ಗಾರ್ಮೆಂಟ್ ಉದ್ಯೋಗಿಗಳಿಗೆ ಕಾಡುತ್ತಿರುವುದು ಕೊರೊನಾ ವೈರಸ್ ಅಲ್ಲ, ಹಸಿವಿನ ವೈರಸ್!
ಕೊರೊನಾ ವೈರಸ್ ಮತ್ತು ಲಾಕ್ಡೌನ್ಗಳು ಗಾರ್ಮೆಂಟ್ ಉದ್ಯಮದ ಮೇಲೂ ತೀವ್ರ ರೀತಿಯ ಪರಿಣಾಮ ಬೀರಿದ್ದು, ಗಾರ್ಮೆಂಟ್ ಉದ್ಯೋಗಿಗಳಿಗೆ ಕೊರೊನಾ ವೈರಸ್ಗಿಂತಲೂ ಹೆಚ್ಚಾಗಿ ಹಸಿವಿನ ಚಿಂತೆ ಜಾಸ್ತಿಯಾಗಿದೆ. ರಾಜ್ಯದಲ್ಲಿ ಸಾವಿರಾರು ನೌಕರರು ಕೆಲಸ ಕಳೆದುಕೊಂಡು ನಿರುದ್ಯೋಗವೆಂಬ ಸಾಗರಕ್ಕಿಳಿದು ಬೀದಿಪಾಲಾಗಿದ್ದಾರೆ.
ದೇಶದ ಗಾರ್ಮೆಂಟ್ ರಾಜಧಾನಿ ಎಂದು ಪ್ರಸಿದ್ಧಿಯಾಗಿರುವ ಬೆಂಗಳೂರಿನಲ್ಲಿಯೇ 400ಕ್ಕೂ ಹೆಚ್ಚು ಘಟಕಗಳು ಮುಚ್ಚಿದ್ದು, ಸಾವಿರಾರು ಜನರ ಉದ್ಯೋಗಕ್ಕೆ ಕುತ್ತು ಬಂದಿದೆ.
ಅತಿದೊಡ್ಡ ಸಿದ್ದ ಉಡುಪು ತಯಾರಿಕಾ ಕಂಪನಿಗಳಾದ ಶಶಿ ಎಕ್ಸ್ ಪೊರ್ಟ್ಸ್, ಅರವಿಂದ್ ಮಿಲ್ಸ್, ಗೋಕಲ್ ದಾಸ್ ಎಕ್ಸ್ ಪೋರ್ಟ್ಸ್, ಮಧುರಾ ಗಾರ್ಮೆಂಟ್ಸ್ ಮತ್ತಿತರ ಕಂಪನಿಗಳ ಕೆಲವು ಘಟಕಗಳನ್ನೂ ಮುಚ್ಚಲು ಕಂಪನಿಗಳು ಮುಂದಾಗಿವೆ.

ರಾಜ್ಯಾದ್ಯಂತ ಸಾವಿರಾರು ಮಹಿಳಾ ಕಾರ್ಮಿಕರನ್ನು ಕೆಲಸದಿಂದ ತೆಗೆಯಲಾಗಿದೆ. ಈಗಾಗಲೇ ಕೆಲಸ ಕಳೆದುಕೊಂಡವರ 900 ದೂರುಗಳನ್ನು ಬಂದಿವೆ. ಉದ್ದೇಶಪೂರ್ವಕವಾಗಿಯೇ ಸಾರಿಗೆ ನೀಡುತ್ತಿಲ್ಲ, ಸಂಬಳದಲ್ಲಿ ಶೇ. 50 ರಷ್ಟು ಕಡಿತ ಮಾಡಲಾಗುತ್ತಿದೆ ಎಂದು ಗಾರ್ಮೆಂಟ್ಸ್ ಮತ್ತು ಟೆಕ್ಸ್ ಟೈಲ್ ವರ್ಕರ್ಸ್ ಯೂನಿಯನ್ ಅಧ್ಯಕ್ಷೆ ಆರ್. ಪ್ರತಿಭಾ ಆರೋಪಿಸಿದ್ದಾರೆ.
ನನ್ನ ಅಂಗವಿಕಲ ಮಗಳು ದಿವ್ಯಾಂಗ ಚೇತನಳಾಗಿದ್ದು, ಆಕೆ ಕೆಲಸ ಮಾಡುವ ಸ್ಥಿತಿಯಲ್ಲಿಲ್ಲ. ಅಳಿಯ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ಕುಟುಂಬದ ನಿರ್ವಹಣೆಗಾಗಿ ಮಗಳ ಮಂಗಳಸೂತ್ರವನ್ನು ಗಿರವಿ ಇಡಲು ಯೋಚಿದ್ದೇನೆ. ತಿಂಗಳಿಗೆ ಪಡೆಯುತ್ತಿದ್ದ 8 ಸಾವಿರ ಹಾಗೂ ಹೆಚ್ಚುವರಿ ಭತ್ಯೆಯಿಂದ ಕುಟುಂಬ ನಿರ್ವಹಿಸುತ್ತಿದ್ದೆ. ಮುಂದಿನ ತಿಂಗಳಿನಿಂದ ನನ್ನೊಂದಿಗೆ 300 ಮಂದಿಯನ್ನು ಕೆಲಸದಿಂದ ತೆಗೆದುಹಾಕುವುದಾಗಿ ಸೂಚಿಸಲಾಗಿದೆ. ಸದ್ಯದಲ್ಲಿಯೇ ಕೆಲಸ ಕಳೆದುಕೊಳ್ಳಲಿದ್ದೇವೆ ಎಂದು ಶ್ರೀರಂಗಪಟ್ಟಣದ ಗಾರ್ಮೆಂಟ್ ಕಾರ್ಖಾನೆಯ ಉದ್ಯೋಗಿ ಮಮತಾ ಅವರು ಅಳಲನ್ನು ತೋಡಿಕೊಂಡರು.
ದೇಶದ ಆರ್ಥಿಕತೆ ಹಳ್ಳ ಹಿಡಿಯುತ್ತಿರುವ ಸಂದರ್ಭದಲ್ಲಿ ಲಾಕ್ಡೌನ್ ಹೇರಿಕೆ ಮಾಡಿ ದೇಶವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಾಗಿದೆ. ಉದ್ಯೋಗ ಕಳೆದುಕೊಳ್ಳುತ್ತಿರುವ ಸರಣಿ ಲಾಕ್ಡೌನ್ಗೂ ಮೊದಲೇ ಆರಂಭವಾಗಿತ್ತು. ತಮಿಳುನಾಡು ಒಂದರಲ್ಲೇ 200 ಕ್ಕೂ ಹೆಚ್ಚು ಆಟೋಮೊಬೈಲ್ಸ್ ಕಂಪನಿಗಳು ಮುಚ್ಚಲ್ಪಟ್ಟಿದ್ದವು. ಬೆಂಗಳೂರಿನ ಇಂಡಸ್ಟ್ರಿಯಲ್ ಏರಿಯಾದಲ್ಲಿ ದುಡಿಯುತ್ತಿದ್ದವರಲ್ಲಿ 10,000ಕ್ಕೂ ಹೆಚ್ಚು ಜನರು ಆರು ತಿಂಗಳ ಕಾಲಮಿತಿಯನ್ನು ಉದ್ಯೋಗ ಕಳೆದುಕೊಂಡಿದ್ದರು.
ಲಾಕ್ಡೌನಿಂದಾಗಿ ಆರ್ಥಿಕ ಅವ್ಯವಸ್ಥೆಯಿಂದಾಗಿ ಈ ಸರಣಿ ಈಗ ದುಪ್ಪಟ್ಟಾಗಿದೆ. ಹೊರಗಿನ ದುಡಿಮೆಯೂ ಇಲ್ಲದೆ, ಕಡಿಮೆ ವೇತನಕ್ಕೆ ದುಡಿಯುತ್ತಿದ್ದ ಕಾರ್ಮಿಕರು ಈಗ ಅಕ್ಷರಶಃ ಬೀದಿ ಪಾಲಾಗಿದ್ದಾರೆ. ಆದರೆ, ರೋಮ್ ನಗರ ಹತ್ತಹುರಿವ ಸಮಯದಲ್ಲಿ ಅಲ್ಲಿಯ ರಾಜ ಪಿಟೀಲು ಬಾರಿಸುತ್ತಿದ್ದ ಎಂಬಂತೆ, ದೇಶದ ಸರ್ಕಾರ ಚಪ್ಪಾಳೆ, ಮೇಣದ ಬತ್ತಿ ಹೊರಿಸುತ್ತ ರಾಜಕೀಯ ಲಾಭಕ್ಕಾಗಿ ವರ್ಚುವಲ್ ರ್ಯಾಲಿ ಮಾಡಿಕೊಂಡು ಜನರನ್ನು ಯಾಮಾರಿಸುತ್ತಿದೆ. ಜನರೂ ಯಾಮಾರುತ್ತಿದ್ದಾರೆ.

