Cricket Ranaji : ತಮಿಳುನಾಡು ವಿರುದ್ಧ 26 ರನ್ನುಗಳ ಅತಿ ರೋಚಕ ಗೆಲುವು ಕಂಡ ಕರ್ನಾಟಕ

ಫಿರ್ಕಿ ಕೃಷ್ಣಪ್ಪ ಗೌತಮ್ ಅವರ ಜೀವನಶ್ರೇಷ್ಠ ಬೌಲಿಂಗ್ ನೆರವಿನಿಂದ ಕರ್ನಾಟಕವು ಅತ್ಯಂತ ರೋಚಕ ಪಂದ್ಯದಲ್ಲಿ ನೆರೆಯ ತಮಿಳುನಾಡು ತಂಡವನ್ನು 26 ರನ್ನುಗಳಿಂದ ಪರಾಭವಗೊಳಿಸಿ ಪ್ರಸ್ಕತ ರಣಿಜಿ ಸಾಲಿನಲ್ಲಿ ಜಯದ ಶುಭಾರಂಭ ಮಾಡಿದೆ.

ಪಂದ್ಯದ ಕಡೆಯ ದಿನವಾದ ಗುರುವಾರ ಗೆಲ್ಲಲು 181 ರನ್ ಗಳಿಸಬೇಕಾದ ಸವಾಲು ಎದುರಿಸಿದ ತಮಿಳುನಾಡು ದಿನದ ಕಡೆಯ ಓವರಿನಲ್ಲಿ 154 ರನ್ನುಗಳಿಗೆ ತನ್ನೆಲ್ಲ ವಿಕೆಟ್ ಕೈಚೆಲ್ಲಿ ಸೋಲಿನ ಕಹಿ ಅನುಭವಿಸಿತು. ಇತ್ತೀಚಿನ ದಿನಗಳಲ್ಲಿ ತಮಿಳುನಾಡಿಗೆ ಕರ್ನಾಟಕದ ವಿರುದ್ಧ ಇದು ಸತ ಮೂರನೇ ಸೋಲಾಗಿದೆ.

ಕೃಷ್ಣಪ್ಪ ಗೌತಮ್ ಕರ್ನಾಟಕದ ಈ ಜಯದ ರೂವಾರಿ ಎನಿಸಿದರು. ಮೊದಲ ಸರದಿಯಲ್ಲಿ ತಮಿಳುನಾಡಿನ ಆರು ದಾಂಡಿಗರನ್ನು ಬಲಿ ಹಾಕಿದ್ದ ಗೌತಮ್ ಎರಡನೇ ಸರದಿಯಲ್ಲಿ ನಿರಂತರ, ನಿಖರ ದಾಳಿ ನಡೆಸಿ ಎಂಟು ವಿಕೆಟ್ ಕಬಳಿಸಿದರು. ಇದಕ್ಕಾಗಿ 30.3 ಓವರ್‍ ಎಸೆದ ಗೌತಮ್ 60 ರನ್ ನೀಡಿದರು.

ಗೌತಮ್ ಅವರ ದಾಳಿಗೆ ಪತರುಗುಟ್ಟಿದ ತಮಿಳುನಾಡಿನ ಪರ ಆರಂಭಿಕ ಮುರಳಿ ವಿಜಯ್ 42 ರನ್ ಗಳಿಸಿದರೇ, ಮೋಹಿತ್ ಅಶ್ವಿನ್ 23 ರನ್ ಮಾಡಿದರು. ಕಡೆಯ ಓವರಿನಲ್ಲಿ ಮೂರು ಎಸೆತ ಇರುವಾಗ ಗೌತಮ್ ಅವರು ವಿಘ್ನೇಶ್ ವಿಕೆಟ್ ಕಿತ್ತು ಜಯ ದೊರಕಿಸಿದರು.

ಇದಕ್ಕೆ ಮುನ್ನ ಕರ್ನಾಟಕ ತಂಡವು ತನ್ನ ಎರಡನೇ ಸರದಿಯನ್ನು 151 ರನ್ನುಗಳಿಗೆ ಕೊನೆಗೊಳಿಸಿತು. ಭರವಸೆಯ ಯುವ ಆಟಗಾರ ದೇವದತ್ ಪಡಿಕ್ಕಲ್ 39 ರನ್ ಮಾಡಿ ಗಮನ ಸೆಳೆದರೇ, ಗೌತಮ್ ಮತ್ತು ಮಥಾಯಿಸ್ ತಲಾ 22 ರನ್ ಮಾಡಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights