ನಿರೀಕ್ಷಿತ ಚಿತ್ರ ‘ಚಪಾಕ್’ ದೇಶದಾದ್ಯಂತ ಬಿಡುಗಡೆ : ದೀಪಿಕಾ ನಟನೆಗೆ ಮಾರುಹೋದ ಫ್ಯಾನ್ಸ್
‘ಚಪಾಕ್’ ಪ್ರತೀಯೊಬ್ಬ ಹೆಣ್ಣುಮಗಳು ನೋಡಲೇಬೇಕಾದಂತ ಸಿನಿಮಾ. ನಾವು ಸಿನಿಮಾ ನೋಡಿ ಫುಲ್ ಫಿದಾ ಆಗಿದ್ದೇವೆ. ಇಡೀ ತಂಡಕ್ಕೆ ಸಲ್ಯೂಟ್, ಅತ್ಯದ್ಬುತ ಚಿತ್ರ. ನಿಮ್ಮ ಕಣ್ಣುಗಳನ್ನು ತೇವಗೊಳಿಸುತ್ತೆ. ಹೀಗೆ ಚಪಾಕ್ ಸಿನಿಮಾ ನೋಡಿದ ಮಂದಿ ದೀಪಿಕಾ ನಟನೆ ಹಾಗೂ ಆಸಿಡ್ ದಾಳಿಗೆ ಒಳಗಾದ ಲಕ್ಷ್ಮಿ ಸಾಧನೆಯನ್ನ ಹೊಗಳಿ ಕೊಂಡಾಡಿದ್ದಾರೆ.
‘ಚಪಾಕ್’ ಬಾಲಿವುಡ್ ನ ಬಹುನಿರೀಕ್ಷಿತ ಸಿನಿಮಾ. ಇಡೀ ಸ್ತ್ರೀ ಕುಲವೇ ಎದುರು ನೋಡುತ್ತಿದ್ದ ಸಿನಿಮಾ. ಇಂದು ತೆರೆಗೆ ಅಪ್ಪಳಿಸುತ್ತಿದ್ದಂತೆ ಭಾರೀ ಮೆಚ್ಚುಗೆ ಪಡೆದುಕೊಂಡಿದೆ. ಹೌದು… ಬಾಲಿವುಡ್ ನ ಬಹು ನಿರೀಕ್ಷಿತ ಚಿತ್ರ ‘ಚಪಾಕ್’ ದೇಶದಾದ್ಯಂತ ಬಿಡುಗಡೆ ಆಗಿದೆ. ಆಸಿಡ್ ಅಟ್ಯಾಕ್ ಸಂತ್ರಸ್ತೆ ಲಕ್ಷ್ಮೀ ಅಗರ್ವಾಲ್ ಜೀವನಾಧಾರಿತ ಚಿತ್ರ ಇದಾಗಿದ್ದು, ಸಿನಿಮಾದಲ್ಲಿ ಲಕ್ಷ್ಮೀ ಅಗರ್ವಾಲ್ ಆಗಿ ದೀಪಿಕಾ ಪಡುಕೋಣೆ ಅಭಿನಯಿಸಿದ್ದಾರೆ. ಕಳೆದ ಎರಡು ದಿನಗಳಿಂದ ‘ಚಪಾಕ್’ ಚಿತ್ರವನ್ನ ಬಹಿಷ್ಕರಿಸಿ ಎಂಬ ಕೂಗು ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿದ್ದರೂ, ‘ಚಪಾಕ್’ ಚಿತ್ರಕ್ಕೆ ಉತ್ತಮ ಓಪನಿಂಗ್ ಸಿಕ್ಕಿದೆ. ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿರುವ ‘ಚಪಾಕ್’ ಚಿತ್ರದ ಬಗ್ಗೆ ಒಳ್ಳೆಯ ಮಾತುಗಳು ಕೂಡ ಕೇಳಿಬರುತ್ತಿವೆ.
”ಚಪಾಕ್’ ಚಿತ್ರವನ್ನ ನೋಡುತ್ತಿದ್ದರೆ, ನಿಮಗೆ ಕಣ್ಣೀರು ಬರುವುದು ಗ್ಯಾರೆಂಟಿ. ಅಷ್ಟು ಅದ್ಭುತವಾಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಇಡೀ ತಂಡಕ್ಕೆ ನನ್ನ ಸಲ್ಯೂಟ್” ಎಂದು ಸೌಪರ್ಣೋ ಸರ್ಕಾರ್ ಎಂಬುವರು ಟ್ವೀಟ್ ಮಾಡಿದ್ದಾರೆ.

