Top 5 fake news : ಮೋದಿಗಿಂತ ಮನಮೋಹನ್ ಹೆಚ್ಚು ಪ್ರವಾಸ , ಏಳ್ಹೆಡೆ ಕಾಳಿಂಗ, ಜಿನ್‍ಪಿಂಗ್ ಲುಂಗಿಯಲ್ಲಿ ಪಾಕ್‍ಗೆ ಭೇಟಿ

| ಮುತ್ತುರಾಜ್ |

1. ಮೋದಿಗಿಂತ ಮನಮೋಹನ್ ಸಿಂಗ್ ಅತಿ ಹೆಚ್ಚು ವಿದೇಶಿ ಪ್ರವಾಸ ಮಾಡಿದ್ದಾರೆ: ಅಮಿತ್ ಶಾ

ಸುಳ್ಳು: ಮನಮೋಹನ್ ಸಿಂಗ್‍ಗೆ ಹೋಲಿಸಿದರೆ ಪ್ರಧಾನಿ ನರೇಂದ್ರ ಮೋದಿಯವರು ಕಡಿಮೆ ವಿದೇಶ ಪ್ರವಾಸ ಮಾಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹರಿಯಾಣದ ಕೈತಾಲ್‍ನಲ್ಲಿ ಚುನಾವಣೆ ಪ್ರಚಾರದ ವೇಳೆ ಹೇಳಿದ್ದಾರೆ.

ಸತ್ಯ: ಆದರೆ ಈ ಹೇಳಿಕೆ ಸಂಪೂರ್ಣ ಸುಳ್ಳಾಗಿದೆ. ಎರಡೂ ನಾಯಕರ ಮೊದಲ ಐದು ವರ್ಷಗಳ ಅವಧಿಯ ಸರ್ಕಾರಿ ಡೇಟಾವನ್ನು ಪರಿಶೀಲಿಸಿದಾಗ, ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಮನಮೋಹನ್ ಸಿಂಗ್ ಗಿಂತ ಹೆಚ್ಚು ವಿದೇಶ ಪ್ರವಾಸ ಮಾಡಿದ್ದಾರೆ ಎಂದು ಕಂಡುಬಂದಿದೆ.

ಪ್ರಧಾನ ಮಂತ್ರಿಗಳ ಕಚೇರಿಯ (ಪಿಎಂಒ) ದತ್ತಾಂಶ ಪಟ್ಟಿ ನೋಡಿದಾಗ,
ಮನಮೋಹನ್ ಸಿಂಗ್ ರವರು ಒಟ್ಟು 10 ವರ್ಷಗಳ ಆಡಳಿತದಲ್ಲಿ 72 ಬಾರಿ 93 ದೇಶಗಳಿಗೆ ಪ್ರವಾಸ ಮಾಡಿದ್ದಾರೆ

ಆದರೆ ಮೋದಿಯವರು ತಮ್ಮ ಮೊದಲ ಐದು ವಷಗಳ ಅವಧಿಯಲ್ಲಿಯೇ 49 ಬಾರಿ ಪ್ರವಾಸ ಮಾಡಿದ್ದು 93 ದೇಶಗಳಿಗೆ ಭೇಟಿ ನೀಡಿದ್ದಾರೆ. ಅಂದರೆ ಮನಮೋಹನ್‍ಸಿಂಗ್‍ಗಿಂತ ಹೆಚ್ಚು ಪ್ರವಾಸ ಮತ್ತು ಹೆಚ್ಚು ಖರ್ಚು ಕೂಡ ಮಾಡಿದ್ದಾರೆ. ಆದರೆ ಅಮಿತ್ ಶಾ ಚುನಾವಣಾ ದೃಷ್ಟಿಯಿಂದ ಸುಳ್ಳು ಹೇಳಿದ್ದಾರೆ.

2. ಗೋ ಬ್ಯಾಕ್ ಮೋದಿ ಟ್ವೀಟ್ಗಳು ಪಾಕಿಸ್ತಾನದಿಂದ ಮಾಡಲ್ಪಡುತ್ತಿವೆ

ಅಕ್ಟೋಬರ್ 11ರಂದು ನರೇಂದ್ರ ಮೋದಿ ತಮಿಳುನಾಡಿಗೆ ಭೇಟಿ ಕೊಟ್ಟಾಗ ಎಂದಿನಂತೆ #GoBackModi ಎಂಬ ಟ್ವೀಟುಗಳು ಮೊಳಗಿದವು. ಬರೋಬ್ಬರಿ 2 ಲಕ್ಷಕ್ಕೂ ಅಧಿಕ ಟ್ವೀಟ್‍ಗಳು ದಾಖಲಾಗಿ ನಂಬರ್1 ಸ್ಥಾನದಲ್ಲಿ ಟ್ರೆಂಡಿಂಗ್ ಆಗಿತ್ತು. ಇದರಿಂದ ಸಹಜವಾಗಿ ಮೋದಿ ಮತ್ತವರ ಅಭಿಮಾನಿಗಳಿಗೆ ಮುಜುಗರವಾಗಿತ್ತು.

ಕೂಡಲೇ ವಾಟ್ಸಾಪ್ ಯೂನಿವರ್ಸಿಟಿಯ ಸಂಚುಕೋರರು ಈ ಟ್ವೀಟ್‍ಗಳು ಪಾಕಿಸ್ತಾನದಲ್ಲಿ ಆಗುತ್ತಿವೆ ಎಂದು ಸುಳ್ಳು ಹಬ್ಬಿಸಿದರು. ಇದಕ್ಕೆ ಬಕೆಟ್ ಪತ್ರಕರ್ತರು ಮತ್ತು ಗೋದಿ ಮೀಡಿಯಾಗಳು ಸಹ ಕೈ ಜೋಡಿಸಿದರು.

ವಾಸ್ತವ ಏನೆಂದರೆ 98% ಟ್ವೀಟ್ ಗಳು ಭಾರತದಿಂದಲೇ ಟ್ವೀಟಾಗಿದ್ದವು. ತಮಿಳುನಾಡು ರಾಜ್ಯವೊಂದರಲ್ಲೇ 78,000 ಟ್ವೀಟ್ ದಾಖಲಾಗಿತ್ತು. ದೆಹಲಿಯಿಂದ 45,000 ಟ್ವೀಟ್‍ಗಳು ಬಂದಿದ್ದವು… ಚಿತ್ರ ನೋಡಿ…

3 ಕನಕಪುರದ ಮರಿಗೌಡನ ದೊಡ್ಡಿಯಲ್ಲಿ ಕಾಣಿಸಿಕೊಂಡ ಏಳ್ಹೆಡೆ ಕಾಳಿಂಗನ ಪೊರೆ..

ಎರಡು ತಲೆ ಸರ್ಪ ಇದೆ, ಮೂರು ತಲೆ, ಏಳು ತಲೆ ಸರ್ಪ ಇದೆ ಎಂಬ ಸುದ್ದಿಗಳನ್ನು ಅಲ್ಲಲ್ಲಿ ಓದಿರುತ್ತೇವೆ. ಈ ಇಂಟರ್‍ನೆಟ್ ಯುಗದಲ್ಲಂತೂ ಮೊಬೈಲ್‍ನಲ್ಲಿ ಆ ರೀತಿಯ ಫೋಟೊಗಳು ಕಾಣಿಸಿಕೊಳ್ಳುತ್ತವೆ. ಜನ ಕುತೂಹಲದಿಂದ ನೋಡುವುದಲ್ಲದೇ ಫಾರ್ವಡ್ ಕೂಡ ಮಾಡಿಬಿಡುತ್ತಾರೆ. ಅಂತದ್ದೇ ಸುದ್ದಿ ರಾಮನಗರ ಜಿಲ್ಲೆಯಿಂದ ಹೊರಟಿದೆ.

ಏಳ್ಹೆಡೆ ಕಾಳಿಂಗನ ಪೊರೆ ಕಾಣಿಸಿಕೊಂಡಿದೆ ಎಂಬ ಸುದ್ದಿ ಎಲ್ಲಡೆ ವೈರಲ್ ಆಗಿದೆ. ವೈಜ್ಞಾನಿಕ ಸತ್ಯ ಏನೆಂದರೆ ಒಂದಕ್ಕಿಂತ ಹೆಚ್ಚು ತಲೆಯ ಜೀವಿಗಳು ಹುಟ್ಟುತ್ತಲೇ ಸಾಯುತ್ತವೆ. ಏಕೆಂದರೆ ಒಂದು ಜೀವಿಗೆ ಒಂದಕ್ಕಿಂತ ಹೆಚ್ಚು ತಲೆಗಳಿದ್ದರೆ ಅದಕ್ಕೆ ಬಹಳಷ್ಟು ತೊಂದರೆಯಾಗುತ್ತದೆ. ಅದು ಓಡಾಡಲು ಸಾಧ್ಯವಿಲ್ಲ, ಆಹಾರ ಸೇವಿಸಲು ಸಾಧ್ಯವಿಲ್ಲ. ಹಾಗಾಗಿ ಅದು ಬಹುಬೇಗ ಸಾಯುತ್ತದೆ.

ಆದರೆ ಈ ಫೋಟೊಗಳು ಎಲ್ಲಿಯವು ಎಂದು ಹಲವರಿಗೆ ಅನುಮಾನವಿರುತ್ತದೆ. ಇದು ಫೋಟೊಶಾಪ್ ಚಿತ್ರ. ಕೆಲವು ವಿಕೃತರು ಈ ರೀತಿ ಮಾಡಿ ಹರಿಯಬಿಡುತ್ತಿದ್ದಾರೆ ಅಷ್ಟೇ..

ಒಂದು ಹಾವಿನ ಅಸಲಿ ಫೋಟೋ ಮೇಲೆ ಫೋಟೋಶಾಪ್‍ನ ಕ್ಲೋನ್ ಸ್ಟಾಂಪ್ ಟೂಲ್ ಬಳಸಿ ಒಂದೊಂದಾಗಿ ಏಳಲ್ಲ, ಹತ್ತು, ನೂರು ತಲೆಗಳನ್ನು ಬೇಕಾದರೂ ಕೂರಿಸಬಹುದಾಗಿದೆ.

4. ಇಲ್ಲಿದ್ದು ಪ್ರಯೋಜನವಿಲ್ಲ; ಲಂಡನ್ಗೆ ಹೋಗಿ ಸೆಟ್ಲ್ ಆಗುತ್ತೇನೆರಾಹುಲ್ ಗಾಂಧಿ..

ಸುಳ್ಳು: ಭಾರತದಲ್ಲಿದ್ದು ಯಾವುದೇ ಪ್ರಯೋಜನವಿಲ್ಲ. ನನ್ನ ಬಳಿ ಕೋಟ್ಯಾಂತರ ರೂ ಹಣವಿದೆ. ಯಾವುದೇ ಸಮಯದಲ್ಲಿ ಬೇಕಾದರೂ ಲಂಡನ್‍ಗೆ ಹೋಗಿ ಸೆಟ್ಲ್ ಆಗುತ್ತೇನೆ. ನನ್ನ ಮಕ್ಕಳು ಅಮೆರಿಕದಲ್ಲಿ ಓದುತ್ತಾರೆ.. ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂಬ ವಿಡಿಯೋ ಈ ವಾರ ವೈರಲ್ ಆಗಿದೆ.

ಸತ್ಯ: ಆದರೆ ಇದು ತಿರುಚಿದ ವಿಡಿಯೋವಾಗಿದೆ. ವರ್ಷದ ಹಿಂದೆ ರಾಹುಲ್ ಗಾಂಧಿ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಯವರನ್ನು ಉದ್ದೇಶಿಸಿ ಮಾಡಿದ ಭಾಷಣವಾಗಿದೆ. ಆದರೆ ಆರಂಭದ 11 ಸೆಕೆಂಡ್ ವಿಡಿಯೋವನ್ನು ಕತ್ತರಿಸಿ ರಾಹುಲ್ ಗಾಂಧಿಯ ಬಗ್ಗೆ ಅಪಪ್ರಚಾರ ನಡೆಸಲು ಈ ವಿಡಿಯೋ ತಯಾರಿಸಲಾಗಿದೆ. ಹತ್ತಾರು ಮಂದಿ ಟ್ವಿಟ್ಟರ್‍ನಲ್ಲಿ ಈ ನಕಲಿ ವಿಡಿಯೋ ಲಗತ್ತಿಸಿದ್ದು ಸಾವಿರಾರು ಜನ ವೀಕ್ಷಿಸಿದ್ದಾರೆ.

5. ಮೋದಿಯಿಂದ ಪ್ರಭಾವಿತನಾಗಿ ಲುಂಗಿಯಲ್ಲಿ ಪಾಕ್ಗೆ ಭೇಟಿಕೊಟ್ಟ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್

ಅಕ್ಟೋಬರ್ 11 ರಂದು ಭಾರತದ ಚನ್ನೈಗೆ ಕ್ಸಿ ಜಿನ್‍ಪಿಂಗ್ ಭೇಟಿ ಕೊಟ್ಟಾಗ ಮೋದಿಯವರು ಸಾಂಪ್ರದಾಯಿಕ ಬಿಳಿ ಅಂಗಿ ಬಿಳಿ ಲುಂಗಿ ಧರಿಸಿದ್ದರು.

ಇದನ್ನೇ ನೆಪಮಾಡಿಕೊಂಡ ಭಕ್ತರು ಪಾಕ್ ಅಧ್ಯಕ್ಷ ಇಮ್ರಾನ್ ಖಾನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಇರುವ ಹಳೆಯ ಫೋಟೊವೊಂದನ್ನು ಫೋಟೊಶಾಪ್ ಮಾಡಿ ಕ್ಸಿ ಜಿನ್‍ಪಿಂಗ್‍ಗೂ ಬಿಳಿ ಅಂಗಿ ಲುಂಗಿ ತೊಡಿಸಿಬಿಟ್ಟಿದ್ದಾರೆ. ಮೋದಿಯಿಂದ ಪ್ರಭಾವಿತನಾಗಿ ಲುಂಗಿಯಲ್ಲಿ ಪಾಕ್‍ಗೆ ಭೇಟಿಕೊಟ್ಟ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಎಂದು ಸುಳ್ಳು ಹರಡಿದ್ದಾರೆ. ಮೋದಿಯ ಇಮೇಜ್ ಅನ್ನು ಹೆಚ್ಚಿಸಲು ಇಲ್ಲಿ ಕ್ಸಿ ಜಿನ್‍ಪಿಂಗ್ ಇಮೇಜ್‍ಅನ್ನು ಫೋಟೊಶಾಪ್ ಮಾಡಲಾಗಿದೆ ಅಷ್ಟೇ.. ವಾಸ್ತವವೆಂದರೆ ಚೀನಾಗೆ ಭಾರತಕ್ಕಿಂತ ಪಾಕ್ ಅಚ್ಚುಮೆಚ್ಚಿನ ರಾಷ್ಟ್ರ..

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights