ಇಂದು ಕರ್ಫ್ಯೂ ಅಂತ್ಯ : ರಂಜಾನ್ ಪ್ರಯುಕ್ತ ಮಾರುಕಟ್ಟೆಯಲ್ಲಿ ಜನವೋ ಜನ…

ಶನಿವಾರ ಸಂಜೆ 7 ಗಂಟೆಯಿಂದ ರಾಜ್ಯದಲ್ಲಿ ಜಾರಿಯಾಗಿದ್ದ ಕರ್ಫ್ಯೂ ಇಂದು ಬೆಳಿಗ್ಗೆ 7 ಗಂಟೆ ಮುಕ್ತಾಯಗೊಂಡಿದೆ. ಮುಸಲ್ಮಾನರ ಪವಿತ್ರ ಹಬ್ಬ ರಂಜಾನ್ ಆಚರಣೆಯ ಹಿನ್ನೆಲೆಯಲ್ಲಿ ಜನ ಮಾರುಕಟ್ಟೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುವುದು ಎಲ್ಲೆಡೆ ಕಂಡು ಬರುತ್ತಿದೆ.

ಹೌದು… ನಿನ್ನೆ ಕರ್ಫ್ಯೂ ಇದ್ದ ಕಾರಣ ಯಾರಿಗೂ ಕೂಡ ಹಬ್ಬಕ್ಕೆ ಬೇಕಾದ ಸಾಮಾನುಗಳ ಖರೀದಿ ಸಾಧ್ಯವಾಗಿರಲಿಲ್ಲ. ಇಂದು ಬೆಳಿಗ್ಗೆಯಿಂದಲೂ ಜನ ಮಾರುಕಟ್ಟೆಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಕಾಣಸಿಗುತ್ತಿದ್ದಾರೆ. ಗುಂಪು ಗುಂಪಾಗಿ ಜನ ಮಾರುಕಟ್ಟೆಗಳಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಈ ವೇಳೆ ಕೊರೊನಾ ಸೋಂಕು ಹರಡುವ ಭೀತಿ ಇಲ್ಲದೇ, ಸಾಮಾಜಿಕ ಅಂತರ ಇಲ್ಲದೇ ಹಾಗೂ ಮಾಸ್ಕ್ ಹಾಕಿಕೊಳ್ಳದೇ ಜನ ಓಡಾಡುತ್ತಿರುವ ದೃಶ್ಯಗಳು ಕಂಡು ಬಂದಿವೆ.

ಅಂಗಡಿ -ಮುಗ್ಗಟ್ಟುಗಳಲ್ಲಿ ಮಹಿಳೆಯರು ಪುರುಷರು ಮಕ್ಕಳು ಅಧಿಕ ಸಂಖ್ಯೆಯಲ್ಲಿ ಸೇರುತ್ತಿದ್ದು, ರಾಜ್ಯದಲ್ಲಿ ಲಾಕ್ ಡೌನ್ ಸಂಪೂರ್ಣವಾಗಿ ಸಡಿಲಗೊಂಡಂತೆ ಭಾಸವಾಗುತ್ತಿದೆ. ಕಳೆದ ಮಾರ್ಚ್ ನಿಂದ ಲಾಕ್ ಡೌನ್ ಜಾರಿ ಇರುವುದರಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಜನರಿಗೆ ಹಬ್ಬದ ಆಚರಣೆ ಕೂಡ ಕಷ್ಟವಾಗಿದೆ. ಆದರೂ ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬಂದ ಹಬ್ಬದವನ್ನು ತಕ್ಕಪಟ್ಟಿಗಾದರೂ ಆಚರಿಸುವ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಹಬ್ಬಕ್ಕೆ ಬೇಕಾದ ಸಾಮಾನುಗಳ ಖರೀದಿಗೆ ಜನ ಮುಂದಾಗಿದ್ದಾರೆ. ಮಾಂಸ ಮಾರಟ ಕೇಂದ್ರಗಳಲ್ಲಿ ತರಕಾರಿ, ದಿನಸಿ ಅಂಗಡಿಗಳಲ್ಲಿ ಖರೀದಿಗೆ ಜನ ಮುಗಿಬಿದ್ದಿದ್ದಾರೆ.

ಬೆಂಗಳೂರು, ರಾಯಚೂರು, ಮೈಸೂರು, ವಿಜಯಪುರ, ಬೀದರ್, ಗುಲ್ಬರ್ಗ ಹೀಗೆ ಕೆಲ ಜಿಲ್ಲೆಗಳ ಪ್ರಮುಖ ಮಾರುಕಟ್ಟೆಗಳಲ್ಲಿ ಜನ ದಟ್ಟಣೆ ಕಂಡುಬಂದಿದೆ.

ಇನ್ನೂ ಕೆಲವೆಡೆ ತರಕಾರಿ ಬೆಲೆ ಅಧಿಕವಾಗಿದ್ದು, ಗ್ರಾಹರಿಗೆ ಬಿಸಿ ಮುಟ್ಟಿಸಿದೆ. ಕೊತ್ತಂಬರಿ ಸೇರಿದಂತೆ ಮತ್ತಿತರ ತರಕಾರಿ ಬೆಲೆ ಅಧಿಕವಾದರೂ ಜನ ಖರೀದಿಗೆ ಮುಂದಾಗಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights