ಕೊರೊನಾ ಭೀತಿಗೆ ಸಾಗುತ್ತಿಲ್ಲ ಬದುಕು ಜಟಕಾಬಂಡಿ : ಆರ್ಥಿಕ ಸಂಕಷ್ಟದಲ್ಲಿ ಜನ

ಕಿಲ್ಲರ್ ಕೊರೊನಾ ದಿಂದ ರಾಜ್ಯದಲ್ಲಿ ಎಲ್ಲಾ ಸ್ಥಳಗಳು ಜನರಿಲ್ಲದೇ ಖಾಲಿ ಖಾಲಿಯಾಗಿದ್ದು ಇದರ ಎಫೆಕ್ಟ್ ನಿಂದ ಪ್ರಾಣದ ಭೀತಿ ಮಾತ್ರವಲ್ಲದೇ ಬದುಕಲು ಬೇಕಾದ ದುಡಿಮೆಯ ಭೀತಿ ಕೂಡ ಎದುರಾಗಿದೆ.

ಕೊರೊನಾ ಭೀತಿಯಿಂದ ರಾಜ್ಯದೆಲ್ಲೆಡೆ ಹೈಅಲರ್ಟ್ ಘೋಷಣೆ ಮಾಡಿದ ರಾಜ್ಯ ಸರ್ಕಾರ ಒಂದು ವಾರ ಬಂದ್ ಮಾಡಿದೆ. ಒಂದು ವಾರದ ವರೆಗೂ ರಾಜ್ಯ ಸರ್ಕಾರ ಸೂಚಿಸಿದಂತೆ ಶಾಲಾ, ಕಾಲೇಜು, ವಿವಿಗಳು, ಹೊಟೇಲ್, ಸಭೆ, ಸಮಾರಂಭ, ಕಾರ್ಯಕ್ರಮಗಳು, ಮದುವೆ, ಕ್ರೀಡೆ, ಸ್ವಿಮ್ಮಿಂಗ್, ಜಿಮ್, ಮಾಲ್, ಥಿಯೇಟರ್ ಗಳನ್ನು ಬಂದ್ ಮಾಡಲಾಗಿದೆ.

ಇನ್ನೂ ಐಟಿ-ಬಿಟಿ ಕಂಪನಿಗಳಿಲ್ಲಿ ಮತ್ತು ಮನೆಯಲ್ಲಿ ಕುಳಿತು ಕೆಲಸ ಮಾಡಲು ಸಾಧ್ಯತೆ ಇರುವ ಕಡೆಗೆ ಮನೆಯಲ್ಲಿ ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ಸೂಚಿಸಲಾಗಿದೆ. ಇದು ಕೂಲಿ ಮಾಡಿಕೊಂಡು ಬದುಕುವ ಜನರಿಗೆ ಮತ್ತು ದಿನದ ಊಟಕ್ಕಾಗಿ ದುಡಿಯುವ ಜನರಿಗೆ ಭಾರೀ ಹೊಡೆತ ಬಿದ್ದಿದೆ.

ವ್ಯಾಪಾರಿಗಳು ವ್ಯಾಪಾರವಿಲ್ಲದೇ, ಟ್ಯಾಕ್ಸಿ-ಆಟೋಗಳಿಗೆ ಪ್ರಯಾಣಿಕರಿಲ್ಲದೇ, ಸಣ್ಣ ಪುಟ್ಟ ವಸ್ತುಗಳನ್ನ ಖರೀದಿ ಮಾಡಲು ಗ್ರಾಹಕರಿಲ್ಲದೇ ಬಹುತೇಕ ಜನ ಬದುಕು ಸಾಗಿಸುವುದು ಹೇಗಪ್ಪಾ ಅಂತ ತಲೆ ಮೇಲೆ ಕೈ ಹೊತ್ತುಕೊಂಡು ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಹೋಟೆಲ್ ಗಳಲ್ಲಿ ಕೆಲಸ ಮಾಡುವಂತವರಿಗೆ, ಮದುವೆ, ಸಭೆ, ಕಾರ್ಯಕ್ರಮಗಳಲ್ಲಿ ಅಡುಗೆ ಮಾಡುವಂತಹ ಬಾಣಸಿಗರಿಗೆ, ಸಣ್ಣ ಪುಟ್ಟ ಅಂಗಡಿಗಳಿಗೆ, ತರಕಾರಿ ಮಾರುವವರಿಗೆ, ದಿನಗೂಲಿಗಾಗಿ ಕೆಲಸ ಮಾಡುವವರಿಗೆ ಹೀಗೆ ಎಲ್ಲರಿಗೂ ಅಂದು  ಕೆಲಸ ಮಾಡಿದರೆನೇ ಹಣ ಸಿಗೋದು. ಇಂಥವರು ಕೆಲಸವಿಲ್ಲದೇ ದುಡಿಮೆ ಇಲ್ಲದೇ ಜೀವನ ಸಾಗಿಸುವುದು ಹೇಗೆ ಎನ್ನುವ ಗೊಂದಲದಲ್ಲಿದ್ದಾರೆ.

ಇದು ಕೇವಲ ಬೆಂಗಳೂರು ನಗರದ ಸಮಸ್ಯೆ ಮಾತ್ರವಲ್ಲ. ಇಡೀ ರಾಜ್ಯವನ್ನು ಗಮನದಲ್ಲಿಟ್ಟು ನೋಡಿದರೆ, ರಾಜ್ಯದ ಕೆಲ ಪ್ರವಾಸಿ ತಾಣಗಳನ್ನು ನಂಬಿಕೊಂಡು ಬದುಕು ನಡೆಸುವ ರೆಸಾರ್ಟ್, ಹೋಂಸ್ಟೈ, ಟ್ಯಾಕ್ಸಿ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ, ಬಿಜಾಪುರದಲ್ಲಿ ಪ್ರವಾಸಿಗರನ್ನೆ ನಂಬಿಕೊಂಡು ಜೀವನ ನಡೆಸುತ್ತಿದ್ದ ಟಾಂಗಾವಾಲಗಳು, ಬೀದಿ ಬದಿ ವ್ಯಾಪಾರಿಗಳು ಜನರಿಲ್ಲದೇ ನಷ್ಟದಲ್ಲಿದ್ದಾರೆ.

ಬೆಳಗ್ಗೆಯಿಂದ ಸಂಜೆವರೆಗು ನಿಂತರು ಒಂದು ರೂಪಾಯಿ ವ್ಯಾಪಾರವಿಲ್ಲ ಅಂತ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಜೀವ ಉಳಿದರೆ ಏನಾದ್ರು ಮಾಡಿ ಬದುಕಬಹುದು ಅಂದುಕೊಳ್ಳುವುದು ಸುಲಭ. ಆದರೆ ಇಂದಿನ ದುಡಿಮೆಯನ್ನೇ ನಂಬಿಕೊಳ್ಳುವ ಜನರಿಗೆ ಇವತ್ತು ಅನ್ನ ತಿನ್ನುವ ವಿಶ್ವಾಸವೇ ಇಲ್ಲ. ಇನ್ನೂ ಕಳೆದೆರೆಡು ಮೂರು ನಾಲ್ಕು ದಿನಗಳಿಂದ, ಒಂದು ವಾರದಿಂದಲೂ ಇಂಥಹ ಸ್ಥಿತಿ ಇರುವವರು ತುಂಬಾ ಜನ ರಾಜ್ಯದಲ್ಲಿದ್ದಾರೆ. ಅಂಥವರಿಗೆ ಧೈರ್ಯ ತುಂಬಿ ಸಾಧ್ಯವಾದರೆ ಸಹಾಯ ಮಾಡಿ. ನೀವು ಬದುಕಿ ಮತ್ತೊಬ್ಬರನ್ನೂ ಬದುಕಿಸಿ. ಕೊರೊನಾ ಬಗ್ಗೆ ಎಚ್ಚರಿಕೆ ವಹಿಸಿ. ಈ ಮಾರಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಚ್ಚರ ವಹಿಸೋಣ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights