ಯುಪಿ : ವೈದ್ಯಕೀಯ ವಿದ್ಯಾರ್ಥಿ ಸಾವು; ಕಿರುಕುಳದ ಆರೋಪದಡಿ ವೈದ್ಯ ವಶಕ್ಕೆ!

ದೆಹಲಿಯ 25 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಉತ್ತರ ಪ್ರದೇಶದ ಆಗ್ರಾದ ತನ್ನ ಕಾಲೇಜಿನಿಂದ ಕೆಲವು ಕಿಲೋಮೀಟರ್ ದೂರದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಆಕೆಗೆ ಕಾಲೇಜಿನ ವೈದ್ಯರು ಕಿರುಕುಳ ನೀಡಿದ್ದಾರೆ ಎಂದು ಆಕೆಯ ಕುಟುಂಬ ಆರೋಪಿಸಿದ್ದು, ವೈದ್ಯರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಗ್ರಾದಿಂದ ಸ್ನಾತಕೋತ್ತರ ಪದವಿ ಓದುತ್ತಿದ್ದ ವಿದ್ಯಾರ್ಥಿನಿ ಮಂಗಳವಾರ ಸಂಜೆಯಿಂದ ನಾಪತ್ತೆಯಾಗಿದ್ದಾಳೆ ಎಂದು ಆಕೆಯ ಕುಟುಂಬ ಪೊಲೀಸರಿಗೆ ದೂರು ನೀಡಿದ್ದರು. ಕುಟುಂಬ ದೂರಿನ ಆಧಾರದ ಮೇಲೆ ಅಪಹರಣದ ಪ್ರಕರಣ ದಾಖಲಾಗಿತ್ತು.

“ಆಕೆಗೆ ಜಲಾನ್ ಮೂಲದ ವೈದ್ಯರು ಕಿರುಕುಳ ನೀಡುತ್ತಿದ್ದಾರೆ ಮತ್ತು ಬೆದರಿಕೆ ಹಾಕಿದ್ದಾರೆ ಎಂದು ಯುವತಿಯ ಕುಟುಂಬದವರು ತಿಳಿಸಿದ್ದಾರೆ” ಎಂದು ಆಗ್ರಾದ ಪೊಲೀಸ್ ಅಧಿಕಾರಿ ಬಾಬ್ಲೂ ಕುಮಾರ್ ಹೇಳಿದ್ದಾರೆ.

“ವಿದ್ಯಾರ್ಥಿನಿ ಮೃತ ದೇಹ ಬುಧವಾರ ಬೆಳಗ್ಗೆ ಪತ್ತೆಯಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆಕೆಯ ತಲೆ ಮತ್ತು ಕುತ್ತಿಗೆಗೆ ಗಾಯಗಳಾಗಿವೆ. ಗಾಯದ ಗುರುತುಗಳು ಆಕೆಯ ಮೇಲೆ ಹಲ್ಲೆ ಮಾಡಲಾಗಿದೆ ಎಂಬಂತಿವೆ. ನಾವು ಶವ ಪತ್ತೆಯಾದ ಪ್ರದೇಶದ ಹತ್ತಿರ ಪ್ರದೇಶಗಳಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದೇವೆ” ಪೊಲೀಸರು ಹೆಳಿದ್ದಾರೆ.

ಕಳೆದ ಕೆಲವು ವಾರಗಳಲ್ಲಿ, ಮಹಿಳೆಯರು ಮತ್ತು ಹುಡುಗಿಯರ ಮೇಲಿನ ಹಲವಾರು ಆಘಾತಕಾರಿ ಘಟನೆಗಳ ಬಗ್ಗೆ ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರದ ಮೇಲೆ ವಿರೋಧ ಪಕ್ಷಗಳು ಅಸಹನೆ ವ್ಯಕ್ತಪಡಿಸಿವೆ.

ಸೋಮವಾರ ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ರಾಜ್ಯ ಸರ್ಕಾರ ಮಹಿಳೆಯರಿಗೆ ಭದ್ರತೆ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದ್ದಾರೆ.

“ಬುಲಂದ್‌ಶಹರ್, ಹಾಪುರ್, ಲಖಿಂಪುರ್ ಖೇರಿ ಮತ್ತು ಈಗ ಗೋರಖ್‌ಪುರದಲ್ಲಿ ಮಹಿಳೆಯರಿಗೆ ಭದ್ರತೆ ಒದಗಿಸುವಲ್ಲಿ ಉತ್ತರ ಪ್ರದೇಶ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಇಂತಹ ಪುನರಾವರ್ತಿತ ಘಟನೆಗಳು ಸಾಬೀತಾಗಿದೆ” ಎಂದು ಪ್ರಿಯಾಂಕ ಗಾಂಧಿ ಹೇಳಿದ್ದಾರೆ.

ಕಳೆದ ವಾರ, ಲಖಿಂಪುರ ಖೇರಿ ಜಿಲ್ಲೆಯಲ್ಲಿ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲ್ಲಲಾಗಿದೆ. ಆಕೆಯ ಶವ ಕಬ್ಬಿನ ಹೊಲದಲ್ಲಿ ಪತ್ತೆಯಾಗಿದೆ. ಆಕೆಯ ಕತ್ತು ಹಿಸುಕಿ, ಕಣ್ಣುಗಳನ್ನು ಹೊರಹಾಕಿ ಮತ್ತು ಅವಳ ನಾಲಿಗೆ ಕತ್ತರಿಸಲಾಗಿತ್ತು ಎಂದು ಹುಡುಗಿಯ ತಂದೆ ಆರೋಪಿಸಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights