರ ಬೇಡಿಕೆಗಳನ್ನು ಈಡೇರಿಸುವುದು, ಅವರನ್ನು ಅನಿಯಂತ್ರಿತವಾಗಿ ಬಂಧಿಸುವುದನ್ನು ಹಾಗೂ ಸಾರಾಸಗಟಾಗಿ ಹೊರಹಾಕುವುದನ್ನು ವಿರೋಧಿಸುವ ಮೂಲಕ ಅವರ ಮಾನವಹಕ್ಕುಗಳನ್ನು ಗೌರವಿಸುವುದಕ್ಕೆ ಬದ್ಧವಾಗಿರುವ ಒಪ್ಪಂದ.” ಎಂದೂ ಅವರು ತಿಳಿಸಿದ್ದಾರೆ.

ವಲಸಿಗರಿಗೆ ಪೌರತ್ವ ನೀಡುವ ಕ್ರಮವನ್ನು ಸ್ವಾಗತಿಸಬಹುದಾದರು ಅದು ಎಲ್ಲಾ ವಲಸಿಗರನ್ನು ಸಮನಾಗಿ ಕಾಣುವ, ಸದೃಢ ರಾಷ್ಟ್ರೀಯ ಆಶ್ರಯ ವ್ಯವಸ್ಥೆಯ ಮೂಲಕ ಮಾಡಬೇಕಿರುತ್ತದೆ ಎಂಬ ಅಭಿಪ್ರಾಯವನ್ನೂ ವಕ್ತಾರರು ಹೊರಹಾಕಿದ್ದಾರೆ.

“ಭಾರತದ ಸುಪ್ರೀಂ ಕೋರ್ಟ್ ಈ ಹೊಸ ಕಾಯ್ದೆಯನ್ನು ಪರಾಮರ್ಶಿಸಲಿದೆ ಎಂದು ನಮಗೆ ತಿಳಿದು ಬಂದಿದೆ. ಭಾರತದ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಬದ್ಧತೆಗಳೇನು ಎಂಬುದನ್ನು ಮನಗಂಡು ಹೊಸ ಕಾಯ್ದೆ ಎಷ್ಟರ ಮಟ್ಟಿಗೆ ಸಮಂಜಸವಾದುದು ಎಂಬ ಬಗ್ಗೆ ತನ್ನ ತೀರ್ಪು ನೀಡಲಿದೆ ಎಂದು ನಾವು ಭರವಸೆ ಇಟ್ಟುಕೊಂಡಿದ್ದೇವೆ” ಎಂದು ಲಾರೆನ್ಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಪ್ಘಾನಿಸ್ತಾನದಲ್ಲಿ ಜನಾಂಗೀಯ ದೌರ್ಜನ್ಯಕ್ಕೆ ತುತ್ತಾಗಿ ಭಾರತಕ್ಕೆ ವಲಸೆ ಬಂದಿರುವ ಮುಸ್ಲಿಮೇತರ ಅಲ್ಪಸಂಖ್ಯಾತ ಸಮುದಾಯಗಳಿಗೆ ಭಾರತೀಯ ಪೌರತ್ವ ನೀಡುವ ಅವಕಾಶ ಕಲ್ಪಿಸುವ ತಿದ್ದುಪಡಿಯನ್ನು ಕೇಂದ್ರ ಸರ್ಕಾರ ಮಂಡಿಸಿತ್ತು. ಇದು ಲೋಕಸಭೆ, ರಾಜಸ್ಯಭೆಗಳೆರಡಲ್ಲೂ ಅನುಮೋದನೆಗೊಂಡು ರಾಷ್ಟ್ರಪತಿಗಳ ಅಂಕಿತವನ್ನೂ ಪಡೆದ ನಂತರ ಕಾನೂನಾಗಿ ಜಾರಿಗೆ ಬಂದಿದೆ. ಆದರೆ ಜನಾಂಗೀಯ ಆಧಾರದಲ್ಲಿ ವಲಸಿಗರನ್ನು ರಾಜಕೀಯ ಕಾರಣಕ್ಕೆ ಮಾನ್ಯ ಮಾಡುವ ಈ ವಿವಾದಿತ ತಿದ್ದುಪಡಿ ವಿರುದ್ಧ ದೇಶಾದ್ಯಂತ ಪ್ರತಿಭಟನೆ ಭುಗಿಲೆದ್ದಿದೆ. ಅಸ್ಸಾಂನಲ್ಲಿ ಪ್ರತಿಭಟನೆ ಉಗ್ರ ಸ್ವರೂಪ ಪಡೆದಿದ್ದು, ಈಗಾಗಲೇ ಗೋಲಿಬಾರ್ ನಲ್ಲಿ ಇಬ್ಬರು ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಅಮೆರಿಕಾ ಸಂಸತ್ತು ಪೌರತ್ವ ಮಸೂದೆ ವಿರುದ್ಧ ತನ್ನ ಅಸಮಾಧಾನ ಹೊರಹಾಕಿದ ಬೆನ್ನಲ್ಲೇ ಬಾಂಗ್ಲಾ ಮತ್ತು ಅಪ್ಘಾನಿಸ್ತಾನಗಳೂ ತಮ್ಮ ಮುನಿಸು ವ್ಯಕ್ತಪಡಿಸಿದ್ದವು. ಜಪಾನ್ ಪ್ರಧಾನಿ ಶಿನ್ಜೋ ಅಬೆ ತಮ್ಮ ಭಾರತ ಪ್ರವಾಸವನ್ನೇ ಮುಂದೂಡಿದ್ದಾರೆ. ಹೀಗೆ ಜಾಗತಿಕ ಮಟ್ಟದಲ್ಲಿ ಮೋದಿ ಸರ್ಕಾರಕ್ಕೆ ರಾಜತಾಂತ್ರಿಕ ಒತ್ತಡಗಳು ದಟ್ಟವಾಗುತ್ತಿರುವ ಸಂದರ್ಭದಲ್ಲೇ ವಿಶ್ವಸಂಸ್ಥೆ ತನ್ನ ಕಳವಳ ಹೊರಹಾಕಿರುವುದು ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights